ಸಿಡ್ನಿ ಡೈರಿ – Sydney Diary – 4 : ಆತ ಮೊದಲು ಹೌಹಾರಿದ್ದೇ ಹೆಂಡದ ವಿಷಯ ಕೇಳಿ! ‘ಏನು? ಮದುವೆಯಲ್ಲಿ ಮದ್ಯಪಾನ ಮಾಡುವುದಿಲ್ಲವಾ? ಮದುಮಕ್ಕಳಿಗೂ ಕುಡಿಯಲು ಅವಕಾಶವಿಲ್ಲವಾ?’ ಅಂತ ಕೇಳಿದ. ಪಕ್ಕದಲ್ಲೇ ಕೂತಿದ್ದ ಎರಿಕ್ “ಕನಿಷ್ಟ ಪಕ್ಷ ಮದುಮಗ ಮದುಮಗಳಿಗಾದರೂ ಕುಡಿಯಲು ಅವಕಾಶ ಕೊಡಬೇಕಪ್ಪಾ… ಇಲ್ಲವಾದರೆ ಅದೆಂತಾ ಮದುವೆ? ತೀರಾ ತಮ್ಮ ಮದುವೆಯನ್ನು ತಮಗೇ ಸಂಭ್ರಮಿಸಲು ಅವಕಾಶವಿಲ್ಲವಾ?” ಅಂತ ಕೇಳಿದ. ಮದುವೆ ಹಾಳಾಗಿ ಹೋಗಲಿ ಬೇರೆ ಸಮಯದಲ್ಲೂ ಕುಟುಂಬದ ಜೊತೆ ಕುಡಿಯುವುದಿಲ್ಲ ನಮ್ಮ ಕಡೆ ಅಂತ ಹೇಳಿದರೆ ಇನ್ನದೆಷ್ಟು ನೊಂದುಕೊಂಡಾರೋ ಅಂದುಕೊಂಡು ಸುಮ್ಮನಾದೆ. ಅದಲ್ಲದೆ ಈ ಜನರಿಗೆ ಅದರಲ್ಲೂ ತೊಂಬತ್ತರಲ್ಲಿ ಹುಟ್ಟಿದ ಪೀಳಿಗೆಯ ಮಕ್ಕಳಿಗೆ ಅರೇಂಜ್ ಮ್ಯಾರೇಜ್ ಅನ್ನುವ ಮದುವೆ ಇರುತ್ತದೆ ಎಂಬ ಪರಿಕಲ್ಪನೆಯೂ ಇರುವುದಿಲ್ಲ. ತಂದೇ ತಾಯಿಗಳು ಮಕ್ಕಳು ಮದುವೆ ಆಗಲೆಬೇಕೆಂದು ಭಾವಿಸುವುದು ಕಡಿಮೆ. ಅವರಿಗೆ ಬೇಕಿದ್ದರೆ ಮಾಡಿಕೊಳ್ಳಲಿ ಇಲ್ಲವೇ ಬಿಡಲಿ ಎಂಬಂತೆ ಇರುತ್ತಾರೆ.
ಶ್ರೀಹರ್ಷ ಸಾಲಿಮಠ
ನನ್ನ ಜೊತೆ ಕೆಲಸ ಮಾಡುವ ಗೆಳೆಯ ಲೊರೆಂಝೋ ಟರ್ಕಿ ಚೆಲುವೆಗೆ ಒಲಿದಿದ್ದ. ಆಕೆಯೂ ತಿರುಗಿ ಒಲಿದಿದ್ದರಿಂದ ಮದುವೆಯವರೆಗೆ ಬಂದಿತ್ತು. ಆತನ ಸ್ವಾತಂತ್ರ್ಯದ ಕಡೆಯ ದಿನಗಳನ್ನು ಆಚರಿಸಲು ಮೆಕ್ಸಿಕನ್ ತಿಂಡಿಮನೆಯೊಂದಕ್ಕೆ ಹೋಗಿದ್ದೆವು. ಈ ಮದುವೆಯ ವಿಶೇಷ ಎಂದರೆ ಆತ ಕ್ರಿಶ್ಚಿಯನ್ ಸಂಸ್ಕೃತಿಯವನು ಮತ್ತು ಆಕೆ ಟರ್ಕಿಯ ಇಸ್ಲಾಮಿಕ್ ಸಂಪ್ರದಾಯದವಳು. ಹಾಗಾಗಿ ಈ ಮದುವೆ ಎರಡೂ ಸಂಸ್ಕೃತಿಗಳ ಸಂಗಮ. ಕಳೆದ ವರ್ಷವೇ ಆತನ ಮದುವೆ ಆಗಬೇಕಿತ್ತು ಆದರೆ ಕೋವಿಡ್ ಹಾವಳಿಯಿಂದ ಒಂದು ವರ್ಷ ಮುಂದಕ್ಕೆ ಹೋಯಿತು. ತಿಂಡಿಮನೆಯಲ್ಲಿ ನಾವು ಮದುವೆಯ ವೈವಿಧ್ಯತೆಯನ್ನು ಮೊದಲೇ ನಮ್ಮ ಮಾತುಗಳ ಮೂಲಕ ಸಂಭ್ರಮಿಸತೊಡಗಿದ್ದೆವು.
