ಆಜಾದಿ ಕಾ ಅಮೃತ್ ಮಹೋತ್ಸವ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಗಲ್ಲಿಗೇರಿದಾಗ ರಾಜಗುರು ವಯಸ್ಸು ಕೇವಲ 22!
ಬನಾರಸ್ ತಲುಪಿದ ನಂತರ, ರಾಜಗುರು ಅವರಿಗೆ ಆಗ ದೇಶದ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಯತ್ತ ಒಲವು ಬೆಳೆಯಿತು. ಕ್ರಮೇಣ ಅವರು ಕ್ರಾಂತಿಕಾರಿಗಳೊಂದಿಗೆ ಸಂಪರ್ಕ ಬೆಳೆಸಿಕೊಂಡರು. ತಮ್ಮ 16 ನೇ ವಯಸ್ಸಿನಲ್ಲಿ ರಾಜಗುರು ಅವರು ಚಂದ್ರಶೇಖರ ಆಜಾದ್ ರನ್ನು ಭೇಟಿಯಾದರು.
Azadi Ka Amrit Mahotsav | ಜೈಲಿನ ಹೊರಗೆ ಪ್ರತಿಭಟನೆಗಳು ನಡೆಯುತ್ತಿದ್ದರೆ ಒಳಗೆ ಮೂವರು ಕ್ರಾಂತಿಕಾರಿಗಳನ್ನು ನೇಣಿಗೆ ಹಾಕಲು ಸಿದ್ಧತೆಗಳು ನಡೆಯುತ್ತಿದ್ದವು. ಪ್ರದರ್ಶನಕಾರರ (protesters) ಸಿಟ್ಟು ಮತ್ತು ಅವರು ದಂಗೆಯೇಳಬಹುದಾದ ಸಾಧ್ಯತೆ ಕಂಡು ಕ್ರಾಂತಿಕಾರಿಗಳನ್ನು ನಿಗದಿತ ಸಮಯಕ್ಕೆ ಮೊದಲೇ ಗಲ್ಲಿಗೇರಿಸಲಾಯಿತು. ಆ ಕ್ಷಣವನ್ನು ಊಹಿಸಿಕೊಳ್ಳಲು ಪ್ರಯತ್ನಿಸಿ. ಅ ಮೂವರು ಪರಾಕ್ರಮಶಾಲಿಗಳು (warriors) ಸಾವಿನ ಬಗ್ಗೆ ಒಂದಿಷ್ಟೂ ವಿಚಲಿತರಾಗದೆ ಇಂಕ್ವಿಲಾಬ್ ಜಿಂದಾಬಾದ್ ಘೋಷಣೆ ಕೂಗುತ್ತಾ ನೇಣುಗಂಬದ ಕಡೆ ಸಾಗಿದರು ಅನ್ನೋದನ್ನು ನೆನಪಿಸಿಕೊಂಡರೆ ಮೈಮನವೆಲ್ಲ ರೋಮಾಂಚನಗೊಳ್ಳುತ್ತದೆ.
23 ಮಾರ್ಚ್ 1931 ರಂದು, ರಾಜಗುರು (Rajguru) ಅವರನ್ನು ಭಗತ್ ಸಿಂಗ್ ಮತ್ತು ಸುಖದೇವ್ ಜೊತೆ ಸಂಜೆ 7.33 ಕ್ಕೆ ಗಲ್ಲಿಗೇರಿಸಲಾಯಿತು. ಜನರ ಕೋಪದಿಂದ ಬಚಾವಾಗಲು, ಮೂವರ ಪಾರ್ಥಿವ ಶರೀರಗಳನ್ನು ಜೈಲಿನ ಹಿಂಭಾಗದಲ್ಲೇ ಹೂತಿಡಲಾಯಿತು. ಆಜಾದಿ ಕಾ ಅಮೃತ್ ಮಹೋತ್ವಸ ಟಿವಿ9 ವಿಶೇಷ ಸರಣಿಯಲ್ಲಿ, ಈ ಮೂವರ ಮುಖ್ಯಸ್ಥ ರಾಜಗುರು ಅವರ ಸಾಹಸಗಾಥೆಯನ್ನು ನಿಮಗೆ ಹೇಳುತ್ತೇವೆ.
ಮರಾಠಿ ಕುಟುಂಬದಲ್ಲಿ ಜನಿಸಿದರು, ವಾರಣಾಸಿಯಲ್ಲಿ ಶಿಕ್ಷಣ ಪಡೆದರು
ವೀರ ಕ್ರಾಂತಿವೀರ ರಾಜಗುರು ಅವರ ಪೂರ್ಣ ಹೆಸರು ಶಿವರಾಮ್ ಹರಿ ರಾಜಗುರು. 24 ಆಗಸ್ಟ್, 1908 ರಂದು ಪುಣೆಯ ಖೇಡಾ ಗ್ರಾಮದ ಮರಾಠಿ ಕುಟುಂಬವೊಂದರಲ್ಲಿ ಅವರು ಜನಿಸಿದರು. ರಾಜಗುರು ತಂದೆಯ ಹೆಸರು ಹರಿನಾರಾಯಣ ಮತ್ತು ತಾಯಿ ಪಾರ್ವತಿ ಬಾಯಿ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಅವರು ತಮ್ಮ ತಾಯಿ ಮತ್ತು ಅಣ್ಣನ ಅರೈಕೆಯಲ್ಲಿ ಬೆಳೆದರು. ಕೇವಲ 12 ನೇ ವಯಸ್ಸಿನಲ್ಲೇ, ಕುಟುಂಬ ಸದಸ್ಯರು ರಾಜಗುರು ಅವರನ್ನು ಸಂಸ್ಕೃತ ಅಧ್ಯಯನ ಮಾಡಲು ವಾರಣಾಸಿಗೆ ಕಳುಹಿಸಿದರು.
ಬನಾರಸ್ ನಲ್ಲಿ ಚಂದ್ರಶೇಖರ ಆಜಾದ್ ರನ್ನು ಭೇಟಿಯಾದರು
ಬನಾರಸ್ ತಲುಪಿದ ನಂತರ, ರಾಜಗುರು ಅವರಿಗೆ ಆಗ ದೇಶದ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಯತ್ತ ಒಲವು ಬೆಳೆಯಿತು. ಕ್ರಮೇಣ ಅವರು ಕ್ರಾಂತಿಕಾರಿಗಳೊಂದಿಗೆ ಸಂಪರ್ಕ ಬೆಳೆಸಿಕೊಂಡರು. ತಮ್ಮ 16 ನೇ ವಯಸ್ಸಿನಲ್ಲಿ ರಾಜಗುರು ಅವರು ಚಂದ್ರಶೇಖರ ಆಜಾದ್ ರನ್ನು ಭೇಟಿಯಾದರು. ಈ ಯುವಕನಲ್ಲಿದ್ದ ರಾಷ್ಟ್ರಪ್ರೇಮ ಕಂಡು ತುಂಬಾ ಪ್ರಭಾವಿತರಾದರ ಆಜಾದ್, ಅವರನ್ನು ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿಗೆ (ಹೆಚ್ ಎಸ್ ಆರ್ ಎ) ಸೇರಿದರು.
1925 ರಲ್ಲಿ ಭಗತ್ ಸಿಂಗ್ ಭೇಟಿ
ಲೋಕಮಾನ್ಯ ತಿಲಕ್ ಮತ್ತು ವೀರ ಶಿವಾಜಿ ರಾವ್ ಅವರ ಪರಮ ಅಭಿಮಾನಿಯಾಗಿದ್ದರು ರಾಜಗುರು. ಅವರು ಎಚ್‌ಎಸ್‌ಆರ್‌ಎ ನಲ್ಲಿದ್ದಾಗಲೇ ಭಗತ್ ಸಿಂಗ್ ಮತ್ತು ಸುಖದೇವ್ ಅವರನ್ನು ಭೇಟಿಯಾದರು. ಮುಂದಿನ ಕೆಲವೇ ದಿನಗಳಲ್ಲಿ ಅವರ ನಡುವೆ ಗಾಢ ಸ್ನೇಹ ಬೆಳೆದು ತ್ರಿಮೂರ್ತಿಗಳು ಅನೇಕ ಕ್ರಾಂತಿಕಾರಿ ಸಾಹಸಗಳನ್ನು ನಡೆಸಿದರು.
ಲಾಹೋರ್ ನಲ್ಲಿ ಸೌಂಡರ್ಸ್ ಹತ್ಯೆ!
ಡಿಸೆಂಬರ್ 9, 1928 ರಂದು; ರಾಜಗುರು, ಭಗತ್ ಸಿಂಗ್, ಸುಖದೇವ್ ಮತ್ತು ಇತರ ಕ್ರಾಂತಿಕಾರಿಗಳ ಜೊತೆಗೂಡಿ ಲಾಹೋರ್‌ನಲ್ಲಿ ಸೌಂಡರ್ಸ್ ನ ಹತ್ಯೆ ಮಾಡುವ ಯೋಜಿನೆ ರೂಪಿಸಿ ಅವನನ್ನು ಕೊಂದು ಹಾಕಿದರು. ಲಾಹೋರ್ ನಲ್ಲಿ ನಡೆದ ಹತ್ಯೆ ಬ್ರಿಟಿಷರನ್ನು ದಿಗ್ಭ್ರಮೆಗೊಳಿಸಿತು.
ಲಾಹೋರ್ ಪಿತೂರಿ ಕೇಸ್
ಬ್ರಿಟಿಷರು ಸೌಂಡರ್ಸ್ ಹತ್ಯೆಯನ್ನು ಲಾಹೋರ್ ಪಿತೂರಿ ಕೇಸ್ ಎಂದು ಕರೆದರು. ಈ ಘಟನೆಯಿಂದ ಗಾಬರಿಗೊಂಡಿದ್ದ ಬ್ರಿಟಿಷರು ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಬಂಧಿಸಲು ಮುಂದಾದರು. ಅಂಥ ಸ್ಥಿತಿ ನಿರ್ಮಾಣಗೊಂಡಿದ್ದರಿಂದ ಭಗತ್ ಸಿಂಗ್ ಮತ್ತು ರಾಜಗುರು ಅವರು ದುರ್ಗಾ ಅತ್ತಿಗೆ ಸಹಾಯದಿಂದ ಲಾಹೋರ್ ತೊರೆದರು.
