ಏರ್ ಫ್ರೆಶ್ನರ್ ಬೇಕಾಗಿಲ್ಲ, ಮನೆ ಯಾವಾಗಲೂ ಘಮ ಘಮಿಸಲು ಈ ಗಿಡಗಳನ್ನು ನೆಡಿ
ಮನೆಯ ವಾತಾವರಣ ತಾಜಾತನದಿಂದ ಕೂಡಿದ್ದರೆ, ಮನೆ ಘಮಘಮಿಸುತ್ತಿದ್ದರೆ ಮನಸ್ಸು ಕೂಡ ಶಾಂತವಾಗಿರುತ್ತದೆ. ಜೊತೆಗೆ ಈ ಪರಿಮಳ ಒಂದೊಳ್ಳೆ ಭಾವನೆಯನ್ನು ಸಹ ನೀಡುತ್ತದೆ. ಅದಕ್ಕಾಗಿ ಹೆಚ್ಚಿನವರು ರೂಮ್ ಫ್ರೆಶ್ನರ್‌ಗಳನ್ನು ಬಳಸುತ್ತಾರೆ. ಇವುಗಳಲ್ಲಿ ಕೆಮಿಕಲ್ ಅಂಶಗಳು ಇರುವುದರಿಂದ ಆರೋಗ್ಯದ ದೃಷ್ಟಿಯಿಂದ ಇವುಗಳ ಬಳಕೆ ಅಷ್ಟೊಂದು ಒಳ್ಳೆಯದಲ್ಲ. ಹೀಗಿರುವಾಗ ಮನೆಯಲ್ಲಿ ಈ ಕೆಲವೊಂದು ಗಿಡಗಳನ್ನು ನೆಡುವ ಮೂಲಕ ಮನೆಯನ್ನು ಪರಿಮಳಯುಕ್ತವಾಗಿಡಬಹುದು.

ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಪರಿಮಳಯುಕ್ತವಾಗಿಡುವುದು ಕೂಡ ತುಂಬಾನೇ ಮುಖ್ಯ. ಸಂಪೂರ್ಣ ಮನೆ ಸುಗಂಧಭರಿತವಾಗಿದ್ದಾಗ (smelling fresh), ನಮ್ಮ ಮನಸ್ಸು ಸಹ ಹಿತವಾಗಿ, ಶಾಂತವಾಗಿರುತ್ತದೆ. ಮನೆ ಯಾವಾಗಲೂ ಘಮ ಘಮಿಸಬೇಕು ಎಂಬು ಕಾರಣಕ್ಕೆ ಅನೇಕರು ದಿನನಿತ್ಯ ಏರ್‌ಫ್ರೆಶ್ನರ್, ರೂಮ್ ಫ್ರೆಶ್ನರ್‌ಗಳನ್ನು ಬಳಕೆ ಮಾಡುತ್ತಾರೆ. ಇವು ಮನೆಯ ವಾತಾವರಣವನ್ನು ಪರಿಪಳಯುಕ್ತವಾಗಿಡುತ್ತವೆ ನಿಜ, ಆದರೆ ಇವುಗಳಲ್ಲಿ ರಾಸಾಯನಿಕ ಅಂಶಗಳು ಇರುವುದರಿಂದ ಆರೋಗ್ಯದ ದೃಷ್ಟಿಯಿಂದ ಇವುಗಳ ಬಳಕೆ ಅಷ್ಟೇನೂ ಒಳ್ಳೆಯದಲ್ಲ. ಹಾಗಾಗಿ ರೂಮ್‌ಫ್ರೆಶ್ನರ್‌ಗಳಿಗೆ ಸುಮ್ಮನೆ ದುಡ್ಡು ಖರ್ಚು ಮಾಡುವ ಬದಲು ಮಲ್ಲಿಗೆ, ಲ್ಯಾವೆಂಡ್‌ನಂತಹ ಗಿಡಗಳನ್ನು ನೆಡುವ ಮೂಲಕ ಮನೆಯನ್ನು ಯಾವಾಗಲೂ ಸುಗಂಧಭರಿತವಾಗಿಡಬಹುದು.
