AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಬೆನ್ನಲ್ಲೇ ಅಸ್ಸಾಂನಲ್ಲೂ ನಕಲಿ ಔಷಧ ಜಾಲ ಪತ್ತೆ: 2 ಕೋಟಿ ರೂ. ಮೌಲ್ಯದ ಪೇನ್ ಕಿಲ್ಲರ್, ಕಫ್ ಸಿರಪ್ ವಶ

ಕರ್ನಾಟಕದಲ್ಲಿ ಭಾರಿ ನಕಲಿ ಔಷಧ ಜಾಲ ಪತ್ತೆಯಾದ ಬೆನ್ನಲ್ಲೇ ಅಸ್ಸಾಂನಲ್ಲೂ ಅಕ್ರಮ ಔಷಧ ದಾಸ್ತಾನು ಪತ್ತೆಯಾಗಿದೆ. ಕಾಛರ್ ಜಿಲ್ಲೆಯಲ್ಲಿ ಪೊಲೀಸರು 2 ಕೋಟಿ ರೂ. ಮೌಲ್ಯದ 15,900 ಕೋಡೆನ್ ಆಧಾರಿತ ಕಫ್ ಸಿರಪ್ ಬಾಟಲಿ ಹಾಗೂ 2,600 ಪೇನ್‌ಕಿಲ್ಲರ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದು, ಒಬ್ಬನನ್ನು ಬಂಧಿಸಿದ್ದಾರೆ.

ಕರ್ನಾಟಕದ ಬೆನ್ನಲ್ಲೇ ಅಸ್ಸಾಂನಲ್ಲೂ ನಕಲಿ ಔಷಧ ಜಾಲ ಪತ್ತೆ: 2 ಕೋಟಿ ರೂ. ಮೌಲ್ಯದ ಪೇನ್ ಕಿಲ್ಲರ್, ಕಫ್ ಸಿರಪ್ ವಶ
ಅಸ್ಸಾಂನಲ್ಲೂ ನಕಲಿ ಔಷಧ ಜಾಲ ಪತ್ತೆImage Credit source: tv9
ಗಣಪತಿ ಶರ್ಮಾ
|

Updated on: Aug 22, 2026 | 8:31 AM

Share

ಮುಖ್ಯಾಂಶಗಳು

  • ಅಸ್ಸಾಂನಲ್ಲಿ ₹2 ಕೋಟಿ ಮೌಲ್ಯದ ನಕಲಿ ಔಷಧ ಜಪ್ತಿ
  • 15,900 ಕಫ್ ಸಿರಪ್ ಬಾಟಲಿ ವಶ
  • ಕರ್ನಾಟಕದ ಬಳಿಕ ಮತ್ತೊಂದು ಜಾಲ ಪತ್ತೆ

ಸಿಲ್ಚಾರ್, ಆಗಸ್ಟ್ 22: ಕರ್ನಾಟಕದಲ್ಲಿ (Karnataka) ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಬಳಸುವ ನಕಲಿ ಔಷಧಿಗಳನ್ನು (Fake Medicine) ತಯಾರಿಸಿ ಮಾರಾಟ ಮಾಡುತ್ತಿದ್ದ ದೊಡ್ಡ ಜಾಲ ಪತ್ತೆಯಾದ ಬೆನ್ನಲ್ಲೇ ಅಸ್ಸಾಂನಲ್ಲೂ ಅಕ್ರಮ ಔಷಧ ದಾಸ್ತಾನು ಪ್ರಕರಣ ಬೆಳಕಿಗೆ ಬಂದಿದೆ. ಕಾಛರ್ ಜಿಲ್ಲೆಯ ಪೊಲೀಸರು 2 ಕೋಟಿ ರೂ. ಮೌಲ್ಯದ ಕೋಡೆನ್ ಆಧಾರಿತ ಕಫ್ ಸಿರಪ್ ಮತ್ತು ಪೇನ್‌ಕಿಲ್ಲರ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. 18,500ಕ್ಕೂ ಹೆಚ್ಚು ಕೆಮ್ಮಿನ ಸಿರಪ್ ಬಾಟಲ್​ಗಳನ್ನು ಜಪ್ತಿ ಮಾಡಲಾಗಿದೆ. ಉಧಾರ್‌ಬಂಧ ಪೊಲೀಸ್ ಠಾಣೆ ವ್ಯಾಪ್ತಿಯ ಗೊಸ್ಸಾಯಿಪುರದಲ್ಲಿ ಗುರುವಾರ ಸಂಜೆ ಕಾರ್ಯಾಚರಣೆ ನಡೆದಿದೆ. ಆರೋಪಿಯ ಅಂಗಡಿಯ ಸಮೀಪದ ಗೋದಾಮಿನಲ್ಲಿ ಅಕ್ರಮ ಔಷಧಗಳ ದಾಸ್ತಾನು ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 15,900 ಬಾಟಲಿ ಕೋಡೆನ್ ಆಧಾರಿತ ಕಫ್ ಸಿರಪ್ ಹಾಗೂ 2,600 ಪೇನ್‌ಕಿಲ್ಲರ್ ಮಾತ್ರೆಗಳು ಪತ್ತೆಯಾಗಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 57 ವರ್ಷದ ಸೋಹುದ್ ಅಹ್ಮದ್ ಲಸ್ಕರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಶಪಡಿಸಿಕೊಂಡ ಔಷಧಗಳ ಒಟ್ಟು ಅಕ್ರಮ ಮಾರುಕಟ್ಟೆ ಮೌಲ್ಯ ಸುಮಾರು 2 ಕೋಟಿ ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ನಕಲಿ ಔಷಧ ಜಾಲದ ಬೆನ್ನಲ್ಲೇ ಮತ್ತೊಂದು ಪ್ರಕರಣ

