ಪ್ರಧಾನಿ ಮೋದಿಯಿಂದ ಮಾತ್ರ ಪರೀಕ್ಷಾ ಸುಧಾರಣೆ ಸಾಧ್ಯ; ಲೋಕಸಭೆಯಲ್ಲಿ ವಿಪಕ್ಷಗಳ ಬೆವರಿಳಿಸಿದ ತೇಜಸ್ವಿ ಸೂರ್ಯ

ಸಂಸತ್ ಅಧಿವೇಶನದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ದೇಶದ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯ ಸವಾಲುಗಳನ್ನು ಹಾಗೂ ಸರ್ಕಾರ ತಂದಿರುವ ಸುಧಾರಣೆಗಳನ್ನು ಕುರಿತು ಮಾಡಿದ ಭಾಷಣದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೊಳಗಾಗುತ್ತಿವೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಗೌರವ್ ಗೊಗೋಯ್ ಮುಂತಾದ ವಿರೋಧ ಪಕ್ಷಗಳ ಸಂಸದರ ಟೀಕೆಗೆ ಉತ್ತರಿಸಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕರ್ನಾಟಕದ ಸರ್ಕಾರದ ಕೆಪಿಎಸ್​ಸಿ ಹಗರಣದ ಬಗ್ಗೆಯೂ ಸದನದಲ್ಲಿ ಕನ್ನಡದಲ್ಲೇ ವಾಗ್ದಾಳಿ ನಡೆಸಿದ್ದರು.

ಪ್ರಧಾನಿ ಮೋದಿಯಿಂದ ಮಾತ್ರ ಪರೀಕ್ಷಾ ಸುಧಾರಣೆ ಸಾಧ್ಯ; ಲೋಕಸಭೆಯಲ್ಲಿ ವಿಪಕ್ಷಗಳ ಬೆವರಿಳಿಸಿದ ತೇಜಸ್ವಿ ಸೂರ್ಯ
Tejasvi Surya
Image Credit source: PTI

Updated on: Aug 05, 2026 | 6:02 PM

ನವದೆಹಲಿ, ಆಗಸ್ಟ್ 5: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈಗಾಗಲೇ ಪ್ರಶ್ನೆಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆ ಮಂಡನೆಯಾಗಿ ರಾಷ್ಟ್ರಪತಿಗಳಿಂದಲೂ ಅಂಗೀಕಾರಗೊಂಡಿದೆ. ಈ ಸಮಯದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಲೋಕಸಭಾ ಮುಂಗಾರು ಅಧಿವೇಶನದಲ್ಲಿ ಮಾಡಿರುವ ಭಾಷಣದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸದ್ದು ಮಾಡುತ್ತಿವೆ. ಲೋಕಸಭೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆಯ ಮಂಡನೆ ವೇಳೆ ಮಾತನಾಡಿದ್ದ ತೇಜಸ್ವಿ ಸೂರ್ಯ ವಿರೋಧ ಪಕ್ಷಗಳ ಬೆವರಿಳಿಸಿದ್ದಾರೆ. “ದೇಶದ ಯುವಕರಿಗೆ ನ್ಯಾಯಯುತ ಪರೀಕ್ಷಾ ವ್ಯವಸ್ಥೆ ಮತ್ತು ಶಾಶ್ವತ ಪರಿಹಾರ ಬೇಕು. ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಲಿದೆ ಎಂಬ ನಂಬಿಕೆ ವಿದ್ಯಾರ್ಥಿಗಳಲ್ಲಿದೆ. ಪ್ರಧಾನಿ ಮೋದಿಯಿಂದ ಮಾತ್ರ ಪರೀಕ್ಷಾ ಸುಧಾರಣೆ ಸಾಧ್ಯ. ಪ್ರಧಾನಿ ಮೋದಿ ಈ ದೇಶದ ಯುವಕರನ್ನು ನಿರಾಸೆಗೊಳಿಸುವುದಿಲ್ಲ” ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

