Column: Qatar Mail; ಫಿಫಾ ವಿಶ್ವಕಪ್ ಕ್ರೀಡಾಂಗಣಗಳೊಳಗೊಂದು ಸುತ್ತು

FIFA World Cup 2022 : ಮೂರ್ನಾಲ್ಕು ವರ್ಷದಲ್ಲಿ ಭಾರತಕ್ಕೆ ಮರಳಿ ಹೋಗುವುದು ಎಂದುಕೊಂಡು ಒಂದು ದಶಕದ ಹಿಂದೆ ಕತಾರಿಗೆ ಹೊಸದಾಗಿ ಬಂದವರು ವಿಶ್ವಕಪ್ ನೋಡಿಕೊಂಡೇ ದೇಶ ಬಿಡುವುದು ಎಂದು ನಿರ್ಧರಿಸಿದ ಸಾವಿರಾರು ಅಲ್ಲದಿದ್ದರೂ, ಆ ನೂರಾರು ಮಂದಿಯಲ್ಲಿ ನಾವೂ ಒಬ್ಬರು.

Column: Qatar Mail; ಫಿಫಾ ವಿಶ್ವಕಪ್ ಕ್ರೀಡಾಂಗಣಗಳೊಳಗೊಂದು ಸುತ್ತು
Follow us
TV9 Web
| Updated By: ಪೃಥ್ವಿಶಂಕರ

Updated on:Jul 08, 2022 | 10:56 PM

Qatar Mail: ಒಂದು ದಶಕದಿಂದ ವಿಶ್ವವೇ ಕಾದು ಕುಳಿತಿದ್ದ ವರ್ಷ ಇಲ್ಲಿದೆ. ಇನ್ನು ಐದು ತಿಂಗಳಿಗೆ, ಜಗತ್ತಿನ ಮೂಲೆ ಮೂಲೆಗಳಿಂದ ಬರುವ ಫುಟ್ಬಾಲ್ ತಂಡಗಳನ್ನು, ಅಭಿಮಾನಿಗಳನ್ನು ಸ್ವಾಗತಿಸಲು ಕತಾರ್ ಸಜ್ಜಾಗಿ ನಿಂತಿದೆ. ವಿವಿಧ ದೇಶಗಳ 32 ಟೀಮುಗಳು ನವೆಂಬರ್ 21ರ ಸೋಮವಾರದಿಂದ ಡಿಸೆಂಬರ್ 18 ಭಾನುವಾರದವರೆಗೆ ನಡೆಯುವ 22ನೇ ಅಂತಾರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್ (fifa) ವಿಶ್ವಕಪ್ 2022ರಲ್ಲಿ ಭಾಗವಹಿಸಲಿವೆ. ಅರಬ್ ರಾಷ್ಟ್ರವೊಂದರಲ್ಲಿ ಪ್ರಥಮ ಬಾರಿಗೆ ಫಿಫಾ ವಿಶ್ವಕಪ್ ನಡೆಯುತ್ತಿರುವ ಹೆಗ್ಗಳಿಕೆ ಒಂದೆಡೆಯಾದರೆ, ಇಡೀ ಏಷ್ಯಾ ಖಂಡದಲ್ಲಿ ಇದು ನಡೆಯುತ್ತಿರುವುದು ಎರಡನೆಯ ಸಲ. 2002ರಲ್ಲಿ ಮೊದಲ ಬಾರಿಗೆ ದಕ್ಷಿಣ ಕೊರಿಯಾ ಮತ್ತು ಜಪಾನ್​ನಲ್ಲಿ 17ನೇ ವಿಶ್ವಕಪ್ ಅನ್ನು ಆಯೋಜಿಸಲಾಗಿತ್ತು. 2022ರ ವಿಶ್ವಕಪ್​ನ ಮತ್ತೊಂದು ವಿಶೇಷತೆಯೆಂದರೆ, ಇದೇ ಕೊನೆಯ ಬಾರಿಗೆ ಕಪ್​ಗಾಗಿ 32 ತಂಡಗಳು ಭಾಗವಹಿಸಲಿದ್ದಾವೆ. ಅಮೇರಿಕಾ ಸಂಯುಕ್ತ ಸಂಸ್ಥಾನ, ಮೆಕ್ಸಿಕೋ ಹಾಗೂ ಕೆನಡಾದಲ್ಲಿ ಜರುಗುವ 2026ರ ವಿಶ್ವಕಪ್​ನಲ್ಲಿ 48 ತಂಡಗಳು ಭಾಗವಹಿಸಲಿದ್ದಾವೆ.

