World Forest Day 2026: ಹಸಿರೇ ಉಸಿರು… ಕಾಡನ್ನು ಬೆಳೆಸಿ ನಾಡನ್ನು ಉಳಿಸೋಣ
ಕಾಡುಗಳು ನಮಗೆ ಆಮ್ಲಜನಕವನ್ನು ಒದಗಿಸುತ್ತವೆ, ಹವಾಮಾನವನ್ನು ನಿಯಂತ್ರಿಸುತ್ತವೆ ಮತ್ತು ಲಕ್ಷಾಂತರ ಪ್ರಾಣಿಗಳಿಗೆ ನೆಲೆಯಾಗಿವೆ. ಈ ಮೂಲಕ ಅರಣ್ಯ ಸಂಪತ್ತು ಪರಿಸರ ಸಮತೋಲನಕ್ಕೆ ಮಹತ್ತರ ಕೊಡುಗೆಯನ್ನು ನೀಡುತ್ತಿವೆ. ಆದರೆ ಇಂದು ಮನುಷ್ಯನ ಸ್ವಾರ್ಥಕ್ಕೆ ಕಾಡುಗಳು ನಾಶವಾಗುತ್ತಿದ್ದು, ಈ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 21 ರಂದು ವಿಶ್ವ ಅರಣ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ಅರಣ್ಯಗಳು (Forest) ಭೂಮಿಯ ಜೀವಾಳವಾಗಿದ್ದು, ಈ ಭೂಮಿಯಲ್ಲಿ ವಾಸಿಸುವ ಪ್ರತಿಯೊಂದು ಜೀವರಾಶಿಗಳಿಗೂ ಆಮ್ಲಜನಕ, ಆಹಾರ, ಔಷಧ ಮತ್ತು ಜೀವನೋಪಾಯವನ್ನು ಒದಗಿಸುತ್ತಿವೆ. ಜೊತೆಗೆ ಪರಿಸರವನ್ನು ಸಮತೋಲನದಲ್ಲಿಡುವ ಮಹತ್ತರ ಕಾರ್ಯವನ್ನೂ ಮಾಡುತ್ತಿವೆ. ವಿಶ್ವಸಂಸ್ಥೆಯ ಪ್ರಕಾರ, ವಿಶ್ವಾದ್ಯಂತ ಸುಮಾರು 1.6 ಶತಕೋಟಿ ಜನರು ತಮ್ಮ ಆಹಾರ, ಆಶ್ರಯ, ಔಷಧ ಮತ್ತು ಜೀವನೋಪಾಯಕ್ಕಾಗಿ ನೇರವಾಗಿ ಕಾಡುಗಳನ್ನು ಅವಲಂಬಿಸಿದ್ದಾರೆ. ನಾವು ಬಳಸುವ ಔಷಧಿಗಳಲ್ಲಿ ಶೇ. 25 ರಷ್ಟು ಈ ಕಾಡುಗಳಿಂದಲೇ ಬರುತ್ತವೆ. ಇಂದು ಕೈಗಾರಿಕೀಕರಣ, ನಗರೀಕರಣದ ಹೆಸರಿನಲ್ಲಿ ಕಾಡುಗಳನ್ನು ನಾಶಪಡಿಸಲಾಗುತ್ತಿದೆ. ಇದು ನೇರವಾಗಿ ಹವಮಾನ ಬದಲಾವಣೆಗೆ ಕಾರಣವಾಗುತ್ತಿವೆ. ಜೊತೆಗೆ ಕಾಡುಪ್ರಾಣಿಗಳಿಗೂ ಬೆದರಿಕೆಯನ್ನು ತಂದೊಡ್ಡಿದೆ. ಆದ್ದರಿಂದ ಅರಣ್ಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮಾರ್ಚ್ 21 ರಂದು ವಿಶ್ವ ಅರಣ್ಯ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಅರಣ್ಯ ದಿನದ ಇತಿಹಾಸವೇನು?
