ಹೈಕೋರ್ಟ್ ಮಹತ್ವದ ತೀರ್ಪು: ಪತ್ನಿಗೆ ಪತಿಯ ಒಟ್ಟು ಸಂಬಳದ ಶೇ. 25 ರಷ್ಟು ಜೀವನಾಂಶ ನೀಡುವುದು ಕಡ್ಡಾಯವಲ್ಲ

ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜೀವನಾಂಶವಾಗಿ ಪತಿಯ 25% ಆದಾಯ ಕಡ್ಡಾಯವಲ್ಲ, ಕೇವಲ ಮಾರ್ಗಸೂಚಿ ಎಂದಿದೆ. ನ್ಯಾಯಾಲಯಗಳು ಪ್ರಕರಣದ ಸನ್ನಿವೇಶ ಆಧರಿಸಿ ಜೀವನಾಂಶ ನಿಗದಿಪಡಿಸಲಿವೆ. 'ನಿವ್ವಳ ಆದಾಯ' ಎಂದರೆ ಕಡ್ಡಾಯ ಕಡಿತಗಳ ನಂತರದ ಗಳಿಕೆ ಹೊರತು ಒಟ್ಟು ಸಂಬಳವಲ್ಲ. ಪತ್ನಿ ಸ್ವತಃ ಜೀವನ ನಿರ್ವಹಣೆ ಮಾಡಲು ಅಸಮರ್ಥಳಾಗಿರಬೇಕು ಎಂಬ ಷರತ್ತುಗಳನ್ನು ಹೈಕೋರ್ಟ್ ಪುನರುಚ್ಚರಿಸಿದೆ.

ಹೈಕೋರ್ಟ್ ಮಹತ್ವದ ತೀರ್ಪು: ಪತ್ನಿಗೆ ಪತಿಯ ಒಟ್ಟು ಸಂಬಳದ ಶೇ. 25 ರಷ್ಟು ಜೀವನಾಂಶ ನೀಡುವುದು ಕಡ್ಡಾಯವಲ್ಲ
ವಿಚ್ಚೇದನ

Updated on: Jul 15, 2026 | 9:37 AM

ಪ್ರಯಾಗ್‌ರಾಜ್, ಜುಲೈ 15: ವಿಚ್ಛೇದನ(Divorce) ಪಡೆದ ಪತ್ನಿಯ ಜೀವನ ನಿರ್ವಹಣೆಗೆ ಪತಿಯ ಆದಾಯದ ಶೇಕಡಾ 25 ರಷ್ಟು ಹಣವನ್ನು ಜೀವನಾಂಶವಾಗಿ ನೀಡಬೇಕು ಎಂಬ ರೂಢಿ ಕೇವಲ ಒಂದು ಸಾಮಾನ್ಯ ಮಾರ್ಗಸೂಚಿಯಷ್ಟೇ ಹೊರತು, ಅದು ಕಡ್ಡಾಯವಾಗಿ ಪಾಲಿಸಲೇಬೇಕಾದ ನಿಯಮವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದೆ. ಪ್ರತಿ ಪ್ರಕರಣದ ಸನ್ನಿವೇಶ, ಸಾಕ್ಷ್ಯಗಳನ್ನು ಆಧರಿಸಿ ಜೀವನಾಂಶದ ಮೊತ್ತವನ್ನು ಹೆಚ್ಚು ಅಥವಾ ಕಡಿಮೆ ಮಾಡುವ ಸಂಪೂರ್ಣ ವಿವೇಚನಾ ಅಧಿಕಾರ ನ್ಯಾಯಾಲಯಗಳಿಗಿದೆ ಎಂದು ಹೈಕೋರ್ಟ್ ಹೇಳಿದೆ.