ಚೈತ್ರಾ ಅರ್ಜುನಪುರಿ, ಪತ್ರಕರ್ತೆ (Chaitra Arjunpuri)

(ಪತ್ರ 14)

ಇದನ್ನೂ ಓದಿ
Image
Column: Qatar Mail; ಮದ್ದೂರಿನಿಂದ ಕತಾರದತನಕ ಚಿನ್ನದ ಮಾಯಾಜಿಂಕೆಯ ಬೆನ್ನಟ್ಟಿ
Image
Column: Qatar Mail; ಅರಬ್ ರಾಷ್ಟ್ರಗಳಲ್ಲಿ ದೇವರನಾಡಿನ ದೇವತೆಯರು
Image
Qatar Mail : ಕಚ್ಚಾ ತೈಲದ ಬೆಲೆ ಇಳಿದಾಗ ಸಂಕಷ್ಟಕ್ಕೀಡಾಗುವ ಗಲ್ಫ್​ನ ಅನಿವಾಸಿ ಭಾರತೀಯರು

ದುಬಾರಿ ಫಿಫಾ ವಿಶ್ವಕಪ್

ಡಿಸೆಂಬರ್ 2010ರಲ್ಲಿ ವಿಶ್ವಕಪ್ ಬಿಡ್ಡಿಂಗ್ ಗೆದ್ದ ಕತಾರ್ ಎನ್ನುವ ಪುಟ್ಟ ರಾಷ್ಟ್ರ ಈ ಕಾರ್ಯಕ್ರಮ ಆಯೋಜಿಸುವ ನಿಟ್ಟಿನಲ್ಲಿ ಮೂಲ ಸೌಕರ್ಯಕ್ಕಾಗಿ ಸುಮಾರು 200 ಬಿಲಿಯನ್ ಡಾಲರ್ ಮೊತ್ತವನ್ನು ಖರ್ಚು ಮಾಡಿದೆ ಎಂದು ಫಿಫಾ ವರದಿ ತಿಳಿಸುತ್ತದೆ. ಇದು ಇತಿಹಾಸದಲ್ಲಿ ಅತ್ಯಂತ ದುಬಾರಿ ಫಿಫಾ ವಿಶ್ವಕಪ್ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

ಮೂರ್ನಾಲ್ಕು ವರ್ಷದಲ್ಲಿ ಭಾರತಕ್ಕೆ ಮರಳಿ ಹೋಗುವುದು ಎಂದುಕೊಂಡು ಒಂದು ದಶಕದ ಹಿಂದೆ ಕತಾರಿಗೆ ಹೊಸದಾಗಿ ಬಂದವರು ವಿಶ್ವಕಪ್ ನೋಡಿಕೊಂಡೇ ದೇಶ ಬಿಡುವುದು ಎಂದು ನಿರ್ಧರಿಸಿದ ಸಾವಿರಾರು ಅಲ್ಲದಿದ್ದರೂ, ಆ ನೂರಾರು ಮಂದಿಯಲ್ಲಿ ನಾವೂ ಒಬ್ಬರು. ಕಣ್ಣೆದುರಿಗೇ ನೋಡ ನೋಡುತ್ತಿದ್ದಂತೆಯೇ ಒಂದೊಂದಾಗಿ ವಿಶ್ವಕಪ್​ಗಾಗಿ ಸುಸಜ್ಜಿತ ಕ್ರೀಡಾಂಗಣಗಳು ದೇಶದಲ್ಲಿ ತಲೆಯೆತ್ತುತ್ತಿದ್ದಂತೆಯೇ ದೇಶವಾಸಿಗಳ ಮನದಲ್ಲೇನೋ ಹೇಳಿಕೊಳ್ಳಲಾರದಂತಹ ಪುಳಕ. ಪರೀಕ್ಷಾ ರೂಪದಲ್ಲಿ ಸಜ್ಜಾದ ಕೆಲವು ಕ್ರೀಡಾಂಗಣಗಳಲ್ಲಿ ಅರಬ್ ಕಪ್ ಪಂದ್ಯಾವಳಿಯನ್ನು ನಡೆಸಿದಾಗ ನಾವೂ ಮುಗಿ ಬಿದ್ದು ಟಿಕೆಟ್​ಗಳನ್ನು ಖರೀದಿಸಿದೆವು. ಫುಟ್ಬಾಲ್​ನ ಎಬಿಸಿಡಿಯೂ ತಿಳಿಯದ ನಾನು ಅರಬ್ ಕಪ್ ನೋಡಲು ಹೋದದ್ದು ಅಸಲಿಗೆ ಕ್ರೀಡಾಂಗಣ ನೋಡಲೇ ಹೊರತು ಕ್ರೀಡೆಗಾಗಿ ಅಲ್ಲ ಎನ್ನುವುದು ಹತ್ತಿರದ ಸ್ನೇಹಿತರೆಲ್ಲರಿಗೂ ತಿಳಿದ ವಿಷಯವೇ ಆಗಿತ್ತು. ವಿಶ್ವಕಪ್ ಸಮಯದಲ್ಲಿ ಟಿಕೆಟ್ ಸಿಗದೇ ಹೋದರೆ ಎನ್ನುವ ದೂರಾಲೋಚನೆ ಸಹ ಅದರ ಹಿಂದಿತ್ತು ಎನ್ನುವುದೂ ಸತ್ಯ. ವಿಶ್ವಕಪ್ ಟಿಕೆಟ್​ಗಳನ್ನು ಆನ್​ಲೈನ್​ನಲ್ಲಿ ಮಾತ್ರ ಖರೀದಿಸಲು ಸಾಧ್ಯ, ಅದೂ ಅದೃಷ್ಟವಿದ್ದವರಿಗೆ ಮಾತ್ರ, ಎನ್ನುವುದು ಅರಿವಾಗುವುದಕ್ಕೆ ಅರಬ್ ಕಪ್ ಮುಗಿದ ಮೇಲೆ ಮೂರ್ನಾಲ್ಕು ತಿಂಗಳುಗಳೇ ಬೇಕಾದವು.