ವಿಶ್ವ ಅರಣ್ಯ ದಿನವನ್ನು ಪ್ರತಿ ವರ್ಷ ಮಾರ್ಚ್ 21 ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ. ಈ ದಿನವನ್ನು ಮೊದಲು 1971 ರಲ್ಲಿ ಆಚರಿಸಲಾಯಿತು. 1971 ರಲ್ಲಿ, ಯುರೋಪಿಯನ್ ಕೃಷಿ ಸಂಸ್ಥೆಯು ಅರಣ್ಯ ಸಂರಕ್ಷಣೆಯನ್ನು ಉತ್ತೇಜಿಸಲು ತನ್ನ 23 ನೇ ಸಾಮಾನ್ಯ ಸಭೆಯಲ್ಲಿ ವಿಶ್ವ ಅರಣ್ಯ ದಿನವನ್ನು ಘೋಷಿಸಿತು. ತರುವಾಯ, ಮರಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನವೆಂಬರ್ 28, 2012 ರಂದು ಒಂದು ನಿರ್ಣಯವನ್ನು ಅಂಗೀಕರಿಸಿತು ಮತ್ತು ಮಾರ್ಚ್ 21 ರಂದು ವಿಶ್ವ ಅರಣ್ಯ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಅಂದಿನಿಂದ ಪ್ರತಿವರ್ಷ ವಿಶ್ವ ಅರಣ್ಯ ದಿನವನ್ನು ಆಚರಿಸಲಾಗುತ್ತಿದೆ. ಕಾಡುಗಳು ಮತ್ತು ನಮ್ಮ ಜೀವನಕ್ಕೆ ಕಾಡು ಎಷ್ಟು ಮುಖ್ಯ ಎಂದು ಅರಣ್ಯಗಳ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
ಇದನ್ನೂ ಓದಿ: ಬದುಕಿನಲ್ಲಿ ಸದಾ ಸಂತೋಷದಿಂದಿರಲು ಏನು ಮಾಡಬೇಕು?
ವಿಶ್ವ ಅರಣ್ಯ ದಿನದ ಮಹತ್ವವೇನು?
- ಪ್ರತಿಯೊಬ್ಬ ವ್ಯಕ್ತಿಗೂ ಬದುಕಲು ಆಮ್ಲಜನಕದ ಅಗತ್ಯವಿದೆ ಮತ್ತು ಈ ಆಮ್ಲಜನಕವನ್ನು ಮರಗಳಿಂದ ಮಾತ್ರ ಪಡೆಯಲಾಗುತ್ತದೆ. ಆದರೆ ನಿರಂತರವಾಗಿ ಮರಗಳನ್ನು ಕಡಿಯುವುದರಿಂದ, ಅವುಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತಿದೆ ಮತ್ತು ಇಂಗಾಲದ ಡೈಆಕ್ಸೈಡ್ ಮತ್ತು ಇಂಗಾಲದ ಮಾನಾಕ್ಸೈಡ್‌ನಂತಹ ವಿಷಕಾರಿ ಅನಿಲಗಳು ವಾತಾವರಣದಲ್ಲಿ ಹೆಚ್ಚಾಗುತ್ತಿವೆ. ಈ ಅನಿಲಗಳು ನಮಗೆ ತುಂಬಾ ಅಪಾಯಕಾರಿ. ಅದಕ್ಕಾಗಿಯೇ ನಾವು ಮರಗಳನ್ನು ಸಂರಕ್ಷಿಸಬೇಕು. ಪ್ರತಿಯೊಬ್ಬರೂ ಒಂದು ಮರವನ್ನು ನೆಟ್ಟರೂ ಸಹ, ನಮ್ಮ ಭೂಮಿಯನ್ನು ಹಸಿರಾಗಿಸಬಹುದು ಎಂದು ಅರಣ್ಯಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಅರಣ್ಯ ದಿನವನ್ನು ಆಚರಿಸಲಾಗುತ್ತದೆ.
- ಈ ದಿನದಂದು ಮರಗಿಡಗಳನ್ನು ನೆಡಲು ಜನರಿಗೆ ಪ್ರೋತ್ಸಾಹಿಸಲಾಗುತ್ತದೆ.
- ಪರಿಸರ ಸಮತೋಲನಕ್ಕೆ ಅರಣ್ಯಗಳು ಎಷ್ಟು ಮುಖ್ಯ ಎಂಬುದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
- ಒಟ್ಟಾರೆಯಾಗಿ ಮಾನವರಿಗೆ ಕಾಡುಗಳ ಮಹತ್ವವನ್ನು ಅರ್ಥಮಾಡಿಕೊಳ್ಳಲು ವಿಶ್ವ ಅರಣ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಮರಗಳನ್ನು ನೆಡಲು ಜನರಿಗೆ ಅರಿವು ಮೂಡಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