ಕ್ರಿಶ್ಚಿಯನ್ ಮದುವೆ ಎಂದರೆ ನಿಶ್ಯಬ್ದ ಶಾಂತ ಸಮತೂಕದ ಮದುವೆ. ಜೋಡಿಗಳು ಪರಸ್ಪರ ಕೈಹಿಡಿದು ಒಬ್ಬರೊಬ್ಬರ ಕಂಗಳಲ್ಲಿ ಕಂಗಳಿಟ್ಟು ಮಂದಗತಿಯ ಸಂಗೀತಕ್ಕೆ ಹೆಜ್ಜೆ ಹಾಕುವುದು. ಟರ್ಕಿ ಮದುವೆ ಎಂದರೆ ಅಬ್ಬರ, ಸಂಗೀತವೂ ಅಬ್ಬರ ಕುಣಿತದಲ್ಲೂ ಉನ್ಮಾದ. ಉಂಡುಟ್ಟು ಊರಿಗೆಲ್ಲಾ ಸಂತೋಷವನ್ನು ಸೂರೆಗೊಳ್ಳುವ ಹಬ್ಬ. ಅದರಲ್ಲೂ ನನ್ನ ಗೆಳೆಯ ತನ್ನ ಮದುವೆಯಲ್ಲಿ ಅತೀ ಹೆಚ್ಚಿನ ವೈವಿಧ್ಯಮಯ ಸಂಸ್ಕೃತಿಗಳು ಪಾಲ್ಗೊಳ್ಳುವುದರ ಬಗ್ಗೆ ಬಹಳ ಸಂಭ್ರಮದಲ್ಲಿದ್ದ. ಹುಡುಗ ಆಸ್ಟ್ರೇಲಿಯನ್ ಕ್ರಿಶ್ಚಿಯನ್, ಹುಡುಗಿ ಟರ್ಕಿಯ ಮುಸ್ಲಿಂ, ಬಂಧುಗಳು ಲೆಬನೀಸ್, ತಾಯಿಯ ಈಗಿನ ತಂದೆ ಅಂದರೆ ಮಲತಂದೆ ಆಫ್ರಿಕನ್, ತಂದೆಯ ಈಗಿನ ಹೆಂಡತಿ ಅಂದರೆ ಮಲತಾಯಿ ಜಪಾನೀಸ್ ಬೌದ್ಧ ಧರ್ಮದವಳು, ಆಫೀಸಿನ ಸಹವರ್ತಿಗಳು ಚೈನೀಸ್, ಇಂಡಿಯನ್, ಯುರೋಪಿಯನ್ ಇತ್ಯಾದಿ. ಇದೇ ವೈವಿಧ್ಯತೆಯ ಬಗ್ಗೆ ಚರ್ಚಿಸುವಾಗ ಇಂಡಿಯನ್ ಮದುವೆಗಳ ಬಗ್ಗೆ ಮಾತು ಬಂತು.
ಆಫೀಸಲ್ಲಿ ಹತ್ತಾರು ಜನ ಇಂಡಿಯನ್ಗಳಿದ್ದರೂ ಎಲ್ಲರೂ ಒಂದೊಂದು ನುಡಿ ಒಂದೊಂದು ಸಂಸ್ಕೃತಿಯ ಬಗ್ಗೆ ಎಲ್ಲರಿಗೂ ಅತೀವ ಕುತೂಹಲ. ಒಬ್ಬ ನಮ್ಮ ಇಂಡಿಯನ್ ಕಲ್ಚರ್ ಹಿಂಗೆ ಅಂದರೆ ಮತ್ತೊಬ್ಬ ಅಲ್ಲ ಆ ಕಡೆ ಹಂಗೆ ಆದರೆ ನಮ್ಮ ಕಡೆ ಹಿಂಗೆ ಅನ್ನುತ್ತಾನೆ. ಬೇರೆ ಸಂಸ್ಕೃತಿಗಳಂತೆ ಒಂದು ಬಟ್ಟಲಲ್ಲಿ ಹಿಡಿದು ಇದು ಹಿಂಗಿದೆ ನೋಡಿಕೊ ಅಂತ ಹೇಳುವಂತಿಲ್ಲವಲ್ಲ ನಮಗೆ! ಅಷ್ಟಕ್ಕೂ “ಇಂಡಿಯನ್” ಎಂಬುದು ಭೌಗೋಳಿಕ ಅಸ್ಮಿತೆಯಲ್ಲ ಅದು ಜನಾಂಗೀಯ ಆಸ್ಮಿತೆ. ಇಲ್ಲಿಯವರನೇಕರ ಪ್ರಕಾರ ನೇಪಾಳ ಬಾಂಗ್ಲಾದೇಶ ಇಂಡಿಯಾ ಪಾಕಿಸ್ಥಾನ ಶ್ರೀಲಂಕಾದವರೆಲ್ಲ ಇಂಡಿಯನ್ನರು. “ನಿಮಗೆ ನಾವು ಕೊರಿಯನ್ ಚೈನೀಸ್ ಜಪಾನೀಸ್ಗಳೆಲ್ಲ ಹೇಗೆ ಒಂದೇ ತರಾ ಕಾಣ್ತೀವೋ ಹಾಗೇ ನೀವು ಕಂದುಬಣ್ಣದವರೆಲ್ಲ ನಮಗೆ ಒಂದೇ ರೀತಿ ಕಾಣ್ತೀರಿ” ಅಂತ ನನ್ನ ಚೈನಾ ಮೂಲದ ಗೆಳೆಯನೊಬ್ಬ ನನಗೆ ಹೇಳಿದ್ದು ಚನ್ನಾಗಿ ನೆನಪಿದೆ.
