ವಿವಾದಿತ ಭೋಜಶಾಲಾ ಸರಸ್ವತಿ ದೇವಾಲಯ; ಮಧ್ಯಪ್ರದೇಶದ ಹೈಕೋರ್ಟ್ ಮಹತ್ವದ ತೀರ್ಪು
ವಿವಾದಿತ ಸ್ಥಳದಲ್ಲಿರುವ ಭೋಜಶಾಲಾ ಕಾಂಪ್ಲೆಕ್ಸ್ ಒಂದು ದೇವಾಲಯವಾಗಿದೆ ಎಂದು ಮಧ್ಯಪ್ರದೇಶದ ಹೈಕೋರ್ಟ್ ಹೇಳಿದೆ. ದಶಕಗಳಷ್ಟು ಹಳೆಯದಾದ ಭೋಜಶಾಲಾ-ಕಮಲ್ ಮೌಲಾ ವಿವಾದ ಕುರಿತಾದ ಮಹತ್ವದ ತೀರ್ಪು ಇದಾಗಿದೆ. ಮಧ್ಯಪ್ರದೇಶದ ಹೈಕೋರ್ಟ್ ಇಂದು ಧಾರ್‌ನಲ್ಲಿರುವ ವಿವಾದಿತ ಭೋಜಶಾಲಾ ಸಂಕೀರ್ಣವನ್ನು ವಾಗ್ದೇವಿ ಸರಸ್ವತಿಯ ದೇವಾಲಯವೆಂದು ಘೋಷಿಸಿದೆ. ಹಾಗೇ, ಮುಸ್ಲಿಮರು ಆ ಸ್ಥಳದಲ್ಲಿ ನಮಾಜ್ ಮಾಡಲು ಅನುಮತಿ ನೀಡುವ ಭಾರತೀಯ ಪುರಾತತ್ವ ಸಮೀಕ್ಷೆಯ (ASI) 2003ರ ವ್ಯವಸ್ಥೆಯನ್ನು ರದ್ದುಗೊಳಿಸಿತು.

ನವದೆಹಲಿ, ಮೇ 15: ಮಧ್ಯಪ್ರದೇಶದ ಹೈಕೋರ್ಟ್ (Madhya Pradesh High Court) ಹಿಂದೂಗಳ ಪರವಾಗಿ ತೀರ್ಪು ನೀಡುವ ಮೂಲಕ ಭೋಜಶಾಲಾವನ್ನು (Bhojshala) ದೇವಾಲಯವೆಂದು ಘೋಷಿಸಿದೆ. ಈ ಸ್ಥಳದ ಐತಿಹಾಸಿಕ ಸಾಹಿತ್ಯವು ಇದು ರಾಜ ಭೋಜನಿಗೆ ಸಂಬಂಧಿಸಿದ ಸಂಸ್ಕೃತ ಕಲಿಕೆಯ ಕೇಂದ್ರವಾಗಿತ್ತು ಎಂದು ತಿಳಿಸಿದೆ. ಇದು ಧಾರ್‌ನಲ್ಲಿ ವಾಗ್ದೇವಿ ಸರಸ್ವತಿ ದೇವಿಗೆ ಮೀಸಲಾಗಿರುವ ದೇವಾಲಯದ ಅಸ್ತಿತ್ವವನ್ನು ಸೂಚಿಸುತ್ತದೆ. ಆದ್ದರಿಂದ, ಈ ಪ್ರದೇಶ ವಾಗ್ದೇವಿ ಸರಸ್ವತಿಯ ದೇವಾಲಯವಾಗಿತ್ತು ಎಂಬುದಕ್ಕೆ ಪುರಾವೆ ಸಿಕ್ಕಿದಂತಾಗಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಈ ಸಂರಕ್ಷಿತ ಸ್ಮಾರಕದಲ್ಲಿ ಹಿಂದೂಗಳು ಮಂಗಳವಾರ ಪೂಜೆ ಸಲ್ಲಿಸಬಹುದು ಮತ್ತು ಮುಸ್ಲಿಮರು ಶುಕ್ರವಾರದ ನಮಾಜ್ ಮಾಡಬಹುದು ಎಂಬ ASIನ 2003ರ ಸುತ್ತೋಲೆಯನ್ನು ಕೂಡ ಈ ಹೈಕೋರ್ಟ್ ರದ್ದುಗೊಳಿಸಿದೆ. ಈ ಸ್ಥಳದ ಗುರುತಿನ ಕುರಿತು ಹಿಂದೂ ಮತ್ತು ಮುಸ್ಲಿಂ ಗುಂಪುಗಳ ನಡುವಿನ ದೀರ್ಘಕಾಲೀನ ವಿವಾದಕ್ಕೆ ಈ ಅಂಶ ಕೂಡ ಕಾರಣವಾಗಿತ್ತು. ಇದೀಗ ಕೊನೆಗೂ ಹೈಕೋರ್ಟ್ ಈ ವಿವಾದಕ್ಕೆ ಪೂರ್ಣ ವಿರಾಮವನ್ನು ಇಟ್ಟಿದೆ.
