Secret Of Happy Life: ಜೀವನದಲ್ಲಿ ಯಾವಾಗಲೂ ಸಂತೋಷವಾಗಿರಬೇಕೆಂದರೆ ಈ ಮಾರ್ಗಗಳನ್ನು ಅನುಸರಿಸಿ

| Updated By: ಅಕ್ಷತಾ ವರ್ಕಾಡಿ

Updated on: Feb 25, 2024 | 6:31 PM

ನೀವು ಜೀವನದಲ್ಲಿ ಸಂತೋಷವಾಗಿರಲು ಬಯಸಿದರೆ, ನೀವು ನಿಮ್ಮ ಜೀವನದಲ್ಲಿ ಕೆಲವೊಂದು ಸಣ್ಣ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಈ ಬದಲಾವಣೆಯ ಮೂಲಕ ನಿಮ್ಮ ಜೀವನದಲ್ಲಿನ ದುಃಖಕ್ಕೆ ಬೈ ಹೇಳಬಹುದು. ಹಾಗಾದರೆ ಯಾವ ಬದಲಾವಣೆಗಳಿಂದ ನೀವು ನಿಮ್ಮನ್ನು ಪ್ರತಿನಿತ್ಯ ಸಂತೋಷವಾಗಿರಿಸಬಹುದು, ಹ್ಯಾಪಿ ಲೈಫ್ ಲೀಡ್ ಮಾಡಬಹುದು ಎಂಬುದನ್ನು ತಿಳಿಯಿರಿ.

Secret Of Happy Life: ಜೀವನದಲ್ಲಿ ಯಾವಾಗಲೂ ಸಂತೋಷವಾಗಿರಬೇಕೆಂದರೆ ಈ ಮಾರ್ಗಗಳನ್ನು ಅನುಸರಿಸಿ
Follow us on

ಜೀವನದಲ್ಲಿ ಪ್ರತಿಯೊಬ್ಬರೂ ಸಂತೋಷವಾಗಿರಲು, ಯಾವುದೇ ಟೆನ್ಷನ್ ಗಳಿಲ್ಲದೆ ಸಂತೋಷದ ಜೀವನ ನಡೆಸಲು ಬಯಸುತ್ತಾರೆ. ಆದರೆ ಇಂದಿನ ಬಿಡುವಿಲ್ಲದ ಜೀವನದಲ್ಲಿ ಹೆಚ್ಚಿನ ಜನರು ಆಗಾಗ್ಗೆ ಒತ್ತಡದ ಭಾವನೆಯನ್ನು ಅನುಭವಿಸುತ್ತಾರೆ ಮತ್ತು ದುಃಖಕ್ಕೆ ಒಳಗಾಗುತ್ತಿರುತ್ತಾರೆ. ಇದು ನಿಮ್ಮ ಮೂಡ್ ಅನ್ನು ಹಾಳು ಮಾಡುವುದಲ್ಲದೆ ನಿಮ್ಮ ಆರೋಗ್ಯದ ಮೇಲೂ ನಕರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಿರುವಾಗ ನಿಮ್ಮ ಜೀವನದಲ್ಲಿ ಈ ಕೆಲವು ಬದಲಾವಣೆಗಳನ್ನು ಮಾಡುವುದರಿಂದ, ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ನೀವು ಯಾವಾಗಲೂ ಸಂತೋಷವಾಗಿರಬಹುದು. ಬನ್ನಿ ಆ ಸಂತೋಷದ ರಹಸ್ಯಗಳು ಯಾವುದೆಂದು ತಿಳಿಯೋಣ.