ಲೊರೆಂಝೋ ಮದುವೆಗಾಗಿ ಸುಮಾರು ಮೂರು ವರ್ಷಗಳಿಂದ ಹಣ ಕೂಡಿಡುತ್ತಿದ್ದ. ಆತನ ಮದುವಣಗಿತ್ತಿಯೂ ಹಣ ಕೂಡಿಡುತ್ತಿದ್ದಳು. ಹೆಚ್ಚಿನ ವಿಷಯಕ್ಕೆ ಹೋಗುವ ಮುನ್ನ ಪಾಶ್ಚಾತ್ಯ ದೇಶಗಳ ಮದುವೆಯ ಕೆಲವು ರೀತಿ ರಿವಾಜುಗಳನ್ನು ಹೇಳಿಬಿಡಬೇಕು. ಇಲ್ಲಿನ ಮದುವೆಗಳೂ ಮತ್ತು ಅಂತ್ಯಸಂಸ್ಕಾರಗಳೂ ಸಹ ಭಯಂಕರ ದುಬಾರಿ. ಹಾಗಾಗಿ ಪ್ರತಿಯೊಂದನ್ನೂ ಸಹ ಲೆಕ್ಕ ಹಾಕಿ ಖರ್ಚು ಮಾಡಬೇಕಾಗುತ್ತದೆ. ಅಷ್ಟಕ್ಕೂ ನಮ್ಮಂಗೆ ಇಲ್ಲಿ ಮದುವೆ ಮತ್ತು ಮನೆ ಎರಡೂ ಸಹ ಇಲ್ಲಿ ಒಬ್ಬನ ಜೀವನದಲ್ಲಿ ಒಮ್ಮೆ ಮಾತ್ರ ನಡೆಯುವ ಪ್ರಸಂಗವಲ್ಲವಲ್ಲ. ಪ್ರತೀ ಬಾರಿ ಮದುವೆಯಾದಾಗಲೂ ಈ ಪರಿ ಖರ್ಚು ಮಾಡುತ್ತಾ ಹೋದರೆ ಜೀವನ ನಡೆಯುವುದು ಹೇಗೆ? ಈ ಖರ್ಚಿನ ಬಗ್ಗೆ ಕೆಲವರು ಎಷ್ಟು ಮುತುವರ್ಜಿ ವಹಿಸುತ್ತಾರೆಂದರೆ ಒಬೊಬ್ಬರಗೆ ಇಂತಿಷ್ಟೇ ಊಟದ ಖೋಟಾ ಎಂದು ನಿಗದಿಯಾಗಿರುತ್ತದೆ. ಹೀಗೆ ಅತಿಥಿಯೊಬ್ಬರು ತಮಗೆ ನಿಗದಿಯಾಗಿದ್ದಕ್ಕಿಂತ ಒಂದೇ ಒಂದು ತುಂಡು ಹೆಚ್ಚುವರಿ ಕೇಕ್ ತಿಂದರೆಂದು ಅವರ ಮನೆಗೆ ‘ನೀವು ಹೆಚ್ಚುವರಿ ತಿಂದದ್ದಕ್ಕಾಗಿ ಆರು ಡಾಲರುಗಳನ್ನು ಕೊಡಬೇಕು’ ಅಂತ ತಿಂದವರ ಮನೆಗೆ ಬಿಲ್ ಕಳಿಸಿದ್ದರು ಮದುಮಕ್ಕಳು! ಈ ಖರ್ಚಿನ ಕಾರಣದಿಂದಾಗಿ ಬರುವ ಅತಿಥಿಗಳ ಪಟ್ಟಿಯೂ ಬಹಳ ಚಿಕ್ಕದಾಗಿರುತ್ತದೆ. ಮುತುವರ್ಜಿಯಿಂದ ಆಯ್ಕೆಯಾದ ಕೆಲವರಿಗೆ ಮಾತ್ರ ಕರೆಯೋಲೆಯಿರುತ್ತದೆ. ಇದೇ ಕಾರಣದಿಂದಾಗಿ ಲೊರೆಂಝೋ ತನ್ನ ಮದುವೆಗೆ ನಮ್ಮನ್ನೆಲ್ಲ ಕರೆಯುವುದು ಅತ್ಯಂತ ಅನುಮಾನವಿತ್ತಾದರೂ ಆತ ಬಂದು ಕರೆಯೋಲೆಯನ್ನು ನನ್ನ ಕೈಗಿತ್ತಾಗ ಬಹಳ ಖುಷಿಯಾಗಿದ್ದು ನಿಜ. ಜೊತೆಗೆ ಕರೋನಾ ಕಾಲವಾದ್ದರಿಂದ ಹೇಳದೆ ಕೇಳದೇ ಇದ್ದಕ್ಕಿದ್ದಂತೆ ಲಾಕ್ಡೌನ್ಗಳು ಬಿದ್ದು ಮದುವೆಗಳು ರದ್ದಾಗುತ್ತಿದ್ದವು ಅಥವಾ ಮುಂದೂಡಲ್ಪಡುತ್ತಿದ್ದವು. ಆಗ ಮಾಡಿದ ಖರ್ಚೆಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತಿತ್ತು.