ಆನ್ಲೈನ್​ನಲ್ಲಿ ಟಿಕೆಟ್

ಆನ್ಲೈನ್​ನಲ್ಲಿ ಟಿಕೆಟ್ ಮಾರಾಟದ ಪ್ರಕ್ರಿಯೆ ಏಪ್ರಿಲ್ 5ರಂದು ಪ್ರಾರಂಭವಾಗಿ 28ರಂದು ಕೊನೆಗೊಂಡಿತ್ತು. 80,000 ಆಸನಗಳಿರುವ ಲುಸೈಲ್ ಕ್ರೀಡಾಂಗಣದಲ್ಲಿ ಜರುಗುವ ಅಂತಿಮ ಪಂದ್ಯಾವಳಿಗೆ 30 ಲಕ್ಷಕ್ಕೂ ಹೆಚ್ಚು ಮಂದಿ ಟಿಕೆಟ್​ಗಳ ಬೇಡಿಕೆಯಿಟ್ಟಿದ್ದರು. ಇದರಿಂದಾಗಿ ಲಾಟರಿ ಮೂಲಕ ಟಿಕೆಟ್​ಗಳನ್ನು ವಿತರಿಸಲು ಫಿಫಾ ನಿರ್ಧರಿಸಿ, ಮೇ ಕೊನೆಯ ವಾರದಲ್ಲಿ 80,000 ಅದೃಷ್ಟವಂತರ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿತು. ಈ ಟಿಕೆಟ್​ಗಳಿಗಾಗಿ ಅತ್ಯಂತ ಹೆಚ್ಚು ಬೇಡಿಕೆ ಬಂದದ್ದು ಅಮೆರಿಕಾ, ಇಂಗ್ಲೆಂಡ್ ಮತ್ತು ಕತಾರ್ ದೇಶಗಳಿಂದ. ಭಾರತ ಈ ಬೇಡಿಕೆ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ಕತಾರ್ ತನ್ನ ನಿವಾಸಿಗಗಳಿಗಾಗಿ ಒಂದು ಹೆಜ್ಜೆ ಮುಂದೆ ಹೋಗಿ ಗುಂಪು-ಹಂತದ ಟಿಕೆಟ್​ಗಳಿಗೆ ಕೇವಲ 40 ಕತಾರಿ ರಿಯಾಲ್ (ರೂ. 868) ಶುಲ್ಕವನ್ನು ನಿಗದಿ ಪಡಿಸಿದೆ. ಇದು 1986ರಲ್ಲಿ ಮೆಕ್ಸಿಕೋದಲ್ಲಿ ನಡೆದ ವಿಶ್ವಕಪ್‌ನ ನಂತರ ಆತಿಥೇಯ ರಾಷ್ಟ್ರವು ತನ್ನ ನಿವಾಸಿಗಳಿಗಾಗಿ ನಿಗದಿ ಪಡಿಸಿರುವ ಅತ್ಯಂತ ಕಡಿಮೆ ದರವಾಗಿದೆ.

