International Yoga Day 2023: ಜೂ.21ರಂದೇ ಯೋಗ ದಿನಾಚರಣೆಯನ್ನು ಏಕೆ ಆಚರಿಸಬೇಕು? ಇಲ್ಲಿದೆ ಮಾಹಿತಿ
ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಇಂದು (ಜೂನ್ 21) ವಿಶ್ವದಾದ್ಯಂತ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಯೋಗವು 6,000 ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದ್ದು ವಿಶ್ವಾದ್ಯಂತ ಹೆಚ್ಚಿನ ಜನರು ತಮ್ಮ ಮಾನಸಿಕ ಒತ್ತಡ ಮತ್ತು ದೈಹಿಕ ಸೌಂದರ್ಯಕ್ಕಾಗಿ ಯೋಗದ ಮೊರೆ ಹೋಗುತ್ತಿರುವುದು ನಿಮಗೆಲ್ಲ ತಿಳಿದಿದೆ. ಯೋಗದ ಪ್ರಾಮುಖ್ಯತೆ ಅರಿತ ಜನ ತಮ್ಮ ಉತ್ತಮ ಆರೋಗ್ಯಕ್ಕಾಗಿ ಯೋಗ ಅಭ್ಯಸಿಸಲು ಮುಂದಾಗಿದ್ದಾರೆ. ಆದರೆ ಕೆಲವರು, ಅಂದರೆ ಯೋಗದ ಪ್ರಾಮುಖ್ಯತೆ ತಿಳಿಯದವರಿಗೆ ಅದರ ಲಾಭದ ಬಗ್ಗೆ ತಿಳಿ ಹೇಳಲು ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಜೂನ್ 21 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದರಿಂದ ಮನಸ್ಸು, ದೇಹ ಮತ್ತು ಮನುಷ್ಯ ಮತ್ತು ಪ್ರಕೃತಿಯ ನಡುವೆ ಪರಿಪೂರ್ಣ ಸಾಮರಸ್ಯವನ್ನು ಬೆಸೆಯುತ್ತದೆ.
ಈ ದಿನದ ಇತಿಹಾಸ:
2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಾರಂಭವಾದ ನಂತರ, 2015 ರಿಂದ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್‌ನಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಭಾರತದ ಖಾಯಂ ಪ್ರತಿನಿಧಿಯಾಗಿರುವ ಅಶೋಕ್ ಕುಮಾರ್ ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತ ಪೂರ್ವ ಬೆಂಬಲ ಸೂಚಿಸಿದ್ದರು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು. 2015 ಜೂನ್ 21ರಂದು ಮೊದಲ ಬಾರಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ 84 ರಾಷ್ಟ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, 21 ಯೋಗ ಆಸನಗಳನ್ನು ಮಾಡಿ ವೀಕ್ಷಕರ ಗಮನ ಸೆಳೆಯಲಾಗಿತ್ತು.
ಅಂತರಾಷ್ಟ್ರೀಯ ಯೋಗ ದಿನದ ಥೀಮ್:
2023ರ ಅಂತರಾಷ್ಟ್ರೀಯ ಯೋಗ ದಿನದ ಥೀಮ್ ‘ಮಾನವೀಯತೆ’. ಅಂತರಾಷ್ಟ್ರೀಯ ಯೋಗ ದಿನದ ಆಚರಣೆಗಳು ಯೋಗದ ಸಮಗ್ರ ಸ್ವರೂಪದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಪಂಚದಾದ್ಯಂತ ನಿಯಮಿತ ಆಡಳಿತವಾಗಿ ಪ್ರಚಾರ ಮಾಡುವ ಗುರಿಯನ್ನು ಹೊಂದಿವೆ.
ಅಂತರಾಷ್ಟ್ರೀಯ ಯೋಗ ದಿನದ ಮಹತ್ವ:
ಯೋಗ ಮಾಡುವುದರಿಂದ ರಕ್ತದ ಹರಿವು ಹೆಚ್ಚಾಗುತ್ತದೆ. ಜೊತೆಗೆ ಯೋಗದ ಅನೇಕ ಭಂಗಿಗಳು ನಿಮ್ಮ ದೇಹದಲ್ಲಿರುವ ಶಕ್ತಿಯನ್ನು ಹೆಚ್ಚಿಸುತ್ತದೆ. ಅಮೇರಿಕನ್ ಕಾಲೇಜ್ ಆಫ್ ಫಿಸಿಶಿಯನ್ಸ್ ಪ್ರಕಾರ, ದೀರ್ಘಕಾಲದ ಬೆನ್ನು ನೋವಿನಿಂದ ನರಳುತ್ತಿರುವವರು ಯೋಗ ಮಾಡುವುದರಿಂದ ಆ ನೋವಿಗೆ ಮುಕ್ತಿ ನೀಡಬಹುದು ಎಂದು ಶಿಫಾರಸು ಮಾಡಲಾಗಿದೆ. ಅದಲ್ಲದೆ ನಿಯಮಿತ ಯೋಗಾಭ್ಯಾಸವು ಒತ್ತಡದ ಮಟ್ಟವನ್ನು ಮತ್ತು ದೇಹದಾದ್ಯಂತ ಉರಿಯೂತವನ್ನು ಕಡಿಮೆ ಮಾಡುತ್ತದೆ, ಇದೆಲ್ಲವು ನಿಮ್ಮ ಹೃದಯ ಆರೋಗ್ಯಕರವಾಗಿರಲು ಕೊಡುಗೆ ನೀಡುತ್ತದೆ.
ಇದನ್ನೂ ಓದಿ: International Yoga Day 2023: ಯೋಗಾಸನ ಮಾಡುವ ಮೊದಲು ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ
ಜೂನ್ 21 ರಂದೇ ಏಕೆ ಯೋಗ ದಿನಾಚರಣೆಯನ್ನು ಆಚರಣೆ ಮಾಡಬೇಕು?
ಜೂನ್ 21 ವರ್ಷದಲ್ಲಿ ಅತ್ಯಂತ ಹೆಚ್ಚು ಹಗಲುಳ್ಳ ದಿನವೆಂದು ಕರೆಯಲಾಗುತ್ತದೆ. ಅಲ್ಲದೆ ಇದು ದಕ್ಷಿಣಯಾನಕ್ಕೆ ಪರಿವರ್ತನೆಯಾಗುವ ದಿನವಾಗಿದೆ. ಅದಲ್ಲದೆ ದಕ್ಷಿಣ ಯಾನ ಆಧ್ಯಾತ್ಮಿಕ ಅಭ್ಯಾಸಗಳಿಗೆ ಹೇಳಿ ಮಾಡಿಸಿದ್ದಾಗಿದ್ದು, ಈ ವಾಡಿಕೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ . ಜೊತೆಗೆ ಹಳೆ ಕಾಲದಿಂದಲೂ ಸಹ ಸೂರ್ಯಾಭಿಮುಖವಾಗಿ ದೃಷ್ಟಿ ಇಟ್ಟು ಯೋಗ ಮಾಡುವುದರಿಂದ ದಿವ್ಯ ಶಕ್ತಿ ಉದ್ದೀಪನಗೊಳಿಸುತ್ತದೆ ಎಂದು ನಂಬಲಾಗಿದೆ. ಯೋಗ ಮಾಡುವವರಿಗೆ ಅನೇಕ ಲಾಭ ನೀಡುವುದರ ಜೊತೆಗೆ ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಹಾಗಾಗಿ ಈ ದಿನವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:17 pm, Tue, 20 June 23