ಹಿಂಗೆ ಪದೇ ಪದೇ ಮದುವೆಗಳನ್ನು ಮುಂದೂಡಿ ಬೇಸತ್ತಿದ್ದ ಜೋಡಿಯೊಂದು ಲಾಕ್ಡೌನ್ ಅನ್ನು ಲೆಕ್ಕಿಸದೆ ಭರ್ಜರಿಯಾಗಿ ಮದುವೆಯಾಗಿ ಒಂದು “ಸೂಪರ್ ಸ್ಪ್ರೆಡರ್” ಗೆ ಕಾರಣವಾಗಿತ್ತು. ಸರಕಾರ ಅವರಿಗೆ ಹತ್ತು ಸಾವಿರ ಡಾಲರುಗಳಷ್ಟು ದಂಡ ವಿಧಿಸಿತ್ತು. ಮದುವೆ ರದ್ದು ಮಾಡಿ ಲಕ್ಷಾಂತರ ನಷ್ಟ ಮಾಡಿಕೊಳ್ಳುವುದಕ್ಕಿಂತ ಹತ್ತು ಸಾವಿರ ದಂಡ ತೆರುವುದೇ ವಾಸಿ ಅಂತ ಆ ಜೋಡಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿತ್ತು. ಈ ಭಯದ ನಡುವೆ ಅದೃಷ್ಟವಶಾತ್ ಲೊರೆಂಝೋನ ಮದುವೆ ರದ್ದಾಗಲಿಲ್ಲ. ಜೊತೆಗೆ ಹುಡುಗಿಯ ಕಡೆಯವರು ಆತಿಥ್ಯಕ್ಕೆ ಹೆಸರಾದ ಟರ್ಕಿಯವರಾದ್ದರಿಂದ ಮನೆಗೆ ಬಿಲ್ ಬರುವ ಹೆದರಿಕೆ ಇರಲಿಲ್ಲ! ಲೊರೆಂಝೋ ನ ಮದುವೆಯ ಕರೆಯೋಲೆಯಲ್ಲಿ ಅತಿಥಿಗಳಿಗೆ ಕೆಲ ಸೂಚನೆ ಮತ್ತು ಟಿಪ್ಪಣಿಗಳಿದ್ದವು.
ಈ ಕರೆಯೋಲೆ ಇಬ್ಬರಿಗೆ ಮಾತ್ರ.
ಬರುವವರು ಇಷ್ಟನೆಯ ತಾರೀಕಿನೊಳಗೆ ತಮ್ಮ ಬರವನ್ನು ತಿಳಿಸತಕ್ಕದ್ದು. (RSVP)
ಮದುವೆಗೆ ಉಡುಗೊರೆ ಬೇಡ. ಅದನ್ನು ತೆಗೆದುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿಲ್ಲ. ನಮಗೆ ಸಹಾಯ ಮಾಡುವ ಆಸೆಯಿದ್ದರೆ ಮೂಲೆಯಲ್ಲಿ ಒಂದು ಪೆಟ್ಟಿಗೆ ಇಟ್ಟಿರುತ್ತೇವೆ (Wish well). ಅದರಲ್ಲಿ ಕಾಸು ಹಾಕಿ. ಅದನ್ನು ಮನೆಯ ಡೌನ್ ಪೇಮೆಂಟ್ಗೋ ಹನಿಮೂನ್ಗೋ ಬಳಸಿಕೊಳ್ಳುತ್ತೇವೆ. ಇನ್ನು ಕೆಲವರು ಒಂದು ರಿಜಿಸ್ಟರ್ ಮಾಡಿರುತ್ತಾರೆ. ಅದರಲ್ಲಿ ಸಾಕಷ್ಟು ಮುಂಚೆಯೇ ನೀವು ಯಾವ ಉಡುಗೊರೆ ಕೊಡಲಿದ್ದೀರಿ ಎಂದು ಬರೆಯಬೇಕು. ನೀವು ಕೊಡಲಿರುವುದನ್ನು ಬೇರಾರಾದರೂ ಇದಾಗಲೇ ಕೊಡುತ್ತೇವೆ ಅಂತ ದಾಖಲು ಮಾಡಿದ್ದರೆ ನಿಮಗೆ ಉಡುಗೊರೆಯನ್ನು ಬದಲಿಸಲು ಸೂಚಿಸಲಾಗುತ್ತದೆ. ಆತ ಆಹ್ವಾನ ಪತ್ರಿಕೆ ಕೊಡುವಾಗ ನೀವು ಎಷ್ಟು ಜನ ಬರಲಿದ್ದೀರಿ? ಅಂತ ಕೇಳಿಯೇ ಕೊಟ್ಟಿದ್ದ. ಈ RSVP ಎಷ್ಟು ಮುಖ್ಯವೆಂದರೆ ನಾವು ಬರುತ್ತೇವೆ ಅಂತ ಹೇಳಿ ಬರದೇ ಹೋದ ಅತಿಥಿಗಳಿಗೆ ನಿಮ್ಮಿಂದ ಊಟ ಹಾಳಾಗಿದ್ದು ಅದರ ನಷ್ಟವನ್ನು ಭರಿಸಬೇಕು ಅಂತ ನೋಟೀಸ್ ಕಳಿಸಲಾಗಿತ್ತು. ಮದುವೆಗೆ ಹೋದಾಗ ಅಲ್ಲಿ ಬರುವ ಅತಿಥಿಗಳ ಪಟ್ಟಿ ಮತ್ತು ಅವರು ಕೂರಲಿರುವ ಟೇಬಲ್ ಹಾಗೂ ಅವರು ಏನನ್ನು ತಿನ್ನಲು ರಿಜಿಸ್ಟರ್ ಮಾಡಿಕೊಂಡಿದ್ದಾರೆ ಎಂದು ಬರೆಯಲಾಗಿತ್ತು! ಇದು ಈ ಜನಗಳ ಬಾವಿ ಕಪ್ಪೆಯಂತಹ ಮದುವೆ.
