Gut Health: ಜೀರ್ಣಕ್ರಿಯೆ ಸುಧಾರಿಸಲು ಪ್ರತಿದಿನ ಮಾಡಬೇಕಾದ 5 ಸರಳ ಕೆಲಸಗಳು
ಕರುಳಿನ ಆರೋಗ್ಯ ಚೆನ್ನಾಗಿದ್ದರೆ, ಜೀರ್ಣಕ್ರಿಯೆ ಸರಿಯಾಗಿ ನಡೆಯುತ್ತದೆ. ಇದು ಪೋಷಕಾಂಶಗಳನ್ನು ಸಂಪೂರ್ಣವಾಗಿ ಒದಗಿಸುತ್ತದೆ. ಪ್ರೋಬಯಾಟಿಕ್ ಆಹಾರ, ಫೈಬರ್, ಸಾಕಷ್ಟು ನೀರು, ಉತ್ತಮ ನಿದ್ರೆ ಮತ್ತು ಊಟದ ಬಳಿಕ ವಾಕಿಂಗ್ ನಂತಹ ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಡಲು ಸಹಾಯವಾಗಬಹುದು. ಕರುಳಿನ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಲು ಸಹಾಯ ಮಾಡುವ 5 ಸುಲಭ ಅಭ್ಯಾಸಗಳ ಬಗ್ಗೆ ಮಾಹಿತಿ ಸ್ಟೋರಿಯಲ್ಲಿದೆ.

ಮುಖ್ಯಾಂಶಗಳು
- ಗಟ್‌ನಲ್ಲಿರುವ ಉತ್ತಮ ಬ್ಯಾಕ್ಟೀರಿಯಾ ಹೆಚ್ಚಿಸಬೇಕಾ? ಡಯಟ್‌ನಲ್ಲಿ ಈ ಬದಲಾವಣೆ ಮಾಡಿ
- ಗ್ಯಾಸ್, ಅಜೀರ್ಣ, ಮಲಬದ್ಧತೆ ಸಮಸ್ಯೆ ನಿಯಂತ್ರಿಸಲು ಈ 5 ಅಭ್ಯಾಸಗಳನ್ನು ಪಾಲಿಸಿ
- ಜೀರ್ಣಕ್ರಿಯೆ ಸುಧಾರಿಸಲು ಪ್ರತಿದಿನ ಮಾಡಬೇಕಾದ ಸರಳ ಕೆಲಸಗಳು
ಹೊಟ್ಟೆ ಸರಿಯಾಗಿದ್ದರೆ ದೇಹವೂ ಚುರುಕಾಗಿರುತ್ತದೆ ಎಂಬ ಮಾತಿದೆ. ಜೀರ್ಣಕ್ರಿಯೆ, ಪೋಷಕಾಂಶಗಳ ಹೀರಿಕೆ ಮತ್ತು ಒಟ್ಟಾರೆ ಆರೋಗ್ಯದಲ್ಲಿ ಗಟ್ ಹೆಲ್ತ್ (Gut Health) ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಂದಿನ ಬದಲಾಗಿರುವ ಆಹಾರ ಪದ್ಧತಿ, ಒತ್ತಡ, ನಿದ್ರೆಯ ಕೊರತೆ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದ ಗ್ಯಾಸ್, ಹೊಟ್ಟೆ ಉಬ್ಬರ, ಮಲಬದ್ಧತೆ ಹಾಗೂ ಅಜೀರ್ಣದಂತಹ ಸಮಸ್ಯೆಗಳು ಹಲವರನ್ನು ಕಾಡುತ್ತಿವೆ. ಗಟ್‌ನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಸಮತೋಲನವನ್ನು ಕಾಪಾಡಿಕೊಳ್ಳಲು ದುಬಾರಿ ಆಹಾರ ಅಥವಾ ಕಠಿಣ ಡಯಟ್ ಮಾಡುವ ಅಗತ್ಯವಿಲ್ಲ. ಪ್ರೋಬಯಾಟಿಕ್ ಆಹಾರ, ಫೈಬರ್, ಸಾಕಷ್ಟು ನೀರು, ಉತ್ತಮ ನಿದ್ರೆ ಮತ್ತು ಊಟದ ಬಳಿಕ ವಾಕಿಂಗ್ ನಂತಹ ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಡಲು ಸಹಾಯವಾಗಬಹುದು.
ಪ್ರೋಬಯಾಟಿಕ್ ಆಹಾರ ಸೇವಿಸಿ
ಗಟ್ ಆರೋಗ್ಯಕ್ಕೆ ಸಹಾಯಕವಾಗುವ ಉತ್ತಮ ಬ್ಯಾಕ್ಟೀರಿಯಾಗಳನ್ನು ಹೊಂದಿರುವ ಪ್ರೋಬಯಾಟಿಕ್ ಆಹಾರಗಳನ್ನು ಆಹಾರದಲ್ಲಿ ಸೇರಿಸಬಹುದು. ಮೊಸರು, ಮಜ್ಜಿಗೆ ಮುಂತಾದ ಫರ್ಮೆಂಟೆಡ್ ಆಹಾರಗಳು ಉತ್ತಮ ಆಯ್ಕೆಗಳಾಗಿವೆ. ಕಿಮ್ಚಿ, ಕೆಫಿರ್ ಮತ್ತು ಸೌರ್‌ಕ್ರಾಟ್‌ನಂತಹ ಆಹಾರಗಳನ್ನು ಕೂಡ ಸೂಕ್ತ ಪ್ರಮಾಣದಲ್ಲಿ ಸೇವಿಸಬಹುದು.
