
ಕೊಲ್ಕತ್ತಾ, ಸೆಪ್ಟೆಂಬರ್ 18: ಪಶ್ಚಿಮ ಬಂಗಾಳದ ಹೈಪ್ರೊಫೈಲ್ ವಿಧಾನಸಭಾ ಕ್ಷೇತ್ರ ನಂದಿಗ್ರಾಮದ ಉಪಚುನಾವಣೆಯ ಕಣದಲ್ಲಿ ಇಂದು ಹಲವು ರೋಚಕ ರಾಜಕೀಯ ಬೆಳವಣಿಗೆಗಳು ನಡೆದಿವೆ. ಅಕ್ಟೋಬರ್ 6ರಂದು ನಡೆಯಲಿರುವ ಈ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಬಣವು ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರಿಗೆ ಪೂರ್ಣ ಬೆಂಬಲ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಟಿಎಂಸಿಯ ಮಮತಾ ಬಣದ ಅಭ್ಯರ್ಥಿ ಸಂಚಿತಾ ಪ್ರಧಾನ್ ಡೇ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ಭೇಟಿಯಾದ ಬೆನ್ನಲ್ಲೇ ತಮ್ಮ ನಾಮಪತ್ರ ಹಿಂಪಡೆದ ಕಾರಣದಿಂದ ‘ಇಂಡಿಯಾ’ ಒಕ್ಕೂಟದ ಭಾಗವಾಗಿ ಮಮತಾ ಬ್ಯಾನರ್ಜಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು.
ಪೂರ್ವ ಮೇದಿನಿಪುರ ಜಿಲ್ಲೆಯ ಚಾಂದೀಪುರ ಪ್ರದೇಶದ ಹೊಟೇಲ್ ಒಂದರಲ್ಲಿದ್ದ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದಕ್ಕೆ (2007ರ ನಂದಿಗ್ರಾಮ ಭೂ ಸ್ವಾಧೀನ ವಿರೋಧಿ ಚಳವಳಿ ಹಾಗೂ ಹಳೆಯ ಕೊಲೆ ಪ್ರಕರಣ) ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ನಂದಿಗ್ರಾಮ ಉಪಚುನಾವಣೆಗೆ ಹೊಸ ತಿರುವು; ಸುವೇಂದು ಭೇಟಿ ಬೆನ್ನಲ್ಲೇ ನಾಮಪತ್ರ ಹಿಂಪಡೆದ ಮಮತಾ ಬಣದ ಅಭ್ಯರ್ಥಿ
ಇಂದು ಮಧ್ಯಾಹ್ನಷ್ಟೇ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರಿಗೆ ತಮ್ಮ ಬಣ ಪೂರ್ಣ ಬೆಂಬಲ ನೀಡಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಅದಾಗಿ ಕೆಲವೇ ಗಂಟೆಗಳಲ್ಲಿ ಪಶ್ಚಿಮ ಬಂಗಾಳ ಪೊಲೀಸರು ಈ ದಿಢೀರ್ ಬಂಧನ ಕಾರ್ಯಾಚರಣೆ ನಡೆಸಿದ್ದಾರೆ. ಮಿಲನ್ ಪ್ರಧಾನ್ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಯತ್ನಿಸಿದಾಗ, ಅದನ್ನು ತಡೆಯಲು ಯತ್ನಿಸಿದ ಕಾಂಗ್ರೆಸ್ ಮುಖಂಡ ಸುಭಾಶಿಶ್ ಭಟ್ಟಾಚಾರ್ಯ ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ:
ಈ ಬಂಧನವನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ನಾಯಕರು, “ಇದು ಬಿಜೆಪಿಯ ಅಸಹ್ಯಕರ ರಾಜಕೀಯ. 2007ರ ನಂದಿಗ್ರಾಮ ಚಳವಳಿಯ ನಾಯಕರಾಗಿದ್ದ ಮಿಲನ್ ಪ್ರಧಾನ್ ಯಶಸ್ವಿಯಾಗಿ ನಾಮಪತ್ರ ಸಲ್ಲಿಸಿ, ಮಮತಾ ಬ್ಯಾನರ್ಜಿ ಅವರ ಬೆಂಬಲವೂ ಸಿಕ್ಕ ಹಿನ್ನೆಲೆಯಲ್ಲಿ ಬೆದರಿದ ಬಿಜೆಪಿ ಸರ್ಕಾರ ಪೊಲೀಸರನ್ನು ಬಳಸಿ ಈ ಬಂಧನ ಮಾಡಿಸಿದೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ನಂದಿಗ್ರಾಮ ಸೇರಿದಂತೆ 5 ವಿಧಾನಸಭಾ ಕ್ಷೇತ್ರ, 1 ಲೋಕಸಭಾ ಸ್ಥಾನಕ್ಕೆ ಉಪಚುನಾವಣೆ ಘೋಷಣೆ; ಅ. 6ಕ್ಕೆ ಮತದಾನ
ನಾಮಪತ್ರ ವಾಪಸಾತಿಗೆ ಶನಿವಾರ ಕೊನೆ ದಿನ:
ಶನಿವಾರ (ಸೆಪ್ಟೆಂಬರ್ 19) ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನಾಂಕವಾಗಿದ್ದು, ಈ ಹಂತದಲ್ಲೇ ಪ್ರಮುಖ ಅಭ್ಯರ್ಥಿಯ ಬಂಧನವಾಗಿರುವುದು ಅಕ್ಟೋಬರ್ 6ರ ಮತದಾನದ ಮುನ್ನ ನಂದಿಗ್ರಾಮ ರಾಜಕೀಯ ಚಿತ್ರಣವನ್ನು ಅತ್ಯಂತ ರೋಚಕ ಹಂತಕ್ಕೆ ಕೊಂಡೊಯ್ದಿದೆ. ಅಭ್ಯರ್ಥಿಯ ಬಂಧನದ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್ ಹಾಗೂ ಮಮತಾ ಬಣದ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದು, ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