ಈ ತೀರ್ಪು ನೀಡಿದ ನ್ಯಾಯಮೂರ್ತಿ ವಿಜಯ್ ಕುಮಾರ್ ಶುಕ್ಲಾ ಮತ್ತು ನ್ಯಾಯಮೂರ್ತಿ ಅಲೋಕ್ ಅವಸ್ಥಿ ಅವರ ವಿಭಾಗೀಯ ಪೀಠವು ಈ ಪ್ರದೇಶಕ್ಕೆ ಸಂಬಂಧಿಸಿದ ಐತಿಹಾಸಿಕ ದಾಖಲೆಗಳು, ಪುರಾತತ್ತ್ವ ಶಾಸ್ತ್ರದ ವಸ್ತುಗಳು ಮತ್ತು ಸಾಹಿತ್ಯಿಕ ಪುರಾವೆಗಳು ಧಾರ್‌ನ ಭೋಜಶಾಲಾವನ್ನು ಸಂಸ್ಕೃತ ಕಲಿಕೆಯ ಕೇಂದ್ರವನ್ನಾಗಿ ಮಾಡಿದ ಪರ್ಮಾರ್ ಆಡಳಿತಗಾರ ರಾಜ ಭೋಜನಿಗೆ ಸಂಬಂಧಿಸಿದ ಸರಸ್ವತಿ ದೇವಾಲಯವಾಗಿತ್ತು ಎಂದು ತಿಳಿಸುತ್ತಿವೆ ಎಂದು ಹೇಳಿದೆ.
VIDEO | Indore: Madhya Pradesh High Court declares disputed area of Bhojshala Complex a temple.
“MP High Court has said Central Government and ASI should decide on administration and management of Bhojshala temple”, says Vishwajeet Joshi, advocate of Maharaja Bhojshala… pic.twitter.com/tSAzKu9M0k
— Press Trust of India (@PTI_News) May 15, 2026
ಲಂಡನ್‌ನ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ ಎನ್ನಲಾದ ಸರಸ್ವತಿ ದೇವಿಯ ವಿಗ್ರಹವನ್ನು ಹಿಂದಿರುಗಿಸುವಂತೆ ಕೋರಿ ಹಿಂದೂ ಅರ್ಜಿದಾರರ ಬೇಡಿಕೆಗಳನ್ನು ಸಹ ಪೀಠವು ಗಮನಿಸಿತು. ಈ ವಿಗ್ರಹವನ್ನು ಹಿಂದಿರುಗಿಸುವುದು ಮತ್ತು ಭೋಜಶಾಲಾ ಸಂಕೀರ್ಣದೊಳಗೆ ಈ ಮೂರ್ತಿಯ ಸ್ಥಾಪನೆಯನ್ನು ಮಾಡುವ ಬಗ್ಗೆಯೂ ಸರ್ಕಾರ ನಿರ್ಧರಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: Puri Jagannath Temple: ಪುರಿ ಜಗನ್ನಾಥ ದೇವಾಲಯದಲ್ಲಿ ಕಟ್ಟುನಿಟ್ಟಿನ ವಸ್ತ್ರ ಸಂಹಿತೆ ಜಾರಿಗೆ ಸಿದ್ಧತೆ
