
ಪಾಟ್ನಾ, ಆಗಸ್ಟ್ 3: ಬಿಹಾರದ ಬಂಕಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಐತಿಹಾಸಿಕ ಜಯ ಸಾಧಿಸುವ ಸನ್ನಿಹಿತದಲ್ಲಿರುವ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ (Prashant Kishor) ಇಂದು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ. ಬಂಕಿಪುರದ ಹಿನ್ನಡೆಯು ಬಿಜೆಪಿಗೆ ತಕ್ಕ ಸಂದೇಶವಾಗಿದೆ ಎಂದು ಹೇಳಿದ್ದಾರೆ. ಬಂಕಿಪುರ ಉಪಚುನಾವಣೆಯಲ್ಲಿ ಭಾರೀ ಮುನ್ನಡೆ ಸಾಧಿಸಿರುವ ಪ್ರಶಾಂತ್ ಕಿಶೋರ್ ತಮ್ಮ ಗೆಲುವನ್ನು “30 ವರ್ಷಗಳ ಕೋಟೆಯ ಪತನ” ಎಂದು ಬಣ್ಣಿಸಿದ್ದು, ಬಿಹಾರದ ರಾಜಕೀಯ ಆದ್ಯತೆಗಳು ಈಗ ಉದ್ಯೋಗ, ಶಿಕ್ಷಣ ಮತ್ತು ಅಭಿವೃದ್ಧಿಯತ್ತ ಬದಲಾಗುತ್ತಿರುವುದನ್ನು ಈ ಫಲಿತಾಂಶ ಪ್ರತಿಬಿಂಬಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಇಂದು ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ್ ಕಿಶೋರ್, “30 ವರ್ಷಗಳ ಕೋಟೆ ಕೇವಲ 30 ದಿನಗಳಲ್ಲಿ ಕುಸಿಯಿತು. ಬಿಹಾರದ ಜನತೆ ಈಗ 4ರಿಂದ 5 ಕೆಜಿ ಉಚಿತ ಪಡಿತರ ಮತ್ತು ಜಾತಿ ರಾಜಕೀಯದಿಂದ ಮೇಲೆದ್ದು, ತಮ್ಮ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಸರ್ಕಾರಗಳು ಕೆಲಸ ಮಾಡಬೇಕೆಂದು ಬಯಸುತ್ತಿರುವುದರಿಂದ ಈ ಬದಲಾವಣೆ ಆಗಿದೆ” ಎಂದು ಹೇಳಿದರು.
ಇದನ್ನೂ ಓದಿ: ಬಂಕಿಪುರ ಉಪಚುನಾವಣೆ : ಪ್ರಶಾಂತ್ ಕಿಶೋರ್ ಕುಟುಂಬದ ಒಟ್ಟು ಆಸ್ತಿ 198 ಕೋಟಿ ರೂ.ಗೂ ಅಧಿಕ!
ತಮ್ಮ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧವಲ್ಲ, ಬದಲಿಗೆ ಬಿಹಾರದಲ್ಲಿ ಉತ್ತಮ ಆಡಳಿತಕ್ಕಾಗಿಯಷ್ಟೇ ಎಂದ ಪ್ರಶಾಂತ್ ಕಿಶೋರ್, ಬಿಹಾರವನ್ನು ಆಳಲು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಜನಾದೇಶವಿದೆ. ಹೀಗಾಗಿ, ಬಿಹಾರದ ಅಭಿವೃದ್ಧಿ ಪಥವನ್ನು ಬದಲಾಯಿಸಬಲ್ಲ ಸಮರ್ಥ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು. ಈ ಮೂಲಕ ಬಿಹಾರದ ಸಿಎಂ ಸಾಮ್ರಾಟ್ ಚೌಧರಿ ವಿರುದ್ಧ ಅವರು ಮತ್ತೊಮ್ಮೆ ವಾಗ್ದಾಳಿ ನಡೆಸಿದರು.
VIDEO | Bankipur Bypoll: As he is leading in vote counting, Jan Suraaj candidate Prashant Kishor (@PrashantKishor) says, “This is not an election to make an MLA, this is to give the message to the top leadership of the BJP that a good person should be made CM in Bihar, so that… pic.twitter.com/iQ48iN8pMc
— Press Trust of India (@PTI_News) August 3, 2026
“ಇದು ಬಂಕಿಪುರದ ಜನರ ಗೆಲುವು. ನಾವು ಚುನಾವಣಾ ಪ್ರಚಾರದ ಸಮಯದಲ್ಲಿ ಹೇಳಿದಂತೆ, ಇದು ಕೇವಲ ಒಬ್ಬ ಶಾಸಕನನ್ನು ಆಯ್ಕೆ ಮಾಡುವ ಚುನಾವಣೆಯಾಗಿರಲಿಲ್ಲ. ಉತ್ತಮ ವ್ಯಕ್ತಿಯನ್ನು ಬಿಹಾರದ ಮುಖ್ಯಮಂತ್ರಿಯನ್ನಾಗಿ ನೇಮಿಸಬೇಕೆಂದು ಬಿಹಾರದ ಜನತೆ ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ಸಂದೇಶ ರವಾನಿಸುವ ಪ್ರಯತ್ನವಾಗಿತ್ತು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನಾನಾ ಪಟೋಲೆ ಪಾದ ತೊಳೆಯುವ ವಿಡಿಯೋ ವೈರಲ್: ಬಿಜೆಪಿ ವಾಗ್ದಾಳಿ, ತಿರುಗೇಟು ನೀಡಿದ ಕಾಂಗ್ರೆಸ್ ನಾಯಕ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿದ್ದ ಬಂಕಿಪುರ ಕ್ಷೇತ್ರದಲ್ಲಿ ಪ್ರಶಾಂತ್ ಕಿಶೋರ್ ಜಯಗಳಿಸುವುದು ಬಹುತೇಕ ಖಚಿತವಾಗಿದೆ. ನಿತಿನ್ ನವೀನ್ ಅವರು 2010, 2015, 2020 ಮತ್ತು 2025 ರಲ್ಲಿ ಬಂಕಿಪುರ ಕ್ಷೇತ್ರದಿಂದ ಸತತ 4 ಬಾರಿ ಗೆದ್ದಿದ್ದರು. ಆದರೆ, ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಂತರ ರಾಜ್ಯಸಭೆಗೆ ಆಯ್ಕೆಯಾದ ಕಾರಣ ಈ ಉಪಚುನಾವಣೆ ಎದುರಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:28 pm, Mon, 3 August 26