ಸಂತೋಷವಾಗಿರಲು ಈ ಸರಳ ಮಾರ್ಗಗಳನ್ನು ಅನುಸರಿಸಿ:

ನಿಮ್ಮನ್ನು ಇತರರೊಂದಿಗೆ ಹೋಲಿಸಬೇಡಿ:

ಸಂತೋಷವಾಗಿರಲು ಸುಲಭ ಮಾರ್ಗವೆಂದರೆ ನಿಮ್ಮನ್ನು ನೀವು ಇತರರೊಂದಿಗೆ ಹೋಲಿಸುವುದನ್ನು ನಿಲ್ಲಿಸುವುದು. ಕೆಲವರು ಪ್ರತಿ ಸಣ್ಣ ವಿಷಯಗಳಲ್ಲಿಯೂ ತಮ್ಮನ್ನು ತಾವು ಇತರರೊಂದಿಗೆ ಹೋಲಿಕೆ ಮಾಡುವುದರಲ್ಲಿಯೇ ಸಮಯವನ್ನು ಕಳೆಯುತ್ತಾರೆ. ಈ ಅಭ್ಯಾಸವು ನಿಮ್ಮಲ್ಲಿ ದುಃಖದ ಭಾವನೆಯನ್ನು ಉಂಟುಮಾಡಬಹುದು. ಆದ್ದರಿಂದ ನೀವು ಯಾವಾಗಲೂ ಸಂತೋಷವಾಗಿರಲು ಬಯಸಿದರೆ ಇತರರೊಂದಿಗೆ ನಿಮ್ಮನ್ನು ಹೋಲಿಕೆ ಮಾಡುವುದನ್ನು ನಿಲ್ಲಿಸಿ.

ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ:

ಇತ್ತೀಚಿನ ಒತ್ತಡದ ಜೀವನಶೈಲಿಯಲ್ಲಿ ನೀವು ಸಂತೋಷವಾಗಿರಬೇಕೆಂದರೆ ನಿಮಗಾಗಿ ನೀವು ಪ್ರತಿನಿತ್ಯ ಸ್ವಲ್ಪ ಸಮಯವನ್ನು ಮೀಸಲಿಡಿ. ನಿಮ್ಮೊಂದಿಗೆ ನೀವು ಸಮಯ ಕಳೆಯುವುದರಿಂದ ಒತ್ತಡ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಷ್ಟೇ ಅಲ್ಲದೆ ಸ್ವಲ್ಪ ಹೊತ್ತಿನ ಕಾಲ ಏಕಾಂತವಾಗಿ ಸಮಯ ಕಳೆಯುವುದರಿಂದ ಮನಸ್ಸು ನಿರಾಳವಾಗಿ, ನಿಮ್ಮಲ್ಲಿ ಸಂತೋಷದ ಭಾವನೆ ಮೂಡುತ್ತದೆ.

ಕೆಟ್ಟ ವಿಷಯಗಳನ್ನು ಮರೆಯಲು ಕಲಿಯಿರಿ:

ಕೆಲವೊಬ್ಬರು ಯಾರಾದರೂ ಬೈದರೆ ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗುತ್ತಾರೆ ಅಥವಾ ಯಾವುದಾದರೂ ಕೆಟ್ಟ ಘಟನೆಗಳು ನಡೆದರೆ, ಅದನ್ನೇ ಪದೇ ಪದೇ ನೆನೆಯುತ್ತಾ ಮನಸ್ಸಿಗೆ ನೋವು ಮಾಡಿಕೊಳ್ಳುತ್ತಿರುತ್ತಾರೆ. ಇದರಿಂದ ನೆಮ್ಮದಿಯೂ ಹಾಳಾಗಿಬಿಡುತ್ತದೆ. ಆದ್ದರಿಂದ ಜೀವನದಲ್ಲಿ ಸಂತೋಷವಾಗಿರಲು ಬಯಸಿದರೆ , ನಿಮ್ಮ ಮನಸ್ಸಿನ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವ ವಿಷಯಗಳನ್ನು ಮರೆತು ಬಿಡುವ ಅಭ್ಯಾಸವನ್ನು ನೀವು ಬೆಳೆಸಿಕೊಳ್ಳಬೇಕು.