ಒಂದೆಡೆ ಗುಂಪು-ಹಂತದ ಟಿಕೆಟ್​ಗಳು ಅಗ್ಗವಾದರೆ, ಫೈನಲ್​ನ ಟಿಕೆಟ್​ಗಳು ಬಹಳವೇ ತುಟ್ಟಿ. 2018ರ ವಿಶ್ವಕಪ್​ನ ಟಿಕೆಟ್ ಬೆಲೆಗೆ ಹೋಲಿಸಿದರೆ 2022ರ ಟಿಕೆಟ್ ಬೆಲೆ ಬಹಳ ದುಬಾರಿ, ಅಂದರೆ ಶೇಕಡಾ 46ರಷ್ಟು ತುಟ್ಟಿಯಾಗಿದೆ. 2018ರ ರಷ್ಯಾದ ವಿಶ್ವಕಪ್​ನಲ್ಲಿ ಅತ್ಯಂತ ದುಬಾರಿ ಟಿಕೆಟ್ ಬೆಲೆ $1,100 (ರೂ. 86,845) ಆದರೆ ಕತಾರ್​ನ ಲುಸೈಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್​ನ ಟಿಕೆಟ್ ಬೆಲೆ $1,607 (5,850 ಕತಾರಿ ರಿಯಾಲ್ ಅಥವಾ ರೂ.1,26,884).

ಫೈನಲ್ ಪಂದ್ಯದ ಟಿಕೆಟ್ ಬೆಲೆ 2,200 ಕತಾರಿ ರಿಯಾಲ್ (ರೂ. 47,717) ನಿಂದ ಪ್ರಾರಂಭವಾದರೆ, ಲೀಗ್ ಹಂತದ ಪಂದ್ಯದ ಟಿಕೆಟ್ ಬೆಲೆ 250 ರಿಯಾಲ್ (ರೂ. 5,422) ನಿಂದ ಶುರುವಾಗುತ್ತದೆ. ಮಗುವಿನ ವಯಸ್ಸನ್ನು ಲೆಕ್ಕಿಸದೆಯೇ ಎಲ್ಲಾ ಟಿಕೆಟ್ ದರಗಳು ವಯಸ್ಕರು ಮತ್ತು ಮಕ್ಕಳಿಬ್ಬರಿಗೂ ಅನ್ವಯಿಸುತ್ತವೆ.

ವಿಶ್ವ ಕಪ್ ಕ್ರೀಡಾಂಗಣಗಳು

ಸುಮಾರು ಮೂರು ಮಿಲಿಯನ್​ಗಿಂತಲೂ ಕಡಿಮೆ ವಾಸಿಗಳನ್ನು ಹೊಂದಿರುವ ಕತಾರ್ ವಿಶ್ವ ಕಪ್ ಪಂದ್ಯಾವಳಿಯನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸುವ ಹೊಣೆಗಾರಿಕೆಯನ್ನು ಹೊತ್ತಿದೆ. ಆ ನಿಟ್ಟಿನಲ್ಲಿ ಪಂದ್ಯಾವಳಿಯ ಸಂಘಟಕರು ಮಾಡ್ಯುಲರ್ ಅಂಶಗಳೊಂದಿಗೆ ಕ್ರೀಡಾಂಗಣಗಳನ್ನು ನಿರ್ಮಿಸಿದ್ದಾರೆ. ವಿಶ್ವ ಕಪ್ ಮುಗಿದ ಬಳಿಕ ಸುಮಾರು 1,70,000 ಆಸನಗಳನ್ನು ತೆಗೆದು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ನೆರವಾಗುವಂತೆ ಕೊಡುಗೆ ನೀಡುವ ಯೋಜನೆಯನ್ನು ಕತಾರ್ ಹೊಂದಿದೆ. ಇದರ ಜೊತೆಗೆ ಹಿಂದುಳಿದ ರಾಷ್ಟ್ರಗಳಲ್ಲಿ 22 ಹೊಸ ಕ್ರೀಡಾಂಗಣಗಳನ್ನು ರಚಿಸಿಕೊಡುವ ಉದ್ದೇಶವೂ ಇದೆ. ಇದಾದ ಬಳಿಕ ದೇಶದ ಮನರಂಜನಾ ಅಗತ್ಯಗಳಿಗೆ ಸೂಕ್ತವಾಗುವಂತೆ ಕತಾರಿನಲ್ಲಿ 20,000-25,000 ಆಸನಗಳ ಕ್ರೀಡಾಂಗಣಗಳು ಮಾತ್ರ ಉಳಿದುಕೊಳ್ಳುತ್ತವೆ.