ಕಾನ್ಪುರ ದೇಹತ್‌ನ ಕೌಟುಂಬಿಕ ನ್ಯಾಯಾಲಯವು ತನಗೆ ನೀಡಿದ್ದ 12,000 ರೂ. ಜೀವನಾಂಶವನ್ನು ಹೆಚ್ಚಿಸುವಂತೆ ಕೋರಿ ವಿಚ್ಛೇದಿತ ಮಹಿಳೆ ಸಲ್ಲಿಸಿದ್ದ ಅರ್ಜಿ ಹಾಗೂ ಇದನ್ನು ವಿರೋಧಿಸಿ ಆಕೆಯ ಮಾಜಿ ಪತಿ ಜೈ ಪ್ರಕಾಶ್ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಚಲ್ ಸಚ್‌ದೇವ್ ಅವರ ಪೀಠವು ಜುಲೈ 10 ರಂದು ಈ ಮಹತ್ವದ ಆದೇಶ ಹೊರಡಿಸಿದೆ. ಅಲ್ಲದೆ, ಮಹಿಳೆಯ ಜೀವನಾಂಶವನ್ನು 12,000 ರೂ.ನಿಂದ 20,000 ರೂ. ಕ್ಕೆ ಹೆಚ್ಚಿಸಿ ಆದೇಶಿಸಿದೆ.

‘ನಿವ್ವಳ ಆದಾಯ’ ಎಂದರೆ ಒಟ್ಟು ಸಂಬಳವಲ್ಲ

ಜೀವನಾಂಶವನ್ನು ಲೆಕ್ಕ ಹಾಕುವಾಗ ಕೆಳ ನ್ಯಾಯಾಲಯಗಳು ಮಾಡುವ ಸಾಮಾನ್ಯ ತಪ್ಪುಗಳನ್ನು ಹೈಕೋರ್ಟ್ ಸೂಕ್ಷ್ಮವಾಗಿ ಎತ್ತಿ ತೋರಿಸಿದೆ.

ಕಡ್ಡಾಯ ಕಡಿತಗಳ ನಂತರದ ಗಳಿಕೆ: ಜೀವನಾಂಶ ನಿಗದಿಪಡಿಸಲು ಪರಿಗಣಿಸುವ ಪತಿಯ ‘ನಿವ್ವಳ ಆದಾಯ’ ಎಂದರೆ ಆತನ ಒಟ್ಟು ಸಂಬಳವಲ್ಲ . ಅದರಲ್ಲಿ ಸರ್ಕಾರದ ಕಡ್ಡಾಯ ಕಡಿತಗಳು, ಪಿಎಫ್ ಮತ್ತು ಆದಾಯ ತೆರಿಗೆಯನ್ನು ಕಳೆದ ನಂತರ ಕೈಗೆ ಸಿಗುವ ವಾಸ್ತವಿಕ ಸಂಬಳವನ್ನು ಮಾತ್ರ ನ್ಯಾಯಾಲಯಗಳು ಲೆಕ್ಕಕ್ಕೆ ತೆಗೆದುಕೊಳ್ಳಬೇಕು.

ಅಫಿಡವಿಟ್ ಸಲ್ಲಿಕೆ ಕಡ್ಡಾಯ:ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ, ಪತಿಯಾದವನು ತನ್ನ ನಿಜವಾದ ಆಸ್ತಿ ಮತ್ತು ಸಾಲದ ಹೊಣೆಗಾರಿಕೆಗಳನ್ನು ಮುಚ್ಚಿಡದೆ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸುವುದು ಕಡ್ಡಾಯವಾಗಿದೆ. ಈ ಪ್ರಕರಣದಲ್ಲಿ ಪತಿ ಜೈ ಪ್ರಕಾಶ್ ಇದನ್ನು ಸಲ್ಲಿಸಲು ವಿಫಲರಾಗಿದ್ದನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.

ಮತ್ತಷ್ಟು ಓದಿ: ಕೋರ್ಟ್ ಮೆಟ್ಟಿಲೇರಿದ್ದ 15 ದಂಪತಿ ಮತ್ತೆ ಒಂದಾದ ಕ್ಷಣ: ಅಪರೂಪದ ಘಟನೆಗೆ ಸಾಕ್ಷಿಯಾದ ಧಾರವಾಡ ಕೋರ್ಟ್

ಜೀವನಾಂಶ ಪಡೆಯಲು ಪತ್ನಿಗೆ ಇರಬೇಕಾದ ಷರತ್ತುಗಳು ಕಾನೂನುಬದ್ಧವಾಗಿ ವಿವಾಹವಾದ ಪತ್ನಿ ವಿಚ್ಛೇದನದ ನಂತರ ಜೀವನಾಂಶ ಪಡೆಯಲು ಇರುವ ಅರ್ಹತೆಗಳನ್ನು ಹೈಕೋರ್ಟ್ ಪುನರುಚ್ಚರಿಸಿದೆ.

