ರೋಗ ನಿರೋಧಕ ಶಕ್ತಿಗೆ, ಹೃದಯದ ಆರೋಗ್ಯಕ್ಕೆ ಕೃಷ್ಣಾ ಫಲ ಉತ್ತಮ
ಕೃಷ್ಣಾ ಫಲ ಎಂದು ಕರೆಯಲ್ಪಡುವ, ಪ್ಯಾಶನ್ ಫ್ರೂಟ್ ಒಂದು ಅದ್ಭುತ ಹಣ್ಣಾಗಿದ್ದು, ಇದು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರ ಸೇವನೆಯಿಂದ ನಾವು ಹಲವಾರು ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಹಾಗಿದ್ದರೆ ಈ ಹಣ್ಣಿನ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ.
ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸಾಮಾನ್ಯವಾಗಿ ಹಣ್ಣುಗಳ ವಿಷಯಕ್ಕೆ ಬಂದರೆ ಮಾವು, ಕಲ್ಲಂಗಡಿ, ಕಿತ್ತಳೆ, ಸೇಬು, ದಾಳಿಂಬೆ ಮುಂತಾದ ಹಣ್ಣುಗಳನ್ನು ನಾವು ಹೆಚ್ಚಾಗಿ ಸೇವಿಸುತ್ತೇವೆ. ಇನ್ನೂ ಕೆಲವು ವಿಶಿಷ್ಟವಾದ ಮತ್ತು ಅಪರೂಪದ ಹಣ್ಣುಗಳಿವೆ. ಆದರೆ ಅವುಗಳನ್ನು ಹೆಚ್ಚಾಗಿ ಸೇವನೆ ಮಾಡಲು ಹೋಗುವುದಿಲ್ಲ. ಅಂತಹ ಹಣ್ಣುಗಳಲ್ಲಿ ಪ್ಯಾಶನ್ ಫ್ರೂಟ್ ಕೂಡಾ ಒಂದು. ಕೃಷ್ಣಾ ಫಲ ಎಂದೂ ಕರೆಯಲ್ಪಡುವ ಪ್ಯಾಶನ್ ಫ್ರೂಟ್ ಪೋಷಕಾಂಶಗಳಿಂದ ಸಮೃದ್ಧ ಮೂಲವಾಗಿದ್ದು, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಫೈಬರ್, ವಿಟಮಿನ್ ಎ ಮತ್ತು ಸಿ, ಕಬ್ಬಿನಾಂಶ, ಪೊಟ್ಯಾಸಿಯಂ ಸೇರಿದಂತೆ ಅನೇಕ ಪೋಷಕಾಂಶಗಳು ಈ ಹಣ್ಣಿನಲ್ಲಿ ಕಂಡುಬರುತ್ತದೆ. ಹೈದರಾಬಾದ್ ನ ಕಾಮಿನೇನಿ ಆಸ್ಪತ್ರೆಯ ಡಯೆಟೀಷಿಯನ್ ಎನ್ ಲಕ್ಷ್ಮೀ ಅವರು ದಿ ಇಂಡಿಯನ್ ಎಕ್ಸ್ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ಪ್ಯಾಶನ್ ಫ್ರೂಟ್ ನ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
ಪ್ಯಾಶನ್ ಫ್ರೂಟ್ ನ ಆರೋಗ್ಯ ಪ್ರಯೋಜನಗಳು:
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ಈ ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶವು ಉತ್ಕರ್ಷಣ ನಿರೊಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಫ್ರೀ ರಾಡಿಕಲ್ ಗಳಿಂದ ಉಂಟಾಗುವ ಜೀವಕೋಶದ ಹಾನಿಯ ವಿರುದ್ಧ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಈ ಹಣ್ಣಿನಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಮ್ಮ ದೇಹವು ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಕಬ್ಬಿಣಾಂಶವು ಸೋಂಕುಗಳ ವಿರುದ್ಧ ಹೋರಾಡಲು ನಮ್ಮ ದೇಹಕ್ಕೆ ಬೇಕಾದ ಪ್ರಮುಖ ಖನಿಜವಾಗಿದೆ.