2022ರ ವಿಶ್ವಕಪ್ ಫುಟ್ಬಾಲ್ ಅಭಿಮಾನಿಗಳಿಗೆ ದಿನಕ್ಕೆ ಒಂದಕ್ಕಿಂತ ಹೆಚ್ಚು ಆಟಗಳಿಗೆ ಹಾಜರಾಗಲು ಅನುವು ಮಾಡಿಕೊಡುತ್ತದೆ. ಇಲ್ಲಿನ ತಾಪಮಾನಕ್ಕೆ ಹೊಂದಾಣಿಕೆಯಾಗುವಂತೆ ಪ್ರತಿ ಕ್ರೀಡಾಂಗಣ, ತರಬೇತಿ ಸೌಲಭ್ಯ ಮತ್ತು ಫ್ಯಾನ್ ವಲಯಗಳಲ್ಲಿ ಸೌರ-ಚಾಲಿತ ಕೂಲಿಂಗ್ ತಂತ್ರಜ್ಞಾನವನ್ನು ಅಳವಡಿಸಿ ತಾಪಮಾನವನ್ನು 27 ಡಿಗ್ರಿ ಸೆಲ್ಸಿಯಸ್ ಇರುವಂತೆ ಏರ್ಪಾಟು ಮಾಡಲಾಗಿದೆ. ಎಲ್ಲಾ ಕ್ರೀಡಾಂಗಣಗಳು ಪರಿಸರ ಸ್ನೇಹಿಯಾಗಿದ್ದು, ಅವುಗಳ ತಾಪಮಾನವನ್ನು ನಿಯಂತ್ರಿಸಬಹುದಾಗಿದೆ.

ಅಲ್ ಬೈತ್ ಕ್ರೀಡಾಂಗಣ: ಇದು ಅಲ್-ಖೋರ್ ನಗರದಲ್ಲಿದ್ದು 60,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. ಕತಾರ್ ಮತ್ತು ಇತರೆ ಗಲ್ಫ್ ರಾಷ್ಟ್ರಗಳಲ್ಲಿ ಅಲೆಮಾರಿ ಜನರು ಐತಿಹಾಸಿಕವಾಗಿ ಬಳಸುತ್ತಿದ್ದ ‘ಬೈತ್ ಅಲ್ ಶಾರ್’ ಎನ್ನುವ ಡೇರೆಗಳಿಂದ ಸ್ಫೂರ್ತಿ ಪಡೆದು ಹೆಸರಿಸಲಾದ ಈ ಕ್ರೀಡಾಂಗಣ ವಿಶಿಷ್ಟವಾದ ದೈತ್ಯ ಡೇರೆಯನ್ನೇ ಹೋಲುತ್ತದೆ. ಆರಂಭಿಕ ಮತ್ತು ಸೆಮಿ-ಫೈನಲ್​ನ ಎಲ್ಲಾ ಪಂದ್ಯಗಳು ಜರುಗುವ ಈ ಕ್ರೀಡಾಂಗಣದ ವಿನ್ಯಾಸ ಕತಾರ್​ನ ಹಿಂದಿನ ಮತ್ತು ಪ್ರಸ್ತುತ ದಿನಗಳ ಸಂಕೇತವಾಗಿದೆ. ಪಂದ್ಯಾವಳಿಯ ಬಳಿಕ ಕ್ರೀಡಾಂಗಣದ ಮೇಲಿನ ಭಾಗವನ್ನು ಬೇರ್ಪಡಿಸಿ, ಆಸನಗಳನ್ನು ಇತರೆ ದೇಶಗಳಿಗೆ ಕೊಡುಗೆಯಾಗಿ ನೀಡಲು ನಿರ್ಧರಿಸಲಾಗಿದೆ.

