ಭಾರತವು ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯೋತ್ಸವ ದಿನವನ್ನು ಅದ್ದೂರಿಯಾಗಿ ಆಚರಿಸುತ್ತದೆ. ಈ ವರ್ಷ ಭಾರತವು 76ನೇ ವರ್ಷದ ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದು, ಈಗಾಗಲೇ ಈ ದಿನದ ಆಚರಣೆಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಗಣರಾಜ್ಯೋತ್ಸವ ಭಾರತೀಯರ ಪಾಲಿಗೆ ಅತ್ಯಂತ ಮಹತ್ವ ದಿನವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಗಸ್ಟ್ 15 ಬ್ರಿಟಿಷರಿಂದ ತಾತ್ವಿಕವಾಗಿ ಸ್ವಾತಂತ್ರ್ಯ ಪಡೆದುಕೊಂಡ ದಿನವಾದರೆ, 1950 ಜನವರಿ 26 ರಂದು ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಲಾಗಿದ್ದು, ರಾಜಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವವು ಅಸ್ಥಿತ್ವಕ್ಕೆ ಬಂದ ದಿನವಾಗಿದೆ. ಹೀಗಾಗಿ ಈ ದಿನವು ಸ್ವಾತಂತ್ರ್ಯ ದಿನದಷ್ಟೇ ಸಂಭ್ರಮದಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.
1950ರ ಜನವರಿ 26ರಂದು ಸಂವಿಧಾನವನ್ನು ಅಂಗೀಕರಿಸುವ ಮೂಲಕ ಗಣರಾಜ್ಯ ಎಂದು ಘೋಷಿಸಲ್ಪಟ್ಟ ದಿನವಾಗಿದೆ. ದೇಶದ ಮೊದಲ ಸಂವಿಧಾನ ಸಭೆ 1946ರ ಡಿಸೆಂಬರ್ 9ರಂದು ತನ್ನ ಮೊದಲ ಅಧಿವೇಶನ ನಡೆಸಿತ್ತು. ಕೊನೆಯ ಅಧಿವೇಶನ 1949ರ ನವೆಂಬರ್ 26ರಂದು ನಡೆದಿತ್ತು. ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿ ರಚಿಸಿದ ಸಂವಿಧಾನವನ್ನು ಒಂದು ವರ್ಷದ ಬಳಿಕ ಅಂಗೀಕರಿಸಲಾಯಿತು. ಹೀಗಾಗಿ 26 ಜನವರಿ 1950 ರಂದು ಸಂವಿಧಾನ ಜಾರಿಗೆ ಬಂದಿತು. ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಭಾರತದ ಬಾವುಟವನ್ನು ಹಾರಿಸಿ ಸಂವಿಧಾನ ಜಾರಿಗೆ ಬಂದ ದಿನವನ್ನು ಘೋಷಿಸಿದ್ದರು. ಅಂದಿನಿಂದ ಪ್ರತಿ ವರ್ಷ ಜನವರಿ 26 ಗಣರಾಜ್ಯೋತ್ಸವ ದಿನವನ್ನು ಹಬ್ಬದಂತೆ ದೇಶದಾದಂತ್ಯ ಆಚರಿಸಲಾಗುತ್ತಿದೆ.
ಪ್ರತಿ ವರ್ಷ ಭಾರತ ಸರ್ಕಾರವು ಗಣರಾಜ್ಯೋತ್ಸವವನ್ನು ಒಂದು ನಿರ್ದಿಷ್ಟ ಥೀಮ್ ನಲ್ಲಿ ಆಚರಿಸಲಾಗುತ್ತದೆ. ಈ ವರ್ಷ ‘ಸುವರ್ಣ ಭಾರತ: ಪರಂಪರೆ ಮತ್ತು ಪ್ರಗತಿ‘ ಎಂಬ ಥೀಮ್ ನಲ್ಲಿ 76 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಇದು ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಅದರ ಬೆಳವಣಿಗೆ ಹಾಗೂ ಅಭಿವೃದ್ಧಿಯನ್ನು ಎತ್ತಿ ತೋರಿಸುತ್ತದೆ.
ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ವಾಟ್ಸಾಪ್ ಡಿಪಿ, ಸ್ಟೇಟಸ್ ಹಾಕಲು ಇಲ್ಲಿವೆ ತ್ರಿವರ್ಣ ಧ್ವಜದ ವಿನ್ಯಾಸಗಳು
ರಾಜಪ್ರಭುತ್ವವು ಅಂತ್ಯವಾಗಿ ಭಾರತದಲ್ಲಿ ಸಂವಿಧಾನವನ್ನು ಸ್ಥಾಪಿಸಿದ ದಿನವಾಗಿದ್ದು ಈ ದಿನದ ಆಚರಣೆಯೂ ಮಹತ್ವದ್ದಾಗಿದೆ. ಹೀಗಾಗಿ ಭಾರತವು ಪ್ರತಿ ವರ್ಷವು ಗಣರಾಜ್ಯೋತ್ಸವ ದಿನಕ್ಕೆ ವಿದೇಶದಿಂದ ಗಣ್ಯ ವ್ಯಕ್ತಿಗಳನ್ನು ಅತಿಥಿಗಳನ್ನಾಗಿ ಆಹ್ವಾನಿಸುತ್ತದೆ. ಗಣರಾಜ್ಯೋತ್ಸವದಂದು ನವದೆಹಲಿಯ ಇಂಡಿಯಾ ಗೇಟ್ನಲ್ಲಿ ಭಾರತದ ರಾಷ್ಟ್ರಪತಿಗಳಿಂದ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ನವದೆಹಲಿಯಲ್ಲಿ ರಾಜ್ಪಥ್ ನಡೆಯುತ್ತದೆ. ಭಾರತದ ರಾಷ್ಟ್ರೀಯ ಸೇನೆಯನ್ನು ಒಳಗೊಂಡ ಪರೇಡ್, ರಾಜ್ಯಗಳ ಸಾಂಸ್ಕೃತಿಕ ಮೆರಗನ್ನು ಸಾರುವ ಸ್ತಬ್ಧ ಚಿತ್ರಗಳ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತದೆ. ಈ ವಿಶೇಷ ದಿನದಂದು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಹುತಾತ್ಮರಿಗೆ ಗೌರವ ಸಲ್ಲಿಸಲಾಗುತ್ತದೆ. ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳು ಸೇರಿದಂತೆ ಹಲವೆಡೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ವಿಶೇಷವಾಗಿ ಮಕ್ಕಳಿಗಾಗಿ ಭಾಷಣ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆ, ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