ಈಗ ನಮ್ಮ ಮೆಕ್ಸಿಕನ್ ತಿಂಡಿಮನೆಯ ಪಾರ್ಟಿಗೆ ಬರೋಣ. ಬೇರೆ ಬೇರೆ ದೇಶಗಳ ಜನ ಒಟ್ಟಿಗೆ ಕೂತಿರಬೇಕಾದರೆ ಅವರವರ ಸಂಸ್ಕೃತಿಯ ಬಗ್ಗೆ ಮಾತು ಬರುವುದು ಸಹಜವಷ್ಟೇ. ಈ ಇಂಡಿಯನ್ ಮದುವೆಗಳು ಅಂತ ಬಂದಾಗ ಏನಂತ ಹೇಳುವುದು? ಕರ್ನಾಟಕದಲ್ಲೆ ಇಪ್ಪತ್ತು ಮಾದರಿಯ ಮದುವೆಗಳಿವೆ. ಪ್ರತಿ ಮದುವೆಯ ರೀತಿಯನ್ನೂ ಹಿನ್ನೆಲೆಯನ್ನೂ ವಿವರಣೆಯನ್ನೂ ಹೇಳಬೇಕೆಂದರೆ ದೇಶದ ಜಾತಿವ್ಯವಸ್ಥೆಯಿಂದ ಹಿಡಿದು ಇತಿಹಾಸದವರೆಗೆ ವಿವರಣೆ ಕೊಡಬೇಕು. ಅತ್ಯಂತ ಸರಳ ಮದುವೆ ಮಂತ್ರಮಾಂಗಲ್ಯದ ವಿವರಣೆ ಕೊಡಬೇಕೆಂದರೂ ಅದು ಬಂದ ಹಿನ್ನೆಲೆಯನ್ನೂ ಮೊದಲಿದ್ದ ವ್ಯವಸ್ಥೆಯನ್ನೂ ವಿವರಸಬೇಕು. ಜೊತೆಗೆ ಸರಳ ಮದುವೆ ಅಂತ ಹೇಳಿ ಮಂತ್ರಮಾಂಗಲ್ಯ ಮದುವೆಯಾಗಿ ಆಮೇಲೆ ಭರ್ಜರಿಯಾಗಿ ರಿಸೆಪ್ಷನ್ ಮಾಡಿಕೊಳ್ಳುವುದನ್ನು ವಿವರಿಸುವುದು ಹೇಗೆ? ಹಾಗಾಗಿ ಎಲ್ಲ ಮದುವೆಗಳಲ್ಲೂ ಸಾರ್ವತ್ರಿಕವೆನ್ನಬಹುದಾದ ಕೆಲ ಅಂಶಗಳನ್ನು ಮಾತ್ರ ಹೇಳಿದೆವು.
ಮದುವೆ ಹುಡುಗಿಯ ತಂದೆಯ ಜವಾಬ್ದಾರಿ, ಮಗಳ ಮದುವೆಗಾಗಿ ಮೊದಲಿನಿಂದ ಹಣ ಕೂಡಿಟ್ಟು ಜೀವಮಾನದ ಗಳಿಕೆಯನ್ನೆಲ್ಲ ಖರ್ಚು ಮಾಡುತ್ತಾರೆ, ಮದುವೆ ಪವಿತ್ರ ಸಮಾರಂಭವಾದ್ದರಿಂದ ಹೆಂಡ ಕುಡಿಯುವುದಿಲ್ಲ. ಮದುವೆಗೆ RSVP ಇರುವುದಿಲ್ಲ. ಕರೆಯೋಲೆಯಲ್ಲಿ ಇಷ್ಟೇ ಜನ ಬರಬೇಕು ಅಂತ ನಮೂದಿಸಿರುವುದಿಲ್ಲ. ಮದುವೆಗೆ ಇಡಿಯಾಗಿ ಕುಟುಂಬ ಬರುತ್ತದೆ. ಸಾವಿರ ಸಾವಿರಗಳ ಲೆಕ್ಕದಲ್ಲಿ ಮದುವೆಗೆ ಜನ ಬರುತ್ತಾರೆ. ಇಪ್ಪತ್ತರಿಂದ ಮೂವತ್ತು ನಮೂನೆಯ ಊಟಗಳಿರುತ್ತವೆ ಹಾಗೂ ಕೇಳಿದಷ್ಟು ಊಟ ಹಾಕುತ್ತಾರೆ. ಹೆಣ್ಣಿಗೆ ಕುತ್ತಿಗೆಗೆ ತಾಳಿ ಕಟ್ಟಲಾಗುತ್ತದೆ ಇತ್ಯಾದಿ ಇತ್ಯಾದಿ..
