
ಕಳೆದ ಕೆಲವು ವಾರಗಳಿಂದ ಪಾನೀಯಾದ ಬ್ರಾಂಡ್ಗಳ ಬಗ್ಗೆ ಅನೇಕ ಜನರು ಚರ್ಚಿಸುವುದನ್ನು ನೀವು ನೋಡಿರಬಹುದು. ಜನಪ್ರಿಯ ಪಾನೀಯ ಬ್ರಾಂಡ್ ಅನ್ನು ಟೀಕಿಸುವ ಮತ್ತು ಅದರ ಪ್ಯಾಕೇಜಿಂಗ್ನಲ್ಲಿ ಉಲ್ಲೇಖಿಸಿದ ಆರೋಗ್ಯ ಹಕ್ಕುಗಳನ್ನು ಗೇಲಿ ಮಾಡುವ ವೀಡಿಯೊವನ್ನು ಅವರು ಪೋಸ್ಟ್ ಮಾಡಿದ್ದರು. ತಮ್ಮ ಮಕ್ಕಳಿಗೆ ಪ್ಯಾಕೇಟ್ ಜ್ಯೂಸ್ ನೀಡುವ ಮೂಲಕ, ಚಿಕ್ಕ ವಯಸ್ಸಿನಲ್ಲಿಯೇ ಸಕ್ಕರೆಗೆ ವ್ಯಸನಿಗಳನ್ನಾಗಿ ಮಾಡುತ್ತಿದ್ದಾರೆ ಎಂದು ಹಲವರು ಈ ಬಗ್ಗೆ ಟೀಕಿಸಿದ್ದರು. ಬಳಿಕ ಬ್ರಾಂಡ್ನಿಂದ ಕಾನೂನು ನೋಟಿಸ್ ಬಂದ ನಂತರ ಆ ವೀಡಿಯೋವನ್ನು ಡಿಲೀಟ್ ಮಾಡಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರು ಪೋಸ್ಟ್ ಮಾಡಿದ್ದ ವೀಡಿಯೊ, ಪ್ಯಾಕ್ ಮಾಡಿದ ಪಾನೀಯಗಳ ಪೌಷ್ಠಿಕಾಂಶದ ಮೌಲ್ಯವನ್ನು ಅನೇಕರನ್ನು ಪ್ರಶ್ನಿಸುವಂತೆ ಮಾಡಿದೆ. ನಿಮಗೂ ಅವುಗಳ ಬಗ್ಗೆ ಸಂದೇಹಗಳಿದ್ದರೆ, ಅದರ ಬದಲಾಗಿ ಮಕ್ಕಳಿಗಾಗಿ ನೈಸರ್ಗಿಕವಾಗಿರುವ ಆರೋಗ್ಯ ಪಾನೀಯಗಳನ್ನು ನೀಡಬಹುದು. ಈ ಬಗ್ಗೆ ತಿಳಿದುಕೊಳ್ಳಲು ಹೆಲ್ತ್ ಶಾಟ್ಸ್ ಪುಣೆಯ ಕ್ಲೌಡ್ನೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್ನ ಕಾರ್ಯನಿರ್ವಾಹಕ ಪೌಷ್ಟಿಕತಜ್ಞೆ ಶ್ರುತಿ ಕೇಲುಸ್ಕರ್ ಅವರು ಕೆಲವು ಮಾಹಿತಿ ಹಂಚಿಕೊಂಡಿದ್ದು ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಷ್ಟ್ರೀಯ ಆರೋಗ್ಯ ಸೇವೆ (ಎನ್ಎಚ್ಎಸ್) ಪ್ರಕಾರ, ಸಕ್ಕರೆಯನ್ನು ಅತಿಯಾಗಿ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಮತ್ತು ದಂತಕ್ಷಯಕ್ಕೆ ಕಾರಣವಾಗಬಹುದು. ಹಣ್ಣುಗಳು ಮತ್ತು ಹಾಲಿನಲ್ಲಿ ನೈಸರ್ಗಿಕ ಸಕ್ಕರೆ ಕಂಡುಬಂದರೂ, ಜನರು ಸಾಮಾನ್ಯವಾಗಿ ಹೆಚ್ಚು ತಿನ್ನುವ ಸಕ್ಕರೆಗಳ ಪ್ರಕಾರವು ಉಚಿತ ಸಕ್ಕರೆಗಳಾಗಿವೆ. ಅಂದರೆ ಅವು ಆಹಾರ ಮತ್ತು ಪಾನೀಯಗಳಿಗೆ ಸೇರಿಸಲಾಗುವ ಸಕ್ಕರೆಗಳಾಗಿವೆ. ಬಿಸ್ಕತ್ತುಗಳಿಂದ ಹಿಡಿದು ಚಾಕೊಲೇಟ್, ಉಪಾಹಾರ ಧಾನ್ಯಗಳಿಂದ ಏರೇಟೆಡ್ ಪಾನೀಯಗಳವರೆಗೆ, ಅವೆಲ್ಲವೂ ಸಕ್ಕರೆ ಅಂಶವನ್ನು ಹೊಂದಿವೆ. ಎನ್ಎಚ್ಎಸ್ ಪ್ರಕಾರ, 7 ರಿಂದ 10 ವರ್ಷದೊಳಗಿನ ಮಕ್ಕಳು ದಿನಕ್ಕೆ 24 ಗ್ರಾಂಗಿಂತ ಹೆಚ್ಚು ಸಕ್ಕರೆಯನ್ನು ಸೇವಿಸಬಾರದು. ಹಾಗಾಜಿ ಮಕ್ಕಳಿಗೆ ಆರೋಗ್ಯ ಪಾನೀಯಗಳನ್ನು ನೀವು ಮನೆಯಲ್ಲಿಯೇ ಮಾಡಿಕೊಡಬಹುದು ಹೇಗೆ? ಪಾಕವಿಧಾನಗಳನ್ನು ತಿಳಿದುಕೊಳ್ಳಿ.
1. ಮಾವಿನ ಲಸ್ಸಿ:
ಕಾಲೋಚಿತ ಹಣ್ಣುಗಳನ್ನು ತಿನ್ನುವುದು ಯಾವಾಗಲೂ ಒಳ್ಳೆಯದು ಎಂದು ಕೇಳಸ್ಕರ್ ಹೇಳುತ್ತಾರೆ. ಆದ್ದರಿಂದ, ಮಾವಿನ ಲಸ್ಸಿ ತಯಾರಿಸಬಹುದು. ಇನ್ನೇನು ಸ್ವಲ್ಪ ದಿನಗಳಲ್ಲಿ ಮಾವಿನಹಣ್ಣುಗಳ ಸೀಸನ್ ಮುಗಿದು ಹೋಗುತ್ತವೆ ಹಾಗಾಗಿ ಈ ಹಣ್ಣನ್ನು ಇಷ್ಟ ಪಡುವವರು ಈ ರೆಸಿಪಿ ಮಾಡಬಹುದು.
ಬೇಕಾಗುವ ಸಾಮಾಗ್ರಿಗಳು:
• ಕತ್ತರಿಸಿಟ್ಟುಕೊಂಡ ಮಾವಿನಹಣ್ಣು – 1/2 ಕಪ್
• ಗಟ್ಟಿಯಾದ ಮೊಸರು – 3/4 ಕಪ್
• ತೆಂಗಿನ ಹಾಲು – 1/4 ಕಪ್
• ಒಂದು ಚಿಟಿಕೆ ಏಲಕ್ಕಿ
• ಅಲಂಕಾರಕ್ಕಾಗಿ ಕತ್ತರಿಸಿದ ಗೋಡಂಬಿ ಬೀಜ
• ಜೇನುತುಪ್ಪ/ ಬೆಲ್ಲ – 1 ಟೀ ಚಮಚ
ಮಾಡುವ ವಿಧಾನ:
• ಒಂದು ಬ್ಲೆಂಡರ್ ತೆಗೆದುಕೊಂಡು ಅದಕ್ಕೆ ಮಾವಿನಹಣ್ಣು, ಮೊಸರು, ತೆಂಗಿನ ಹಾಲು, ಜೇನುತುಪ್ಪ ಮತ್ತು ಏಲಕ್ಕಿಯನ್ನು ಸೇರಿಸಿ.
• ನಯವಾಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
• ಒಂದು ಲೋಟಕ್ಕೆ ಆ ಲಸ್ಸಿಯನ್ನು ಹಾಕಿ, ಅದನ್ನು ಗೋಡಂಬಿ ಬೀಜಗಳೊಂದಿಗೆ ಅಲಂಕರಿಸಿ.
2. ಮಾಲ್ಟ್:
ಯಾವುದೇ ಹಾನಿಕಾರಕ ಸಂರಕ್ಷಕಗಳು ಅಥವಾ ಸಾಕಷ್ಟು ಸಕ್ಕರೆ ಇಲ್ಲದೆ ನೀವು ತಾಜಾ ಆರೋಗ್ಯಕರ ಮಾಲ್ಟ್ ಅನ್ನು ತಯಾರಿಸಬಹುದು.
