World Environment Day 2022 : ಅಂದು ಪರಿಸರ ಬೆಳಸಿ, ಇಂದು ಪರಿಸರ ಉಳಿಸಿ, ಪರಿಸರ ರಕ್ಷಣೆ ನಮ್ಮ ಕೈಯಲ್ಲಿ
World Environment Day 2022 : ಮಾನವ ವಿದ್ಯಾವಂತನಾದ ಹಾಗೆ ಆತನಿಗೆ ಪರಿಸರದ ಮೇಲಿನ ಕಾಳಜಿಯು ಕಡಿಮೆಯಾಗುತ್ತಿದೆ ಎಂದೆನಿಸುತ್ತದೆ. ನಮ್ಮ ಬಾಲ್ಯದ ದಿನಗಳಲ್ಲಿ ಕಳೆದಂತಹ ಹಲವಾರು ನೆನಪುಗಳು ಈಗಲೂ ಕಣ್ಣಂಚಲ್ಲಿ ಹಾಗೆ ಇದೆ.
ಹಸಿರೇ ಉಸಿರು , ನಮ್ಮ ಉಸಿರು ನಮ್ಮ ಕೈಯಲ್ಲಿ ಹೀಗೆ ಪರಿಸರದ ಬಗೆಗಿನ ಅನೇಕ ಮಾತುಗಳು ಗಾದೆಗಳು ಈಗೀಗ ಕೇವಲ ಬಾಯಿ ಮಾತಾಗಿಯೆ ಉಳಿದಿದೆ. ನಾವು ಬಾಲ್ಯದಲ್ಲಿರುವ ವಿಶ್ವ ಪರಿಸರ ದಿನದಂದು ಹತ್ತು ಗಿಡಗಳನ್ನು ನೆಟ್ಟು ಫೋಟೋ ಕ್ಲಿಕ್ಕಿಸಿ ಮಾಧ್ಯಮಗಳ ಮೂಲಕ ಪ್ರಚಾರ ಮಾಡುತ್ತಿದ್ದೆವು ಮಾತ್ರವಲ್ಲದೆ ಅದಕ್ಕೆ ಪ್ರತೀ ದಿನ ನೀರು ಹಾಕಿ ಬೆಳೆಸುತ್ತಿ ದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಗಿಡ ನೆಟ್ಟು ಫೋಟೋ ತೆಗೆದು ಅದನ್ನು ಜಾಲತಾಣಗಳ ಮೂಲಕ ಹರಿಬಿಟ್ಟು ಆಮೇಲೆ ಆ ಗಿಡಕ್ಕೂ ನಮಗೂ ಸಂಬಂಧ ಇಲ್ಲ ಅನ್ನೋ ರೀತಿಯಲ್ಲಿ ವರ್ತಿಸುತ್ತೇವೆ. ಗಿಡಗಳಿಗೂ ಜೀವ ಇದೆ. ಅವುಗಳು ಉಸಿರಾಡುತ್ತವೆ. ಎಂಬುದು ನಮಗೆ ಅರಿವಿಗೆ ಬರುತ್ತಿಲ್ಲ. ನಾವು ಇಂದು ಉಸಿರಾಡುತ್ತಿದ್ದೇವೆ ಅಂದರೆ ಅದಕ್ಕೆ ಗಿಡ ಮರಗಳೇ ಸಾಕ್ಷಿ . ಇಂದು ಗಿಡಮರಗಳನ್ನು ನಾಶ ಮಾಡಿ ಅಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಿ ಪರಿಸರವನ್ನು ನಾಶ ಮಾಡಲಾಗುತ್ತಿದೆ. ಮನುಷ್ಯರಿಂದ ಹೆಚ್ಚು ವಾಹನಗಳು ತುಂಬಿ ತುಳುಕುತ್ತಿದೆ.