ಆತ ಮೊದಲು ಹೌಹಾರಿದ್ದೇ ಹೆಂಡದ ವಿಷಯ ಕೇಳಿ! ‘ಏನು? ಮದುವೆಯಲ್ಲಿ ಮದ್ಯಪಾನ ಮಾಡುವುದಿಲ್ಲವಾ? ಮದುಮಕ್ಕಳಿಗೂ ಕುಡಿಯಲು ಅವಕಾಶವಿಲ್ಲವಾ?’ ಅಂತ ಕೇಳಿದ. ಪಕ್ಕದಲ್ಲೇ ಕೂತಿದ್ದ ಎರಿಕ್ “ಕನಿಷ್ಟ ಪಕ್ಷ ಮದುಮಗ ಮದುಮಗಳಿಗಾದರೂ ಕುಡಿಯಲು ಅವಕಾಶ ಕೊಡಬೇಕಪ್ಪಾ… ಇಲ್ಲವಾದರೆ ಅದೆಂತಾ ಮದುವೆ? ತೀರಾ ತಮ್ಮ ಮದುವೆಯನ್ನು ತಮಗೇ ಸಂಭ್ರಮಿಸಲು ಅವಕಾಶವಿಲ್ಲವಾ?” ಅಂತ ಕೇಳಿದ. ಮದುವೆ ಹಾಳಾಗಿ ಹೋಗಲಿ ಬೇರೆ ಸಮಯದಲ್ಲೂ ಕುಟುಂಬದ ಜೊತೆ ಕುಡಿಯುವುದಿಲ್ಲ ನಮ್ಮ ಕಡೆ ಅಂತ ಹೇಳಿದರೆ ಇನ್ನದೆಷ್ಟು ನೊಂದುಕೊಂಡಾರೋ ಅಂದುಕೊಂಡು ಸುಮ್ಮನಾದೆ. ಅದಲ್ಲದೆ ಈ ಜನರಿಗೆ ಅದರಲ್ಲೂ ತೊಂಬತ್ತರಲ್ಲಿ ಹುಟ್ಟಿದ ಪೀಳಿಗೆಯ ಮಕ್ಕಳಿಗೆ ಅರೇಂಜ್ ಮ್ಯಾರೇಜ್ ಅನ್ನುವ ಮದುವೆ ಇರುತ್ತದೆ ಎಂಬ ಪರಿಕಲ್ಪನೆಯೂ ಇರುವುದಿಲ್ಲ. ತಂದೇ ತಾಯಿಗಳು ಮಕ್ಕಳು ಮದುವೆ ಆಗಲೆಬೇಕೆಂದು ಭಾವಿಸುವುದು ಕಡಿಮೆ. ಅವರಿಗೆ ಬೇಕಿದ್ದರೆ ಮಾಡಿಕೊಳ್ಳಲಿ ಇಲ್ಲವೇ ಬಿಡಲಿ ಎಂಬಂತೆ ಇರುತ್ತಾರೆ.
ಎರಡನೆ ಪ್ರಶ್ನೆ. ಮದುವೆ ಹೆಣ್ಣಿನ ತಂದೆಯ ಜವಾಬ್ದಾರಿ ಯಾಕೆ? ಅಥವಾ ಹೆಣ್ಣಿನ ಕಡೆಯವರದಾದರೂ ಯಾಕೆ? ಜೊತೆಗೆ ಬದುಕುತ್ತಾರೆ ಅಂದ ಮೇಲೆ ಇಬ್ಬರೂ ಹಣ ಹಾಕಿ ಮದುವೆ ಆಗಬೇಕು. ಅಪ್ಪ ಅಮ್ಮನ ಜೀವನ ಅವರಿಗೆ ನಮ್ಮ ಜೀವನ ನಮಗೆ. ಈಗ ಐತಿಹಾಸಿಕವಾಗಿ ಹೆಣ್ಣುಮಗಳು ಮನೆಯ ಕುಟುಂಬಕ್ಕೆ ಭಾರ ಅಂತ ಇತ್ತು. ಆದರೆ ಈ ಮನಃಸ್ಥಿತಿಯನ್ನು ಸಾಂಪ್ರದಾಯಕವಾಗಿ ಪಾಲಿಸಿಕೊಂಡು ಇಂದಿಗೂ ಬಂದಿರುವುದರಿಂದ ಅದು ಹೆಣ್ಣಿನ ಜವಾಬ್ದಾರಿ ಅಂತ ಹೇಗೆ ವಿವರಿಸುವುದು ? ನನ್ನ ಈ ಮಾತಿನ ಬಗ್ಗೆ ಅನೇಕರು ಆಕ್ಷೇಪಣೆ ವ್ಯಕ್ತಪಡಿಸಬಹುದು. ನನ್ನ ಸಂಬಂಧಿಕರಲ್ಲೆ ಕಳೆದ ವರ್ಷವಷ್ಟೇ ಪಿಯುಸಿಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿ ಮುಂದೆ ಓದಲು ಆಸೆ ಇಟ್ಟುಕೊಂಡಿದ್ದ ಹುಡುಗಿಯ ಶಿಕ್ಷಣ ಬಿಡಿಸಿ ಮದುವೆ ಮಾಡಿದರು. ನಾನು ಪ್ರಶ್ನಿಸಿದ್ದಕ್ಕೆ “ಅಯ್ಯೋ ಎಷ್ಟು ಓದಿದರೆ ಏನಪ್ಪಾ… ಗಂಡನಮನೆ ಚಾಕರಿಯಂತೂ ತಪ್ಪೋದಿಲ್ಲ ತಾನೆ?” ಅಂತ ನನ್ನನ್ನೆ ಪ್ರಶ್ನಿಸಿದರು. ಆಸ್ಟ್ರೇಲಿಯಾದಲ್ಲಿ ನನ್ನ ಗೆಳೆಯನೊಬ್ಬನ ಹೆಂಡತಿಯ ತಂದೆಯ ತರ್ಕ ಏನೆಂದರೆ “ಹೆಣ್ಣುಮಕ್ಕಳು ಓದಿ ಕೆಲಸಕ್ಕೆ ಹೋದರೆ ಹೊರಗಡೆ ಕೆಲಸ ಮಾಡುವುದಲ್ಲದೇ ಮನೆಯ ಕೆಲಸವನ್ನೂ ಸಹ ಮಾಡಬೇಕು. ಅದರ ಬದಲು ಗಂಡ ದುಡಿಯುತ್ತಿದ್ದರೆ ತಾನು ಮನೆಯಲ್ಲಿ ಆರಾಮಾಗಿ ಇರುವುದು