ವಕ್ಫ್ ಮಸೂದೆ ವಿಷಯದಲ್ಲಿ ವಿಪಕ್ಷಗಳಿಂದ ದೇಶವನ್ನು ಇಬ್ಭಾಗಿಸುವ ಪ್ರಯತ್ನ; ಅಮಿತ್ ಶಾ ಆರೋಪ

|

Updated on: Apr 02, 2025 | 8:24 PM

ಇಂದು ಸಂಜೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಕ್ಫ್‌ಗಾಗಿ ಗೊತ್ತುಪಡಿಸಲಾದ ಆಸ್ತಿಗಳ ಪಟ್ಟಿಯನ್ನು ಎತ್ತಿ ತೋರಿಸಿದರು. ಈ ಪಟ್ಟಿಯಲ್ಲಿ ದೇವಾಲಯಗಳು, ಇತರ ಧಾರ್ಮಿಕ ಸಂಸ್ಥೆಗಳು, ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು, ಸರ್ಕಾರಕ್ಕೆ ಸೇರಿದ ಭೂಮಿ ಸೇರಿದೆ. ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಇಂದು ವಕ್ಫ್ ತಿದ್ದುಪಡಿ ಮಸೂದೆ ಮಂಡನೆಯಾಯಿತು.

ವಕ್ಫ್ ಮಸೂದೆ ವಿಷಯದಲ್ಲಿ ವಿಪಕ್ಷಗಳಿಂದ ದೇಶವನ್ನು ಇಬ್ಭಾಗಿಸುವ ಪ್ರಯತ್ನ; ಅಮಿತ್ ಶಾ ಆರೋಪ
Amit Shah In Parliament
Follow us on

ನವದೆಹಲಿ, ಏಪ್ರಿಲ್ 2: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಲೋಕಸಭೆಯಲ್ಲಿ ಮಂಡಿಸಿರುವ ವಿವಾದಾತ್ಮಕ ವಕ್ಫ್ ತಿದ್ದುಪಡಿ ಮಸೂದೆ 2024ಗೆ (Waqf Amendment Bill 2024) ವಿರೋಧ ವ್ಯಕ್ತಪಡಿಸುತ್ತಿರುವ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ವಕ್ಫ್ ತಿದ್ದುಪಡಿ ವಿಧೇಯಕದ ಬಗ್ಗೆ ವಿಪಕ್ಷಗಳು ವದಂತಿ ಹಬ್ಬಿಸುತ್ತಿವೆ. ಸರ್ಕಾರಿ ಸಂಪತ್ತನ್ನು ದಾನ ಮಾಡುವುದಕ್ಕೆ ನಾವು ಬಿಡುವುದಿಲ್ಲ. 1995ರಿಂದಲೂ ವಕ್ಫ್​ ಪರಿಷತ್ ಮತ್ತು ವಕ್ಫ್​ ಬೋರ್ಡ್​ ಇದೆ. ವೋಟ್ ಬ್ಯಾಂಕ್​ಗಾಗಿ​ ವಿಪಕ್ಷಗಳು ಈ ಮಸೂದೆಗೆ ವಿರೋಧ ಮಾಡುತ್ತಿವೆ. ಬೇಕೆಂದೇ ವಕ್ಫ್ ತಿದ್ದುಪಡಿ ವಿಧೇಯಕವನ್ನು ಪ್ರತಿಪಕ್ಷಗಳು ವಿರೋಧಿಸುತ್ತಿವೆ. ಸುಳ್ಳು ವದಂತಿಗಳನ್ನು ಹಬ್ಬಿಸಿ ಅಲ್ಪಸಂಖ್ಯಾತರನ್ನು ಭಯ ಬೀಳಿಸುತ್ತಿದ್ದಾರೆ. ವಿರೋಧ ಪಕ್ಷಗಳು ದೇಶವನ್ನು ಇಬ್ಭಾಗಿಸುವ ಕೆಲಸ ಮಾಡುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮೋದಿ ಸರ್ಕಾರ ವೋಟ್ ಬ್ಯಾಂಕ್​ಗಾಗಿ ಕೆಲಸ ಮಾಡುವುದಿಲ್ಲ. ನಮ್ಮ ಸರ್ಕಾರ ದೇಶದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ವಿರೋಧ ಪಕ್ಷಗಳು ಅಲ್ಪಸಂಖ್ಯಾತರಿಗೆ ಪ್ರಚೋದನೆ ನೀಡುತ್ತಿವೆ. ಅಲ್ಪಸಂಖ್ಯಾತರ ಹೆಸರಿನಲ್ಲಿ ಪ್ರತಿಪಕ್ಷಗಳು ಧಮ್ಕಿ ಹಾಕುತ್ತಿವೆ. 2026ರಲ್ಲಿ ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಸೀಟ್​ ನಾವು ಗೆಲ್ಲುತ್ತೇವೆ. 1913-2013ರವರೆಗೆ ವಕ್ಫ್​ ಬೋರ್ಡ್​​ ಆಸ್ತಿ 18 ಲಕ್ಷ ಎಕರೆ ಇತ್ತು. 2013ರ ಬಳಿಕ 21 ಲಕ್ಷ ಎಕರೆ ವಕ್ಫ್​ ಬೋರ್ಡ್​ಗೆ ಸೇರ್ಪಡೆಯಾಗಿದೆ. ಈ ಮಸೂದೆಯಿಂದ ಸಾರ್ವಜನಿಕರ ಹೆಸರಿನಲ್ಲಿರುವ ನೈಜ ಸಂಪತ್ತು ಸುರಕ್ಷಿತವಾಗಿ ಇರಲಿದೆ. ಸರ್ಕಾರಕ್ಕೆ ಸೇರಿರುವ ಆಸ್ತಿ, ರೈತರ ಜಮೀನು ಸುರಕ್ಷಿತವಾಗಿರಲಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಹೇಳಿದ್ದಾರೆ.

