ನೀವು 100 ವರ್ಷಗಳ ಕಾಲ ಬದುಕಬೇಕಾ? ಶತಾಯುಷಿಗಳ ಆಯಸ್ಸಿನ ಗುಟ್ಟಿನ ಬಗ್ಗೆ ತಜ್ಞರು ಹೇಳುವುದೇನು?
ಜಾಗತಿಕ ಮಟ್ಟದಲ್ಲಿ ಶತಾಯುಷಿಗಳ ಸಂಖ್ಯೆಯು ಏರಿಕೆಯಾಗುತ್ತಿದೆ. 2000 ರಲ್ಲಿ 151,000 ರಿಂದ 2021 ರಲ್ಲಿ 573,000 ರಷ್ಟು ಹೆಚ್ಚಳವಾಗಿದೆ. ಹೀಗಾಗಿ ಒಂದೇ ವರ್ಷದಲ್ಲಿ ಈ ಸಂಖ್ಯೆಯು ಮೂರು ಪಟ್ಟು ಹೆಚ್ಚಾಗಿದ್ದು, ಈ ಅಂಕಿ ಅಂಶವು ವ್ಯಕ್ತಿಯ ಜೀವಿತಾವಧಿಯು ಹೆಚ್ಚಾಗುತ್ತಿರುವುದನ್ನು ತೋರಿಸುತ್ತಿದೆ. ಹಾಗಾದ್ರೆ ದೀರ್ಘಾಯುಷ್ಯ ಹೊಂದಲು ತಜ್ಞರು ಹೇಳುವ ಈ ನಾಲ್ಕು ಅಭ್ಯಾಸಗಳಾವುವು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂದಿನ ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿದೆ. ಸಣ್ಣ ವಯಸ್ಸಿನಲ್ಲಿ ಹೃದಯಾಘಾತ ಸೇರಿದಂತೆ ನಾನಾ ರೀತಿಯ ಕಾಯಿಲೆಗಳು ಒಕ್ಕರಿಸಿಕೊಂಡು ಬಿಡುತ್ತಿದೆ. ಇದೆಲ್ಲದರ ನಡುವೆ ಶತಾಯುಷಿಗಳ ಸಂಖ್ಯೆಯು ಏರಿಕೆಯಾಗುತ್ತಿದೆ. 2000ನೇ ಇಸವಿಯಿಂದ ಪ್ರಕಟವಾದ 34 ವೀಕ್ಷಣಾ ಅಧ್ಯಯನಗಳ ಮೂಲಕ ತಜ್ಞರು ಹೇಳುವಂತೆ “ವಿಶ್ವದಾದ್ಯಂತ ಶತಾಯುಷಿಗಳು ಮತ್ತು ಶತಾಯುಷಿಗಳಿಗೆ ಹತ್ತಿರವಿರುವವರಲ್ಲಿ ಅವರು ಸೇವಿಸುವ ಆಹಾರ, ಔಷಧಿಗಳ ಕಡಿಮೆ ಬಳಕೆಯೇ ಆಯುಷ್ಯವು ಹೆಚ್ಚಾಗಲು ಕಾರಣ ಎನ್ನಲಾಗಿದೆ. ಹಾಗಾದ್ರೆ ನೀವು ಕೂಡ ದೀರ್ಘಾಯುಷ್ಯ ಹೆಚ್ಚಿಸುವ ಕೆಲವು ಅಭ್ಯಾಸಗಳನ್ನು ಪಾಲಿಸುವುದು ಉತ್ತಮ.
- ಸಮತೋಲಿತ ಆಹಾರ: ಶತಾಯುಷಿಗಳ ಸೇವಿಸುವ ಆಹಾರದಲ್ಲಿ ಅಧಿಕ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಗಳು, ಶೇಕಡಾ 57 ರಿಂದ 67 ರಷ್ಟು ಪ್ರೋಟೀನ್ ಮತ್ತು ಕೊಬ್ಬಿನಿಂದ ಕೂಡಿದ ಆಹಾರ, ಹಣ್ಣುಗಳು, ತರಕಾರಿಗಳು ಮೀನು ಮತ್ತು ದ್ವಿದಳ ಧಾನ್ಯಗಳನ್ನು ಒಳಗೊಂಡಿದೆ. ಅದಲ್ಲದೇ ಕಡಿಮೆ ಉಪ್ಪಿನ ಸೇವನೆಯಿಂದ ಬೇಡದ ಆರೋಗ್ಯವನ್ನು ಕಾಪಾಡಲು ಸಾಧ್ಯ ಎನ್ನಲಾಗಿದೆ.
- ಕಡಿಮೆ ಔಷಧದ ಬಳಕೆ: ನೂರು ವರ್ಷ ಬದುಕಿರುವ ಜನರು ದೀರ್ಘಕಾಲದ ಕಾಯಿಲೆಯಿಂದ ತುತ್ತಾಗುತ್ತಿರುವುದು ಕಡಿಮೆ ಎನ್ನಲಾಗಿದೆ. ಶತಾಯುಷಿಗಳಲ್ಲದವರಿಗೆ ಹೋಲಿಸಿದರೆ ನೂರು ವರ್ಷ ಸಮೀಪವಿರುವ ಜನರು ಕಡಿಮೆ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಈ ಕಡಿಮೆ ಔಷಧೀಯ ಬಳಕೆ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯ ಎಂದು ತಜ್ಞರು ತಿಳಿಸಿದ್ದಾರೆ.
- ಉತ್ತಮ ನಿದ್ರೆ: ಉತ್ತಮ ಆರೋಗ್ಯ ಹಾಗೂ ನೂರು ವರ್ಷಗಳ ಕಾಲ ಬದುಕಲು ನಿದ್ದೆಯು ಪ್ರಮುಖ ಕಾರಣ ಎನ್ನಲಾಗಿದೆ. ಶತಾಯುಷಿಗಳು ಶೇಕಡಾ 68 ರಷ್ಟು ತಮ್ಮ ನಿದ್ರೆಯಿಂದ ತೃಪ್ತರಾಗಿದ್ದಾರೆ. ಹೀಗಾಗಿ ದಿನಕ್ಕೆ ಏಳರಿಂದ ಎಂಟು ಗಂಟೆಗಳ ಕಾಲ ಉತ್ತಮ ನಿದ್ದೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಸಲಹೆಯನ್ನು ತಜ್ಞರು ನೀಡಿದ್ದಾರೆ.
- ಗ್ರಾಮೀಣ ಜೀವನ ಶೈಲಿ: ಎಲ್ಲಾ ಶತಾಯುಷಿಗಳ ಪೈಕಿ 75% ಕ್ಕಿಂತ ಹೆಚ್ಚು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರಂತೆ. ಈ ಭಾಗದ ಜನರು ಕಡಿಮೆ ಒತ್ತಡದೊಂದಿಗೆ ಮತ್ತು ದೀರ್ಘಕಾಲದ ಕಾಯಿಲೆಗಳಿಗೆ ಒಳಗಾಗುವುದು ಕಡಿಮೆ ಎನ್ನಲಾಗಿದೆ. ಹೀಗಾಗಿ ತಜ್ಞರು ತಿಳಿಸುವಂತೆ ಈ ನಾಲ್ಕು ಅಭ್ಯಾಸಗಳಿಂದ ಆಯುಷ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