ಅಹ್ಮದ್ ಬಿನ್ ಅಲಿ ಕ್ರೀಡಾಂಗಣ: ದೋಹಾದ ಹೊರಭಾಗದ ಅಲ್-ರಯಾನ್ ನಲ್ಲಿರುವ ಈ ಕ್ರೀಡಾಂಗಣ ಮಾಡ್ಯುಲರ್ ಅಂಶಗಳನ್ನು ಬಳಸಿಕೊಂಡು 40,000 ಪ್ರೇಕ್ಷಕರಿಗೆ ಪಂದ್ಯಾವಳಿ ನೋಡುವ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಕತಾರಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಕ್ರೀಡಾಂಗಣದಲ್ಲಿ ಗುಂಪು ಪಂದ್ಯಗಳು ಮತ್ತು 16ರ ಸುತ್ತು ಜರುಗುತ್ತವೆ. ಪಂದ್ಯಾವಳಿಯ ಬಳಿಕ ಸುಮಾರು 20,000 ಆಸನಗಳನ್ನು ಇಲ್ಲಿಂದ ತೆಗೆದು ಇತರೆ ರಾಷ್ಟ್ರಗಳ ಫುಟ್ಬಾಲ್ ಅಭಿವೃದ್ಧಿ ಯೋಜನೆಗಳಿಗೆ ನೀಡಲಾಗುತ್ತದೆ.

ಅಲ್-ಜನೌಬ್ ಕ್ರೀಡಾಂಗಣ: ರಾಜಧಾನಿ ದೋಹಾದಿಂದ 18 ಕಿಲೋಮೀಟರ್ ದೂರದ ಅಲ್-ವಕ್ರಾ ನಗರದಲ್ಲಿ ನಿರ್ಮಿಸಲಾಗಿರುವ ಈ ಕ್ರೀಡಾಂಗಣ 40,000 ಪ್ರೇಕ್ಷಕರಿಗೆ ಪಂದ್ಯಾವಳಿ ನೋಡುವ ಅವಕಾಶವನ್ನು ಕಲ್ಪಿಸುವ ಸಾಮರ್ಥ್ಯ ಹೊಂದಿದೆ. ಇದರ ರಚನೆ ಸಾಂಪ್ರದಾಯಿಕ ಧೌ ದೋಣಿಗಳ ಹಾಯಿಗಳಿಂದ ಪ್ರೇರಿತವಾಗಿದ್ದು, ಇದನ್ನು ಗಲ್ಫ್ ಪ್ರದೇಶದಲ್ಲಿ ಮುತ್ತುಗಳನ್ನು ಹೊರತೆಗೆಯುವ ಡೈವರ್​ಗಳು ಬಳಸುತ್ತಾರೆ. ವಕ್ರರೇಖೆಯ ಮೇಲ್ಛಾವಣಿ ಮತ್ತು ಹೊರಭಾಗ ಅಲ್-ವಕ್ರಾ ನಗರದ ಸಮುದ್ರಯಾನದ ಇತಿಹಾಸವನ್ನು ಬಿಂಬಿಸುತ್ತದೆ. ಮಾತ್ರವಲ್ಲ, ವೀಕ್ಷಕರಿಗೆ ಹಡಗಿನಲ್ಲಿ ಕುಳಿತಿರುವ ಭಾವನೆಯನ್ನು ನೀಡುತ್ತದೆ. ಇದು ಸೈಕಲ್ ಮತ್ತು ಕುದುರೆ ಸವಾರಿಯ ಹಾದಿಗಳು, ಅಂಗಡಿಗಳು, ರೆಸ್ಟೋರೆಂಟ್​ಗಳು ಮತ್ತು ಕ್ರೀಡಾ ಕ್ಲಬ್​ಗಳ ಸವಲತ್ತನ್ನೂ ಹೊಂದಿರುವ ವಿಶಾಲವಾದ ಕ್ರೀಡಾ ಸಂಕೀರ್ಣದ ಭಾಗವಾಗಿದೆ. ಫಿಫಾ ವಿಶ್ವಕಪ್​ನ ಗುಂಪು ಪಂದ್ಯಗಳು ಮತ್ತು 16 ರ ಸುತ್ತು ಮುಗಿದ ಬಳಿಕ ಕ್ರೀಡಾಂಗಣದ ಸಾಮರ್ಥ್ಯವನ್ನು 20,000 ಆಸನಗಳಿಗೆ ಇಳಿಸಿ, ಕತಾರ್​ನ ಲೀಗ್ ಪಂದ್ಯಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ.