ಸಕಾರಾತ್ಮಕ ಚಿಂತನೆ:

ಸಂತೋಷವಾಗಿರಲು ನಕರಾತ್ಮಕ ಚಿಂತನೆಗಳಿಂದ ದೂರವಿರುವುದು ಮುಖ್ಯ. ನೀವು ಜೀವನದಲ್ಲಿ ಸಂತೋಷವಾಗಿರಲು ಬಯಸಿದರೆ ಯಾವಾಗಲೂ ಧನಾತ್ಮಕವಾಗಿ ಯೋಚಿಸುವುದನ್ನು ಕಲಿಯಿರಿ. ಮತ್ತು ಪ್ರತಿಯೊಂದು ಸಣ್ಣಪುಟ್ಟ ವಿಷಯಕ್ಕೂ ಹಠ ಮಾಡುವುದನ್ನು ಬಿಟ್ಟು ಹೊಂದಿಕೊಂಡು ಬಾಳುವುದನ್ನು ಕಲಿಯಿರಿ. ಇದರಿಂದ ಖಂಡಿತವಾಗಿಯೂ ನೀವು ಸಂತೋಷವಾಗಿರುತ್ತೀರಿ.

ಇದನ್ನೂ ಓದಿ: ನಿದ್ರಾಹೀನತೆಯಿಂದ ಮಹಿಳೆಯರಲ್ಲಿ ಡಯಾಬಿಟಿಸ್ ಹೆಚ್ಚಳ; ಅಧ್ಯಯನದಲ್ಲಿ ಬಯಲು

ಇತರರಿಂದ ನಿರೀಕ್ಷಿಸುವುದನ್ನು ನಿಲ್ಲಿಸಿ:

ಎಕ್ಸ್ಪೆಕ್ಟೇಷನ್ ಇಸ್ ಆಲ್ವೇಸ್ ಹರ್ಟ್ಸ್ ಎಂಬ ಒಂದು ಮಾತಿದೆ. ನಾವು ಇತರರಿಂದ ಏನನ್ನಾದರೂ ಅಗತ್ಯಕ್ಕಿಂತ ಹೆಚ್ಚಾಗಿ ನಿರೀಕ್ಷಿಸಿದರೆ ಅದು ನಮಗೆ ನೋವನ್ನು ಉಂಟು ಮಾಡುತ್ತದೆ. ಆದ್ದರಿಂದ ಸಂತೋಷವಾಗಿರಲು ಯಾರಿಂದಲೂ ಏನನ್ನೂ ನೀರೀಕ್ಷಿಸಬೇಡಿ.

ಸಂಗೀತವನ್ನು ಆಲಿಸಿ:

ಪ್ರತಿನಿತ್ಯ ನಿಮಗೆ ಇಷ್ಟವಾದ ಸಂಗೀತವನ್ನು ಆಲಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಏಕೆಂದರೆ ಸಂಗೀತವು ಆಯಾಸವನ್ನು ಕಡಿಮೆ ಮಾಡುತ್ತದೆ, ಎಂಡಾರ್ಫಿನ್ ಹಾರ್ಮೋನುಗಳನ್ನು ಹೆಚ್ಚಿಸುವ ಮೂಲಕ ನಿಮ್ಮಲ್ಲಿ ಸಂತೋಷದ ಭಾವನೆಯನ್ನು ಮೂಡಿಸುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಮನಸ್ಸನ್ನು ರಿಫ್ರೆಶ್ ಮಾಡುತ್ತದೆ. ಮನೆ ಕೆಲಸಗಳನ್ನು ಮಾಡುವ ಸಮಯದಲ್ಲಿ ನೀವು ಸಂಗೀತವನ್ನು ಆಲಿಸಬಹುದು.

ಅಷ್ಟೇ ಅಲ್ಲದೆ 8 ಗಂಟೆಗಳ ಉತ್ತಮ ನಿದ್ದೆಯನ್ನು ಪಡೆಯುವ ಮೂಲಕ, ಪುಸ್ತಕಗಳನ್ನು ಓದುವುದು, ವ್ಯಾಯಾಮಗಳನ್ನು ಮಾಡುವ ಮೂಲಕ, ಸ್ವಲ್ಪ ಹೊತ್ತಿನ ಕಾಲ ಪ್ರಶಾಂತವಾದ ಸ್ಥಳದಲ್ಲಿ ನಡೆದಾಡುವ ಮೂಲಕ ನಿಮ್ಮನ್ನು ನೀವು ಸಂತೋಷವಾಗಿರಿಸಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