ಮಹಾರಾಷ್ಟ್ರ ಚುನಾವಣೆಗೆ ಬಿಜೆಪಿ ಮಾಸ್ಟರ್ಪ್ಲಾನ್; ಪ್ರಧಾನಿ ಮೋದಿ ಬದಲು ಈ ನಾಯಕನಿಂದ ಅತಿ ಹೆಚ್ಚು ರ‍್ಯಾಲಿ
ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ನವೆಂಬರ್ 20ರಂದು ಚುನಾವಣೆ ನಡೆಯಲಿದ್ದು, ಮೂರು ದಿನಗಳ ನಂತರ ಮತ ಎಣಿಕೆ ನಡೆಯಲಿದೆ. ಆಡಳಿತಾರೂಢ ಮಹಾಯುತಿ ಮತ್ತು ವಿರೋಧ ಪಕ್ಷವಾದ ಮಹಾವಿಕಾಸ್ ಅಘಾಡಿ ಪ್ರಮುಖ ಎದುರಾಳಿಗಳಾಗಿವೆ. ಈಗಾಗಲೇ ಚುನಾವಣೆಗೆ ಸಿದ್ಧತೆಗಳು ನಡೆದಿವೆ.
ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಗಡುವು ಮುಗಿದ ಒಂದು ದಿನದ ನಂತರ ಇಂದಿನಿಂದ (ಬುಧವಾರ) ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರವು ವೇಗ ಪಡೆದುಕೊಂಡಿದೆ. ಪ್ರಮುಖ ನಾಯಕರ ಪ್ರಮುಖ ರ‍್ಯಾಲಿಗಳನ್ನು ಮಹಾ ವಿಕಾಸ್ ಅಘಾಡಿ ಮತ್ತು ಮಹಾಯುತಿ ಇಬ್ಬರೂ ಆಯೋಜಿಸುತ್ತಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖ ನಾಯಕರಿಂದ 50ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಿರಿಯ ನಾಯಕರು ಮಹಾರಾಷ್ಟ್ರ ರಾಜ್ಯಾದ್ಯಂತ ಸಾರ್ವಜನಿಕ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ.
ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಮಹಾರಾಷ್ಟ್ರ, ವಿದರ್ಭ, ಮುಂಬೈ-ಕೊಂಕಣ, ಉತ್ತರ ಮಹಾರಾಷ್ಟ್ರ ಮತ್ತು ಮರಾಠವಾಡದಲ್ಲಿ ಒಟ್ಟು 8 ಸಾರ್ವಜನಿಕ ಸಭೆಗಳನ್ನು ನಡೆಸಲು ಯೋಜಿಸಿದ್ದಾರೆ. ಹೆಚ್ಚಿನ ಸಾರ್ವಜನಿಕ ಸಭೆಗಳ ಜವಾಬ್ದಾರಿಯನ್ನು ದೇವೇಂದ್ರ ಫಡ್ನವಿಸ್, ನಿತಿನ್ ಗಡ್ಕರಿ ಮತ್ತು ಚಂದ್ರಶೇಖರ್ ಬಾವಂಕುಲೆ ಅವರಿಗೆ ನೀಡಲಾಗಿದೆ.