ಅಲ್-ಜನೌಬ್ ಕ್ರೀಡಾಂಗಣ

ಖಲೀಫಾ ಅಂತರಾಷ್ಟ್ರೀಯ ಕ್ರೀಡಾಂಗಣ: 1976ರಲ್ಲಿ ನಿರ್ಮಿಸಲಾದ ಈ ಕ್ರೀಡಾಂಗಣವನ್ನು 2017ರಲ್ಲಿ ನವೀಕರಿಸಿ, 45,000 ಪ್ರೇಕ್ಷಕರ ಸಾಮರ್ಥ್ಯಕ್ಕೆ ವಿಸ್ತರಿಸಲಾಯಿತು. 2006ರಲ್ಲಿ ಕತಾರ್ ಆಯೋಜಿಸಿದ್ದ ಏಷ್ಯನ್ ಕ್ರೀಡಾಕೂಟದ ಕೇಂದ್ರಬಿಂದುವಾಗಿದ್ದ ಈ ಅಂತರಾಷ್ಟ್ರೀಯ ಕ್ರೀಡಾಂಗಣವನ್ನು ವಿಶ್ವಕಪ್​ಗಾಗಿ ಮರುವಿನ್ಯಾಸಗೊಳಿಸಲಾಗಿದೆ. ಗುಂಪು ಪಂದ್ಯಗಳು, 16ರ ಸುತ್ತು, ಮತ್ತು ಮೂರನೇ ಸ್ಥಾನದ ಆಟಕ್ಕಾಗಿ ಪ್ಲೇ ಆಫ್ ಜರುಗುವ, ಭಾಗಶಃ ಮುಚ್ಚಿದ ಸ್ಟ್ಯಾಂಡ್​ಗಳನ್ನು ಒಳಗೊಂಡಿರುವ ಈ ಕ್ರೀಡಾಂಗಣ ಆಸ್ಪೈರ್ ವಲಯದ ಕೇಂದ್ರಬಿಂದುವಾಗಿದೆ.

ಕತಾರ್ ಫೌಂಡೇಶನ್ ಕ್ರೀಡಾಂಗಣ: ಅಲ್-ರಯಾನ್ ನಲ್ಲಿ ಹಲವಾರು ವಿಶ್ವ ದರ್ಜೆಯ ವಿಶ್ವವಿದ್ಯಾಲಯಗಳನ್ನು ಹೊಂದಿರುವ ಎಜುಕೇಶನ್ ಸಿಟಿ ಕತಾರ್​ನ ಕೇಂದ್ರಬಿಂದುಗಳಲ್ಲಿ ಪ್ರಮುಖವಾವಾದದ್ದು. ಗುಂಪು ಪಂದ್ಯಗಳು, 16ರ ಸುತ್ತು, ಮತ್ತು ಕ್ವಾರ್ಟರ್-ಫೈನಲ್ ಜರುಗುವ, 40,000 ಪ್ರೇಕ್ಷಕರು ಕುಳಿತುಕೊಳ್ಳಬಹುದಾದ, ಮೊನಚಾದ ವಜ್ರದ ರೂಪದಲ್ಲಿರುವ ಈ ಕ್ರೀಡಾಂಗಣವನ್ನು ಎಜುಕೇಶನ್ ಸಿಟಿಯ ವಿಶ್ವವಿದ್ಯಾಲಯಗಳ ನಡುವಿನಲ್ಲಿ ನಿರ್ಮಿಸಲಾಗಿದೆ. ವಿಶ್ವ ಕಪ್ ಮುಗಿದ ಬಳಿಕ ವಿಶ್ವವಿದ್ಯಾಲಯಗಳ ಅಥ್ಲೆಟಿಕ್ ತಂಡಗಳ ಬಳಕೆಗಾಗಿ 25,000 ಆಸನಗಳನ್ನು ಉಳಿಸಿಕೊಂಡು ಇತರೆ ಆಸನಗಳನ್ನು ಬೇರೆ ರಾಷ್ಟ್ರಗಳಿಗೆ ಕೊಡುಗೆಯಾಗಿ ನೀಡಲಾಗುತ್ತದೆ.

ಲುಸೈಲ್ ಕ್ರೀಡಾಂಗಣ: ಲುಸೈಲ್ ಸಿಟಿಯ ಭಾಗವಾಗಿರುವ ಲುಸೈಲ್ ಕ್ರೀಡಾಂಗಣ ಕತಾರ್ ವಿಶ್ವಕಪ್​ನ ಬಹು ಮುಖ್ಯ ಕ್ರೀಡಾಂಗಣಗಳಲ್ಲಿ ಒಂದಾಗಿದೆ. 80,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿರುವ ಈ ಕ್ರೀಡಾಂಗಣದಲ್ಲಿ 2022ರ ಪಂದ್ಯಾವಳಿಯ ಅಂತಿಮ ಸಮಾರಂಭವನ್ನು ಆಯೋಜಿಸಲಾಗುತ್ತದೆ.