ಇದನ್ನೂ ಓದಿ: Explainer: ವಕ್ಫ್ ತಿದ್ದುಪಡಿ ಮಸೂದೆಯಲ್ಲೇನಿದೆ? ಪ್ರತಿಭಟನೆ, ವಿವಾದಕ್ಕೆ ಕಾರಣವಾದ ಅಂಶಗಳೇನು?

ಇದನ್ನೂ ಓದಿ
ಹೊಸ ಪಾಡ್‌ಕಾಸ್ಟ್‌ನಲ್ಲಿ ಡೈವೋರ್ಸ್ ಬಗ್ಗೆ ಚರ್ಚಿಸಿದ ಮಿಚೆಲ್ ಒಬಾಮಾ
ಪಾಕಿಸ್ತಾನದಲ್ಲಿ ರೈಲು ಹೈಜಾಕ್;27 ಉಗ್ರರ ಹತ್ಯೆ, 155 ಒತ್ತೆಯಾಳುಗಳ ರಕ್ಷಣೆ
ಪಾಕಿಸ್ತಾನದಲ್ಲಿ ಉಗ್ರರಿಂದ ಪ್ಯಾಸೆಂಜರ್​​ ರೈಲು ಹೈಜಾಕ್; 11 ಸೈನಿಕರ ಹತ್ಯೆ
ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಶಾಸಕರಿಂದ ಪರಸ್ಪರ ಹಲ್ಲೆ

“ವಕ್ಫ್ ಅನ್ನು ವಿರೋಧಿಸುವ ಮೂಲಕ ತಮ್ಮ ಮತಬ್ಯಾಂಕ್ ಅನ್ನು ಬಲಪಡಿಸಲು ಮುಸ್ಲಿಮರ ಅನುಕಂಪವನ್ನು ಗಳಿಸಬಹುದು ಎಂದು ವಿರೋಧ ಪಕ್ಷಗಳು ಭಾವಿಸುತ್ತಿವೆ. ಆದರೆ ಅವರಿಗೆ ಅರ್ಥವಾಗದ ಸಂಗತಿಯೆಂದರೆ 4 ವರ್ಷಗಳಲ್ಲಿ ಮುಸ್ಲಿಮರು ತಮ್ಮ ಒಳಿತಿಗಾಗಿ ಈ ಕಾನೂನನ್ನು ಅರಿತುಕೊಳ್ಳುತ್ತಾರೆ ಎಂಬುದಾಗಿದೆ” ಎಂದು ಅಮಿತ್ ಶಾ ಹೇಳಿದ್ದಾರೆ.