ಮನೆಯನ್ನು ಪರಿಮಳಯುಕ್ತವಾಗಿಡಲು ಈ ಗಿಡಗಳನ್ನು ನೆಡಿ:
ಮಲ್ಲಿಗೆ ಗಿಡ:
ಮಲ್ಲಿಗೆ ಅತ್ಯಂತ ಜನಪ್ರಿಯ ಪರಿಮಳಯುಕ್ತ ಸಸ್ಯಗಳಲ್ಲಿ ಒಂದಾಗಿದೆ. ಸಂಜೆಯಾಗುತ್ತಿದ್ದಂತೆ ಅರಳುವ ಮಲ್ಲಿಗೆ ಹೂವುಗಳು ಮನೆ ತುಂಬಾ ಆಹ್ಲಾದಕರವಾದ ಸುವಾಸನೆಯನ್ನು ಹರಡುತ್ತವೆ. ಇದನ್ನು ಬಾಲ್ಕನಿ, ಟೆರೇಸ್ ಅಥವಾ ಅಂಗಳದಲ್ಲಿ ಸುಲಭವಾಗಿ ನೆಡಬಹುದು. ಉತ್ತಮ ಸೂರ್ಯನ ಬೆಳಕು ಮತ್ತು ನಿಯಮಿತ ನೀರಾವರಿಯಿಂದ, ಈ ಸಸ್ಯವು ದೀರ್ಘಕಾಲದವರೆಗೆ ಹೂವು ಬಿಡುತ್ತವೆ. ಮತ್ತು ಮನೆಯ ಸೌಂದರ್ಯವನ್ನು ಸಹ ಹೆಚ್ಚಿಸುತ್ತವೆ.
ರಾತ್ರಿ ರಾಣಿ ಹೂವು:
ನೈಟ್ ಕ್ವೀನ್ ಅಥವಾ ರಾತ್ರಿ ರಾಣಿ ಹೂವಿನ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಈ ಗಿಡಗ ಹೂವು ಅರಳುತ್ತಿದ್ದಂತೆ ಮುಸ್ಸಂಜೆ ಹೊತ್ತಿಗೆ ಮನೆ ಸಂಪೂರ್ಣವಾಗಿ ಘಮ ಘಮಿಸಲು ಆರಂಭಿಸುತ್ತದೆ. ಈ ಹೂವಿನ ಗಿಡವನ್ನು ಬಾಲ್ಕನಿಯಲ್ಲಿ ಅಥವಾ ಅಂಗಳದಲ್ಲಿ ನೆಡಬಹುದು. ಸೌಮ್ಯವಾದ ಸೂರ್ಯನ ಬೆಳಕು, ನಿಯಮಿತ ನೀರು ಹಾಕುವುದರಿಂದ ಈ ಗಿಡ ಸೊಂಪಾಗಿ ಬೆಳೆಯುತ್ತದೆ.
ಟ್ಯೂಬೆರೋಸ್:
ಟ್ಯೂಬೆರೋಸ್ ಅಥವಾ ಸುಗಂಧರಾಜ ತನ್ನ ಉದ್ದವಾದ ಬಿಳಿ ಹೂವುಗಳು ಮತ್ತು ಆಹ್ಲಾದಕರ ಸುವಾಸನೆಗೆ ಹೆಸರುವಾಸಿಯಾಗಿದೆ. ಇದು ಉತ್ತಮ ಸೂರ್ಯನ ಬೆಳಕು ಮತ್ತು ಸ್ವಲ್ಪ ತೇವಾಂಶವುಳ್ಳ ಮಣ್ಣನ್ನು ಇಷ್ಟಪಡುತ್ತದೆ. ನೀವು ಇದನ್ನು ಮನೆಯ ಅಂಗಳದಲ್ಲಿ, ಬಾಲ್ಕನಿಯಲ್ಲಿ ಸುಲಭವಾಗಿ ಬೆಳೆಸಬಹುದು. ಹೆಸರಿಗೆ ತಕ್ಕಂತೆ ಈ ಗಿಡದ ಹೂವುಗಳು ಮನೆಯನ್ನು ಸುಗಂಧಭರಿತವಾಗಿಡುತ್ತದೆ.
ಲ್ಯಾವೆಂಡರ್ ಗಿಡ:
ಲ್ಯಾವೆಂಡರ್ ತನ್ನ ಸೌಮ್ಯವಾದ, ಶಾಂತಗೊಳಿಸುವ ಪರಿಮಳಕ್ಕೆ ಹೆಸರುವಾಸಿಯಾಗಿದೆ ಅದಕ್ಕಾಗಿಯೇ ಇದನ್ನು ಸುಗಂಧ ದ್ರವ್ಯಗಳು ಮತ್ತು ಅರೋಮಾಥೆರಪಿಯಲ್ಲಿಯೂ ಬಳಸಲಾಗುತ್ತದೆ. ಅಲ್ಲದೆ ಈ ಗಿಡವನ್ನು ಮನೆಯಲ್ಲಿ ನೆಡುವ ಮೂಲಕ ಮನೆಯ ವಾತಾರಣವನ್ನು ಸಹ ಘಮ ಘಮಿಸುವಂತೆ ಮಾಡಬಹುದು. ಈ ಗಿಡವನ್ನು ಬಿಸಿಲು ಬೀಳುವ ಸ್ಥಳದಲ್ಲಿ ಇರಿಸಿ ಮತ್ತು ಅತಿಯಾದ ನೀರುಹಾಕುವುದನ್ನು ತಪ್ಪಿಸಿ, ಏಕೆಂದರೆ ಹೆಚ್ಚುವರಿ ತೇವಾಂಶವು ಸಸ್ಯಕ್ಕೆ ಹಾನಿ ಮಾಡುತ್ತದೆ.
ಇದನ್ನೂ ಓದಿ: ಕೆಮಿಕಲ್ ಸ್ಪ್ರೇ ಬೇಕಿಲ್ಲ, ಈ ಗಿಡಗಳ ಸಹಾಯದಿಂದ ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಬಹುದು
ಗಾರ್ಡೇನಿಯಾ:
ಗಾರ್ಡೇನಿಯಾ ಎಂದೂ ಕರೆಯಲ್ಪಡುವ ಗಂಧರಾಜರಾಜದ ಗಿಡವನ್ನು ಮನೆಯಲ್ಲಿ ನೆಡುವುದು ಕೂಡ ಉತ್ತಮ. ಈ ಸಸ್ಯ ದೊಡ್ಡ ಬಿಳಿ ಹೂವುಗಳು ಮತ್ತು ಬಲವಾದ ಸುವಾಸನೆಗೆ ಹೆಸರುವಾಸಿಯಾಗಿದೆ. ಇದರ ಸುವಾಸನೆಯು ದೀರ್ಘಕಾಲದವರೆಗೆ ಮನೆಯನ್ನು ಸುಗಂಧಭರಿತವಾಗಿಡುತ್ತದೆ.
ಪಾರಿಜಾತ:
ಈ ಹೂವುಗಳು ಅರಳಿದ ನಂತರ, ಸುತ್ತಮುತ್ತಲಿನ ಪ್ರದೇಶಗಳು ತಾಜಾ, ಆಳವಾದ ಪರಿಮಳದಿಂದ ತುಂಬಿರುತ್ತವೆ. ನಿಮ್ಮ ಮನೆ ದೀರ್ಘಕಾಲ ಪರಿಮಳಯುಕ್ತವಾಗಿರಬೇಕೆಂದು ಬಯಸಿದರೆ ಇಂದೇ ಮನೆಯಲ್ಲಿ ಪಾರಿಜಾತದ ಗಿಡವನ್ನು ಬೆಳೆಸಿ. ಇದನ್ನು ಸಣ್ಣ ಕುಂಡದಲ್ಲಿ ಸುಲಭವಾಗಿ ಬೆಳೆಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:42 pm, Tue, 18 August 26