ಮಧ್ಯಪ್ರದೇಶದ ಹೈಕೋರ್ಟ್‌ನ ಇಂದೋರ್ ಪೀಠವು ಇಂದು ಹಿಂದೂ ಕಡೆಯ ವಾದವನ್ನು ಆಲಿಸಿ, ಇದು ಭೋಜಶಾಲಾವನ್ನು ದೇವಾಲಯವೆಂದು ಘೋಷಿಸಿತು. ಪ್ರಾಚೀನ ಸ್ಮಾರಕಗಳು ಅಥವಾ ರಚನೆಗಳು, ಪುರಾತತ್ವ ಮತ್ತು ಐತಿಹಾಸಿಕ ಮಹತ್ವದ ದೇವಾಲಯಗಳನ್ನು ಮಾತ್ರವಲ್ಲದೆ ಎಲ್ಲಾ ರೀತಿಯ ಧಾರ್ಮಿಕ ಸ್ಥಳಗಳ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದು ಪ್ರತಿಯೊಂದು ಸರ್ಕಾರದ ಸಾಂವಿಧಾನಿಕ ಬಾಧ್ಯತೆಯಾಗಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ. ಯಾತ್ರಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಕೆಲವು ಸ್ಥಳಗಳಲ್ಲಿ ಸರಿಯಾದ ವ್ಯವಸ್ಥೆಗಳನ್ನು ಮಾಡುವುದು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ. ಇದಲ್ಲದೆ, ಈ ಸ್ಥಳದ ಪಾವಿತ್ರ್ಯವನ್ನು ಕಾಪಾಡುವುದು ಮತ್ತು ದೇವತೆಯ ಸ್ವರೂಪವನ್ನು ಕಾಪಾಡುವುದು ಸಹ ಅತ್ಯಗತ್ಯ ಎಂದು ಕೋರ್ಟ್ ಹೇಳಿದೆ.
ಏನಿದು ವಿವಾದ?:
ಭೋಜಶಾಲಾ ವಿವಾದವು ದಶಕಗಳಷ್ಟು ಹಿಂದಿನದು. ಹಿಂದೂಗಳು ಈ ಸ್ಥಳವನ್ನು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವೆಂದು ಪರಿಗಣಿಸುತ್ತಾರೆ. ಆದರೆ ಮುಸ್ಲಿಮರು ಇದನ್ನು ಕಮಲ್ ಮೌಲಾ ಮಸೀದಿ ಎಂದು ನಂಬುತ್ತಾರೆ. ಇದರ ಜೊತೆಗೆ ಜೈನರು ಇದು ಜೈನ ಗುರುಕುಲವಾಗಿತ್ತು ಎಂದು ಕೋರ್ಟ್ನಲ್ಲಿ ಹಲವು ಮೊಕದ್ದಮೆಗಳನ್ನು ಸಲ್ಲಿಸಿದ್ದರು. ಇದರಲ್ಲಿ ವಿಶೇಷ ಹಿಂದೂ ಪೂಜಾ ಹಕ್ಕುಗಳು ಮತ್ತು ಸ್ಥಳದಲ್ಲಿ ನಮಾಜ್ ಮೇಲಿನ ನಿರ್ಬಂಧಗಳನ್ನು ಕೋರುವ ಮನವಿಗಳು ಕೂಡ ಸೇರಿವೆ. ವಿಚಾರಣೆಯ ಸಮಯದಲ್ಲಿ ಹೈಕೋರ್ಟ್ ಸ್ಮಾರಕದ ವೈಜ್ಞಾನಿಕ ASI ಸಮೀಕ್ಷೆಗೆ ಆದೇಶಿಸಿತ್ತು.
#WATCH | Dhar, Madhya Pradesh: On High Court declaring the Bhojshala site as a temple, advocate Vishnu Shankar Jain says, “… The Indore High Court has today delivered a truly historic verdict in this case. Following the Ram Mandir judgment, this marks the second such final… pic.twitter.com/TC1v76KnMe
— ANI (@ANI) May 15, 2026
ಹಿಂದೂ ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರು ಭೋಜಶಾಲ ಮೂಲತಃ ರಾಜ ಭೋಜನ ಆಳ್ವಿಕೆಯ ಹಿಂದಿನ ಸರಸ್ವತಿ ದೇವಾಲಯವಾಗಿತ್ತು ಎಂದು ಹೇಳಿದ್ದಾರೆ. ಮೊದಲೇ ಅಸ್ತಿತ್ವದಲ್ಲಿದ್ದ ಹಿಂದೂ ಧಾರ್ಮಿಕ ಸ್ಥಳದ ಪುರಾವೆಯಾಗಿ ಶಾಸನಗಳು, ಪುರಾತತ್ತ್ವ ಶಾಸ್ತ್ರದ ಅವಶೇಷಗಳನ್ನು ತೋರಿಸಿದರು. ಆದರೆ, ಮುಸ್ಲಿಂ ಅರ್ಜಿದಾರರು ಖಿಲ್ಜಿ ಯುಗದ ಐತಿಹಾಸಿಕ ದಾಖಲೆಗಳು ಸರಸ್ವತಿ ದೇವಾಲಯದ ನಾಶದ ಬಗ್ಗೆ ಯಾವುದೇ ಉಲ್ಲೇಖವನ್ನು ಹೊಂದಿಲ್ಲ ಎಂದು ವಾದಿಸಿದ್ದರು. ಹಿಂದಿನ ಧಾರ್ ಆಡಳಿತಗಾರ ಆ ಸ್ಥಳದಲ್ಲಿ ನಮಾಜ್‌ಗೆ ಅನುಮತಿ ನೀಡಿ 1935ರಲ್ಲಿ ಹೊರಡಿಸಿದ “ಅಲಾನ್” ಅನ್ನು ಉಲ್ಲೇಖಿಸಿದ್ದರು. ಜೈನ ಅರ್ಜಿದಾರರು ಸಹ ಈ ಸ್ಥಳಕ್ಕೆ ಸಂಬಂಧಿಸಿದ ವಿಗ್ರಹವು ಜೈನ ದೇವತೆ ಅಂಬಿಕೆಗೆ ಸೇರಿದ್ದು ಮತ್ತು ಮೌಂಟ್ ಅಬುವಿನಲ್ಲಿ ದೇವಾಲಯದ ವಾಸ್ತುಶಿಲ್ಪದೊಂದಿಗೆ ಇದರ ಹೋಲಿಕೆಯಿದೆ ಎಂದು ವಾದಿಸಿದ್ದರು.
ಇದನ್ನೂ ಓದಿ: Hanuman Temples: ಸ್ತ್ರೀ ರೂಪದ ಹನುಮ, ತಲೆಕೆಳಗಾದ ಆಂಜನೇಯ; ಅಚ್ಚರಿ ಮೂಡಿಸುವ 5 ಅಪರೂಪದ ದೇವಾಲಯಗಳಿವು
ವಿಚಾರಣೆಯ ಸಮಯದಲ್ಲಿ, ಹಿಂದೂ, ಮುಸ್ಲಿಂ ಮತ್ತು ಜೈನ ಸಮುದಾಯಗಳ ಅರ್ಜಿದಾರರು ವಿವರವಾದ ವಾದಗಳನ್ನು ಮಂಡಿಸಿದರು ಮತ್ತು ಸ್ಮಾರಕದಲ್ಲಿ ತಮ್ಮ ಸಮುದಾಯಗಳಿಗೆ ವಿಶೇಷ ಪೂಜಾ ಹಕ್ಕುಗಳನ್ನು ಕೋರಿದರು. ಈ ಸ್ಮಾರಕದ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿದ ನಂತರ, ASI ತನ್ನ 2,000ಕ್ಕೂ ಹೆಚ್ಚು ಪುಟಗಳ ವರದಿಯಲ್ಲಿ ಧಾರ್‌ನ ಪರ್ಮಾರ್ ರಾಜರ ಆಳ್ವಿಕೆಯ ಹಿಂದಿನ ಬೃಹತ್ ರಚನೆಯು ಮಸೀದಿಗಿಂತ ಹಿಂದಿನದು ಎಂದು ಸೂಚಿಸಿದೆ.