ಸ್ವಲ್ಪ ದೂರ ಪ್ರಯಾಣ ಬೆಳೆಸುವುದಕ್ಕೆ ವಾಹನ ಉಪಯೋಗಿಸುತ್ತಾರೆ. ನಾವೆಲ್ಲಾ ಸಣ್ಣ ವಯಸ್ಸಿನಲ್ಲಿ ಕಾಲ್ನಡಿಗೆಯಲ್ಲೇ ಶಾಲೆಗೆ ಹೋಗುತ್ತಿದ್ದೆವು. ಆದರೆ ಈಗ ತರಗತಿಯ ವರೆಗೂ ಶಾಲಾ ವಾಹನದಲ್ಲೆ ಮಕ್ಕಳನ್ನು ತಲುಪಿಸುವ ವ್ಯವಸ್ಥೆ ಇದೆ. ಹಿಂದೆ ದಾರಿಯುದ್ದಕ್ಕೂ ಗಿಡ ಮರಗಳ ನೆರಳಿನಿಂದ ತಂಪಾಗಿರುವ ವಾತಾವರಣ ಇತ್ತು. ಆದರೆ ಈಗ ಗಿಡಗಳನ್ನು ಕಡಿದು ಬಿಸಿಲು ನೆತ್ತಿಯ ಮೇಲೆ ಬೀಳುತ್ತದೆ ರಸ್ತೆಗಳಲ್ಲಿ ನಡೆಯಲು ಸಾಧ್ಯವಾಗದ ಸ್ಥಿತಿ ಬಂದಿದೆ. ಅಷ್ಟು ಮಾತ್ರವಲ್ಲದೆ ಪ್ಲಾಸ್ಟಿಕ್ ನ ಬಳಕೆಯು ಹೆಚ್ಚಾಗುತ್ತಿವೆ. ತಿಂಡಿ ತಿನಿಸುಗಳನ್ನು ತಿಂದು ಎಲ್ಲೆಂದರಲ್ಲಿ ಸಿಪ್ಪೆ ಎಸೆಯುತ್ತೆವೆ. ಇದು ಮಣ್ಣಿನೊಂದಿಗೆ ಸೇರಿ ಬೇರೆಯದೇ ಹಾಗೆಯೇ ಉಳಿಯುತ್ತದೆ. ಇದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಆ ಮಣ್ಣಿನಲ್ಲಿ ಯಾವುದೇ ರೀತಿಯ ಫಲವತ್ತಾದ ಅಂಶಗಳು ಇರುವುದಿಲ್ಲ. ಇತ್ತೀಚೆಗೆ ಅರಣ್ಯದಲ್ಲಿರುವ ಅದೆಷ್ಟೋ ಪ್ರಾಣಿ-ಪಕ್ಷಿಗಳು” ಕಾಡಿಂದ ನಾಡಿಗೆ “ಅನ್ನುವ ಮಾತಿನ ಹಾಗೆ ಕಾಡಿನ ಅನೇಕ ಪ್ರಾಣಿಗಳು ನಾಡಿಗೆ ಬರುವುದನ್ನು ಕಾಣಬಹುದು. ಅವುಗಳು ತಮ್ಮ ಆಹಾರಕ್ಕಾಗಿ ಎಲ್ಲಿಗೆ ಹೋಗಲು ಸಾಧ್ಯ ಹೇಳಿ? ಈ ತರ ಕಾಡು ನಾಶವಾದರೆ ಅದರ ಆಹಾರವನ್ನು ಹುಡುಕಿಕೊಂಡು ನಾಡಿಗೆ ಸಂಚರಿಸುತ್ತವೆ. ಆದರೆ ನಾವು ಪ್ರಾಣಿಗಳು ಊರಿಗೆ ಬಂದರೆ ಆತಂಕ ಆಗುವುದು ಸಹಜ ಅದಕ್ಕೆ ಮತ್ತಷ್ಟು ತೊಂದರೆ ನೀಡಿ, ಓಡಿಸುತ್ತೇವೆ
ಹಿಂದಿನ ಕಾಲದಲ್ಲಿ ನಮ್ಮ ಮನೆಯ ಎದುರು ಅನೇಕ ತರಹದ ಬಣ್ಣ ಬಣ್ಣದ ಗಿಡಗಳಿಂದ ಬೇಲಿಯನ್ನು ಕಟ್ಟುತ್ತಿದ್ದೆವು. ಆದರೆ ಈಗ ಅವುಗಳನ್ನು ಕಿತ್ತೆಸೆದು ಕಲ್ಲುಗಳಿಂದ ಅಡ್ಡಗೋಡೆಗಳನ್ನು ಕಟ್ಟಲಾಗಿದೆ. ಹಿಂದೆ ಅಜ್ಜ ನೆಟ್ಟಿದ ಬಣ್ಣ ಬಣ್ಣದ ಹೂವಿನ ಗಿಡಗಳು ಎಲ್ಲೋ ಮರೆಯಾಗಿವೆ. ಆ ಗಿಡಗಳಲ್ಲಿ ಹೂಬಿಟ್ಟಾಗ ಹೂವಿನ ಸುಗಂಧವನ್ನು ಸವಿಯಲು ಬರುವ ಅದೇಷ್ಟು ದುಂಬಿಗಳು ಚಿಟ್ಟೆಗಳು ಈಗ ಕಾಣಸಿಗುವುದೇ ಅಪರೂಪ. “ಕಾಲ ಬದಲಾದಂತೆ ಜನ ಬದಲಾಗುತ್ತಾರೆ” ಎನ್ನುವ ಹಾಗೆಯೇ ಕಾಲ ಬದಲಾದಂತೆ ಪರಿಸರದ ಮೇಲಿನ ಕಾಳಜಿ ಕಡಿಮೆಯಾಗುತ್ತಿದೆ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಒತ್ತಡ ಬದಿಗಿಟ್ಟು, ಬೆಂಗಳೂರಿನಿಂದ ಈ ಸ್ಥಳಗಳಿಗೆ ಒಂದು ದಿನದ ಟ್ರಿಪ್ ಹೋಗಿ