-ಪತ್ನಿಯು ಸ್ವತಃ ಜೀವನ ನಿರ್ವಹಣೆ ಮಾಡಲು ಅಸಮರ್ಥಳಾಗಿರಬೇಕು.

-ಆಕೆ ವಿಚ್ಛೇದನದ ನಂತರ ಮತ್ತೊಂದು ಮದುವೆಯಾಗಿರಬಾರದು

-ಆಕೆ  ಬೇರೊಬ್ಬ ವ್ಯಕ್ತಿಯ ಜತೆ ಸಂಬಂಧದಲ್ಲಿರಬಾರದು

2017ರ  ‘ಕಲ್ಯಾಣ್ ಡೇ ಚೌಧರಿ ಹಾಗೂ ರೀಟಾ ಡೇ ಚೌಧರಿ’ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್, ಶೇ. 25 ರಷ್ಟು ಹಣ ನೀಡುವ ರೂಢಿ ಕೇವಲ ಒಂದು ತತ್ವವಷ್ಟೇ ಎಂದು ಸ್ಪಷ್ಟಪಡಿಸುವ ಮೂಲಕ ಕೆಳ ನ್ಯಾಯಾಲಯಗಳ ಗೊಂದಲಕ್ಕೆ ತೆರೆ ಎಳೆದಿದೆ.

ಕೌಟುಂಬಿಕ ನ್ಯಾಯಾಲಯದ ದೋಷ ಸರಿಪಡಿಸಿದ ಹೈಕೋರ್ಟ್

ಸಾಮಾನ್ಯವಾಗಿ ಕೆಳ ನ್ಯಾಯಾಲಯಗಳು ನೀಡುವ ಜೀವನಾಂಶದ ಮೊತ್ತದಲ್ಲಿ ಹೈಕೋರ್ಟ್‌ಗಳು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯವು ಪತಿಯ ನಿಜವಾದ ಆದಾಯ ಹಾಗೂ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹಣದುಬ್ಬರವನ್ನು ಲೆಕ್ಕಿಸದೆ, ಯಾವುದೇ ಆಧಾರವಿಲ್ಲದೆ 12,000 ರೂ. ನಿಗದಿಪಡಿಸಿ ತಪ್ಪು ಮಾಡಿತ್ತು.

ಈ ವಸ್ತುಸ್ಥಿತಿಯ ಸಾಕ್ಷ್ಯಗಳನ್ನು ಗಮನಿಸಿದ ಹೈಕೋರ್ಟ್, ಮಹಿಳೆಯ ನ್ಯಾಯಸಮ್ಮತ ಜೀವನಕ್ಕಾಗಿ ಆಕೆಯ ಜೀವನಾಂಶವನ್ನು 20,000 ರೂ.ಗೆ ಏರಿಸಿ, ಆಕೆ ಅರ್ಜಿ ಸಲ್ಲಿಸಿದ ಮೊದಲ ದಿನಾಂಕದಿಂದಲೇ ಅನ್ವಯವಾಗುವಂತೆ ಬಾಕಿ ಹಣವನ್ನೂ ಪಾವತಿಸಲು ಪತಿಗೆ ಆದೇಶಿಸಿದೆ. ಇದು ದೇಶದ ಕೌಟುಂಬಿಕ ಕಾನೂನು ವಲಯದಲ್ಲಿ ಪತಿ ಹಾಗೂ ಪತ್ನಿಯರಿಬ್ಬರ ಆರ್ಥಿಕ ಹಕ್ಕುಗಳನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ತೀರ್ಪಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us