ನ್ಯಾಯಾಲಯದ ಮುಂದಿದ್ದ ಮುಖ್ಯವಾದ ಪ್ರಶ್ನೆಯೆಂದರೆ ಅದು ಹಿಂದೂ ದೇವಸ್ಥಾನವೇ (ವಾಗ್ದೇವಿ ದೇವಸ್ಥಾನ) ಅಥವಾ ಮುಸ್ಲಿಂ ಮಸೀದಿಯೇ (ಕಮಲ್ ಮೌಲಾ ಮಸೀದಿ) ಎಂಬುದು. “ಇದು ಸಂರಕ್ಷಿತ ಕಟ್ಟಡ ಎಂಬುದು ಸ್ಪಷ್ಟವಾಗಿದೆ. ASI ಇದರ ಮೇಲ್ವಿಚಾರಣೆ ಮತ್ತು ಇದರ ಸಂರಕ್ಷಣೆಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದೆ” ಎಂದು ನ್ಯಾಯಾಲಯ ಹೇಳಿದೆ. ಹಾಗೇ, ಮುಸ್ಲಿಂ ಕಡೆಯವರು ಮಸೀದಿಗಾಗಿ ಬೇರೆ ಜಾಗಕ್ಕೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಹೈಕೋರ್ಟ್ ಆದೇಶದ ಮೇರೆಗೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ವಿವರವಾದ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿತು. ಈ ಸಮೀಕ್ಷೆಯು 98 ದಿನಗಳ ಕಾಲ ನಡೆಯಿತು. ಇದಾದ ಬಳಿಕ ASI ಜುಲೈ 15, 2024ರಂದು ಸುಮಾರು 2,000 ಪುಟಗಳ ವಿವರವಾದ ವರದಿಯನ್ನು ಸಲ್ಲಿಸಿತು. ಈ ವರದಿಯ ಪ್ರಕಾರ, ಪ್ರಸ್ತುತ ರಚನೆಯನ್ನು ಮೊದಲೇ ಅಸ್ತಿತ್ವದಲ್ಲಿರುವ ದೇವಾಲಯದ ಅವಶೇಷಗಳು ಮತ್ತು ಕಂಬಗಳನ್ನು ಬಳಸಿ ನಿರ್ಮಿಸಲಾಗಿದೆ ಮತ್ತು ಪರ್ಮಾರ್ ಅವಧಿಯ ಶಿಲ್ಪಗಳು, ಕೆತ್ತಿದ ಕಲ್ಲುಗಳು ಮತ್ತು ಶಾಸನಗಳು ಅಲ್ಲಿ ಕಂಡುಬಂದಿವೆ ಎಂದು ತಿಳಿಸಲಾಗಿದೆ.
2003ರ ASI ಆದೇಶದ ಪ್ರಕಾರ, ಹಿಂದೂಗಳು ಪ್ರತಿ ಮಂಗಳವಾರ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪೂಜೆ ಸಲ್ಲಿಸಲು ಅವಕಾಶವಿದೆ ಮತ್ತು ಮುಸ್ಲಿಮರು ಪ್ರತಿ ಶುಕ್ರವಾರ ಮಧ್ಯಾಹ್ನ 1ರಿಂದ 3ರವರೆಗೆ ನಮಾಜ್ ಮಾಡಲು ಅವಕಾಶವಿದೆ. ಇತರ ದಿನಗಳಲ್ಲಿ ಈ ಸ್ಥಳ ಪ್ರವಾಸಿಗರಿಗೆ ತೆರೆದಿರುತ್ತದೆ. ಈ ಆದೇಶವನ್ನು ಕೂಡ ಹೈಕೋರ್ಟ್ ರದ್ದಗೊಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:49 pm, Fri, 15 May 26





