‘ಮೀಸಲಾತಿ ಹೊಡೆದೋಡಿಸಿ ಆಂದೋಲನ’ ಶುರುವಾಗಿದ್ದು ಹೇಗೆ? ಈ ಚಳವಳಿಗೆ ಕಾರಣವೇನು?
Reservation Hatao Andolan: ದೆಹಲಿಯ ಜಂತರ್ ಮಂತರ್‌ನಲ್ಲಿ 'ಮೀಸಲಾತಿ ಹಟಾವೋ ಆಂದೋಲನ' ಶುರುವಾಗಿದೆ. ದೇಶಾದ್ಯಂತ ಪ್ರಚಲಿತದಲ್ಲಿರುವ ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸಿ, ಅದರ ಬದಲಿಗೆ ಆರ್ಥಿಕತೆಯ ಆಧಾರದಲ್ಲಿ ಹಾಗೂ ಅರ್ಹತೆಯನ್ನು ಗಮನದಲ್ಲಿ ಇಟ್ಟುಕೊಂಡು ಅವಕಾಶ ನೀಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಚಳವಳಿ ಇದಾಗಿದೆ. "ರಿಸರ್ವೇಶನ್ ಹಟಾವೋ ಆಂದೋಲನ್" ಎಂಬ ಇನ್‌ಸ್ಟಾಗ್ರಾಮ್ ಆಧಾರಿತ ಪುಟದ ಡಿಜಿಟಲ್ ಅಭಿಯಾನದ ಮಧ್ಯೆ ಈ ಬೆಳವಣಿಗೆ ಸಂಭವಿಸಿದೆ. ಈ ಅಭಿಯಾನವು ಕಾಕ್ರೋಚ್ ಜನತಾ ಪಕ್ಷ (CJP) ಬಳಸುವ ಪ್ರತಿಭಟನಾ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ವೇಗವನ್ನು ಪಡೆದುಕೊಂಡಿದೆ. ಈ ಆಂದೋಲನ ಶುರುವಾಗಿದ್ದು ಹೇಗೆ? ಇದನ್ನು ಹುಟ್ಟುಹಾಕಿದ್ದು ಯಾರು? ಎಂಬೆಲ್ಲ ವಿವರಗಳು ಇಲ್ಲಿವೆ.

ನವದೆಹಲಿ, ಆಗಸ್ಟ್ 21: ಭಾರತದಲ್ಲಿ ಯುವಜನರು ಹೆಚ್ಚಾಗಿ ಬಳಸುತ್ತಿರುವ ಇನ್ಸ್ಟಾಗ್ರಾಂ, ಫೇಸ್ಬುಕ್, ಎಕ್ಸ್ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ದೇಶದ ಪ್ರಚಲಿತ ಸಮಸ್ಯೆಗಳ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಈ ಸಾಮಾಜಿಕ ಜಾಲತಾಣಗಳು ಕೇವಲ ಕೆಲವು ವಿಷಯಗಳನ್ನು ಚರ್ಚೆ ಮಾಡುವ ವೇದಿಕೆಗಳಾಗಿ ಮಾತ್ರ ಉಳಿದಿಲ್ಲ. ಇದು ಸಮಾನಮನಸ್ಕರನ್ನು ಒಂದುಗೂಡಿಸಿ, ಸಮಸ್ಯೆಯ ವಿರುದ್ಧ ಧ್ವನಿಯೆತ್ತುವ ಆಂದೋಲನಕ್ಕೂ ಹಾದಿ ಮಾಡಿಕೊಡುತ್ತಿದೆ. ಇದಕ್ಕೆ ಇತ್ತೀಚೆಗೆ ನಡೆದಿದ್ದ ಕಾಕ್ರೋಚ್ ಜನತಾ ಪಾರ್ಟಿಯ (Cockroach Janata Party) ಪ್ರತಿಭಟನೆಯೇ ಸಾಕ್ಷಿ. ಸಾಮಾಜಿಕ ಜಾಲತಾಣದಲ್ಲಿ ಒಂದು ಪೇಜ್ ಸೃಷ್ಟಿ ಮಾಡುವ ಮೂಲಕ ಶುರುವಾದ ಈ ಸಿಜೆಪಿ ಅಭಿಯಾನ ಕೊನೆಗೆ ದೇಶದ ಶಿಕ್ಷಣ ಮಂತ್ರಿಗಳನ್ನೇ ಕೆಳಗಿಳಿಸುವಷ್ಟರ ಮಟ್ಟಿಗೆ ಬೆಳೆಯಿತು. ಇದೀಗ ರಿಸರ್ವೇಷನ್ ಹಟಾವೋ (Reservation Hatao Andolan) ಎಂಬ ಇನ್ಸ್ಟಾಗ್ರಾಂ ಪೇಜ್ ಮೂಲಕ ಶುರುವಾದ ಅಭಿಯಾನ ದೆಹಲಿಯಲ್ಲಿ ಪ್ರತಿಭಟನೆ ಆಯೋಜಿಸುವ ಮಟ್ಟಿಗೆ ಬೆಳೆದಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ 5.6 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ರಿಸರ್ವೇಷನ್ ಹಟಾವೋ (ಮೀಸಲಾತಿ ಹೊಡೆದೋಡಿಸಿ) ಅಭಿಯಾನವು ಇಂದು ಜಂತರ್ ಮಂತರ್‌ನಲ್ಲಿ ಮೀಸಲಾತಿ ವಿರೋಧಿ ಪ್ರತಿಭಟನೆಗೆ ಕರೆ ನೀಡಿತ್ತು. ಈ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿರಲಿಲ್ಲವಾದ್ದರಿಂದ ಈ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಪ್ರಯತ್ನಿಸಿದರು.
ಏನಿದರ ಹಿನ್ನೆಲೆ?:
ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ “Reservation Hatao Andolan” (ಮೀಸಲಾತಿ ಹೊಡೆದೋಡಿಸಿ) ಎಂಬ ಅಭಿಯಾನವು ಲಕ್ಷಾಂತರ ಯುವಕರನ್ನು ತಲುಪಿ ತೀವ್ರ ಸಂಚಲನ ಮೂಡಿಸಿದೆ. ಈ ಡಿಜಿಟಲ್ ಚಳವಳಿಯ ಭಾಗವಾಗಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಆಂದೋಲನಕಾರರು ಕರೆ ನೀಡಿದ್ದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದೆಹಲಿ ಪೊಲೀಸರು ಆರಂಭದಲ್ಲಿ ಜಂತರ್ ಮಂತರ್ ಪ್ರದೇಶದಲ್ಲಿ ಅನುಮತಿಯಿಲ್ಲದೆ ಐದಕ್ಕಿಂತ ಹೆಚ್ಚು ಜನರು ಸಾರ್ವಜನಿಕವಾಗಿ ಸೇರುವುದನ್ನು ನಿಷೇಧಿಸಿ, ಬಿಗಿ ಭದ್ರತೆಯನ್ನು ಏರ್ಪಡಿಸಿದ್ದರು.
ಇದನ್ನೂ ಓದಿ: ಮೀಸಲಾತಿ ವ್ಯವಸ್ಥೆ ಬಗ್ಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ಈ ‘ಮೀಸಲಾತಿ ಹೊಡೆದೋಡಿಸಿ’ ಅಭಿಯಾನಕ್ಕೆ ಯಾರೂ ನೇತೃತ್ವ ವಹಿಸಿಕೊಂಡಿಲ್ಲ. ಅನಾಮಧೇಯ ಪೇಜ್ ನೆಟ್‌ವರ್ಕ್‌ಗಳ ಮೂಲಕ ವೈರಲ್ ಆದ ಸಾಮಾಜಿಕ ಜಾಲತಾಣ ಅಭಿಯಾನವಾಗಿ ಇದು ಪ್ರಾರಂಭವಾಯಿತು. ಇದಕ್ಕೆ ಯಾವುದೇ ಒಬ್ಬ ನಿರ್ದಿಷ್ಟ ಸಂಸ್ಥಾಪಕರಿಲ್ಲದಿದ್ದರೂ, ಸಾರ್ವಜನಿಕ ವ್ಯಕ್ತಿಗಳು, ವಿಶ್ಲೇಷಕರು ಮತ್ತು ಕಂಟೆಂಟ್ ಕ್ರಿಯೇಟರ್‌ಗಳು ಈ ಅಭಿಯಾನದ ಸಂದೇಶವನ್ನು ವಿಸ್ತರಿಸುವ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಜೂನ್-ಜುಲೈನಲ್ಲಿ ದೇಶದಲ್ಲಿ ನಡೆದ ನೀಟ್ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ಬೃಹತ್ ವಿದ್ಯಾರ್ಥಿ ಪ್ರತಿಭಟನೆಗಳು ನಡೆದಿದ್ದವು. ಈ ಪ್ರತಿಭಟನೆಯು ಯುವಜನರಲ್ಲಿ ತಮ್ಮ ಭವಿಷ್ಯ, ಪರೀಕ್ಷಾ ಪದ್ಧತಿ ಹಾಗೂ ಸರ್ಕಾರಿ ಉದ್ಯೋಗಗಳ ಲಭ್ಯತೆಯ ಕುರಿತು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿತು. CJP ಪ್ರತಿಭಟನೆಗಳ ನಂತರ, ‘ಜನರಲ್ ಕ್ಯಾಟಗರಿ’ (ಸಾಮಾನ್ಯ ವರ್ಗ) ಹಾಗೂ ಜಿನ್-ಝೀ (Gen Z) ಯುವಕರು ಇನ್‌ಸ್ಟಾಗ್ರಾಮ್ ಸೇರಿದಂತೆ ಪ್ರಮುಖ ಡಿಜಿಟಲ್ ವೇದಿಕೆಗಳಲ್ಲಿ ಒಂದಾಗಿ, ಮೀಸಲಾತಿಯ ಕುರಿತು ದನಿ ಎತ್ತಲು ಆರಂಭಿಸಿದರು. ಅದಕ್ಕೆ ರಿಸರ್ವೇಷನ್ ಹಟಾವೋ (ಮೀಸಲಾತಿ ಹೊಡೆದೋಡಿಸಿ) ಎಂಬ ಹೆಸರನ್ನು ಇಡಲಾಯಿತು. ಇದು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸದ ನಾಗರಿಕ ನೇತೃತ್ವದ ಚಳವಳಿಯಾಗಿದೆ.
ಇದನ್ನೂ ಓದಿ: ವಿಶೇಷ ಸಂಪುಟ ಸಭೆ ಅಂತ್ಯ: ಒಳ ಮೀಸಲಾತಿ ಹಂಚಿಕೆಗೆ ಕ್ರಾಂತಿಕಾರಿ ನಿರ್ಣಯ, ಯಾರಿಗೆ ಎಷ್ಟು?
ಈ ಆಂದೋಲನದ ಪ್ರಮುಖ ಬೇಡಿಕೆಗಳು:
ಜಾತಿ ಆಧಾರಿತ ಮೀಸಲಾತಿ ರದ್ದು: ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಪ್ರಸ್ತುತ ಇರುವ ಜಾತಿ ಆಧಾರಿತ ಮೀಸಲಾತಿ ಪದ್ಧತಿಯನ್ನು ಹಂತ ಹಂತವಾಗಿ ತೆಗೆದುಹಾಕಬೇಕು.
ಆರ್ಥಿಕ ಆಧಾರದ ಬೆಂಬಲ (NEMI): ಜಾತಿಯನ್ನು ಹೊರತುಪಡಿಸಿ, ಕುಟುಂಬದ ವಾರ್ಷಿಕ ಆದಾಯ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಮಾನದಂಡವಾಗಿಟ್ಟುಕೊಂಡು ಬಡವರಿಗೆ ಸೌಲಭ್ಯ ನೀಡಬೇಕು.
ಅರ್ಹತೆ ಹಾಗೂ ಸಮಾನ ಅವಕಾಶ: ಶೈಕ್ಷಣಿಕ ಪ್ರವೇಶ ಪರೀಕ್ಷೆಗಳು ಮತ್ತು ಉದ್ಯೋಗಗಳಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಅರ್ಹತೆಯ ಆಧಾರದ ಮೇಲೆ ಸಮಾನ ಅವಕಾಶ ಸಿಗಬೇಕು.
ಈ ಆಂದೋಲನ ಪ್ರಾರಂಭವಾಗಲು ಮುಖ್ಯ ಕಾರಣಗಳು:
ಅರ್ಹತೆ ಮತ್ತು ಕಟ್-ಆಫ್ ಅಂಕಗಳ ನಡುವಿನ ವ್ಯತ್ಯಾಸ: ಪ್ರವೇಶ ಪರೀಕ್ಷೆಗಳು (ಉದಾ: NEET, JEE, UPSC) ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ನಿಗದಿಯಾಗುವ ಕಟ್-ಆಫ್ ಅಂಕಗಳು ಅತ್ಯಂತ ಹೆಚ್ಚಿರುತ್ತವೆ. ಹೆಚ್ಚು ಅಂಕ ಪಡೆದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಅವಕಾಶದಿಂದ ವಂಚಿತರಾಗಿ, ಕಡಿಮೆ ಅಂಕ ಪಡೆದ ಮೀಸಲಾತಿ ವರ್ಗದವರು ಆಯ್ಕೆಯಾಗುತ್ತಿದ್ದಾರೆ ಎಂಬ ಅಸಮಾಧಾನ ಯುವಜನರಲ್ಲಿ ಹುಟ್ಟಿಕೊಂಡಿತು.
‘ಕ್ರೀಮಿ ಲೇಯರ್’ ಸೌಲಭ್ಯ ದುರ್ಬಳಕೆ: ಮೀಸಲಾತಿ ವರ್ಗದಲ್ಲಿ ಈಗಾಗಲೇ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಕುಟುಂಬಗಳು (ಕ್ರೀಮಿ ಲೇಯರ್) ತಲೆಮಾರುಗಳಿಂದ ಮೀಸಲಾತಿ ಸೌಲಭ್ಯವನ್ನು ಪಡೆಯುತ್ತಿವೆ. ಇದರಿಂದಾಗಿ ಅದೇ ವರ್ಗದ ನಿಜವಾದ ಬಡವರಿಗೆ ಸೌಲಭ್ಯ ಸಿಗುತ್ತಿಲ್ಲ ಹಾಗೂ ಸಮಾಜದ ಎಲ್ಲಾ ಬಡ ಜನರಿಗೂ ಅನ್ಯಾಯವಾಗುತ್ತಿದೆ ಎಂಬುದು ಆಂದೋಲನಕಾರರ ವಾದವಾಗಿದೆ.
ಜಾತಿ ರಹಿತ ಸಮಾಜದ ಕಲ್ಪನೆ: ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಿಗೂ ಹೆಚ್ಚು ಕಾಲ ಕಳೆದರೂ, ಶಿಕ್ಷಣ ಮತ್ತು ಉದ್ಯೋಗದ ಅರ್ಜಿಯಲ್ಲಿ ಜಾತಿ ನಮೂದಿಸುವುದು ಕಡ್ಡಾಯವಾಗಿರುವುದು ಸಮಾಜದಲ್ಲಿ ಜಾತಿ ವ್ಯವಸ್ಥೆಯನ್ನು ಜೀವಂತವಾಗಿಡಲು ಕಾರಣವಾಗಿದೆ. ಆಡಳಿತ ಮತ್ತು ಶೈಕ್ಷಣಿಕ ದಾಖಲೆಗಳಿಂದ ಜಾತಿಯ ಕಾಲಂ ಅನ್ನು ತೆಗೆದುಹಾಕಬೇಕು ಎಂಬುದು ಚಳವಳಿಯ ಪ್ರಮುಖ ಒತ್ತಾಯವಾಗಿದೆ.
ಮೀಸಲಾತಿಯ ವಿಧಾನ ಬದಲಾಗಬೇಕು: ಜಾತಿ ಆಧಾರಿತ ಕೋಟಾಗಳ ಬದಲಿಗೆ ಕುಟುಂಬದ ಆರ್ಥಿಕ ಸ್ಥಿತಿಗತಿಯನ್ನು ಮಾನದಂಡವಾಗಿಟ್ಟುಕೊಂಡು ಬಡವರಿಗೆ ಆರ್ಥಿಕ ನೆರವು, ಉಚಿತ ಶಿಕ್ಷಣ ಮತ್ತು ಸ್ಕಾಲರ್‌ಶಿಪ್ ನೀಡಬೇಕು ಎಂಬ ಒತ್ತಾಯ ಈ ಆಂದೋಲನದ್ದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:31 pm, Fri, 21 August 26