ಕರ್ನಾಟಕದಲ್ಲಿ ಇತ್ತೀಚೆಗೆ ನಕಲಿ ಔಷಧಿ ದಂಧೆ ಬಯಲಾಗಿದ್ದು, ದೇಶಾದ್ಯಂತ ನಕಲಿ ಔಷಧ ಜಾಲದ ಬಗ್ಗೆ ಆತಂಕ ಹೆಚ್ಚಿಸಿತ್ತು. ಇದರ ನಡುವೆಯೇ ಅಸ್ಸಾಂನಲ್ಲಿ ನಕಲಿ ಔಷಧ ಪ್ರಕರಣ ಪತ್ತೆಯಾಗಿದೆ. ಕರ್ನಾಟಕದ ಪ್ರಕರಣದಲ್ಲಿ ರಾಮನಗರದ ತೋಟದ ಮನೆಯಲ್ಲಿ ನಕಲಿ ಔಷಧಿಗಳನ್ನು ತಯಾರಿಸಿ, ಅಮೆರಿಕ ಮೂಲದ ಕಂಪನಿಗಳ ಲೇಬಲ್‌ಗಳನ್ನು ಅಂಟಿಸಿ ಮಾರಾಟ ಮಾಡುತ್ತಿದ್ದ ಜಾಲ ಪತ್ತೆಯಾಗಿತ್ತು. ಪ್ರಕರಣದಲ್ಲಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದ್ದು, ಕಿಂಗ್​ಪಿನ್ ಪ್ರಶಾಂತ್ ಎಂಬಾತನಿಗಾಗಿ ಶೋಧ ನಡೆಯುತ್ತಿದೆ. 40,000ಕ್ಕೂ ಹೆಚ್ಚು ನಕಲಿ ಕ್ಯಾನ್ಸರ್ ಔಷಧ ಬಾಟಲಿಗಳನ್ನು ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ವಂಶಿಕೃಷ್ಣ ನೇತೃತ್ವದಲ್ಲಿ ವಿಶೇಷ ತನಿಖಾ ದಳ (SIT) ರಚಿಸಿದೆ. ಪ್ರಮುಖ ಆರೋಪಿ ಪ್ರಶಾಂತ್‌ಗಾಗಿ ಲುಕ್‌ಔಟ್ ನೋಟಿಸ್ ಕೂಡ ಜಾರಿಯಾಗಿದೆ. ಆತ ವಿದೇಶದಲ್ಲಿದ್ದಾನೆ ಎಂದು ಕುಟುಂಬಸ್ಥರು ಹೇಳಿದ್ದರೂ, ಭಾರತದಲ್ಲೇ ಇರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಅಸ್ಸಾಂ ಪ್ರಕರಣದ ಹಿಂದಿನ ಜಾಲದ ಶೋಧ

ಅಸ್ಸಾಂ ಪ್ರಕರಣದಲ್ಲಿ ವಶಪಡಿಸಿಕೊಂಡ ಔಷಧಗಳು ಗೋದಾಮಿಗೆ ಹೇಗೆ ತಲುಪಿದವು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದಂಧೆಯ ಮುಂದಿನ ಹಾಗೂ ಹಿಂದಿನ ಸಂಪರ್ಕಗಳನ್ನು ಪತ್ತೆಹಚ್ಚಲು ತನಿಖಾ ತಂಡಗಳು ಮುಂದಾಗಿವೆ. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಅಸ್ಸಾಂ ನಕಲಿ ಔಷಧ ಜಾಲದ ಬಗ್ಗೆ ಪೊಲೀಸರು ಹೇಳಿದ್ದೇನು?

ವಶಪಡಿಸಿಕೊಂಡ ಔಷಧಗಳ ಮೂಲ ಯಾವುದು ಮತ್ತು ಅವುಗಳನ್ನು ಎಲ್ಲಿಗೆ ಸಾಗಿಸಲು ಉದ್ದೇಶಿಸಲಾಗಿತ್ತು ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕೋಡೆನ್ ಆಧಾರಿತ ಕಫ್ ಸಿರಪ್‌ಗಳನ್ನು ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಸಾಗಿಸುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ಈ ಪ್ರಕರಣದಲ್ಲೂ ಅಂತಹ ಸಂಪರ್ಕಗಳ ಸಾಧ್ಯತೆಯನ್ನು ತಳ್ಳಿಹಾಕಲಾಗಿಲ್ಲ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮನಸ್ ಸೈಕಿಯಾ ತಿಳಿಸಿದ್ದಾರೆ.

ಇದನ್ನೂ ಓದಿ: ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್ ಹಾಕಲು ಹೊಸ ‘QR ಕೋಡ್

ಕರ್ನಾಟಕದಲ್ಲಿ ನಕಲಿ ಕ್ಯಾನ್ಸರ್ ಔಷಧಿ ಜಾಲ ಪತ್ತೆಯಾದ ಬೆನ್ನಲ್ಲೇ ಅಸ್ಸಾಂನಲ್ಲಿ ಅಕ್ರಮ ಔಷಧಗಳ ದೊಡ್ಡ ದಾಸ್ತಾನು ಪತ್ತೆಯಾಗಿರುವುದು, ದೇಶದಲ್ಲಿ ಔಷಧಗಳ ಉತ್ಪಾದನೆ, ವಿತರಣೆ ಮತ್ತು ಮಾರಾಟದ ಮೇಲಿನ ನಿಗಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸುವ ಅಗತ್ಯವನ್ನು ಎತ್ತಿ ತೋರಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us