ವಕ್ಫ್ ತಿದ್ದುಪಡಿ ಮಸೂದೆಯು ಯಾವುದೇ ಮುಸ್ಲಿಮೇತರರನ್ನು ವಕ್ಫ್ ಮಂಡಳಿಗಳ ನಿರ್ವಹಣೆಗೆ ತರುವುದಿಲ್ಲ. ನಮ್ಮ ಸರ್ಕಾರವೂ ಹಾಗೆ ಮಾಡಲು ಉದ್ದೇಶಿಸಿಲ್ಲ ಎಂದ ಅಮಿತ್ ಶಾ ಇತಿಹಾಸದಿಂದ ಹಲವಾರು ಪ್ರಕರಣಗಳು ಮತ್ತು ನಿದರ್ಶನಗಳನ್ನು ಪಟ್ಟಿ ಮಾಡಿದ್ದಾರೆ. ಇದರಲ್ಲಿ ವಕ್ಫ್ ಮಂಡಳಿಯು ಅಸ್ತಿತ್ವದಲ್ಲಿರುವ ವಕ್ಫ್ ಕಾನೂನುಗಳ ಕ್ಷುಲ್ಲಕ ನಿಬಂಧನೆಗಳನ್ನು ಬಳಸಿಕೊಂಡು ಹೇಗೆ ಮುಸ್ಲಿಮೇತರರು ಮತ್ತು ದೇವಾಲಯಗಳ ಒಡೆತನದ ಭೂಮಿಯನ್ನು ದುರುದ್ದೇಶದಿಂದ ಪಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ. ಅಪಾರ ಪ್ರಮಾಣದ ಭೂಮಿ ಮತ್ತು ಆಸ್ತಿಗಳನ್ನು ವಕ್ಫ್ ವಶಪಡಿಸಿಕೊಂಡಿದೆ, ಭೂಕಬಳಿಕೆಗೆ ನೆಪವಾಗಿ ವಕ್ಫ್ ಅನ್ನು ಹೆಚ್ಚಾಗಿ ಬಳಸಲಾಗುತ್ತಿದೆ ಎಂದು ಅಮಿತ್ ಶಾ ಟೀಕಿಸಿದ್ದಾರೆ.


ಇದನ್ನೂ ಓದಿ: Waqf Amendment Bill: ಸಂಸತ್ತಿನ ಕಟ್ಟಡವನ್ನೂ ವಕ್ಫ್ ಆಸ್ತಿ ಎನ್ನುತ್ತಿದ್ದರು; ಲೋಕಸಭೆಯಲ್ಲಿ ಸಚಿವ ಕಿರಣ್ ರಿಜಿಜು ಟೀಕೆ

ಅಮಿತ್ ಶಾ ಉಲ್ಲೇಖಿಸಿದ ವಕ್ಫ್ ಮಂಡಳಿಯ ಭೂಕಬಳಿಕೆಯ ಉದಾಹರಣೆಗಳು ಇಲ್ಲಿವೆ:

  1. ವಕ್ಫ್ ಮಂಡಳಿಯ ಒಡೆತನದ 500 ಕೋಟಿ ರೂ. ಮೌಲ್ಯದ ಪ್ರಮುಖ ಭೂಮಿಯನ್ನು ಪಂಚತಾರಾ ಹೋಟೆಲ್‌ಗೆ ತಿಂಗಳಿಗೆ ಕೇವಲ 12,000 ರೂ. ಬಾಡಿಗೆಗೆ ನೀಡಲಾಗಿದ್ದು, ಇದು ದುರುಪಯೋಗ ಮತ್ತು ಪಕ್ಷಪಾತದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.
  2. ಕರ್ನಾಟಕದ ಮಣಪ್ಪಾಡಿ ಸಮಿತಿಯು ಸುಮಾರು 29,000 ಎಕರೆ ವಕ್ಫ್ ಭೂಮಿಯನ್ನು ವಿದೇಶಿ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ ಎಂದು ವರದಿ ಮಾಡಿದೆ. ಇದು ಗಮನಾರ್ಹ ಆದಾಯ ನಷ್ಟಕ್ಕೆ ಕಾರಣವಾಗಿದೆ.
  3. 2001 ಮತ್ತು 2012ರ ನಡುವೆ, 2 ಲಕ್ಷ ಕೋಟಿ ರೂ. ಮೌಲ್ಯದ ವಕ್ಫ್ ಆಸ್ತಿಗಳನ್ನು ಖಾಸಗಿ ಸಂಸ್ಥೆಗಳಿಗೆ 100 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದ್ದು, ಈ ಸ್ವತ್ತುಗಳ ದೀರ್ಘಾವಧಿಯ ನಿಯಂತ್ರಣ ಮತ್ತು ಸರಿಯಾದ ಬಳಕೆಯ ಬಗ್ಗೆ ಕಳವಳಗಳನ್ನು ಹುಟ್ಟುಹಾಕಿದೆ.
  4. ಕರ್ನಾಟಕ ಹೈಕೋರ್ಟ್ ಮಧ್ಯಪ್ರವೇಶಿಸಿ ಧಾರ್ಮಿಕ ಟ್ರಸ್ಟ್‌ಗಳನ್ನು ಒಳಗೊಂಡ ಕಾನೂನು ಹೋರಾಟಗಳು ಮತ್ತು ಭೂ ವಿವಾದಗಳನ್ನು ಎತ್ತಿ ತೋರಿಸಿತು.
  5. ಕರ್ನಾಟಕದ ವಿಜಯಪುರದ ಹೊನ್ವಾಡ್ ಗ್ರಾಮದಲ್ಲಿ, ವಕ್ಫ್ ಮಂಡಳಿಯು ಹಕ್ಕು ಮಂಡಿಸಿದ ನಂತರ 1,500 ಎಕರೆ ಭೂಮಿ ವಿವಾದಕ್ಕೆ ಒಳಗಾಯಿತು. ಇದು ಕಾನೂನು ಮತ್ತು ಆಡಳಿತಾತ್ಮಕ ಸಂಘರ್ಷಗಳಿಗೆ ಕಾರಣವಾಯಿತು.
  6. ಪೂಜ್ಯ ದತ್ತಪೀಠ ದೇವಸ್ಥಾನಕ್ಕೆ ಸೇರಿದ ಭೂಮಿಯ ಮೇಲೆ ಕರ್ನಾಟಕ ವಕ್ಫ್ ಮಂಡಳಿಯು ಹಕ್ಕು ಮಂಡಿಸಿ, ಅದನ್ನು ಕಾನೂನು ವಿವಾದಕ್ಕೆ ಸಿಲುಕಿಸಿತು.
  7. ಕೇರಳದ ಥಳಿಪರಂಬ ಪಟ್ಟಣದಲ್ಲಿ 600 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಸಮರ್ಥಿಸಲು 7,500 ವರ್ಷಗಳ ಹಿಂದಿನ ಹಕ್ಕನ್ನು ಉಲ್ಲೇಖಿಸಲಾಯಿತು.
  8. ತಮಿಳುನಾಡಿನಲ್ಲಿ ದೇವಸ್ಥಾನದ ಭೂಮಿ ವಕ್ಫ್​ ಬೋರ್ಡ್​ಗೆ ಹಂಚಿಕೆ ಮಾಡಲಾಗಿದೆ. 1500 ವರ್ಷಗಳ ಪುರಾತನ ದೇವಸ್ಥಾನದ ಭೂಮಿ ಕೊಟ್ಟಿದ್ದಾರೆ. ಈಸಾಯಿ ಸಮುದಾಯದ ಜಮೀನನ್ನು ವಕ್ಫ್​ ಬೋರ್ಡ್​ ಕಬಳಿಸಿದೆ.
  9. ವಕ್ಫ್ ಮಂಡಳಿಯು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಮಹಾದೇವ ಮಂದಿರಕ್ಕೆ ಸೇರಿದ ಭೂಮಿಯ ಮೇಲೆ ಹಕ್ಕು ಮಂಡಿಸಿತು. ಇದು ಹಿಂದೂ ದೇವಾಲಯ ಅಧಿಕಾರಿಗಳು ಮತ್ತು ವಕ್ಫ್ ಅಧಿಕಾರಿಗಳ ನಡುವೆ ವಿವಾದಗಳಿಗೆ ಕಾರಣವಾಯಿತು.
  10. ಪ್ರಯಾಗರಾಜ್​ನಲ್ಲೂ ವಕ್ಫ್​ ಬೋರ್ಡ್​ಗೆ ಆಸ್ತಿ ಕೊಟ್ಟಿದ್ದಾರೆ. ಯುಪಿಎ ಸರ್ಕಾರ ವಕ್ಫ್​ ಬೋರ್ಡ್​ಗೆ ಆಸ್ತಿ ಕೊಟ್ಟಿದೆ. ಎಲ್ಲ ರಾಜ್ಯಗಳಲ್ಲೂ ವಕ್ಫ್​ ಬೋರ್ಡ್​ ಸರ್ಕಾರಿ ಆಸ್ತಿಯನ್ನು ಕಬಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:24 pm, Wed, 2 April 25