ಇದನ್ನೂ ಓದಿ: Mann ki Baat: ಭಾರತೀಯ ಅನಿಮೇಶನ್ ಕ್ಷೇತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ 15 ರ‍್ಯಾಲಿಗಳನ್ನು ನಡೆಸಲಿದ್ದಾರೆ ಎಂದು ಬಿಜೆಪಿಗೆ ಸಂಬಂಧಿಸಿದ ಮೂಲಗಳು ತಿಳಿಸಿವೆ. ಹರಿಯಾಣದಂತೆ ಮಹಾರಾಷ್ಟ್ರದಲ್ಲೂ ಸಿಎಂ ಯೋಗಿ ಆದಿತ್ಯನಾಥ್ ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಗಳ ಪರ ಮತ ಯಾಚಿಸುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಹೊರತಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳೂ ಚುನಾವಣಾ ಪ್ರಚಾರಕ್ಕಾಗಿ ಮಹಾರಾಷ್ಟ್ರಕ್ಕೆ ಬರಲಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ತನ್ನ ತಂತ್ರವನ್ನು ಬದಲಿಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರೆಲ್ಲರಿಗಿಂತಲೂ ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರಿಂದ ಹೆಚ್ಚು ಚುನಾವಣಾ ರ‍್ಯಾಲಿಗಳನ್ನು ನಡೆಸುವ ಮೂಲಕ ಜನರನ್ನು ಸೆಳೆಯಲು ಪ್ಲಾನ್ ಮಾಡಲಾಗಿದೆ. ಮೂಲಗಳ ಪ್ರಕಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ 20 ರ‍್ಯಾಲಿಗಳನ್ನು ನಡೆಸಲಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ 40 ರ‍್ಯಾಲಿಗಳನ್ನು ನಡೆಸಲಿದ್ದಾರೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ 50 ರ‍್ಯಾಲಿಗಳ ನೇತೃತ್ವ ವಹಿಸಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬಾವಂಕುಲೆ 40 ರ‍್ಯಾಲಿ ನಡೆಸಲಿದ್ದಾರೆ. ಇವುಗಳಲ್ಲದೆ ಸ್ಥಳೀಯ ಮುಖಂಡರಿಂದಲೂ ರ‍್ಯಾಲಿ ನಡೆಸಲಾಗುವುದು.
ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆಗೆ ಬಿಜೆಪಿಯ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ; ಮೋದಿಯಿಂದ 12 ರ್ಯಾಲಿ ಸಾಧ್ಯತೆ
ಗಮನಿಸಬೇಕಾದ ಸಂಗತಿಯೆಂದರೆ, ಹರಿಯಾಣ ಚುನಾವಣೆಗಳಲ್ಲಿಯೂ ಸಹ ಪಿಎಂ ಮೋದಿ ಮತ್ತು ಅಮಿತ್ ಶಾ ಕಡಿಮೆ ರ‍್ಯಾಲಿಗಳನ್ನು ನಡೆಸಿದ್ದರು. ಹೆಚ್ಚಿನ ರ‍್ಯಾಲಿಗಳನ್ನು ಸ್ಥಳೀಯ ನಾಯಕರು ನಡೆಸಿದ್ದರು. ಇದೇ ತಂತ್ರವನ್ನು ಅನುಸರಿಸಿ ಬಿಜೆಪಿ ಮಹಾರಾಷ್ಟ್ರದಲ್ಲಿ ತನ್ನ ತಂತ್ರವನ್ನು ಯೋಜಿಸಿದೆ. ಹರಿಯಾಣದಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿದ ಸ್ಥಾನಗಳನ್ನು ಗೆದ್ದು ಸತತ ಮೂರನೇ ಬಾರಿಗೆ ದಾಖಲೆಯ ಸರ್ಕಾರ ರಚಿಸಿದೆ.
ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ನವೆಂಬರ್ 23ರಂದು ರಾಜ್ಯದ ಮತಗಳ ಎಣಿಕೆ ನಡೆಯಲಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮಿತ್ರಪಕ್ಷಗಳಾದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಬಿಜೆಪಿ ಮಹಾರಾಷ್ಟ್ರದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಉತ್ಸುಕವಾಗಿದೆ.
2019ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56, ಕಾಂಗ್ರೆಸ್ 44 ಸ್ಥಾನ ಗಳಿಸಿತ್ತು. 2014ರಲ್ಲಿ ಬಿಜೆಪಿ 122, ಶಿವಸೇನೆ 63, ಕಾಂಗ್ರೆಸ್ 42 ಸ್ಥಾನ ಗಳಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