Winter Health Tips: ಚಳಿಗಾಲದಲ್ಲಿ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನ ಸಿಗುತ್ತೆ ಗೊತ್ತಾ?

ಕ್ಯಾರೆಟ್ ಪೋಷಕಾಂಶಗಳ ಶಕ್ತಿ ಕೇಂದ್ರವಾಗಿರುವುದಲ್ಲದೆ, ಉತ್ಕರ್ಷಣ ನಿರೋಧಕಗಳು ಮತ್ತು ಬೀಟಾ ಕ್ಯಾರೋಟಿನ್ ನಿಂದ ಸಮೃದ್ಧವಾಗಿದೆ, ಇದು ಒಟ್ಟಾರೆ ಆರೋಗ್ಯವನ್ನು ಕೂಡ ಬೆಂಬಲಿಸುತ್ತದೆ. ನೀವು ಇದನ್ನು ಸಲಾಡ್, ಸೂಪ್ ಮತ್ತು ಪಲ್ಯಗಳಲ್ಲಿ ಬಳಸಿಕೊಳ್ಳಬಹುದು ಆದರೆ ಇವೆಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಆಹಾರದಲ್ಲಿ ಕ್ಯಾರೆಟ್ಗಳನ್ನು ಸೇರಿಸುವ ಅತ್ಯುತ್ತಮ ರೂಪವೆಂದರೆ ಕ್ಯಾರೆಟ್ ಜ್ಯೂಸ್. ಇದರ ರಸದ ಪ್ರಯೋಜನಗಳು ಹೇರಳವಾಗಿರುವುದರಿಂದ ನೀವು ಚಳಿಗಾಲದಲ್ಲಿ ಪ್ರತಿನಿತ್ಯ ಸೇವನೆ ಮಾಡಬಹುದಾಗಿದೆ.

Winter Health Tips: ಚಳಿಗಾಲದಲ್ಲಿ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನ ಸಿಗುತ್ತೆ ಗೊತ್ತಾ?
carrot juice
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Dec 21, 2023 | 7:58 PM

ಚಳಿಗಾಲ ಬಂತೆಂದರೆ ಸಾಕು ಕೆಲವು ರುಚಿಕರವಾದ ಹಣ್ಣು, ತರಕಾರಿಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಅದೂ ಅಲ್ಲದೆ ಈ ವಾತಾವರಣದಲ್ಲಿ ನಮ್ಮ ಆರೋಗ್ಯವನ್ನು ಹಿಡಿತದಲ್ಲಿಟ್ಟುಕೊಳ್ಳಲು ಬಾಯಿಯ ರುಚಿಯ ಜೊತೆಗೆ ದೇಹಕ್ಕೆ ಶಕ್ತಿ ನೀಡುವ ತರಕಾರಿಗಳನ್ನೂ ಕೂಡ ಸೇವನೆ ಮಾಡಬೇಕಾಗುತ್ತದೆ ಅಂತಹ ಪಟ್ಟಿಯಲ್ಲಿ ಕ್ಯಾರೆಟ್ ಅನ್ನು ಕೂಡ  ಸೇರಿಸಿಕೊಳ್ಳಬಹುದಾಗಿದೆ. ಇದು ಪೋಷಕಾಂಶಗಳ ಶಕ್ತಿ ಕೇಂದ್ರವಾಗಿರುವುದಲ್ಲದೆ, ಉತ್ಕರ್ಷಣ ನಿರೋಧಕಗಳು ಮತ್ತು ಬೀಟಾ ಕ್ಯಾರೋಟಿನ್ ನಿಂದ ಸಮೃದ್ಧವಾಗಿದೆ, ಇದು ಒಟ್ಟಾರೆ ಆರೋಗ್ಯವನ್ನು ಕೂಡ ಬೆಂಬಲಿಸುತ್ತದೆ. ನೀವು ಇದನ್ನು ಸಲಾಡ್, ಸೂಪ್ ಮತ್ತು ಪಲ್ಯಗಳಲ್ಲಿ ಬಳಸಿಕೊಳ್ಳಬಹುದು ಆದರೆ ಇವೆಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಆಹಾರದಲ್ಲಿ ಕ್ಯಾರೆಟ್ಗಳನ್ನು ಸೇರಿಸುವ ಅತ್ಯುತ್ತಮ ರೂಪವೆಂದರೆ ಕ್ಯಾರೆಟ್ ಜ್ಯೂಸ್. ಇದರ ರಸದ ಪ್ರಯೋಜನಗಳು ಹೇರಳವಾಗಿರುವುದರಿಂದ ನೀವು ಚಳಿಗಾಲದಲ್ಲಿ ಪ್ರತಿನಿತ್ಯ ಸೇವನೆ ಮಾಡಬಹುದಾಗಿದೆ.

ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು?

ಜೀವಸತ್ವಗಳು ಮತ್ತು ಪೋಷಕಾಂಶಗಳಿಂದ ತುಂಬಿರುವ ಕ್ಯಾರೆಟ್ ರಸವು ನಿಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ. ಕ್ಯಾರೆಟ್ ಜ್ಯೂಸ್ ನ ಪ್ರಯೋಜನಗಳು ಮತ್ತು ಅದನ್ನು ನಿಮ್ಮ ಆಹಾರದಲ್ಲಿ ಏಕೆ ಸೇರಿಸಬೇಕು ಎಂಬುದನ್ನು ಆಹಾರ ತಜ್ಞೆ ಖುಷ್ಬೂ ತಿಳಿಸಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

1. ಫೈಬರ್ ಸಮೃದ್ಧವಾಗಿದೆ:

ಕ್ಯಾರೆಟ್ ಫೈಬರ್ ನ ಉತ್ತಮ ಮೂಲವಾಗಿದೆ. ಈ ರಸವು ನಿಮ್ಮ ದೇಹದ ಫೈಬರ್ ಅಗತ್ಯದ 40- 50 ಪ್ರತಿಶತವನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ. ನಿಮ್ಮ ಜೀರ್ಣಕಾರಿ ಆರೋಗ್ಯವನ್ನು ನಿಯಂತ್ರಣದಲ್ಲಿಡಲು ಫೈಬರ್ ಅತ್ಯಗತ್ಯ, ಅದಲ್ಲದೆ ಕ್ಯಾರೆಟ್ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಹಾರ್ವರ್ಡ್ ಟಿ. ಎಚ್. ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ನ ದತ್ತಾಂಶದ ಪ್ರಕಾರ, ಹೆಚ್ಚಿನ ಫೈಬರ್ ಆಹಾರವು ದೇಹದ ಸಕ್ಕರೆ ಅಥವಾ ಸಿಹಿ ಅಂಶದ ಬಳಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದರಿಂದ ನಿಮ್ಮ ಹಸಿವು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ.

2. ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ:

ಕ್ಯಾರೆಟ್ ಬೀಟಾ- ಕ್ಯಾರೋಟಿನ್ (ವಿಟಮಿನ್ ಎ ಯ ಪೂರ್ವಗಾಮಿ) ನ ಸಮೃದ್ಧ ಮೂಲವಾಗಿದೆ, ಅದಲ್ಲದೆ ಉತ್ಕರ್ಷಣ ನಿರೋಧಕವಾಗಿದೆ, ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇನ್ನು ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುವ ಮತ್ತೊಂದು ಪ್ರಮುಖ ಪೋಷಕಾಂಶವಾಗಿದೆ. ಇದು ನಿಮ್ಮನ್ನು ಸಾಮಾನ್ಯ ಶೀತ ಮತ್ತು ಕೆಮ್ಮಿನಿಂದ ರಕ್ಷಿಸುತ್ತದೆ.

3. ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ:

ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ಆರೋಗ್ಯವಾಗಿಡುವುದರ ಜೊತೆಗೆ ಸುಂದರವಾಗಿರಬೇಕೆಂದು ಬಯಸುತ್ತೀರಾ? ಹಾಗಾದರೆ ನಿಮ್ಮ ಆಹಾರದಲ್ಲಿ ಕ್ಯಾರೆಟ್ ರಸವನ್ನು ಸೇರಿಸುವುದು ತುಂಬಾ ಒಳ್ಳೆಯದು. ಸ್ಪಷ್ಟ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಇದು ಸಹಾಯ ಮಾಡುತ್ತದೆ. ಇದರಲ್ಲಿ ಬೀಟಾ- ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಎಂಬ ಎರಡು ಉತ್ಕರ್ಷಣ ನಿರೋಧಕಗಳಿವೆ, ಇದು ನಿಮ್ಮ ಚರ್ಮವನ್ನು ಹಾನಿಯಿಂದ ರಕ್ಷಿಸುತ್ತದೆ ಎಂದು ನ್ಯೂಟ್ರಿಯಂಟ್ಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ. ಕ್ಯಾರೆಟ್ ವಿಟಮಿನ್ ಎ ಅನ್ನು ಸಹ ಹೊಂದಿರುತ್ತದೆ, ಇದು ಕೂಡ ನಿಮಗೆ ಹೊಳೆಯುವ ಚರ್ಮವನ್ನು ಪಡೆಯಲು ಸಹಾಯ ಮಾಡುತ್ತದೆ.