ಒಳ್ಳೇಯದು. ಹಾಗಾಗಿ ಮಕ್ಕಳಿಗೆ ಓದಿಸುವ ಮಟ್ಟಿಗೆ ಮತ್ತು ಒಳ್ಳೆಯ ಹುಡುಗನನ್ನು ಮದುವೆಯಾಗುವ ಮಟ್ಟಿಗೆ ಒಂದು ಡಿಗ್ರೀ ಪಡೆದರೆ ಸಾಕು” ಎಂಬುದು. ಈ ಮೂಲಕ ಪುರುಷ ಪ್ರಧಾನ ಸಮಾಜಕ್ಕೆ ಮಾರಣಾಂತಿಕ ಪೆಟ್ಟು ಕೊಡುತ್ತಿದ್ದೇನೆ ಅಂತ ಆತ ಭಾವಿಸಿದ್ದ. ಆದರೆ ಇದು ಮಗಳನ್ನು ಸಾಮಾಜಿಕ ಆರ್ಥಿಕ ಅಸುರಕ್ಷತೆಯ ಮೂಲಕ ಗುಲಾಮಗಿರಿಗೆ ತಳ್ಳುತ್ತಿದೆ ಎಂಬುದು ಆತನಿಗೆ ಹೊಳೆಯಲಿಲ್ಲ. ಇದು ದೂರದ ಮಾತಾಯಿತು. “ಗಂಡು ಮಗು ಹುಟ್ಟಿದರೆ ಖುಷಿಯಿಂದ ಉಡುಗೊರೆ ತರಬಹುದಿತ್ತು ಹೆಣ್ಣುಮಗುವಿಗೆ ಏನು ತರುವುದು?” ಅಂತ ಸ್ವತಃ ನನ್ನ ತಾಯಿಯೇ ನನಗೆ ಮಗಳು ಹುಟ್ಟಿದಾಗ ಮೂಗು ಮುರಿದಿದ್ದರು.
ಮದುವೆ ಎಂಬುದು ಎರಡು ಗುಂಡಿಗೆಗಳ ಸಮ್ಮಿಲನ, ಆತ್ಮಗಳ ಸಮ್ಮಿಲನ, ಎರಡು ಕುಟುಂಬಗಳ ಕೂಡುವಿಕೆ ಎಂಬುದು ಅತ್ಯಂತ ಸರಳೀಕೃತ ಕ್ಲೀಷೆಯ ಮಾತು. ಮದುವೆ ಬರಿಯ ಸಂಭ್ರಮವಲ್ಲ. ಮದುವೆಗೆ, ಮದುವೆಯ ಸಂಪ್ರದಾಯಗಳಿಗೆ ಇತಿಹಾಸಗಳಿವೆ, ತುಳಿತದ ಹಿನ್ನೆಲೆಯಿದೆ, ಸಮಾಜದ ಒಂದು ವರ್ಗದ ಮೇಲುಗಾರಿಕೆಯಿದೆ. ವರ್ಗ ಮತ್ತು ವರ್ಣ ಸಂಘರ್ಷಗಳಿವೆ. ಒಂದೊಂದು ಸಂಪ್ರದಾಯವೂ ಯಾಕೆ ಬಂತು ಎಂಬುದನ್ನು ಸೂಕ್ಷ್ಮ ಹಿನ್ನೆಲೆಯಲ್ಲಿ ಗಮನಿಸಿದರೆ ಹೆಜ್ಜೆಹೆಜ್ಜೆಯಲ್ಲೂ ಹೆಣ್ಣಿನ Objectification ಕಾಣುತ್ತದೆ ಗಂಡಿನ ಪಾದ ತೊಳೆಯುವುದರಿಂದ ಹಿಡಿದು ಕನ್ಯಾದಾನದವರೆಗೂ! ಇದೇ ಬಹುತೇಕ ದೇಶಗಳಲ್ಲಿ ಗಂಡು ಹೆಣ್ಣು ಮೆಚ್ಚಿದರೆ ಮುಗಿದು ಹೋಯಿತು. ಮುಂದಿನದು ಎಲ್ಲವೂ ಸರಳ. ಹೆಣ್ಣು ತನಗೊಪ್ಪುವ ಗಂಡಸನ್ನು ಆರಿಸಿಕೊಳ್ಳುವಷ್ಟೇ ಪ್ರಾಕೃತಿಕ ಕ್ರಿಯೆ. ಇಂಡಿಯಾದಲ್ಲಿ ಬಹುತೇಕ ಸಮಯದಲ್ಲಿ ಗಂಡುಹೆಣ್ಣಿನ ಒಪ್ಪಿಗೆಗೆ ಮಾನ್ಯತೆಯೇ ಇರುವುದಿಲ್ಲ. ಎಲ್ಲವೂ ಸಹ ಇಲ್ಲಿ ಹೆತ್ತವರ ಸಾಮಾಜಿಕ, ಆರ್ಥಿಕ, ಭೌತಿಕ, ಸಾಂಧರ್ಬಿಕ Ego satisfaction ಮದುವೆಯ ಮುಖ್ಯ ಕೊಂಡಿ. ಇನ್ನೇನಾದರೂ ನಾನು ಹೆಣ್ಣು ನೋಡುವ ಪ್ರಕ್ರಿಯೆ ಅದರಲ್ಲಿ ದಾರ ಹಿಡಿದು ಅಳೆಯುವುದು ಓದಿಸಿ ಹಾಡಿಸಿ ಪರೀಕ್ಷೆ ಮಾಡುವುದು ಇತ್ಯಾದಿ ವಿವರಿಸಿಬಿಟ್ಟಿದ್ದರೆ ಎಲ್ಲರೂ ನಾವು ಅನಾಗರಿಕ ಯುಗದಲ್ಲಿ ಬದುಕುತ್ತಿದ್ದೇವೆ ಎಂದೇ ತೀರ್ಪಿತ್ತುಬಿಡುತ್ತಿದ್ದರು! ಹಾಗಾಗಿ ನಾವು RSVP ಊಟದ ಬಗ್ಗೆ ವಿವರಿಸುವಲ್ಲೆ ಹೆಚ್ಚು ಸಮಯ ಕಳೆದೆವು. ಊಟ ಮತ್ತು ಆಚರಣೆ ವೈಭವವನ್ನು ಕೇಳಯೇ ಅಲ್ಲಿದ್ದ ಎಲ್ಲರೂ “ನಮ್ಮನ್ನು ನಿಮ್ಮ ಕಡೆಯ ಮದುವೆಗೆ ಕರೆದುಕೊಂಡು ಹೋಗು ಮಾರಾಯ” ಅಂತ ಗೋಗರೆದರು.