ಫೈಬರ್ ಸಮೃದ್ಧ ಆಹಾರಕ್ಕೆ ಆದ್ಯತೆ ನೀಡಿ
ಗಟ್ ಆರೋಗ್ಯಕ್ಕೆ ಫೈಬರ್ ಅತ್ಯಂತ ಮುಖ್ಯ. ಇದು ಮಲಬದ್ಧತೆಯನ್ನು ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ಹೊಟ್ಟೆ ಹೆಚ್ಚು ಸಮಯ ತುಂಬಿರುವ ಅನುಭವ ನೀಡುವುದರಿಂದ ಅನಾರೋಗ್ಯಕರ ತಿಂಡಿಗಳ ಸೇವನೆಯನ್ನು ಕಡಿಮೆ ಮಾಡಲು ಸಹಾಯವಾಗಬಹುದು. ಸಂಪೂರ್ಣ ಧಾನ್ಯಗಳು, ನಾಶ್ಪತಿ, ಚಿಯಾ ಬೀಜ, ಫ್ಲ್ಯಾಕ್ಸ್ ಸೀಡ್ಸ್, ತರಕಾರಿಗಳು ಮತ್ತು ಬೇಳೆಕಾಳುಗಳನ್ನು ಆಹಾರದಲ್ಲಿ ಸೇರಿಸಬಹುದು.
ಒತ್ತಡ ಕಡಿಮೆ ಮಾಡಿ, ಸರಿಯಾಗಿ ನಿದ್ರೆ ಮಾಡಿ
ದೀರ್ಘಕಾಲದ ಒತ್ತಡವು ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀರಬಹುದು. ತಡರಾತ್ರಿ ಮಲಗುವ ಅಭ್ಯಾಸವನ್ನು ತಪ್ಪಿಸಿ, ಪ್ರತಿದಿನ ನಿಯಮಿತ ಸಮಯಕ್ಕೆ ಮಲಗಲು ಪ್ರಯತ್ನಿಸಿ. ವಯಸ್ಕರಿಗೆ ಸಾಮಾನ್ಯವಾಗಿ 7–8 ಗಂಟೆಗಳ ಉತ್ತಮ ನಿದ್ರೆ ಅಗತ್ಯ. ಯೋಗ, ಧ್ಯಾನ, ಉಸಿರಾಟದ ವ್ಯಾಯಾಮ ಅಥವಾ ನಿಮಗೆ ಇಷ್ಟವಾದ ಚಟುವಟಿಕೆಗಳ ಮೂಲಕ ಒತ್ತಡವನ್ನು ಕಡಿಮೆ ಮಾಡಬಹುದು.
ಊಟದ ಬಳಿಕ 10 ನಿಮಿಷ ವಾಕ್ ಮಾಡಿ
ಊಟ ಮಾಡಿದ ತಕ್ಷಣ ಮಲಗುವ ಬದಲು ಸುಮಾರು 10 ನಿಮಿಷ ನಿಧಾನವಾಗಿ ನಡೆಯುವ ಅಭ್ಯಾಸ ಮಾಡಿಕೊಳ್ಳಿ. ಇದು ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವುದರ ಜೊತೆಗೆ ಜೀರ್ಣಕ್ರಿಯೆಗೆ ಸಹಾಯಕವಾಗಬಹುದು. ನಿಯಮಿತ ನಡಿಗೆ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಸಾಕಷ್ಟು ನೀರು ಕುಡಿಯಿರಿ
ದೇಹದಲ್ಲಿ ನೀರಿನ ಕೊರತೆಯಾದರೆ ಮಲ ಗಟ್ಟಿಯಾಗಬಹುದು ಮತ್ತು ಮಲಬದ್ಧತೆ ಉಂಟಾಗಬಹುದು. ದಿನವಿಡೀ ಸಾಕಷ್ಟು ನೀರು ಕುಡಿಯುವುದು ಜೀರ್ಣಕ್ರಿಯೆ ಮತ್ತು ಸಾಮಾನ್ಯ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ನಿಮ್ಮ ದೈಹಿಕ ಚಟುವಟಿಕೆ, ಹವಾಮಾನ ಮತ್ತು ಆರೋಗ್ಯ ಸ್ಥಿತಿಗೆ ಅನುಗುಣವಾಗಿ ನೀರಿನ ಪ್ರಮಾಣವನ್ನು ಹೊಂದಿಸಿಕೊಳ್ಳಿ.
ಗಟ್ ಹೆಲ್ತ್‌ಗಾಗಿ ಈ 5 ಅಭ್ಯಾಸ ನೆನಪಿರಲಿ
ಪ್ರೋಬಯಾಟಿಕ್ ಆಹಾರ + ಫೈಬರ್ ಸಮೃದ್ಧ ಡಯಟ್ + ಉತ್ತಮ ನಿದ್ರೆ + ಊಟದ ಬಳಿಕ ನಡಿಗೆ + ಸಾಕಷ್ಟು ನೀರು ಇವಿಷ್ಟು ಸರಳ ಅಭ್ಯಾಸಗಳು ಗಟ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಬಹುದು. ಆದರೆ ನಿರಂತರ ಹೊಟ್ಟೆ ನೋವು, ತೀವ್ರ ಮಲಬದ್ಧತೆ, ಪದೇಪದೇ ಅತಿಸಾರ, ಮಲದಲ್ಲಿ ರಕ್ತ ಅಥವಾ ಕಾರಣವಿಲ್ಲದೆ ತೂಕ ಕಡಿಮೆಯಾದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.




