Paneer Snacks: ಈ ಚಳಿಗಾಲದಲ್ಲಿ ನಿಮ್ಮ ಸಂಜೆಯ ಕಾಫಿಗೆ ಪನ್ನೀರ್ ಬಳಸಿ ಮಾಡಿದ ಐದು ರೆಸಿಪಿ ಇಲ್ಲಿದೆ
ಸಂಜೆಯ ಹೊತ್ತಿಗೆ ಈ ಚಳಿಯಿಂದ ನಿಮ್ಮನ್ನು ಬೆಚ್ಚಗಿಡಲು ಕೇವಲ 30 ನಿಮಿಷಗಳಲ್ಲಿ ತಯಾರಿಸಬಹುದಾದ ಪನ್ನೀರಿನ ಪ್ರಮುಖ 5 ಗರಿ ಗರಿಯಾದ ರೆಸಿಪಿಗಳು ಇಲ್ಲಿವೆ. ನೀವೂ ಮನೆಯಲ್ಲಿ ಪ್ರಯತ್ನಿಸಿ.
ಭಾರತೀಯ ಆಹಾರ ಪದಾರ್ಥಗಳಲ್ಲಿ ಪನ್ನೀರ್(Paneer) ವಿಶೇಷ ಸ್ಥಾನವನ್ನು ಪಡೆದಿದೆ. ಯಾವುದೇ ವಿಶೇಷ ಸಂದರ್ಭವಾಗಲಿ ಅಥವಾ ಡಿನ್ನರ್ ಪಾರ್ಟಿಯಾಗಲಿ, ಪನೀರ್ ಖಾದ್ಯವು ಪ್ರತಿಯೊಂದು ಮೆನುವಿನಲ್ಲಿ ಇರುತ್ತದೆ. ನೀವೂ ಕೂಡ ಪನ್ನೀರ್ ನ್ನು ಇಷ್ಟ ಪಡುವವರಾಗಿದ್ದರೆ, ನಿಮಗಾಗಿ ಇಲ್ಲಿದೆ ಪ್ರಮುಖ ರೆಸಿಪಿಗಳು. ಸಂಜೆಯ ಹೊತ್ತಿಗೆ ಈ ಚಳಿಯಲ್ಲಿ( Winter season) ನಿಮ್ಮನ್ನು ಬೆಚ್ಚಗಿಡಲು ಕೇವಲ 30 ನಿಮಿಷಗಳಲ್ಲಿ ತಯಾರಿಸಬಹುದಾದ ಪನ್ನೀರಿನ ಪ್ರಮುಖ 5 ಗರಿ ಗರಿಯಾದ ರೆಸಿಪಿಗಳು ಇಲ್ಲಿವೆ. ನೀವೂ ಮನೆಯಲ್ಲಿ ಪ್ರಯತ್ನಿಸಿ.
1. ತಂದೂರಿ ಪನ್ನೀರ್ ಪಕೋಡ(Tandoori Paneer Pakoda) :
ತಂದೂರಿ ಪನ್ನೀರ್ ಪಕೋಡ ಗರಿ ಗರಿಯಾಗಿ ನಿಮ್ಮ ಸಂಜೆಯ ಹೊತ್ತಿಗೆ ಚಹಾದ ಜೊತೆಗೆ ಒಂದು ಉತ್ತಮ ಜೋಡಿಯಾಗಿದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ ಮೊದಲು ಮೊಸರು, ನಿಂಬೆ ರಸ, ಉಪ್ಪು, ತಂದೂರಿ ಮಸಾಲಾ, ಕೊತ್ತಂಬರಿ ಪುಡಿ ಮತ್ತು ಕೆಂಪು ಮೆಣಸಿನ ಪುಡಿಯ ಪೇಸ್ಟ್‌ನಲ್ಲಿ ಪನ್ನೀರ್ ತುಂಡುಗಳನ್ನು ಚೆನ್ನಾಗಿ ಬೆರೆಸಿ, ಅರ್ಧ ಘಂಟೆಯವರೆಗೆ ಹಾಗೆಯೇ ಬಿಡಿ. ನಂತರ ಬೇಸಾನ್, ಬೇಕಿಂಗ್ ಪೌಡರ್, ಸ್ವಲ್ಪ ಉಪ್ಪು, ಅರಿಶಿನ ಪುಡಿ, ಜೀರಿಗೆ ಪುಡಿ ಮತ್ತು ಕೆಂಪು ಮೆಣಸಿನ ಪುಡಿಯನ್ನು ಸೇರಿಸಿ. ಕೊನೆಯದಾಗಿ ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿ.
2.ಚಿಲ್ಲಿ ಗಾರ್ಲಿಕ್ ಪನ್ನೀರ್ (Chilli Garlic Paneer):
ಈ ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡಲು ಖಾರ ಹಾಗೂ ಗರಿ ಗರಿಯಾದ ಚಿಲ್ಲಿ ಗಾರ್ಲಿಕ್ ಪನ್ನೀರ್ ಸವಿಯಿರಿ. ಇದಕ್ಕಾಗಿ ನೀವು ಮೊದಲಿಗೆ ಮೊಸರು, ಗರಂ ಮಸಾಲ, ಕೆಂಪು ಮೆಣಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ರುಚಿಗೆ ಉಪ್ಪು ಹಾಕಿ ಪನ್ನೀರ್ ತುಂಡುಗಳನ್ನು ಚೆನ್ನಾಗಿ ಬೆರೆಸಿ. ನಂತರ ಸ್ವಲ್ಪ ಸಮಯದ ವರೆಗೆ ತೆಗೆದಿಟ್ಟು ಎಣ್ಣೆಯಲ್ಲಿ ಫ್ರೈ ಮಾಡಿ. ಚಿಲ್ಲಿ ಗಾರ್ಲಿಕ್ ಪನ್ನೀರ್ ಸವಿಯಲು ಸಿದ್ಧ.