“ಪ್ರಶ್ನೆಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಸಾಮಾನ್ಯ ಮತ್ತು ಬಡ ಕುಟುಂಬಗಳ ಮಕ್ಕಳಿಗೆ ನ್ಯಾಯಯುತ ಪರೀಕ್ಷಾ ವ್ಯವಸ್ಥೆಯೇ ಬದುಕು ಕಟ್ಟಿಕೊಳ್ಳುವ ದೊಡ್ಡ ಅವಕಾಶವಾಗಿದೆ. ಅದನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ. ಒಂದು ವಾರದಿಂದ ವಿರೋಧ ಪಕ್ಷಗಳು ಪೇಪರ್ ಲೀಕ್ ಬಗ್ಗೆ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದ್ದವು. ಆದರೆ ಸರ್ಕಾರವೇ ಕಠಿಣ ಕಾನೂನು ತಿದ್ದುಪಡಿ ವಿಧೇಯಕ ತಂದು ಚರ್ಚೆಗೆ ಅವಕಾಶ ನೀಡಿದಾಗ ಅದೇ ವಿರೋಧ ಪಕ್ಷಗಳು ರಾಜಕೀಯ ಕಾರಣಕ್ಕಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ” ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದರು.


ಯುವಕರಿಗೆ ಶಿಕ್ಷಣವೇ ಏಕೈಕ ದಾರಿ:

“ಬಡ ಮತ್ತು ಸಾಮಾನ್ಯ ಕುಟುಂಬದಿಂದ ಬರುವ ಯುವಕರಿಗೆ ಸಮಾಜದಲ್ಲಿ ಬೆಳೆಯಲು ಹಾಗೂ ಯಶಸ್ಸು ಕಾಣಲು ಶಿಕ್ಷಣ ಒಂದೇ ಮುಖ್ಯ ದಾರಿ. ಶ್ರೀಮಂತ ಕುಟುಂಬಗಳ ಮಕ್ಕಳಿಗೆ ಬೇರೆ ಬೇರೆ ಆಯ್ಕೆಗಳಿರಬಹುದು, ಆದರೆ ಸಾಮಾನ್ಯ ಕುಟುಂಬದ ಮಕ್ಕಳಿಗೆ ಪರೀಕ್ಷೆಗಳೇ ದಾರಿ. ಪರೀಕ್ಷೆ ಎಂಬುದು ಜಾತಿ, ಪೋಷಕರ ಆದಾಯ ಅಥವಾ ಹಿನ್ನೆಲೆಯನ್ನು ಕೇಳದೆ ಕೇವಲ ಶ್ರಮಕ್ಕೆ ಗೌರವ ನೀಡುವ ವ್ಯವಸ್ಥೆ. ಆದರೆ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಅದು ಕೇವಲ ಆಡಳಿತಾತ್ಮಕ ಲೋಪವಲ್ಲ, ಯುವಜನರ ನಂಬಿಕೆಗೆ ಮಾಡುವ ವಿಶ್ವಾಸಘಾತುಕತನ. ಹೀಗಾಗಿ, ಪ್ರಧಾನಿ ಮೋದಿ ಸರ್ಕಾರವು ರಚನಾತ್ಮಕ ಸುಧಾರಣೆಗಳನ್ನು ಕೈಗೊಳ್ಳುತ್ತಿದೆ ಮತ್ತು ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸಲು, ಭವಿಷ್ಯದ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಮತ್ತು ವ್ಯವಸ್ಥೆಯನ್ನು ಒಮ್ಮೆ ಮತ್ತು ಶಾಶ್ವತವಾಗಿ ಸರಿಪಡಿಸಲು ಸದೃಢ ವಿಧಾನವನ್ನು ಅನುಸರಿಸುತ್ತಿದೆ” ಎಂದು ತೇಜಸ್ವಿ ಸೂರ್ಯ ಹೇಳಿದ್ದರು.

ಇದನ್ನೂ ಓದಿ: Anti-paper Leak Bill Passed: ವಿರೋಧ ಪಕ್ಷಗಳ ಭಾರಿ ಗದ್ದಲದ ನಡುವೆಯೂ ಲೋಕಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ ಅಂಗೀಕಾರ

ಕಾಂಗ್ರೆಸ್​ನವರು ಕೆಪಿಎಸ್​ಸಿ ಬಗ್ಗೆ ಗಮನಹರಿಸಿ:

“ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ಬಂದು ನೀಟ್ ಹಗರಣದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ಆದರೆ ಕೆಪಿಎಸ್​ಸಿ ಹಗರಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮಾಡುತ್ತಿರುವುದು ಮುಖ್ಯಮಂತ್ರಿಗಳಿಗೆ ಕಾಣುತ್ತಿಲ್ಲವೇ?” ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಂಸತ್​ ಅಧಿವೇಶನದಲ್ಲಿ ಪ್ರಶ್ನಿಸಿದ್ದರು.

