Gokak Falls: ಸ್ವಾತಂತ್ರ್ಯ, ಸ್ವಾಭಿಮಾನವ ಗಂಡನ ಮನೆಯವರಿಗೆ ಒತ್ತೆಯಿಟ್ಟು ಮೌನಕ್ಕೆ ಜಾರಿದ ಗೆಳತಿ
ಓದುವ ಕನಸು ಹೊತ್ತ ಗೆಳತಿ ತಾಯಿಯ ಅನಾರೋಗ್ಯದ ಕಾರಣಕ್ಕೆ ಒಲ್ಲದ ಮನಸ್ಸಿನಿಂದ ಡಿಗ್ರಿ ಮುಗಿಯುವ ಒಳಗೆ ಕೊರಳಿಗೆ ತಾಳಿ ಕಟ್ಟಿಸಿಕೊಂಡಳು. ಅವಳ ಇಚ್ಛೆ ಅಂತೆ ಕಲಿಸುತ್ತೇವೆ ಎಂದವರು ಡಿಗ್ರಿ ಪರೀಕ್ಷೆಗೆ ಕಳುಹಿಸಲು ತಕರಾರು ಎತ್ತಿದರು.
ಓದುವ ಕನಸು ಹೊತ್ತ ಗೆಳತಿ ತಾಯಿಯ ಅನಾರೋಗ್ಯದ ಕಾರಣಕ್ಕೆ ಒಲ್ಲದ ಮನಸ್ಸಿನಿಂದ ಡಿಗ್ರಿ ಮುಗಿಯುವ ಒಳಗೆ ಕೊರಳಿಗೆ ತಾಳಿ ಕಟ್ಟಿಸಿಕೊಂಡಳು. ಅವಳ ಇಚ್ಛೆ ಅಂತೆ ಕಲಿಸುತ್ತೇವೆ ಎಂದವರು ಡಿಗ್ರಿ ಪರೀಕ್ಷೆಗೆ ಕಳುಹಿಸಲು ತಕರಾರು ಎತ್ತಿದರು. ಮುಂದೆ ಓದುವುದಂತು ಕನಸಾಗೆ ಉಳಿಯಿತು. ಇದೀಗ ಬೇಗ ಮಕ್ಕಳು ಕೊಡುವಂತೆ ಕಾಟ ಶುರು ಆಗಿದೆ.
ಅವಳ ಆರೋಗ್ಯದ ಸಮಸ್ಯೆ ಆಕೆಯ ತಾಯಿತನಕ್ಕೆ ಅಡ್ಡಿ ಆಗಿದ್ದು ಗೊತ್ತಾದ ಮೇಲಂತೂ ಆಕೆ ದಿನವೂ ಅಪಮಾನ, ಅಪವಾದಕ್ಕೆ ಗುರಿಯಾಗಿದ್ದಾಳೆ. ಬಾಯಿ ಬಿಟ್ಟು ಪ್ರಶ್ನಿಸಿದರೆ ಆಕೆ ಹೆತ್ತವರು ಕಲಿಸಿದ ಸಂಸ್ಕಾರದ ಪ್ರಶ್ನೆ ಎತ್ತುತ್ತಾರೆ ಅವರು. ಬಿಟ್ಟು ಹೊರಬರಬೇಕು ಎಂದರೆ ಅನಾರೋಗ್ಯಕ್ಕೆ ಸಿಲುಕಿದ ತಾಯಿಗೆ ಕುಟುಂಬದ ಮಾನ – ಮರ್ಯಾದೆಯ ಚಿಂತೆ.!
ಆ ತಾಯಿದಾದರು ಏನು ತಪ್ಪು. ಅವಳು ತನ್ನ ಗಂಡನ ಮನೆಗೆ ಬರೋವಾಗಲು ಆಕೆ ತನ್ನ ತಾಯಿಯಿಂದ ಪಡೆದ ಉಪದೇಶವನ್ನೆ ಈಗ ತನ್ನ ಮಗಳಿಗೆ ನೀಡುತ್ತಿದ್ದಾಳೆ. ತಾಯಿಯ ಮಾತನ್ನು ಮೀರಲಾಗದ ಆಕೆಯು ಈಗ ಮೌನ ಧರಿಸಿದ್ದಾಳೆ. ತನ್ನ ಸ್ವಾತಂತ್ರ, ಸ್ವಾಭಿಮಾನ, ಸಮ್ಮಾನಗಳನ್ನೆಲ್ಲ ಆಕೆಯ
ಗಂಡನ ಮನೆಯವರಿಗೆ ಒತ್ತೆ ಇಟ್ಟು ಮೌನಳಾಗಿದ್ದಾಳೆ. ಒಂದು ಮಾತು ಒಂದು ಪ್ರಶ್ನೆಗೆ ಮಾತ್ರ ಉತ್ತರ ನೀಡಬಲ್ಲದು ಆದರೆ ಒಂದು ಮೌನ ನೂರು ಉತ್ತರ ಸೂಚಿಸಬಲ್ಲದು. ಆದರೆ ಅದೇ ಮೌನ ದಾರಿ ತಪ್ಪಿಸುವ ಸಂಭವಗಳು ಇದೆ.