ಬೇಕಾಗುವ ಸಾಮಾಗ್ರಿಗಳು
• ಕಡಲೆಬೇಳೆ – 1/4 ಕಪ್
• ಗೋಧಿ ಹಿಟ್ಟು – 1/4 ಕಪ್
• ಮೊಳಕೆಯೊಡೆದ ಹೆಸರುಕಾಳು – 1/4 ಕಪ್
• ವಾಲ್ನಟ್ – 1/4 ಕಪ್
• ಬಾದಾಮಿ – 1/4 ಕಪ್
• ಒಣ ಖರ್ಜೂರ – 1/4 ಕಪ್
ಮಾಡುವ ವಿಧಾನ:
• ಕಡಲೆ, ಗೋಧಿ ಮತ್ತು ಹೆಸರು ಕಾಳುಗಳನ್ನು ತೆಗೆದುಕೊಂಡು ಎರಡು ಗಂಟೆಗಳ ಕಾಲ ಬಿಸಿಲಿನಲ್ಲಿ ಒಣಗಿಸಿ.
• ಬಳಿಕ ಎಲ್ಲಾ ಪದಾರ್ಥಗಳನ್ನು ಚಿನ್ನದ ಕಂದು ಬಣ್ಣಕ್ಕೆ ತಿರುಗುವವರೆಗೆ ಬೆಂಕಿಯಲ್ಲಿ ಚೆನ್ನಾಗಿ ಹುರಿಯಿರಿ.
• ಅವುಗಳನ್ನು ನೀರು ಹಾಕದೇ ಮಿಕ್ಸಿಯಲ್ಲಿ ಪುಡಿ ಮಾಡಿ ಒಂದು ಪಾತ್ರೆಗೆ ಹಾಕಿ.
• ಈ ಪುಡಿಗೆ ನೀವು ಬೆಚ್ಚಗಿನ ಅಥವಾ ತಣ್ಣನೆಯ ಹಾಲಿನೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿದರೇ, ನಿಮ್ಮ ಮಾಲ್ಟ್ ಸಿದ್ದವಾಗುತ್ತದೆ.
3. ನಟ್ ಶೇಕ್:
ಬೇಕಾಗುವ ಸಾಮಾಗ್ರಿಗಳು:
• ಬಾದಾಮಿ – 6 ರಿಂದ 7
• ವಾಲ್ನಟ್ – 2
• ಹಾಲು – 1 ಕಪ್
• ಗೋಧಿ ಹಿಟ್ಟು – 2 ಟೀ ಚಮಚ
• ಚಿಯಾ ಬೀಜಗಳು – ಅರ್ಧ ಟೀ ಚಮಚ
• ಕುಂಬಳಕಾಯಿ ಬೀಜಗಳು – ಅರ್ಧ ಟೀ ಚಮಚ
• ದಾಲ್ಚಿನ್ನಿ ಪುಡಿ – ಒಂದು ಚಿಟಿಕೆ
ಮಾಡುವ ವಿಧಾನ:
• ಒಂದು ಹೈ ಪವರ್ ಬ್ಲೆಂಡರ್ ತೆಗೆದುಕೊಂಡು ಅದಕ್ಕೆ ಹಾಲು, ಬಾದಾಮಿ, ವಾಲ್ನಟ್, ಓಟ್ಸ್ ಮತ್ತು ದಾಲ್ಚಿನ್ನಿ ಪುಡಿಯನ್ನು ಸೇರಿಸಿ.
• ಇದನ್ನು ಒಂದು ನಿಮಿಷ ಕ್ರೀಮಿ ಸ್ಮೂಥಿಯಾಗಿ ಬದಲಾಗುವವರೆಗೆ ಮಿಶ್ರಣ ಮಾಡಿ.
• ಇದನ್ನು ಒಂದು ಲೋಟಕ್ಕೆ ಸುರಿಯಿರಿ ಮತ್ತು ಅದರ ಮೇಲೆ ಆರೋಗ್ಯಕರ ಬೀಜಗಳೊಂದಿಗೆ ಅಲಂಕಾರ ಮಾಡಿ ಮಕ್ಕಳಿಗೆ ನೀಡಿ.
ಬಾಕ್ಸ್ ಗಳಲ್ಲಿ ಬರುವ ಜ್ಯೂಸ್ ಬದಲು ನಿಮ್ಮ ಮಗುವಿಗೆ ತಾಜಾ ಹಣ್ಣಿನ ರಸಗಳನ್ನು ಸಹ ನೀಡಿ. ಮಕ್ಕಳ ಆರೋಗ್ಯವನ್ನು ಕಾಪಾಡಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: