
ಮಣಿಪುರ, ಫೆಬ್ರವರಿ 3: ಸುಮಾರು 1 ವರ್ಷದಿಂದ ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ಮಣಿಪುರದ ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಸಚಿವ ಯುಮ್ನಮ್ ಖೇಮ್ಚಂದ್ ಸಿಂಗ್ ಅವರನ್ನು ಬಿಜೆಪಿ (BJP) ಪಕ್ಷ ಆಯ್ಕೆ ಮಾಡಿದೆ. ಮಣಿಪುರದಲ್ಲಿ ನಡೆದ ದೀರ್ಘಕಾಲದ ಜನಾಂಗೀಯ ಹಿಂಸಾಚಾರದ ನಡುವೆ 2025ರ ಫೆಬ್ರವರಿ 9ರಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದರು. ಅಂದಿನಿಂದ ಈ ಹುದ್ದೆ ಖಾಲಿಯಾಗಿತ್ತು. ಅದಾದ ಕೆಲವೇ ದಿನಗಳ ನಂತರ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಯುಮ್ನಮ್ ಖೇಮ್ಚಂದ್ ಸಿಂಗ್ ಅವರು ಈಶಾನ್ಯ ರಾಜ್ಯದಲ್ಲಿ ಬಿಜೆಪಿಯ 2ನೇ ಮುಖ್ಯಮಂತ್ರಿಯಾಗಲಿದ್ದಾರೆ.
ಬಿಜೆಪಿ ಶಾಸಕರ ಗುಂಪೊಂದು ದೆಹಲಿಗೆ ಬಂದು ಮಣಿಪುರದಲ್ಲಿ ಸರ್ಕಾರ ರಚನೆ ಕುರಿತು ಅಮಿತ್ ಶಾ ಸೇರಿದಂತೆ ಪಕ್ಷದ ಕೇಂದ್ರ ನಾಯಕತ್ವದೊಂದಿಗೆ ವ್ಯಾಪಕ ಮಾತುಕತೆ ನಡೆಸಿತು. ನಂತರ ಶಾಸಕರು ಸಿಂಗ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದರು. ನವದೆಹಲಿಯಲ್ಲಿ ನಡೆದ ಸಭೆಯ ನಂತರ ಮಣಿಪುರದ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಯುಮ್ನಮ್ ಖೇಮ್ಚಂದ್ ಸಿಂಗ್ ಅವರ ಹೆಸರನ್ನು ಘೋಷಿಸಲಾಯಿತು. ಖೇಮ್ಚಂದ್ ಸಿಂಗ್ 2 ಬಾರಿ ಶಾಸಕರಾಗಿದ್ದಾರೆ. ಅವರು 2017ರಲ್ಲಿ ಮತ್ತು ನಂತರ 2022ರಲ್ಲಿ ಸಿಂಗ್ಜಮೈ ವಿಧಾನಸಭಾ ಸ್ಥಾನದಿಂದ ಸತತ ಎರಡು ಅವಧಿಗೆ ಆಯ್ಕೆಯಾಗಿದ್ದರು.
ಇದನ್ನೂ ಓದಿ: ಮಣಿಪುರದ ಕುಗ್ರಾಮದ ಹೆಣ್ಣು ಈಗ ಪ್ರಧಾನಿ ಮೋದಿಯ ಅಂಗರಕ್ಷಕಿ! ಇವರೇ ