ರೆಮಿಡಿಸಿವಿರ್ ಆಯ್ತು, ಈಗ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಅಂಫೋಟೆರಿಸಿನ್ ಬಿ ಇಂಜೆಕ್ಷನ್ ಸಹ ಸಿಗುತ್ತಿಲ್ಲ!

ತಜ್ಞರು ಹೇಳುವ ಪ್ರಕಾರ ಒಬ್ಬ ಬ್ಲ್ಯಾಕ್ ಫಂಗಸ್​ನಿಂದ ಬಳಲುತ್ತಿರುವ ರೋಗಿಯ ಚಿಕಿತ್ಸೆಗೆ 40 ರಿಂದ 60 ಇಂಜೆಕ್ಷನ್ ಗಳು ಬೇಕಾಗುತ್ತವೆ. ಆದರೆ, ದೇಶದಲ್ಲಿ ದಿನೇ ದಿನೇ ಬ್ಲ್ಯಾಕ್ ಫಂಗಸ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಬೇಡಿಕೆಗೆ ತಕ್ಕಂತೆ ಇಂಜೆಕ್ಷನ್ ದಾಸ್ತಾನು ಪೂರೈಸಲು ಸಾಧ್ಯವಾಗುತ್ತಿಲ್ಲ.

ರೆಮಿಡಿಸಿವಿರ್ ಆಯ್ತು, ಈಗ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಅಂಫೋಟೆರಿಸಿನ್ ಬಿ ಇಂಜೆಕ್ಷನ್ ಸಹ ಸಿಗುತ್ತಿಲ್ಲ!
ಅಂಫೋಟೆರಿಸಿನ್ ಬಿ ಇಂಜೆಕ್ಷನ್
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: ರಾಜೇಶ್ ದುಗ್ಗುಮನೆ

Updated on: May 19, 2021 | 8:45 PM

ನಮ್ಮ ದೇಶದಲ್ಲಿ ಕೊರೊನಾ ರೋಗಿಗಳಿಗೆ ಇದುವರಗೆ ರೆಮಿಡಿಸಿವಿರ್ ಇಂಜೆಕ್ಷನ್ ಸಿಗುತ್ತಿರಲಿಲ್ಲ. ಈಗ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಅಂಫೋಟೆರಿಸಿನ್ ಬಿ ಇಂಜೆಕ್ಷನ್ ಕೂಡ ಸಿಗುತ್ತಿಲ್ಲ. ಭಾರತದಲ್ಲಿ ಈಗ ಮ್ಯಾಕರೋಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಹರಡುವಿಕೆ ಹೆಚ್ಚಾಗುತ್ತಿದೆ. ಇದರ ಚಿಕಿತ್ಸೆಗೆ ಬಳಸುವ ಲೆಪಸೋಮಲ್ ಅಂಫೋಟೆರಿಸಿನ್ ಬಿ ಡ್ರಗ್​ಗೆ ಸಹಜವಾಗೇ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ, ಭಾರತದಲ್ಲೀಗ ಲೆಪಸೋಮಲ್ ಅಂಪೋಟೋರಿಸಿನ್ ಬಿ ಇಂಜೆಕ್ಷನ್ ಗೂ ಬಾರಿ ಕೊರತೆ ಎದುರಾಗಿದೆ.  ಧೀಡೀರನೇ ಬ್ಲ್ಯಾಕ್ ಫಂಗಸ್ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಬೇಡಿಕೆಗೆ ತಕ್ಕಂತೆ, ಲೆಪಸೋಮಲ್ ಅಂಫೋಟೆರಿಸಿನ್ ಬಿ ಇಂಜೆಕ್ಷನ್ ಪೂರೈಕೆಯಾಗುತ್ತಿಲ್ಲ. ಹೀಗಾಗಿ, ರಾಜ್ಯ ಸರ್ಕಾರಗಳೂ ಹಾಗೂ ಬ್ಲ್ಯಾಕ್ ಫಂಗಸ್ ಸೋಂಕಿತರಲ್ಲಿ ಭಯ, ಆತಂಕ ಹೆಚ್ಚಾಗುತ್ತಿದೆ. ಕೊರೊನಾದಿಂದ ಬಳಲುತ್ತಿರುವ ಹಾಗೂ ಗುಣಮುಖರಾದವರಲ್ಲಿ ಅದರಲ್ಲೂ ಹೆಚ್ಚಾಗಿ ಮಧುಮೇಹದಿಂದ ಬಳಲುತ್ತಿರುವ ಕೋವಿಡ್​ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ.

ಮೂಲಗಳ ಪ್ರಕಾರ ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಉತ್ತರ ಪ್ರದೇಶ, ಉತ್ತರಾಖಂಡ್, ಹರಿಯಾಣ, ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರಿದ್ದಾರೆ. ಮಹಾರಾಷ್ಟ್ರ ರಾಜ್ಯವೊಂದರಲ್ಲೇ 1,500ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಸೋಂಕಿತರಿದ್ದಾರೆ.

ಗುಜರಾತ್ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ನಿಂದ 40 ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ. ಈ ರಾಜ್ಯದ ಐದು ನಗರಗಳ ಎಂಟು ಆಸ್ಪತ್ರೆಗಳಲ್ಲಿ  ಕನಿಷ್ಠ 1,163 ಮಂದಿ ಬ್ಲ್ಯಾಕ್ ಫಂಗಸ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ಲ್ಯಾಕ್ ಫಂಗಸ್ ನಿಂದ ಗುಜರಾತ್ ರಾಜ್ಯದಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆ ಅಲ್ಲಿನ ಆರೋಗ್ಯ ಇಲಾಖೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

ಅಂಫೋಟೆರಿಸಿನ್ ಬಿ ಇಂಜೆಕ್ಷನ್ ಉತ್ಪಾದಿಸುವ ಕಂಪನಿಗಳು ವಿರಳ

ತಜ್ಞರು ಹೇಳುವ ಪ್ರಕಾರ ಒಬ್ಬ ಬ್ಲ್ಯಾಕ್ ಫಂಗಸ್​ನಿಂದ ಬಳಲುತ್ತಿರುವ ರೋಗಿಯ ಚಿಕಿತ್ಸೆಗೆ 40 ರಿಂದ 60 ಇಂಜೆಕ್ಷನ್ ಗಳು ಬೇಕಾಗುತ್ತವೆ. ಆದರೆ, ದೇಶದಲ್ಲಿ ದಿನೇ ದಿನೇ ಬ್ಲ್ಯಾಕ್ ಫಂಗಸ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಬೇಡಿಕೆಗೆ ತಕ್ಕಂತೆ ಇಂಜೆಕ್ಷನ್ ದಾಸ್ತಾನು ಪೂರೈಸಲು ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಆರೇಳು ಕಂಪನಿಗಳು ಮಾತ್ರ ಲೆಪಸೋಮಲ್ ಅಂಫೋಟೆರಿಸಿನ್ ಬಿ ಇಂಜೆಕ್ಷನ್ ಉತ್ಪಾದಿಸುತ್ತಿವೆ. ಭಾರತ್ ಸಿರಮ್ ಅಂಡ್ ವ್ಯಾಕ್ಸಿನ್, ವೋಕ್ಹಾರ್ಡ್, ಅಬ್ಬಾಟ್ ಹೆಲ್ತ್ ಕೇರ್, ಯುನೈಟೆಡ್ ಬಯೋಟೆಕ್, ಮೈಲಾನ್, ಇನ್​ಟಾಸ್,  ಸನ್ ಫಾರ್ಮಾ,  ಹಾಗೂ ಸಿಪ್ಲಾ ಕಂಪನಿಗಳು ಮಾತ್ರ ಲೆಪಸೋಮಲ್ ಅಂಪೋಟೋರಿಅಂಫೋಟೆರಿಸಿನ್ ಬಿ ಉತ್ಪಾದಿಸುತ್ತಿವೆ. ಈ ಕಂಪನಿಗಳೇ ಈಗ ದೇಶದಲ್ಲಿ ಉತ್ಪಾದನೆಯನ್ನು ಸಮರೋಪಾದಿಯಲ್ಲಿ ಹೆಚ್ಚಿಸಬೇಕಾಗಿದೆ.

ಮೊದಲು ಅಂಫೋಟೆರಿಸಿನ್ ಬಿ ಇಂಜೆಕ್ಷನ್​ಗೆ ಬೇಡಿಕೆಯೇ ಇರಲಿಲ್ಲ!

ವಿಎಚ್‌ಬಿ ಲೈಫ್ ಸೈನ್ಸಸ್ ಕಂಪನಿಯು ಸದ್ಯ ಅಂಫೋಟೆರಿಸಿನ್ ಬಿ ಡ್ರಗ್ ಅನ್ನು ಉತ್ಪಾದಿಸುತ್ತಿಲ್ಲ. ದೇಶದಲ್ಲಿ ಈ ಡ್ರಗ್ಸ್ ಗೆ ಬೇಡಿಕೆ ಹೆಚ್ಚಾಗಿರುವುದರಿಂದ ಅಂಪೋಟೋರಿಸಿನ್ ಬಿ ಡ್ರಗ್ ಉತ್ಪಾದನೆ ಆರಂಭಿಸುವ ಬಗ್ಗೆ ಮುಂದಿನ ಸೋಮವಾರದೊಳಗೆ ತೀರ್ಮಾನ ಕೈಗೊಳ್ಳುವುದಾಗಿ ವಿಎಚ್‌ಬಿ ಲೈಫ್ ಸೈನ್ಸಸ್ ಕಂಪನಿಯ ರಾಷ್ಟ್ರೀಯ ಸೇಲ್ಸ್ ಮ್ಯಾನೇಜರ್ ರಾಜೇಶ್ ಶ್ರೀವಾಸ್ತವ್ ಟಿವಿ9ಗೆ ತಿಳಿಸಿದ್ದಾರೆ. ಸಾಮಾನ್ಯ ಸಂದರ್ಭಗಳಲ್ಲಿ ಲೆಪಸೋಮಲ್ ಅಂಫೋಟೆರಿಸಿನ್ ಬಿ ಡ್ರಗ್ ಗೆ ಹೆಚ್ಚಿನ ಬೇಡಿಕೆಯೇ ಇರಲ್ಲ. ಸಾಮಾನ್ಯವಾಗಿ ಕಂಪನಿಗಳು ಹತ್ತು ಸಾವಿರದೊಳಗೆ ಈ ಡ್ರಗ್ಸ್ ಉತ್ಪಾದಿಸುತ್ತಿದ್ದವು. ಆದರೇ ಈಗ ಬ್ಲ್ಯಾಕ್ ಫಂಗಸ್ ಸೋಂಕು ಹೆಚ್ಚಾಗಿರುವುದರಿಂದ ಅಂಫೋಟೆರಿಸಿನ್ ಬಿ ಡ್ರಗ್ ಗೆ ಬೇಡಿಕೆ ಹೆಚ್ಚಾಗಿದೆ.

ಭಾರತ್ ಸಿರಮ್ ಅಂಡ್ ವ್ಯಾಕ್ಸಿನ್ ಕಂಪನಿಯ ಅಂಪೋನೆಕ್ಸ್ ಹೆಸರಿನ ಅಂಫೋಟೆರಿಸಿನ್ ಬಿ ಡ್ರಗ್ ನ ಒಂದು ವಯಲ್ ಗೆ 6,890 ರೂಪಾಯಿ ಬೆಲೆ. ಸನ್ ಫಾರ್ಮಾದ ಲಂಬಿನ್ ಹೆಸರಿನ ಡ್ರಗ್ಸ್ ನ ಒಂದು ವಯಲ್ ಗೆ  4,739 ರೂಪಾಯಿ ಬೆಲೆ ಇದೆ. ಡ್ರಗ್ ಕೊರತೆಯಿಂದಾಗಿ ಕಾಳಸಂತೆಯಲ್ಲಿ 5 ರಿಂದ 10 ಪಟ್ಟು ದುಬಾರಿ ಬೆಲೆಗೂ ಮಾರಾಟವಾಗುತ್ತಿದೆ. ವೈದ್ಯರ ಪ್ರಿಸ್ಕಿಪ್ಷನ್ ಪ್ರಕಾರ, ರೋಗಿಗಳಿಗೆ 4 ರಿಂದ 8 ವಯಲ್ ಗಳನ್ನು ದಿನವೊಂದಕ್ಕೆ ನೀಡಬೇಕಾಗುತ್ತೆ ಮತ್ತು 15 ರಿಂದ 30 ದಿನಗಳವರೆಗೂ ಟ್ರೀಟ್​ಮೆಂಟ್ ನೀಡಬೇಕಾಗುತ್ತೆ . ಹೀಗಾಗಿ ಬ್ಲ್ಯಾಕ್ ಫಂಗಸ್ ರೋಗಿಯ ಚಿಕಿತ್ಸೆಗೆ ಕನಿಷ್ಠ ಅಂದರೂ 3 ಲಕ್ಷ ರೂಪಾಯಿ ವೆಚ್ಚವಾಗುತ್ತೆ. ಅಂಪೋಟೋರಿಸಿನ್ ಬಿ ಡ್ರಗ್ಸ್ ಉತ್ಪಾದನೆಯನ್ನು ಹೆಚ್ಚಿಸಲು 15 ರಿಂದ 30 ದಿನಗಳ ಕಾಲಾವಕಾಶ ಬೇಕಾಗುತ್ತೆ ಎಂದು ಉತ್ಪಾದಿಸುವ ಕಂಪನಿಗಳು ಹೇಳ್ತಾವೆ.

ಕೇಂದ್ರ ಸರ್ಕಾರ ಹೇಳೋದೇನು?

ದೇಶದಲ್ಲಿ ಡ್ರಗ್ ಉತ್ಪಾದನೆ, ನಿರ್ವಹಣೆ ಮೇಲೆ ನಿಗಾ ವಹಿಸುವ ಡಿಜಿಸಿಐ ನಿರಂತರವಾಗಿ ಡ್ರಗ್ಸ್ ಪೂರೈಕೆ ಬಗ್ಗೆ ಸಭೆಗಳನ್ನ ನಡೆಸುತ್ತಿದೆ. ಅಂಫೋಟೆರಿಸಿನ್ ಬಿ ಡ್ರಗ್ ಉತ್ಪಾದನೆಯನ್ನು ಹೆಚ್ಚಿಸಲು ಕಂಪನಿಗಳಿಗೆ ಕೇಂದ್ರದ ಇಲಾಖೆ ಸೂಚಿಸಿದೆ.

Black Fungus

ಬ್ಲ್ಯಾಕ್ ಫಂಗಸ್

ಡ್ರಗ್ ಪೂರೈಸುವ ಐದು ಕಂಪನಿಗಳಿವೆ. ಸೂಕ್ತವಾಗಿ ಡ್ರಗ್ಸ್ ಅನ್ನು ಹಂಚಿಕೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಮೇ 1 ರಿಂದ ಮೇ 14ರವರೆಗೆ ರಾಜ್ಯ ಸರ್ಕಾರಗಳಿಗೆ 1 ಲಕ್ಷ ವಯಲ್ ಇಂಜೆಕ್ಷನ್ ನೀಡಲಾಗಿದೆ. ವಿದೇಶದಿಂದ ಅಂಪೋಟೋರಿಸಿನ್ ಡ್ರಗ್ ಅಮದು ಮಾಡಿಕೊಳ್ಳುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ.

ರಾಜ್ಯ ಸರ್ಕಾರಗಳು ಅಂಫೋಟೆರಿಸಿನ್ ಬಿ ಡ್ರಗ್ ಅನ್ನು ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ನಡುವೆ ಸಮಾನವಾಗಿ ಹಂಚಿಕೆಯಾಗುವ ವ್ಯವಸ್ಥೆ ಮಾಡಬೇಕು. ಈ ಡ್ರಗ್ ಹಂಚಿಕೆಗೆ, ಸಂಪರ್ಕಿಸಲು ಅಧಿಕಾರಿಯೊಬ್ಬರನ್ನ ನೇಮಿಸಬೇಕೆಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಹೇಳಿದೆ. ಇನ್ನೂ ಮಂಗಳವಾರ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಂಗಳವಾರ ಫಾರ್ಮಾಸೂಟಿಕಲ್ಸ್ ಇಲಾಖೆಯ ಕಾರ್ಯದರ್ಶಿ ಅಪರ್ಣಾ ಸೇರಿದಂತೆ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಔಷಧಿಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ರಾಜ್ಯಗಳ ಜೊತೆ ಸೇರಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.

ಬೇರೆ ರಾಜ್ಯಗಳಲ್ಲಿ ಅಂಫೋಟೆರಿಸಿನ್ ಬಿ ಡ್ರಗ್ ಸಿಗುತ್ತಿದೆಯೇ?

ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ 25 ಮಂದಿ ಬ್ಲ್ಯಾಕ್ ಫಂಗಸ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ 20 ಮಂದಿ, ಮೂಲಚಂದ್ ಅಸ್ಪತ್ರೆಯಲ್ಲಿ ಓರ್ವ ರೋಗಿ ಸಾವನ್ನಪ್ಪಿದ್ದಾರೆ. ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ 40 ಮಂದಿ ಬ್ಲ್ಯಾಕ್ ಫಂಗಸ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 16 ಮಂದಿ ಬೆಡ್ ಗಾಗಿ ಕಾಯುತ್ತಿದ್ದಾರೆ.

ದೆಹಲಿಯ ಏಮ್ಸ್ ಆಸ್ಪತ್ರೆಗೆ ನಿತ್ಯ 20 ಬ್ಲ್ಯಾಕ್ ಫಂಗಸ್ ರೋಗಿಗಳು ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ. ‘ನಾವು ಮೂರಂಕಿ ದಾಟಿದ್ದೇವೆ. ಏಮ್ಸ್ ಟ್ರಾಮಾ ಸೆಂಟರ್ ಹಾಗೂ ಏಮ್ಸ್ ಜಾಜರ್ ನಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ವಿಶೇಷ ವಾರ್ಡ್ ವ್ಯವಸ್ಥೆ ಮಾಡಿದ್ದೇವೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗುಲುತ್ತಿದೆ,’ ಎಂದು ದೆಹಲಿ ಏಮ್ಸ್ ಆಸ್ಪತ್ರೆಯ ನ್ಯೂರಾಲಜಿ ವಿಭಾಗದ ಮುಖ್ಯಸ್ಥೆ ಪ್ರೊಫೆಸರ್ ಪದ್ಮಾ ಶ್ರೀವಾಸ್ತವ್ ಹೇಳಿದ್ದಾರೆ. ದೆಹಲಿಯಲ್ಲೂ ಅಂಫೋಟೆರಿಸಿನ್ ಬಿ ಡ್ರಗ್ಸ್ ಸಿಗುತ್ತಿಲ್ಲ. ಉತ್ತರ ಪ್ರದೇಶದ ಲಕ್ನೋದಲ್ಲಿ ಅಂಫೋಟೆರಿಸಿನ್ ಬಿ ಡ್ರಗ್ಸ್ ಸಿಗುತ್ತಿಲ್ಲ. ಕೆಲ ಕಂಪನಿಗಳ ಅಂಫೋಟೆರಿಸಿನ್ ಬಿ ಇಂಜೆಕ್ಷನ್​ಗೆ 4,500 ರೂಪಾಯಿಯಿಂದ 12 ಸಾವಿರ ರೂಪಾಯಿವರೆಗೂ ದರ ಇದೆ ಎಂದು ಮೆಡಿಕಲ್ ಸ್ಟೋರ್ ಮಾಲೀಕರು ಹೇಳುತ್ತಿದ್ದಾರೆ.

ಕರ್ನಾಟಕದ ಸ್ಥಿತಿ ಹೇಗಿದೆ?

ಕರ್ನಾಟಕದಲ್ಲಿ 180ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ರೋಗಿಗಳಿದ್ದಾರೆ. ಆದರೇ, ಕೇಂದ್ರ ಸರ್ಕಾರವು ಬ್ಲ್ಯಾಕ್ ಫಂಗಸ್ ರೋಗಿಗಳ ಚಿಕಿತ್ಸೆಗೆ 450 ವಯಲ್ ಅಂಫೋಟೆರಿಸಿನ್ ಬಿ ಇಂಜೆಕ್ಷನ್ ಮಾತ್ರ ನೀಡಿದೆ ಎಂದು ರಾಜ್ಯದ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದರು. ಕರ್ನಾಟಕದಲ್ಲೂ ಅಂಫೋಟೆರಿಸಿನ್ ಬಿ ಡ್ರಗ್ಸ್ ಕೊರತೆ ಇದೆ.  ಹೀಗಾಗಿ ರಾಜ್ಯ ಸರ್ಕಾರವು 25 ಸಾವಿರ ವಯಲ್ ಇಂಜೆಕ್ಷನ್ ಪೂರೈಸುವಂತೆ ಕೇಂದ್ರ ಸರ್ಕಾರ ಹಾಗೂ ಉತ್ಪಾದಿಸುವ ಕಂಪನಿಗಳಿಗೆ ನೇರವಾಗಿ ಬೇಡಿಕೆ ಇಟ್ಟಿದೆ. ಕರ್ನಾಟಕದಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಚಿಕಿತ್ಸೆಯನ್ನ ನೀಡಲು ಆರು ಆಸ್ಪತ್ರೆಗಳಿಗೆ ಸೂಚಿಸಿದೆ .

ಬೆಂಗಳೂರು ಮೆಡಿಕಲ್ ಕಾಲೇಜು, ಮೈಸೂರು ಮೆಡಿಕಲ್ ಕಾಲೇಜು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ, ಗುಲ್ಬರ್ಗಾ ಮೆಡಿಕಲ್ ಕಾಲೇಜು, ಶಿವಮೊಗ್ಗ ಮೆಡಿಕಲ್ ಕಾಲೇಜು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಚಿಕಿತ್ಸೆ ನೀಡಬೇಕೆಂದು ರಾಜ್ಯದ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಯಾವುದೇ ಆಸ್ಪತ್ರೆಗಳು ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಬಾರದೆಂದು ಆರೋಗ್ಯ ಇಲಾಖೆ ಸ್ಪಷ್ಟವಾಗಿ ಹೇಳಿದೆ.

ಮಹಾರಾಷ್ಟ್ರ ರಾಜ್ಯ ಸರ್ಕಾರವು ಒಂದು ಲಕ್ಷ ಅಂಫೋಟೆರಿಸಿನ್ ಡ್ರಗ್ಸ್ ಪೂರೈಕೆಗೆ ಟೆಂಡರ್ ಕರೆಯುವುದಾಗಿ ಮಹಾರಾಷ್ಟ್ರ ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ. ಕೇಂದ್ರ ಸರ್ಕಾರದಿಂದ ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ 5 ಸಾವಿರ ಅಂಫೋಟೆರಿಸಿನ್ ಬಿ ಡ್ರಗ್ಸ್ ಪೂರೈಸಲಾಗಿದೆ. ಇದನ್ನು ಆಸ್ಪತ್ರೆಗಳಿಗೆ ಹಂಚಲಾಗಿದೆ .

ಗುಜರಾತ್ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳ ಚಿಕಿತ್ಸೆಗೆ ವಿಶೇಷ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ಅಂಪೋಟೋರಿಸಿನ್ ಬಿ ಡ್ರಗ್ಸ್ ಖರೀದಿಗೆ 300 ಕೋಟಿ ರೂಪಾಯಿ ಹಣವನ್ನು ರಾಜ್ಯ ಸರ್ಕಾರ ತೆಗೆದಿರಿಸಿದೆ. ನೇರವಾಗಿ ಉತ್ಪಾದಿಸುವ ಕಂಪನಿಗಳಿಂದ ಅಂಫೋಟೆರಿಸಿನ್ ಡ್ರಗ್ಸ್ ಖರೀದಿಗೆ ಗುಜರಾತ್ ರಾಜ್ಯ ಸರ್ಕಾರ ನಿರ್ಧರಿಸಿದೆ .

ಹರಿಯಾಣ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಅನ್ನು ಅಧಿಸೂಚಿತ ಸೋಂಕು ಎಂದು ಘೋಷಿಸಲಾಗಿದೆ. ಬ್ಲ್ಯಾಕ್ ಫಂಗಸ್ ಸೋಂಕಿತರು ಕಂಡು ಬಂದರೇ,  ವೈದ್ಯರುಗಳು ಚೀಫ್ ಮೆಡಿಕಲ್ ಆಫೀಸರ್ ಗೆ ಆ ಬಗ್ಗೆ ಮಾಹಿತಿ ನೀಡಬೇಕೆಂದು ರಾಜ್ಯ ಸರಕಾರ ಹೇಳಿದೆ.

ಮಧ್ಯಪ್ರದೇಶ ರಾಜ್ಯ ಸರ್ಕಾರವು ಬ್ಲ್ಯಾಕ್ ಫಂಗಸ್ ರೋಗಿಗಳ ಚಿಕಿತ್ಸೆಗಾಗಿ ಮೆಡಿಕಲ್ ಕಾಲೇಜುಗಳಲ್ಲಿ ವಿಶೇಷ ವಾರ್ಡ್ ಗಳ ವ್ಯವಸ್ಥೆ ಮಾಡಿದೆ. ಭೋಪಾಲ್, ಇಂದೋರ್, ಜಬಲಪುರ, ಗಾಲ್ವಿಯರ್ , ರೇವಾ ಮೆಡಿಕಲ್ ಕಾಲೇಜುಗಳಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ವಿಶೇಷ ವಾರ್ಡ್ ವ್ಯವಸ್ಥೆ ಮಾಡಿದೆ.

ಇದನ್ನೂ ಓದಿ:  Black Fungus: ಒಡಿಶಾದಲ್ಲಿ ಮ್ಯೂಕೋಮೈಕೋಸಿಸ್ ಮೊದಲ ಪ್ರಕರಣ ಪತ್ತೆ; ಕೊರೊನಾಗೆ ತುತ್ತಾಗಿದ್ದ ವೃದ್ಧ ವ್ಯಕ್ತಿಗೆ ಸೋಂಕು