ಮಾನವ ವಿದ್ಯಾವಂತನಾದ ಹಾಗೆ ಆತನಿಗೆ ಪರಿಸರದ ಮೇಲಿನ ಕಾಳಜಿಯು ಕಡಿಮೆಯಾಗುತ್ತಿದೆ ಎಂದೆನಿಸುತ್ತದೆ. ನಮ್ಮ ಬಾಲ್ಯದ ದಿನಗಳಲ್ಲಿ ಕಳೆದಂತಹ ಹಲವಾರು ನೆನಪುಗಳು ಈಗಲೂ ಕಣ್ಣಂಚಲ್ಲಿ ಹಾಗೆ ಇದೆ. ಬೆಳಗ್ಗೆ ಎದ್ದು ಹೊರಗೆ ಪರಿಸರವನ್ನು ನೋಡಿದರೆ ಹಕ್ಕಿಗಳ ಚಿಲಿಪಿಲಿ ನಾದ ಇಂಪಾಗಿ ಕೇಳಿಸುತ್ತಿತ್ತು. ಈಗೀಗ ಅಂತ ಹಕ್ಕಿಗಳನ್ನು ನೋಡುವ ಭಾಗ್ಯವಾಗಲಿ ಅದರ ಚಿಲಿಪಿಲಿ ನಾದವನ್ನು ಕೇಳಿಸುವ ಭಾಗವಾಗಲಿ ತುಂಬಾ ಕಡಿಮೆಯಾಗುತ್ತಿದೆ. ಮನೆಯಂಗಳದಲ್ಲಿ ಬಣ್ಣ ಬಣ್ಣದ ಹೂವಿನ ಗಿಡದಲ್ಲಿ ಹಾರಾಡುತ್ತಿದ್ದಂತಹ ವರ್ಣರಂಜಿತ ದುಂಬಿಗಳು ಎಲ್ಲೋ ಮಾಯವಾಗಿವೆ. ಅದರಲ್ಲೂ ಮಾವು ಅಥವಾ ಗೇರು ಹಣ್ಣಾಗುವ ಸಮಯದಲ್ಲಿ ಅದೆಷ್ಟೋ ಅಳಿಲುಗಳ ಸಮೂಹವೇ ಇರುತ್ತಿತ್ತು ಆದರೆ ಈಗ ಅದನ್ನೆಲ್ಲ ನೋಡಬೇಕಾದರೆ ಪ್ರಾಣಿ ಸಂಗ್ರಹಾಲಯದಲ್ಲೋ ಅಥವಾ ಮೊಬೈಲಿನಲ್ಲಿ ಫೋಟೋಗಳನ್ನು ನೋಡುವ ಪರಿಸ್ಥಿತಿಗೆ ತಲುಪಿದ್ದೇವೆ.
ಹೀಗಾದರೆ ಮುಂದಿನ ಜನಾಂಗದವರಿಗೆ ಎಲ್ಲಾ ಪ್ರಾಣಿಗಳನ್ನು ನಾವು ಕೇವಲ ಚಿತ್ರದ ಮೂಲಕವೇ ತೋರಿಸಬೇಕಾಗುತ್ತದೆ. ಇದಕ್ಕೆಲ್ಲಾ ಕಾರಣ ಮಾನವ ಸಂಕುಲ.ಹಾಗಾಗದ ಹಾಗೆ ಪರಿಸರವನ್ನು ಉಳಿಸಿಕೊಳ್ಳುವ ಜೊತೆಗೆ ಪ್ರಾಣಿಗಳನ್ನು ರಕ್ಷಿಸುವ ಕೆಲಸ ನಮ್ಮ ಕೈಯಲ್ಲಿದೆ. ಪರಿಸರವನ್ನು ಬೆಳೆಸುವ ಗಿಡಗಳನ್ನು ನೆಡುವ ಕಾರ್ಯ ಕೇವಲ ವಿಶ್ವಪರಿಸರ ದಿನದಂದು ಮಾತ್ರವಾಗದೆ ನಿರಂತರ ಹಸಿರನ್ನು ಬೆಳೆಸಿ ಉಸಿರನ್ನು ಉಳಿಸುವಂತಹ ಅರಿವು ನಮ್ಮೆಲ್ಲರಿಗೂ ಬರಲಿ. ಇಂದು ನಾವು ಹಸಿರನ್ನು ಬೆಳೆಸಿದರೆ ಮುಂದೊಂದು ದಿನ ನಮ್ಮ ಉಸಿರನ್ನು ಉಳಿಸುವ ಕಾರ್ಯ ಪರಿಸರ ಮಾಡುತ್ತದೆ.
ದೀಪ್ತಿ ಅಡ್ಡಂತ್ತಡ್ಕ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಮಹಾವಿದ್ಯಾಲಯ ನೆಹರುನಗರ ಪುತ್ತೂರು