974 ಕ್ರೀಡಾಂಗಣ: ಹಡಗಿನ ಕಂಟೈನರ್​ಗಳನ್ನು ಬಳಸಿಕೊಂಡು ನಿರ್ಮಿಸಲಾದ ಈ ಕ್ರೀಡಾಂಗಣ ಜಗತ್ತಿನಲ್ಲೇ ವಿಶಿಷ್ಟವಾದದ್ದು. ಈ ಹಿಂದೆ ರಾಸ್ ಅಬು ಅಬೌದ್ ಎಂದು ಕರೆಯಲಾಗುತ್ತಿದ್ದ ಇದು ಫೀಫಾ ವಿಶ್ವಕಪ್​ನ ಏಳನೇ ಕ್ರೀಡಾಂಗಣ. ಇದರ ವಿಶಿಷ್ಟ ಹೆಸರಿನ ಹಿಂದೆ ಅದರ ನಿರ್ಮಾಣದಲ್ಲಿ ಬಳಸಲಾಗಿರುವ ಹಡಗಿನ ಕಂಟೈನರ್​ಗಳ ಸಂಖ್ಯೆ ಮತ್ತು ಕತಾರ್​ನ ಅಂತರಾಷ್ಟ್ರೀಯ ಡಯಲಿಂಗ್ ಕೋಡ್ ಸಹ ಸೇರಿದೆ. ಈ ಕ್ರೀಡಾಂಗಣದಲ್ಲಿ ವಿಶ್ವಕಪ್​ನ ಏಳು ಪಂದ್ಯಗಳನ್ನು ಆಯೋಜಿಸಲಾಗುತ್ತದೆ. 40,000 ಪ್ರೇಕ್ಷಕರಿಗೆ ಗುಂಪು ಪಂದ್ಯಗಳು ಮತ್ತು 16ರ ಸುತ್ತು ನೋಡುವ ಅವಕಾಶ ಕಲ್ಪಿಸಿರುವ ಈ ಕ್ರೀಡಾಂಗಣ ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಲವೇ ನಿಮಿಷಗಳ ದೂರದಲ್ಲಿದೆ. ಇದನ್ನು ವಿಶ್ವಕಪ್ ಮುಗಿದ ನಂತರ ಸಂಪೂರ್ಣವಾಗಿ ಕಿತ್ತು ಹಾಕಿ, ನಿರ್ಮಾಣದಲ್ಲಿ ಬಳಸಲಾಗಿರುವ ವಸ್ತುಗಳನ್ನು ಮರುಬಳಕೆ ಮಾಡಲಾಗುತ್ತದೆ.

974 ಕ್ರೀಡಾಂಗಣ

ಅಲ್-ಥುಮಾಮಾ ಕ್ರೀಡಾಂಗಣ: ಈ ಕ್ರೀಡಾಂಗಣದ ವಿನ್ಯಾಸ ಅರಬ್ ಜಗತ್ತಿನಲ್ಲಿ ಸಾಂಪ್ರದಾಯಿಕ ‘ಗಹಫಿಯ’ (ಘುತ್ರಾ ಮತ್ತು ಎಗಲ್ ಕೆಳಗೆ ಪುರುಷರು ಮತ್ತು ಹುಡುಗರು ಧರಿಸುವ ಟೋಪಿ)ದಿಂದ ಸ್ಫೂರ್ತಿ ಪಡೆದಿದೆ. ಈ ವಿನ್ಯಾಸ ಅರಬ್ ನಾಗರಿಕತೆಯ ಆಳ ಮತ್ತು ಅರಬ್ ದೇಶಗಳ ನಡುವೆ ಇರುವ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಎತ್ತಿ ಹಿಡಿಯುತ್ತದೆ. ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಲವು ನಿಮಿಷಗಳ ದೂರದಲ್ಲಿರುವ ಇದು 40,000 ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ವಿಶ್ವಕಪ್​ನ ಗುಂಪು ಪಂದ್ಯಗಳು, 16ರ ಸುತ್ತು, ಮತ್ತು ಕ್ವಾರ್ಟರ್ ಫೈನಲ್‌ಗಳು ಜರುಗಿದ ಬಳಿಕ ಆಸನಗಳನ್ನು 20,000ಕ್ಕೆ ಇಳಿಸಿ, ಉಳಿದ ಆಸನಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕೊಡುಗೆ ನೀಡಲಾಗುತ್ತದೆ.

ಅಲ್-ಥುಮಾಮಾ ಕ್ರೀಡಾಂಗಣ

ವಿಸೂ: Xe ವಿನಿಮಯ ದರ: ೧ ಕತಾರಿ ರಿಯಾಲ್ = ರೂ. 21.69

Published On - 10:44 pm, Fri, 8 July 22