ಅವನೊಬ್ಬ ತನಗೆ ಕಟ್ಟಿಕೊಂಡ ಶಪಥ ಎಂಬ ಬಂದನವನ್ನು ಒಡೆದು ಮಾತನಾಡಿ ಬಿಟ್ಟಿದ್ದರೆ, ಕಣ್ಣಿಗೆ ಬಟ್ಟೆ ಕಟ್ಟಿ ಪತಿವ್ರತೆ ಆಗಲು ಹೊರಟ ಆಕೆ ಒಮ್ಮೆ ತನ್ನ ಮೌನ ಮುರಿದು ಬಿಟ್ಟಿದ್ದರೆ ಕುರುಕ್ಷೇತ್ರದವರೆಗೆ ಹೋಗುತ್ತಿತ್ತಾ ದಾಯಾದಿಗಳ ಜಗಳ? ಎಂದು ನನಗೆ ಯಾವಾಗಲೂ ಅನಿಸುತ್ತದೆ. ಭೀಷ್ಮ ಪಿತಾಮಹರು ತಮ್ಮ ತಂದೆ ಮೇಲಿನ ಅತೀ ಪ್ರೀತಿಗೆ ಭವಿಷ್ಯದ ಮುಂದಾಲೋಚನೆ ಮಾಡದೆ ಗಂಗೆಯ ಸಾನಿಧ್ಯದಲ್ಲಿ ಶಪಥ ಮಾಡಿ ಬಿಟ್ಟರು. ಗಂಗೆಯೂ ಎದ್ದು ಬಂದು ತಡೆಯದೆ ಮೌನ ತಾಳಿದಲು. ಕಾರಣವಾದ ಸತ್ಯವತಿಗು ಪರಿಣಾಮದ ಬೀಕರತೆ ಗೊತ್ತಿರಲಿಲ್ಲ.
ಆಕೆ ಒಳಗೊಳಗೇ ವಿಜಯೋತ್ಸವ ಆಚರಿಸುತ್ತಿದ್ದಳು. ಶಾಂತನುಗೆ ತಡೆಯಲಾಗಲಿಲ್ಲ. ಜೀವನದುದ್ದಕ್ಕೂ ಭೀಷ್ಮ ಇದೆ ಮಾತಿಗೆ ಪಟ್ಟು ಬಿದ್ದು ಮೌನವಾಗಿ ಉಳಿದ. ಆ ಮೌನ ಅವನನ್ನು ಅದೆಷ್ಟು ಅಸಹಾಯಕನನ್ನಾಗಿ ಮಾಡಿತು. ತನ್ನದೇ ಕುಲವಧುವಿನ ಮಾನಭಂಗವನ್ನೂ ತಡೆಯಲಾಗಲಿಲ್ಲ. ತನ್ನ ಗಂಡನಿಗೆ ಇರದ ಸುಖ ತನಗೇಕೆ ಅಂದುಕೊಂಡ ಗಾಂಧಾರಿ ಕಟ್ಟಿಕೊಂಡಿದ್ದು ಕೇವಲ ತನ್ನ ಕಣ್ಣುಗಳನ್ನು ಮಾತ್ರ ಅಲ್ಲ, ಆಕೆಯ ಭವಿಷ್ಯವನ್ನೂ.