ರಕ್ತದೊತ್ತಡವನ್ನು ನಿರ್ವಹಿಸಲು ಸಹಕಾರಿ:
ನಿಮ್ಮ ರಕ್ತದೊತ್ತಡವು ಅಧಿಕವಾಗಿದ್ದರೆ, ಅದು ಅಪಧಮನಿಗಳ ಮೇಲೆ ಅತಿಯಾದ ಒತ್ತಡವನ್ನು ಉಂಟುಮಾಡುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಹಾಗಾಗಿ ಪ್ಯಾಶನ್ ಫ್ರೂಟ್ ಸೇವನೆಯಿಂದ ರಕ್ತದೊತ್ತವನ್ನು ನಿಯಂತ್ರಿಸಬಹುದು. ಈ ಹಣ್ಣಿನಲ್ಲಿ ನಲ್ಲಿ ಆಲ್ಕಲಾಯ್ಡ್ ಸಂಯುಕ್ತಗಳಿವೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಗರ್ಭಿಣಿ ಮಹಿಳೆಯರಿಗೆ ಈ ಹಣ್ಣು ಪ್ರಯೋಜನಕಾರಿ:
ಗರ್ಭಿಣಿ ಮಹಿಳೆಯರಿಗೆ ಈ ಹಣ್ಣು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಪ್ಯಾಶನ್ ಫ್ರೂಟ್ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ. ವಿಶೇಷವಾಗಿ ವಿಟಮಿನ್ ಸಿ ಮತ್ತು ಫೋಲೇಟ್. ಈ ಪೋಷಕಾಂಶಗಳು ಗರ್ಭಾವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ತಾಯಿ ಮತ್ತು ಮಗುವಿನ ಆರೋಗ್ಯವನ್ನು ಪೋಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಇದನ್ನೂ ಓದಿ:ಊಟಕ್ಕೆ ಮುಂಚೆ ಬಾದಾಮಿ ತಿಂದರೆ ಆಗುವ ಅರೋಗ್ಯ ಪ್ರಯೋಜನಗಳು ಇಲ್ಲಿವೆ
ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ:
ವಯಸ್ಸಾಗುವಿಕೆಯ ಲಕ್ಷಣವು ಮುಖದ ಮೇಲೆ ಕಾಣಿಸಿಕೊಳ್ಳದಂತೆ ತಡೆಯಲು ಪ್ಯಾಶನ್ ಫ್ರೂಟ್ ಸಹಕಾರಿಯಾಗಿದೆ. ಈ ಹಣ್ಣಿನ ಸೇವನೆಯು ಕಾಲಜನ್ ಎಂಬ ಪ್ರೋಟೀನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಮತ್ತು ಈ ಹಣ್ಣಿನಲ್ಲಿ ಫೀನಾಲಿಕ್ ಎಂಬ ಸಂಯುಕ್ತ ಕಂಡುಬರುತ್ತದೆ. ಇದು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ನಿದ್ರಾಹೀನತೆಯನ್ನು ತಡೆಯಲು ಸಹಕಾರಿ:
ಸಿರೊಟೋನಿನ್ ಮತ್ತು ಟ್ರಿಪ್ಟೊಫಾನ್ ನಂತಹ ಸಂಯುಕ್ತಗಳನ್ನು ಒಳಗೊಂಡಿರುವ ಪ್ಯಾಶನ್ ಫ್ರೂಟ್ ವಿಶ್ರಾಂತಿಯನ್ನು ಉತ್ತೇಜಿಸುತ್ತದೆ. ಅಲ್ಲದೆ ಉತ್ತಮ ಗುಣಮಟ್ಟದ ನಿದ್ರೆಗೂ ಸಹಕಾರಿಯಾಗಿದೆ.
ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿ:
ಪ್ಯಾಶನ್ ಫ್ರೂಟ್ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಣ್ಣಿನ ಬೀಜಗಳಲ್ಲಿ ಕಂಡುಬರುವ ನಾರಿನಾಂಶವು ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:
ಪ್ಯಾಶನ್ ಫ್ರೂಟ್ ತಿರುಳಿನಲ್ಲಿರುವ ಗಣನೀಯ ಪ್ರಮಾಣದ ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಮಾತ್ರವಲ್ಲದೆ ಇದು ಮಲಬದ್ಧತೆಯ ಸಮಸ್ಯೆಯನ್ನೂ ನಿವಾರಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