ರಾಜಗುರು ಪುಣೆಯಲ್ಲಿ ಸೆರೆಸಿಕ್ಕರು
ಲಾಹೋರ್ ತೊರೆದ ನಂತರ, ರಾಜಗುರು ಲಕ್ನೋಗೆ ಬಂದಿಳಿದರೆ ಭಗತ್ ಸಿಂಗ್ ಹೌರಾಗೆ ಹೋದರು. ಲಕ್ನೋದಲ್ಲಿ ಕೆಲ ದಿನಗಳನ್ನು ಕಳೆದ ಬಳಿಕ, ರಾಜಗುರು ವಾರಣಾಸಿಗೆ ಹೋದರು. ಬ್ರಿಟಿಷರು ತಮ್ಮ ಹಿಂದೆ ಬಿದ್ದಿದ್ದಾರೆಂದು ಚೆನ್ನಾಗಿ ಅರಿತಿದ್ದ ರಾಜಗುರು ವಾರಣಾಸಿಯಿಂದ ನಾಗ್ಪುರಕ್ಕೆ ಹೋದರು. ಆದರೆ ಅಲ್ಲಿಂದ ಪುಣೆಗೆ ಹೋಗುತ್ತಿದ್ದಾಗ ಬ್ರಿಟಿಷರು ಅವರನ್ನು ಬಂಧಿಸಿದರು.
ರಾಜಗುರು ಅವರಿಗೆ ಮರಣದಂಡನೆ ವಿಧಿಸಲಾಯಿತು
ಅಸೆಂಬ್ಲಿ ಬಾಂಬ್ ಪ್ರಕರಣದ ಅನಂತರ ಭಗತ್ ಸಿಂಗ್ ಅವರನ್ನು ಬಂಧಿಸಲಾಗಿತ್ತು ಮತ್ತು ಸುಖದೇವ್ ಅವರನ್ನೂ ವಶಕ್ಕೆ ಪಡೆಯಲಾಗಿತ್ತು. ಲಾಹೋರ್ ಪಿತೂರಿ ಪ್ರಕರಣದಲ್ಲಿ ರಾಜಗುರು, ಭಗತ್ ಸಿಂಗ್ ಮತ್ತು ಸುಖದೇವ್ ಅವರಿಗೆ ಮರಣದಂಡನೆ ವಿಧಿಸಲಾಯಿತು. 24 ಮಾರ್ಚ್, 1931 ರಂದು ಅವರನ್ನು ಗಲ್ಲಿಗೇರಿಸುವ ನಿರ್ಧಾರವನ್ನು ಬ್ರಿಟಿಷರು ತೆಗೆದುಕೊಂಡರು. ಆದರೆ ಜನರ ಈ ಮೂವರು ಕ್ರಾಂತಿಕಾರಿಗಳ ಪರವಾಗಿ ಪ್ರದರ್ಶನಗಳನ್ನು ನಡೆಸಲಾರಂಭಿಸಿದ್ದರು. ಆದ್ದರಿಂದ, ಮರಣದಂಡನೆಗೆ ನಿಗದಿಪಡಿಸಿದ ದಿನಾಂಕಕ್ಕಿಂತ ಒಂದು ದಿನ ಮೊದಲೇ ಬ್ರಿಟಿಷರು ಈ ಮೂವರು ಕ್ರಾಂತಿಕಾರಿಗಳನ್ನು ಒಟ್ಟಿಗೆ ಗಲ್ಲಿಗೇರಿಸಿದರು. ಜನರ ಕೋಪದಿಂದ ತಪ್ಪಿಸಿಕೊಳ್ಳಲು, ರಹಸ್ಯವಾಗಿ ದಹನಕ್ರಿಯೆ ನಡೆಸಿದರು.‘
22 ನೇ ವಯಸ್ಸಿನಲ್ಲಿ, ದೇಶಕ್ಕಾಗಿ ಹುತಾತ್ಮರಾದರು
ಗಲ್ಲಿಗೇರಿದಾಗ ರಾಜಗುರು ಅವರ ವಯಸ್ಸು ಕೇವಲ 22. ದೇಶದ ಸ್ವಾತಂತ್ರ್ಯಕ್ಕಾಗಿ ಅವರು ತಮ್ಮ ಪ್ರಾಣವನ್ನು ಸಮರ್ಪಿಸಿದರು. ರಾಜಗುರು ಗೌರವಾರ್ಥ ಅವರ ಹುಟ್ಟೂರು ಖೇಡಾಗೆ ರಾಜಗುರುನಗರ ಅಂತ ಮರುನಾಮಕರಣ ಮಾಡಲಾಯಿತು. 2013ರಲ್ಲಿ ಸರ್ಕಾರ ಅವರ ಹೆಸರಿನಲ್ಲಿ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿತ್ತು.