ಆ ಮಾತೃ ಹೃದಯಕ್ಕೆ ತಪ್ಪು ಸರಿಯ ಅರಿವಿತ್ತು. ಆಕೆಯ ಸಹೋದರ, ಪತಿಯ, ಸಂತಾನದ ತಪ್ಪುಗಳನ್ನು ಆಕೆಯ ಹೃದಯ ವಿರೋಧಿಸುತ್ತಿತ್ತು. ಆದರೆ ಆಕೆಯ ಬಾಯಿ ಮೌನ ತಾಳಿತ್ತು. ಆ ಮೌನವೇ ಮುಂದೆ ಆಕೆಯ ಒಡಲಿಗು ಬೆಂಕಿ ಹಚ್ಚಿತು. ನಿರ್ಗುಣರ ಮಾತು ಎಷ್ಟು ಕೆಟ್ಟದ್ದೋ ಅಷ್ಟೇ ಸದ್ಗುಣರ ಮೌನವೂ ಕೇಡುಗಾಲಕ್ಕೆ ನಾಂದಿ ಹಾಡುವುದು ಎನ್ನುವುದಕ್ಕೆ ಬಿಷ್ಮ , ಗಾಂಧಾರಿಯರೆ ಜ್ವಲಂತ ಉದಾಹರಣೆಗಳು.
ಯಹೂದಿಗಳ ಮೇಲೆ ಹಿಟ್ಲರನ ಅಟ್ಟಹಾಸ ನಡೆಯುವಾಗಲೂ ಜಗತ್ತು ಮೌನವಹಿಸಿತ್ತು. ಹಿಂಸೆ ತಾಂಡವವಾಡುತ್ತಿರುವಾಗ ಮೌನ ತಾಳಿದ ನಾಗರಿಕ ಸಮಾಜ ಉದ್ದಾರವನ್ನೇನು ಮಾಡಲಾರದು. “Don’t say Yes when you really want to say No” ಎಂದು ಎಲ್ಲೋ ಓದಿದ್ದೆ. ಬೇಡವಾದದ್ದನ್ನು ಬೇಡ ಎಂದು ಖಡಾಖಂಡಿತವಾಗಿ ಹೇಳುವುದು ಉತ್ತಮ ಆದರೆ ಹಾಗೆ ಹೇಳದಂತೆ ನೂರು ಕಾರಣಗಳು ನಮ್ಮನ್ನು ತಡೆದು ಹಾಕುತ್ತವೆ.
ನಾನು ಇಷ್ಟು ನಿಷ್ಠುರವಾಗಿ ಇಲ್ಲ ಎಂದರೆ ಅವರೇನು ಅಂದುಕೊಂಡಾರು … ಅವರಿಗೆ ನೋವಾದಿತು… ಅದು ನನ್ನ ಸ್ವಾರ್ಥ ಆಗಬಹುದು… ಅಥವಾ ಮತ್ತೆ ಯಾರದ್ದೋ ಭಯ ಇದ್ದಿರಬಹುದು.ಅಂತ ಸಮಯದಲ್ಲಿ ನಾವು ಇಲ್ಲ ಎನ್ನಲಾಗದೆ, ಹೌದು ಎನ್ನಲೂ ಆಗದೆ ಮೌನವಾಗಿ ಉಳಿದು ಬಿಡುತ್ತೆವೆ. ನಮ್ಮ ಎದುರಿನವರು ಮೌನಂ ಸಮ್ಮತಿ ಲಕ್ಷಣಂ ಎಂದು ಮುಂದುವರೆಯುತ್ತಾರೆ. ಮನಸ್ಸು ಒಪ್ಪದ್ದನ್ನು ಒತ್ತಡಪೂರ್ವಕ ಒಪ್ಪಿ ನಮಗೆ ನಾವೇ ಹಿಂಸೆ ಅನುಭವಿಸುತ್ತೇವೆ. ನಮ್ಮ ಮೌನವೇ ನಮ್ಮನ್ನ ಕೊಲ್ಲುತ್ತದೆ. ಆಗ ಮೌನಂ ವಿನಾಶ ಲಕ್ಷಣಂ ಎಂಬ ಅರಿವಾಗುತ್ತದೆ.
ಮೌನ ಶಾಂತಿಯ ಲಕ್ಷಣ ಆದರೆ ಅದೇ ಮೌನ ಕ್ರಾಂತಿಯ ಮುನ್ಸುಚನೆಯು ಇರಬಹುದು. ಮೌನವಾಗಿ ಉಳಿಯುವುದು, ವಿರೋಧಿಸದೆ ಇದ್ದು ಬಿಡುವುದು ಉತ್ತಮ. ಅದು ಯಾರನ್ನೂ ನೋಯಿಸಲಾರದು ಎಂಬ ಮೌಢ್ಯ ಇದೆ ನಮ್ಮಲ್ಲಿ. ಮತ್ತು ಆ ಮೌಢ್ಯವನ್ನು ಹೆಣ್ಣು ಕುಲದ ಮೇಲೆ ಹೇರಿರುವುದು ಮತ್ತದೇ ಪುರುಷ ಪ್ರಧಾನ ಸಮಾಜ.
ಅವನ ಕಾಟ,ಕಟ್ಟಲೆಗಳನ್ನು ಸಹಿಸದ ಆಕೆ ‘ಇಂದಲ್ಲ ನಾಳೆ ಬದಲಾದೀತು’ ಎಂಬ ನಂಬಿಕೆಯಲ್ಲಿ ಮೌನ ತಾಳಿ ಅರ್ಧ ಜೀವನವನ್ನೇ ಕಳೆದು ಬಿಟ್ಟಿದ್ದಳು. ಕೊನೆಗೊಮ್ಮೆ ಇನ್ನೂ ತಾಳಲಾರೆ ಎಂದು ಹೊರಟು ನಿಂತಾಕೆಯನ್ನು ಕುಟುಂಬ, ಸಮಾಜ, ಸಂಪ್ರದಾಯ ಎಂಬ ಹೆಸರಿನಲ್ಲಿ ಆತ ಕೊಟ್ಟ ಸಾಬುಬು ಆಕೆಯನ್ನು ಮತ್ತೆ ಮೌನಕ್ಕೆ ತಳ್ಳಿತು. ಕುಟುಂಬದ ಮಾನ, ಸಮಾಜದ ಭಯ, ಸಂಪ್ರದಾಯಗಳ ಹೇರಿಕೆ ಎಲ್ಲವೂ ತನ್ನದೇ ಜವಾಬ್ದಾರಿ ಎಂದು ನಂಬಿದ ಆಕೆಯ ಮೌನ ಮುರಿಯಲೆ ಇಲ್ಲ. ಆಕೆಗೆ ಕೊಡಲ್ಪಟ್ಟ ದೈವಿಕ ಸ್ವರೂಪವು ಆಕೆಯಿಂದ ಕರುಣೆಯನ್ನು ಗಿಟ್ಟಿಸಿಕೊಂಡು, ಎಲ್ಲವನ್ನೂ ಆಕೆಯ ತಲೆಗೆ ಕಟ್ಟಿ ಆಕೆಯ ಮೌನವನ್ನು ದುರ್ಬಲ ಪಡಿಸಿಕೊಳ್ಳುತ್ತಲೆ ಸಾಗುತ್ತಾನೆ.
ತನಗೆ ಕೊಟ್ಟ ದೈವೀ ಸ್ವರೂಪವನ್ನು ಉಳಿಸಿಕೊಳ್ಳುವುದು ತನ್ನ ಪರಮ ಕರ್ತವ್ಯ ಎಂದು ನಂಬಿ ದಿನವೂ ಸಾಯುವ ತಾಯಂದಿರ ಮಧ್ಯ ಗುರುದೇವ ರವೀಂದ್ರನಾಥರ ಕಥೆಯಲ್ಲಿ ಬರುವ ವೃಣಾಲ್ ನನಗೆ ಬೆಳಕಿನ ದಾರಿಯಾಗಿ ಕಾಣುತ್ತಾಳೆ. ತನ್ನ ಗಂಡನ ಎರಡನೇ ಹೆಂಡತಿಯಾದ ಆಕೆ ಬಂಗಾಳದ ಇತರ ಹೆಣ್ಣು ಮಕ್ಕಳಂತೆ ತನ್ನ ಸೆರಗಿಗೆ ಬೆಂಕಿ ಹಂಚಿಕೊಳ್ಳದೇ ಅಲ್ಲಿಂದ ದೂರ ಹೋದದ್ದು ನನಗೆ ಅಕ್ಕ ಮಹಾದೇವಿ ಕೌಶಿಕನನ್ನು ತೊರೆದಂತೆ ಭಾಸವಾಗುತ್ತದೆ. ವೃಣಾಲ್ ಸಾಮಾನ್ಯ ಹೆಣ್ಣು ಮಗಳು.
ಗಂಡನ ಎರಡನೇ ಹೆಂಡತಿಯಾಗಿ ಆ ಮನೆಗೆ ಕಾಲಿಟ್ಟು ಆ ಕಾಲದ ಸೊಸೆಯಂದಿರಿಗೆ ಸಿಗುತ್ತಿದ್ದ ಕನಿಷ್ಟತೆಯಲ್ಲೆ ಬದುಕುತ್ತಿದ್ದವಳು. ಮನೆಯಲ್ಲಿ ಎಲ್ಲರಿಂದ ತಿರಸ್ಕಾರಕ್ಕೆ ಒಳಗಾದ ಆಕೆಯ ಒರಗಿತ್ತಿಯ ರೋಗಸ್ತ್ರ ತಂಗಿ ಬಿಂದುಳನ್ನು ತುಂಬು ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಇದನ್ನು ಸಹಿಸದ ಆಕೆಯ ಮನೆಯವರು ಬಿಂದುವನ್ನು ಒಬ್ಬ ಹುಚ್ಚನಿಗೆ ಕೊಟ್ಟು ಮದುವೆ ಮಾಡಿ ಕಳುಹಿಸುತ್ತಾರೆ.
ಆಕೆಯ ಗಂಡನ ಮನೆಯವರು ಎಷ್ಟೇ ಹಿಂಸೆ ಕೊಟ್ಟರು ಆಕೆಯ ಜೊತೆಗೆ ಯಾರೊಬ್ಬರೂ ನಿಲ್ಲುವುದಿಲ್ಲ. ವೃಣಾಲ್ ತಾನು ಆಕೆಯ ಜೊತೆ ನಿಲ್ಲುವೇನು ಎಂದಾಗ ಮನೆಯವರು ಒಕ್ಕೊರಲಿನಿಂದ ಅದನ್ನು ವಿರೋಧಿಸುತ್ತಾರೆ. ಬಿಂದುವನ್ನು ಹೇಗಾದರೂ ಕಾಪಾಡಲೆ ಬೇಕು ಎಂದು ಆಕೆ ತೀರ್ಥಯಾತ್ರೆ ನೆಪ ಹೇಳಿ ಬಿಂದುವನ್ನು ಅಲ್ಲಿಂದ ದೂರ ಕರೆದೊಯ್ಯುವ ಉಪಾಯ ಮಾಡಿ ಹೊರಟು ನಿಂತ ವೇಳೆಗೆ ಬಿಂದು ಎಲ್ಲ ಬಂಗಾಳದ ಹೆಣ್ಣು ಮಕ್ಕಳಂತೆ ತಾನು ತನ್ನ ಸೆರಗಿಗೆ ಬೆಂಕಿ ಹಚ್ಚಿಕೊಂಡು ಸತ್ತ ಸುದ್ದಿ ಕಿವಿಗೆ ಬೀಳುತ್ತದೆ.
ಬಿಂದುಳನ್ನು ಬದುಕಿಸಲಾಗದ ಆಕೆ ಪುನಃ ತನ್ನ ಮನೆಗೆ ಹೋಗದೆ ರೈಲು ಹತ್ತಿ ಹೊರಟು ಬಿಡುತ್ತಾಳೆ. ಎಲ್ಲೋ ದೂರಕ್ಕೆ ಹೋಗಿ ನದಿಯ ದಡದಲ್ಲಿ ಕುಳಿತು ತನ್ನ ಭಾವನೆಗಳಿಗೆ ಎಂದು ಲೆಕ್ಕಿಸದ ತನ್ನ ಗಂಡನಿಗೆ ಪತ್ರ ಬರೆಯುತ್ತಾಳೆ. ಆ ಪಾತ್ರ ಅಷ್ಟು ದಿನ ತಾನು ತಾಳಿದ್ದ ಮೌನವನ್ನು ಮುರಿಯುತ್ತದೆ. ಸಾವಿರ ಕಟ್ಟಲೆಗಳನ್ನು, ಆಕೆಯ ಮೇಲೆ ಹೇರಲಾದ ಭಾವನಾತ್ಮಕ ಮೌಢ್ಯವನ್ನು ದ್ವಂಸ ಮಾಡಿತು ಆ ಮೌನ ಮುರಿದ ಪತ್ರ. – ಸುಷ್ಮಾ ಮಹಾಂತೇಶ ಸವಸುದ್ದಿ
Published On - 5:37 pm, Sat, 9 July 22