ಪಾರ್ಟಿ ಮುಗಿಸಿ ವಾಪಸು ಹೊರಡುವಾಗ ಕಾರಲ್ಲಿ ಮದುವೆಯ ಮಾತುಕತೆ ಮುಂದುವರಿಯಿತು. ಇಲ್ಲಿನ ಚರ್ಚೆ ಎಂದರೆ ಅರೇಂಜ್ ಮದುವೆಗಳು ಒಲವಿನ ಮದುವೆಗಳಿಗಿಂತ ಏಕೆ ಹೆಚ್ಚು ಬದುಕುತ್ತವೆ. ಇದಕ್ಕೆ ನಮ್ಮ ಹಿರಿಯ ಸಹೋದ್ಯೋಗಿ ಕೊಟ್ಟ ಉತ್ತರ “ಅರೇಂಜ್ ಮ್ಯಾರೇಜ್ನಲ್ಲಿ ಜೊತೆಗಾರರಿಂದ ಯಾವುದೇ ನಿರೀಕ್ಷೆ ಇರುವುದಿಲ್ಲ. ಹಾಗಾಗಿ ಬಂದದ್ದನ್ನು ಸ್ವೀಕರಿಸಿ ಬದುಕುತ್ತಾರೆ. ಬಂದದ್ದನ್ನು ಪ್ರೀತಿಸುವುದನ್ನು ಕಲಿಯುತ್ತಾರೆ. ಆದರೆ ಲವ್ ಮ್ಯಾರೇಜ್ ನಲ್ಲಿ ನಿರೀಕ್ಷೆ ಇರುತ್ತದೆ. ನಿರೀಕ್ಷಿತ ನಡಾವಳಿಗಿಂತ ಕೊಂಚ ವ್ಯತ್ಯಾಸವಾದರೂ ನಿರಾಶೆಯಾಗುತ್ತದೆ. ಅಲ್ಲಿಂದ ಜಗಳ ಶುರುವಾಗುತ್ತದೆ. ”
ಸರಿ ಹಾಗಾದರೆ ಮಕ್ಕಳ ಮದುವೆ ಯಾರ ಜೊತೆ ಮಾಡಬೇಕು? ಎಂತಹ ಹುಡುಗನ ಜೊತೆ ಮಾಡಬೇಕು?
ನನ್ನ ಅಭಿಪ್ರಾಯ ಕೇಳಿದಾಗ ನಾನು ಹೇಳಿದ್ದು “ಮೊದಲನೆಯದಾಗಿ ಯಾಕೆ ಮದುವೆ ಆಗಬೇಕು? ಏನು ಸಾಧನೆ ಅದರಿಂದ? ಎಷ್ಟು ಅಂತ ಮಕ್ಕಳನ್ನು ಹಡೆಯುವುದು? ಎಷ್ಟು ಅಂತ ಬೇರೆ ಜೀವಿಗಳ ಹಕ್ಕನ್ನು ಕಸಿದುಕೊಂಡು ಮನುಷ್ಯ ತಾನು ಬದುಕುವುದು? ನನ್ನ ಡಿಎನ್ಎ ಮುಂದಿನ ಪೀಳಿಗೆಗೆ ವರ್ಗಾವಣೆಯಾಗದಿದ್ದರೆ ಏನು ಮಹಾ ನಷ್ಟ? ನಾನು ನನ್ನ ಮಕ್ಕಳಿಗೆ ಹೇಳುವುದೂ ಇಷ್ಟೇ. ಮದುವೆಯಾಗುವುದೇ ಸರಿಯೂ ಅಲ್ಲ ಮದುವೆಯಾಗದಿರುವುದು ತಪ್ಪೂ ಅಲ್ಲ.”
ಹಿಂದಿನ ಅಂಕಣ : Sydney Diary : ಹೀಗೆ ನನಗೆ ಪ್ರತಿ ರಾತ್ರಿ ಎಂಬತೈದು ಸಾರಿ ಎಚ್ಚರವಾಗುತ್ತಿತ್ತು!
ಇದನ್ನೂ ಓದಿ :Sydney Diary : ‘ಈ ಕೀಳು ಸಂಸ್ಕೃತಿಯ ದೇಶಕ್ಕೇಕಪ್ಪಾ ಬಂದಿರಿ, ಇಲ್ಲಿಯ ಪೌರತ್ವಕ್ಕಾಗಿ ಅದ್ಯಾಕೆ ಅಷ್ಟು ತಿಣುಕಾಡಿದಿರಿ?’