4. ಮಧುಮೇಹಿಗಳಿಗೆ ಒಳ್ಳೆಯದು:

ಸ್ವಲ್ಪ ಪ್ರಮಾಣದ ಕ್ಯಾರೆಟ್ ರಸವನ್ನು ಕುಡಿಯುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಜರ್ನಲ್ ಆಫ್ ಅಗ್ರಿಕಲ್ಚರಲ್ ಅಂಡ್ ಫುಡ್ ಕೆಮಿಸ್ಟ್ರಿಯಲ್ಲಿ ಪ್ರಕಟವಾದ ಅಧ್ಯಯನವು ಹುದುಗಿಸಿದ ಕ್ಯಾರೆಟ್ ರಸವು ಪ್ರೋಬಯಾಟಿಕ್ಗಳನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್ನಲ್ಲಿರುವ ಫೈಬರ್ ಅಂಶವು ಅದರ ಗ್ಲೈಸೆಮಿಕ್ ಸೂಚ್ಯಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಮಧುಮೇಹ ಮೆಲ್ಲಿಟಸ್ ಹೊಂದಿರುವ ಜನರಿಗೆ ಉತ್ತಮ ಆಯ್ಕೆಯಾಗಿದೆ ಎಂದು ಆಹಾರ ತಜ್ಞೆ ಖುಷ್ಬೂ ಹೇಳುತ್ತಾರೆ.

ಇದನ್ನೂ ಓದಿ: ಪೂರ್ವಜರು ತುಪ್ಪವನ್ನು ಯಾಕೆ ಚಳಿಗಾಲದಲ್ಲಿಯೇ ಹೆಚ್ಚಾಗಿ ಬಳಸುತ್ತಿದ್ದರು? ಇಲ್ಲಿದೆ ಮಾಹಿತಿ

5. ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ:

ಪೊಟ್ಯಾಸಿಯಮ್ ರಕ್ತದೊತ್ತಡದ ಮಟ್ಟವನ್ನು ನಿರ್ವಹಿಸುವಲ್ಲಿ ಉತ್ತಮ ಪಾತ್ರ ವಹಿಸುವ ಖನಿಜವಾಗಿದೆ, ಪೊಟ್ಯಾಸಿಯಮ್ನ ಉತ್ತಮ ಮೂಲವಾದ ಕ್ಯಾರೆಟ್ ದೇಹದಲ್ಲಿನ ಸೋಡಿಯಂ ಅನ್ನು ಸಮತೋಲನಗೊಳಿಸಲು ಮತ್ತು ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

6.  ಕಣ್ಣುಗಳನ್ನು ರಕ್ಷಿಸುತ್ತದೆ:

ಕ್ಯಾರೆಟ್ ರಸವು ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನು ಹೊಂದಿರುತ್ತದೆ, ಅದು ಕಣ್ಣುಗಳಿಗೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಆಂಟಿಆಕ್ಸಿಡೆಂಟ್ಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನವು ಕ್ಯಾರೆಟ್ ರಸವು ಪ್ರೊವಿಟಮಿನ್ ಎ ಅನ್ನು ಹೊಂದಿರುತ್ತದೆ ಎಂದು ಕಂಡು ಹಿಡಿದಿದೆ, ಇದು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಅವನತಿಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್ ಎಂಬ ಎರಡು ಕ್ಯಾರೊಟಿನಾಯ್ಡ್ಗಳ ಉತ್ತಮ ಮೂಲವಾಗಿದೆ ಎಂದು ನಂಬಲಾಗಿದೆ, ಇದು ಕಣ್ಣುಗಳಲ್ಲಿ ಸಂಗ್ರಹವಾಗುತ್ತದೆ ಮತ್ತು ನಿಮ್ಮ ಕಣ್ಣುಗಳನ್ನು ಹಾನಿಯಿಂದ ರಕ್ಷಿಸುತ್ತದೆ.

ನಿಮ್ಮ ಹೃದಯದಿಂದ ಕಣ್ಣುಗಳವರೆಗೆ, ಕ್ಯಾರೆಟ್ ರಸವು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿದೆ. ಹಾಗಾದರೆ, ಅದರ ಎಲ್ಲಾ ಪ್ರಯೋಜನಗಳನ್ನು ಪಡೆಯಲು ನಿಮ್ಮ ಆಹಾರದಲ್ಲಿ ಕ್ಯಾರೆಟ್ ಸೇರಿಸಿಕೊಳ್ಳುವುದನ್ನು ಮರೆಯಬೇಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: