Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ನಮಗೆ ಕಳುಹಿಸಿ. ಇ- ಮೇಲ್ tv9kannadadigital@gmail.com
ಕೃತಿ: ಅನಿಮಲ್ ಫಾರ್ಮ್ (ಕಾದಂಬರಿ)
ಮೂಲ ಇಂಗ್ಲಿಷ್: ಜಾರ್ಜ್ ಆರ್ವೆಲ್
ಕನ್ನಡಕ್ಕೆ : ಸಹನಾ ಹೆಗಡೆ
ಪುಟ : 116
ಬೆಲೆ : ರೂ. 80
ಮುಖಪುಟ ವಿನ್ಯಾಸ : ವಿಶ್ವನಾಥ್ ಶೆಟ್ಟಿಗಾರ್
ಪ್ರಕಾಶನ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು
ಮಾನವರ ನಡುವೆ ಅಧಿಕಾರದ ಸಂಬಂಧ ಬಹಳ ವಿಚಿತ್ರವಾದುದು. ಇತರರ ಮೇಲೆ ಅಧಿಕಾರ ಚಲಾಯಿಸುವ ಅವಕಾಶ ಸಿಕ್ಕಿದಾಗ ಅದನ್ನು ಚಲಾಯಿಸದೆ ಬಿಡುವವರು ಬಹಳ ಕಡಿಮೆ! ಅಧಿಕಾರಕ್ಕೇರುವ ಮತ್ತು ಇತರರ ಮೇಲೆ ಅದನ್ನು ಚಲಾಯಿಸುವ ಮನೋವೃತ್ತಿಯ ಬಗ್ಗೆ ಇರುವ ಬಹಳ ಪ್ರಸಿದ್ಧ ಕಿರುಕಾದಂಬರಿ ಅನಿಮಲ್ ಫಾರ್ಮ್. ಪ್ರಾಣಿ ಪ್ರಪಂಚವನ್ನು ಹೊಂದಿರುವ ರೂಪಕಾತ್ಮಕ ಚಿತ್ರಣದ ಮೂಲಕ ಇದು ಮಾನವನ ಮೂಲ ಪ್ರವೃತ್ತಿಯನ್ನು ಶೋಧಿಸುತ್ತದೆ. ಎಲ್ಲರೂ ಸಮಾನರಾಗಬೇಕೆಂಬ ಆದರ್ಶದಿಂದ ಹೊರಡುವ ಮನೋಭಾವವು ಕೊನೆಗೆ ‘ಕೆಲವರು ಹೆಚ್ಚು ಸಮಾನರು’ ಎಂಬಲ್ಲಿಗೆ ತಲುಪುತ್ತದೆ. ಅಂತಿಮವಾಗಿ ಒಬ್ಬನೇ ನಿರಂಕುಶ ಪ್ರಭುವಾಗುವ ಸ್ಥಿತಿಯನ್ನು ಅದು ಬಿಂಬಿಸುತ್ತದೆ.
ಡಾ. ಅಜಕ್ಕಳ ಗಿರೀಶ ಭಟ್
ಯಾವುದೇ ತರಹದ ಆಡಳಿತ ವ್ಯವಸ್ಥೆಯಿರಲಿ, ತತ್ತ್ವ-ಸಿದ್ಧಾಂತವನ್ನು ಆಧರಿಸಿದ ಪಕ್ಷ ರಾಜಕೀಯವಿರಲಿ, ಅಂತಿಮವಾಗಿ ಅಧಿಕಾರಕ್ಕೆ ಬಂದ ವ್ಯಕ್ತಿ ಅಥವಾ ಪಕ್ಷ ಬಲಿ ಬೀಳುವುದು ತನ್ನದೇ ಆಂತರಿಕ ದೌರ್ಬಲ್ಯಗಳಿಗೆ, ಅದು ಅಧಿಕಾರದ ಲಾಲಸೆಯಾಗಿರಬಹುದು, ಸಂಪತ್ತಿನ ಶೇಖರಣೆಯಾಗಿರಬಹುದು, ಇನ್ನೊಬ್ಬರನ್ನು ಆಳಬೇಕೆಂಬ ಹಪಾಹಪಿಯಾಗಿರಬಹುದು, ಸಮಾಜದಲ್ಲಿನ ಕೆಲ ಬಿರುಕುಗಳನ್ನೇ ಬಳಸಿಕೊಂಡು ಬೆಳೆಯುವ ಬಯಕೆಯಿರಬಹುದು, ವ್ಯಕ್ತಿ ಪೂಜೆಯಿರಬಹುದು, ಸಂಕುಚಿತ ಅಭಿಪ್ರಾಯಗಳಿಗೇ ಜೋತುಬೀಳುವ ಅಂಧಾಭಿಮಾನವಿರಬಹುದು. ಪಟ್ಟಿ ಬೆಳೆಯುತ್ತದೆ. ಇದೆಲ್ಲವನ್ನೂ ಮೀರಿದ ಸಹಜ ಬದುಕು ನಮಗೇಕೆ ಸಾಧ್ಯವಾಗುವುದಿಲ್ಲ?
ಸದಾ ಆಕ್ಷೇಪ, ಆರೋಪ, ದೋಷಾರೋಪಣೆಯಲ್ಲಿಯೇ ಮುಳುಗಿರುವ ನಾವು ಒಮ್ಮೆ ಆತ್ಮಾವಲೋಕನವನ್ನೇಕೆ ಮಾಡಿಕೊಳ್ಳುವುದಿಲ್ಲ? ವ್ಯವಸ್ಥೆಯ ಭಾಗವಾಗಿರುವ ನಾವು ಕೆಡುಕುಗಳಿಗೆಲ್ಲ ಇನ್ನೊಬ್ಬರತ್ತ ಬೆಟ್ಟುಮಾಡುತ್ತ ವ್ಯವಸ್ಥೆಯನ್ನು ಹಳಿಯುತ್ತ ಕುಳಿತಿರುತ್ತೇವೆ ಏಕೆ? ಸಮಷ್ಟಿಯ ಒಳಿತಿಗೆ ವ್ಯಷ್ಟಿಯ ಜವಾಬ್ದಾರಿಯೇನೂ ಇಲ್ಲವೇ? ಪ್ರಶ್ನೆಗಳು ಏಳುತ್ತಲೇ ಹೋಗುತ್ತವೆ. ಹೀಗೆ ಪ್ರಶ್ನೆಗಳು ಬಾಧಿಸುತ್ತಿದ್ದ ಸನ್ನಿವೇಶದಲ್ಲಿಯೇ ಮನುಷ್ಯನ ಆಂತರ್ಯದ ಕುರೂಪಗಳಿಗೆ ಕನ್ನಡಿ ಹಿಡಿಯುವ ಈ ಕೃತಿಯನ್ನು ಅನುವಾದಿಸುವ ಅವಕಾಶವೊದಗಿತು. ಕಮ್ಯೂನಿಸಂ, ಸೋಷಿಯಲಿಸಂ, ಪ್ರಜಾಪ್ರಭುತ್ವ, ಸರ್ವಾಧಿಕಾರ, ಸೇನಾಧಿಕಾರ ಯಾವುದಿದ್ದರೂ ವ್ಯವಸ್ಥೆಯ ಅತಿಮುಖ್ಯ ಭಾಗ ಒಂದೇ. ಅದು ವ್ಯಕ್ತಿಯೇ. ವ್ಯಕ್ತಿಯಲ್ಲಿನ ಬದಲಾವಣೆಯೆಂದರೆ, ವ್ಯವಸ್ಥೆಯಲ್ಲಿನ ಬದಲಾವಣೆ ಎನ್ನುವ ನಂಬಿಕೆಯನ್ನು ಮತ್ತೆ ಮತ್ತೆ ಬಲಪಡಿಸುತ್ತ, ಅನುವಾದ ತನಗೊಂದು ಸ್ಪಷ್ಟ ರೂಪನ್ನು ಪಡೆದುಕೊಂಡು ಹೊರಬರಲು ಸಿದ್ಧವಾಗಿದೆ.
ಸಹನಾ ಹೆಗಡೆ, ಅನುವಾದಕಿ
*
(ಕಾದಂಬರಿಯ ಆಯ್ದಭಾಗ)
ಆದಾಗ್ಯೂ ಓದು ಮತ್ತು ಬರಹದ ತರಗತಿಗಳು ತುಂಬಾ ಯಶಸ್ವಿಯಾಗಿದ್ದವು. ಶರತ್ಕಾಲವು ಆಗಮಿಸುವಷ್ಟರಲ್ಲಿ ತೋಟದಲ್ಲಿದ್ದ ಪ್ರತಿಯೊಂದು ಪ್ರಾಣಿಯೂ ಸ್ವಲ್ಪ ಮಟ್ಟಿಗೆ ಅಕ್ಷರಸ್ಥನಾಗಿತ್ತು.
ಹಂದಿಗಳ ವಿಷಯಕ್ಕೆ ಬಂದರೆ, ಅವುಗಳಿಗೆ ಅದಾಗಲೇ ಸಂಪೂರ್ಣವಾಗಿ ಓದಲು, ಬರೆಯಲು ಬಂದುಬಿಟ್ಟಿತ್ತು. ನಾಯಿಗಳು ಸಾಕಷ್ಟು ಚೆನ್ನಾಗಿ ಓದಲೇನೋ ಕಲಿತಿದ್ದವು. ಆದರೆ ಅವುಗಳಿಗೆ ಏಳು ಅನುಶಾಸನಗಳನ್ನು ಬಿಟ್ಟರೆ ಮತ್ತೇನನ್ನೂ ಓದುವುದರಲ್ಲಿ ಅಸಕ್ತಿಯಿರಲಿಲ್ಲ. ಮೇಕೆ ಮ್ಯೂರಿಯಲ್ ನಾಯಿಗಳಿಗಿಂತ ಉತ್ತಮವಾಗೇನೋ ಓದಬಲ್ಲುದಾಗಿತ್ತು ಮತ್ತು ಕೆಲವೊಮ್ಮೆ ಕಸದ ರಾಶಿಯಿಂದ ಎತ್ತಿ ತಂದಿದ್ದ ದಿನಪತ್ರಿಕೆಯ ಚೂರುಗಳನ್ನು ಬೇರೆಯವರಿಗೆ ಓದಿ ಹೇಳುತ್ತಿತ್ತು. ಬೆಂಜಮಿನ್ ಕೂಡ ಬೇರೆ ಯಾವುದೇ ಹಂದಿಯಷ್ಟೇ ಚೆನ್ನಾಗಿ ಓದಬಲ್ಲುದಾಗಿತ್ತು. ಆದರೆ ಅದು ತನ್ನ ಸಹಜ ಸಾಮರ್ಥ್ಯವನ್ನು ಎಂದೂ ಪ್ರಯೋಗಿಸಲೇ ಇಲ್ಲ. ಈ ತನಕ ತಾನು ತಿಳಿದಿರುವ ಹಾಗೆ ಓದುವಂತಹದೇನೂ ಇರಲೇ ಇಲ್ಲ ಎಂದು ಅದು ಹೇಳಿತು. ಸಂಪೂರ್ಣ ಅಕ್ಷರಮಾಲೆಯನ್ನು ಕಲಿತಿದ್ದರೂ ಕ್ಲೋವರ್‌ಗೆ ಪದಗಳನ್ನು ಒಟ್ಟುಗೂಡಿಸಲು ಬರುತ್ತಿರಲಿಲ್ಲ. ಬಾಕ್ಸರ್‌ನಿಗೆ ಡ ಅಕ್ಷರದಿಂದಾಚೆಗೆ ಹೋಗಲು ಆಗಲೇ ಇಲ್ಲ. ಅದು ಧೂಳಿನಲ್ಲಿ ತನ್ನ ಮುಂಗಾಲಿನಿಂದ ಅ, ಆ, ಇ, ಈ ಗಳನ್ನು ತಿದ್ದಿ ತೀಡಿ ಅಕ್ಷರಾಭ್ಯಾಸ ಮಾಡುತ್ತಿತ್ತು. ನಂತರ, ಸ್ವಲ್ಪ ಅಳುಕುತ್ತಲೇ ಆ ಅಕ್ಷರಗಳನ್ನು ದಿಟ್ಟಿಸುತ್ತ ನಿಂತುಬಿಡುತ್ತಿತ್ತು, ಕೆಲವೊಮ್ಮೆ ಮುಂಜುಟ್ಟನ್ನು ಅಲುಗಾಡಿಸುತ್ತ, ಯಾವ ಅಕ್ಷರದ ನಂತರ ಯಾವ ಅಕ್ಷರ ಬರುತ್ತದೆ ಎಂಬುದನ್ನು ನೆನಪಿಸಿಕೊಳ್ಳಲು ಇದ್ದೆಲ್ಲ ಶಕ್ತಿ ಹಾಕಿ ಪ್ರಯತ್ನಿಸುತ್ತಿತ್ತು.
ಇದನ್ನೂ ಓದಿ : ಅಚ್ಚಿಗೂ ಮೊದಲು: ಕವಿಜೋಡಿ ಸಂಘಮಿತ್ರೆ ನಾಗರಘಟ್ಟ, ರಾಜೇಶ್ ಹೆಬ್ಬಾರ್ ‘ಬೆನ್ನಿಗೆಲ್ಲಿಯ ಕಣ್ಣು’ ಕೃತಿ ನಿಮ್ಮ ಕೈಗೆ
ಆದರೆ ಅದೆಂದೂ ಆಗುತ್ತಲೇ ಇರಲಿಲ್ಲ. ಅದೆಷ್ಟೋ ಬಾರಿ ಅದು ಉ, ಊ, ಎ, ಏ ಗಳನ್ನು ಕಲಿತಿದ್ದು ಹೌದು. ಆದರೆ ಯಾವಾಗ ನೋಡಿದರೂ ಅವು ತಿಳಿಯಿತೆನ್ನುವಷ್ಟರಲ್ಲಿ ತನಗೆ ಅ, ಆ, ಇ, ಈ ಗಳು ಮರೆತುಹೋಗಿವೆ ಎನ್ನುವುದು ಅದರ ಅರಿವಿಗೆ ಬರುತ್ತಿತ್ತು. ಅಂತೂ ಕೊನೆಗೆ, ಮೊದಲ ನಾಲ್ಕು ಅಕ್ಷರಗಳಲ್ಲಿಯೇ ತೃಪ್ತಿಪಟ್ಟುಕೊಳ್ಳುವುದು ಒಳಿತೆಂದು ನಿರ್ಧರಿಸಿದ ಅದು, ಅವುಗಳನ್ನು ನೆನಪಿಟ್ಟುಕೊಳ್ಳಲು ಪ್ರತಿದಿನ ಒಂದೋ ಎರಡೋ ಬಾರಿ ಆ ಅಕ್ಷರಗಳನ್ನು ಬರೆಯುತ್ತಿತ್ತು. ಮೊಲ್ಲಿ, ತನ್ನ ಹೆಸರಿನಲ್ಲಿದ್ದ ಐದು ಅಕ್ಷರಗಳ ಹೊರತಾಗಿ ಬೇರೇನನ್ನೂ ಕಲಿಯಲು ನಿರಾಕರಿಸಿಬಿಟ್ಟಿತು. ಮರದ ಪುಟ್ಟ ಪುಟ್ಟ ಕೊಂಬೆಯ ತುಂಡು, ದಂಟು ಮುಂತಾದವನ್ನು ಅತ್ಯಂತ ಅಚ್ಚುಕಟ್ಟಾಗಿ ಜೋಡಿಸಿ, ತನ್ನ ಹೆಸರಿನ ಆ ಅಕ್ಷರಗಳನ್ನು ಮೂಡಿಸುತ್ತಿತ್ತು. ಆಮೇಲೆ ಅವುಗಳನ್ನು ಒಂದೆರಡು ಹೂವುಗಳಿಂದ ಅಲಂಕರಿಸಿ, ತನ್ನ ರಚನೆಯನ್ನು ತಾನೇ ಮೆಚ್ಚಿಕೊಳ್ಳುತ್ತ ಅವುಗಳ ಸುತ್ತಲೂ ಓಡಾಡುತ್ತಿತ್ತು.
ತೋಟದಲ್ಲಿದ್ದ ಬೇರೆ ಯಾವ ಪ್ರಾಣಿಗೂ ಅ ದಿಂದ ಮುಂದೆ ಹೋಗಲು ಆಗಲೇ ಇಲ್ಲ. ಕುರಿ, ಕೋಳಿ, ಬಾತುಗಳಂತಹ ದಡ್ಡ ಪ್ರಾಣಿಗಳು ಏಳು ಅನುಶಾಸನಗಳನ್ನು ಉರುಹೊಡೆಯಲು ಅಸಮರ್ಥವಾಗಿದ್ದವು ಎನ್ನುವುದು ಕೂಡ ಗೊತ್ತಾಯಿತು. ಸಾಕಷ್ಟು ಆಲೋಚಿಸಿದ ನಂತರ, ಸ್ನೋಬಾಲ್, ಈ ಕಾರಣದಿಂದಾಗಿ ಏಳು ಅನುಶಾಸನಗಳನ್ನು ‘ನಾಲ್ಕು ಕಾಲು ಒಳ್ಳೆಯದು, ಎರಡು ಕಾಲು ಕೆಟ್ಟದ್ದು’ ಎಂಬ ಒಂದೇ ಸೂತ್ರಕ್ಕಿಳಿಸಬಹುದು ಎಂದು ಘೋಷಿಸಿತು. ಇದು ಪ್ರಾಣಿವಾದದ ಪ್ರಮುಖ ಸಿದ್ಧಾಂತವನ್ನು ಒಳಗೊಂಡಿದ್ದು, ಇದನ್ನು ಸಂಪೂರ್ಣವಾಗಿ, ಚೆನ್ನಾಗಿ ಗ್ರಹಿಸಿದವರು ಮನುಷ್ಯನ ಪ್ರಭಾವಕ್ಕೊಳಗಾಗದೇ ಸುರಕ್ಷಿತವಾಗಿರಬಹುದು ಎಂದು ಹೇಳಿತು. ತಮಗೂ ಇರುವುದು ಎರಡು ಕಾಲುಗಳಲ್ಲವೇ ಎಂದು ಪಕ್ಷಿಗಳಿಗೆ ಅನ್ನಿಸಿತಾದ್ದರಿಂದ ಮೊದಲಿಗೆ ಅವು ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದವು. ಆದರೆ ಸ್ನೋಬಾಲ್, ಅದು ಹಾಗಲ್ಲವೆಂದು ಅವುಗಳಿಗೆ ತೋರಿಸಿ, ಮನದಟ್ಟು ಮಾಡಿಕೊಟ್ಟಿತು.
‘ಕಾಮ್ರೇಡ್‌ಗಳೇ, ಹಕ್ಕಿಗೆ ರೆಕ್ಕೆಯೆನ್ನುವುದು ಚಲನೆಯನ್ನು ನೀಡುವ ಒಂದು ಅಂಗ, ಕೈವಾಡ ಮಾಡುವಂತಹದಲ್ಲ. ಆದ್ದರಿಂದ ಅವುಗಳನ್ನು ಕಾಲುಗಳೆಂದೇ ತಿಳಿಯತಕ್ಕದ್ದು. ಮನುಷ್ಯನ ಗಮನೀಯ, ವಿಶಿಷ್ಟ ಗುರುತೆಂದರೆ ಅವನ ಕೈ. ತನ್ನೆಲ್ಲ ಕಿಡಿಗೇಡಿತನಗಳನ್ನು ಮಾಡುವುದು ಆತ ಈ ಸಾಧನದಿಂದಲೇ,’ ಎಂದು ಸ್ಪಷ್ಟೀಕರಿಸಿತು.
ಪಕ್ಷಿಗಳಿಗೆ ಸ್ನೋಬಾಲ್‌ನ ದೀರ್ಘ ಮಾತುಗಳು ಅರ್ಥವಾಗಲಿಲ್ಲ. ಆದರೆ ಅದರ ವಿವರಣೆಯನ್ನು ಅವು ಒಪ್ಪಿಕೊಂಡವು. ವಿನಮ್ರ, ವಿಧೇಯ ಪ್ರಾಣಿಗಳೆಲ್ಲವೂ ಹೊಸ ಸೂತ್ರವನ್ನು ಉರುಹೊಡೆಯಲು ಆರಂಭಿಸಿಬಿಟ್ಟವು. ‘ನಾಲ್ಕು ಕಾಲು ಒಳ್ಳೆಯದು, ಎರಡು ಕಾಲು ಕೆಟ್ಟದ್ದು’ ಎಂಬುದನ್ನು ಕೊಟ್ಟಿಗೆಯ ತುದಿಗೋಡೆಯ ಮೇಲೆ, ಏಳು ಅನುಶಾಸನಗಳಿಗಿಂತಲೂ ಮೇಲಕ್ಕೆ, ಮತ್ತಷ್ಟು ದೊಡ್ಡದಾದ ಅಕ್ಷರಗಳಲ್ಲಿ ಬರೆಯಲಾಯಿತು. ಒಮ್ಮೆ ಕಂಠಪಾಠವಾದ ಮೇಲೆ ಕುರಿಗಳಿಗೆ ಈ ಸೂತ್ರವು ಬಹಳ ಇಷ್ಟವಾಗಿಹೋಯಿತು. ಹೊಲದಲ್ಲಿ ಆರಾಮವಾಗಿ ಬಿದ್ದುಕೊಂಡಾಗಲೆಲ್ಲ ಅವು ಒಟ್ಟಾಗಿ, ‘ನಾಲ್ಕು ಕಾಲು ಒಳ್ಳೆಯದು, ಎರಡು ಕಾಲು ಕೆಟ್ಟದ್ದು! ನಾಲ್ಕು ಕಾಲು ಒಳ್ಳೆಯದು, ಎರಡು ಕಾಲು ಕೆಟ್ಟದ್ದು!’ ಎಂದು ಗಂಟೆಗಟ್ಟಲೇ ಸತತವಾಗಿ ದಣಿವಿರದಂತೆ ಅರಚುತ್ತಿದ್ದವು.
ಕಾದಂಬರಿಯ ಖರೀದಿಗೆ ಇಲ್ಲಿ ಕ್ಲಿಕ್ ಮಾಡಿ