YouTube video player

ಲೋಕಸಭೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯ ಮೇಲಿನ ಚರ್ಚೆಯ ವೇಳೆ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಕನ್ನಡದಲ್ಲೇ ಪ್ರಶ್ನಿಸಿದ ಅವರು, “10 ದಿನಗಳ ಹಿಂದೆ KPSC ಅಧ್ಯಕ್ಷರನ್ನು ಅಮಾನತು ಮಾಡಲಾಗಿದೆ. ತಮ್ಮ ಮಕ್ಕಳಿಗೆ ನಕಲಿ ದಾಖಲೆಗಳನ್ನು ಮಾಡಿಸಿರುವ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗೆ ವೆಟರ್ನರಿ ಕಾಲೇಜಿನಲ್ಲಿ ಒಂದೊಂದು ಸೀಟಿಗೆ 80 ಲಕ್ಷ ರೂ. ವಸೂಲಿ ಮಾಡಿದ ಹಗರಣವೂ ನಡೆದಿದೆ. ಅನ್ಯಾಯಕ್ಕೊಳಗಾದ ಪ್ರತಿಯೊಬ್ಬ ವಿದ್ಯಾರ್ಥಿಯ ಪರವಾಗಿ ನಾನು ಮಾತನಾಡುತ್ತಿದ್ದೇನೆ. ಈ ಎಲ್ಲ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಉತ್ತರ ನೀಡಬೇಕು” ಎಂದು ಕನ್ನಡದಲ್ಲೇ ಒತ್ತಾಯಿಸಿದ್ದರು.

ಇದನ್ನೂ ಓದಿ: ರಾಜ್ಯಸಭೆಯಲ್ಲೂ ಪರೀಕ್ಷಾ ಅಕ್ರಮ ತಡೆ ವಿಧೇಯಕ ಅಂಗೀಕಾರ; ರಾಷ್ಟ್ರಪತಿಯ ಸಮ್ಮತಿ ಬಾಕಿ

“ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳು ನಡೆದ ತಕ್ಷಣ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಲವು ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ. ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿ, ಅಪರಾಧಿಗಳನ್ನು ತಕ್ಷಣವೇ ಬಂಧಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ವ್ಯರ್ಥವಾಗದಂತೆ ಅತ್ಯಂತ ಕಡಿಮೆ ಅವಧಿಯಲ್ಲಿ ಮರು ಪರೀಕ್ಷೆ ನಡೆಸಲಾಯಿತು. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಸಂಸ್ಥೆಯನ್ನು ಬಲಪಡಿಸಲು ಪ್ರಮುಖ ಸುಧಾರಣೆ ತರಲಾಗಿದೆ. ಐಐಟಿ-ಜೆಇಇ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಪ್ರಶ್ನೆ ಪತ್ರಿಕೆ ತಯಾರಿಕೆಯಿಂದ ಹಿಡಿದು ಪರೀಕ್ಷಾ ಕೇಂದ್ರಗಳ ನಿರ್ವಹಣೆವರೆಗೆ ಸಂಪೂರ್ಣ ಸುಧಾರಣೆ ತರಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಕಠಿಣ ಕಾನೂನು: ಕಳೆದ 70 ವರ್ಷಗಳಲ್ಲಿ ಪರೀಕ್ಷಾ ಅಕ್ರಮಗಳನ್ನು ಅಪರಾಧವೆಂದು ಪರಿಗಣಿಸಿ ತಡೆಯಲು ಕಠಿಣ ಕಾನೂನು ಜಾರಿಗೆ ತಂದಿರುವುದು ಇದೇ ಮೊದಲು” ಎಂದು ತೇಜಸ್ವಿ ಸೂರ್ಯ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Wed, 5 August 26

Loading...
Unable to load recommendations.
Follow Us