3.ಪನ್ನೀರ್ ಟಿಕ್ಕಾ ಸ್ಯಾಂಡ್ವಿಚ್ (Paneer Tikka Sandwich):
ಅತ್ಯಂತ ತ್ವರಿತವಾಗಿ ನಿಮ್ಮ ಸಂಜೆಯ ಕಾಫಿಗೆ ಪನ್ನೀರ್ ಟಿಕ್ಕಾ ಸ್ಯಾಂಡ್ವಿಚ್ ತಯಾರಿಸಿ. ಮೊಸರು, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲ, ಕಸೂರಿ ಮೇಥಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ರುಚಿಗೆ ತಕ್ಕಷ್ಟು ಉಪ್ಪಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ತುಂಡರಿಸಿದ ಪನ್ನೀರ್ ತುಂಡುಗಳು, ಈರುಳ್ಳಿ, ಕ್ಯಾಪ್ಸಿಕಂ ಮತ್ತು ಟೊಮೆಟೊವನ್ನು ಸೇರಿಸಿ ಹಾಗು 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಈಗಾಗಲೇ ಮಿಶ್ರಣ ಮಾಡಿಟ್ಟ ಪನ್ನೀರ್ ತುಂಡುಗಳು ಫ್ರೈ ಮಾಡಿ. ಸ್ಯಾಂಡ್ವಿಚ್ ಗಾಗಿ ಬ್ರೆಡ್ ಮೇಲೆ ಹಸಿರು ಚಟ್ನಿಯನ್ನು ಹರಡಿ. ಬ್ರೆಡ್ ಮೇಲೆ ಪನೀರ್ ಟಿಕ್ಕಾವನ್ನು ಇರಿಸಿ ಮತ್ತು ಸ್ಯಾಂಡ್‌ವಿಚ್ ಅನ್ನು ಮುಚ್ಚಿ. ನಂತರ ಸ್ಯಾಂಡ್‌ವಿಚ್ ಗ್ರಿಲ್‌ನಲ್ಲಿ ಸಮವಾಗಿ ಗರಿಗರಿಯಾಗುವವರೆಗೆ ಟೋಸ್ಟ್ ಮಾಡಿ. ಪನೀರ್ ಟಿಕ್ಕಾ ಸ್ಯಾಂಡ್‌ವಿಚ್ ಸವಿಯಲು ಸಿದ್ಧವಾಗಿದೆ.
4.ಪನ್ನೀರ್ ಪಾಪ್ ಕಾರ್ನ್(Paneer Popcorn):
ಒಂದು ಬಟ್ಟಲಿನಲ್ಲಿ ಕಾಶ್ಮೀರಿ ಕೆಂಪು ಮೆಣಸಿನ ಪುಡಿ, ಕರಿಮೆಣಸಿನ ಪುಡಿ ಮತ್ತು ರುಚಿಗೆ ಉಪ್ಪು ಸೇರಿಸಿ. ನಂತರ ಇದಕ್ಕೆ ಪನ್ನೀರ್ ತುಂಡುಗಳು ಒಡೆಯದಂತೆ ನಿಧಾನವಾಗಿ ಮಿಶ್ರಣ ಮಾಡಿ. ಪನ್ನೀರ್ ಅನ್ನು ಬ್ರೆಡ್ ತುಂಡುಗಳಲ್ಲಿ ಇರಿಸಿ. ನಂತರ ಇದನ್ನು ಗೋಲ್ಡನ್ ಬಣ್ಣ ಆಗುವವರೆಗೆ ಫ್ರೈ ಮಾಡಿ, ಪನೀರ್ ಪಾಪ್ ಕಾರ್ನ್ ಸಿದ್ಧವಾಗಿದೆ.
5.ಪನ್ನೀರ್ ಕಚೋರಿ(Paneer Kachori):
ಈ ಗರಿಗರಿಯಾದ ಪನೀರ್ ಕಚೋರಿಗಳು ರುಚಿಕರವಾದ ಮಸಾಲಾಗಳ ಮಿಶ್ರಣದಿಂದ ತುಂಬಿವೆ. ಇದು ನಿಮ್ಮ ಪರಿಪೂರ್ಣವಾದ ಟೀ ಸಮಯಕ್ಕೆ ಉತ್ತಮ ಜೋಡಿಯಾಗಿದೆ. ಸಿಹಿ ಮತ್ತು ಮಸಾಲೆಯುಕ್ತ ಖಾರ ಚಟ್ನಿಯೊಂದಿಗೆ ಈ ಚಳಿಗಾಲದಲ್ಲಿ ಬಿಸಿ ಬಿಸಿಯಾಗಿ ಸವಿಯಿರಿ.
ಇದನ್ನು ಓದಿ: ನೀವು ಫುಡ್ ಆರ್ಡರ್ ಮಾಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ
ಈ ಮೇಲಿನ ಎಲ್ಲಾ ರುಚಿಕರವಾದ ಪನ್ನೀರ್ ತಿಂಡಿಗಳನ್ನು ಪ್ರಯತ್ನಿಸಿ. ನಿಮ್ಮ ಮನೆಯ ಪ್ರತಿ ಸಂಜೆಯನ್ನು ಉತ್ತಮ ರುಚಿಯೊಂದಿಗೆ ಮನೆ ಮಂದಿಯನ್ನೆಲ್ಲಾ ಸಂತೋಷ ಪಡಿಸಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:48 pm, Wed, 23 November 22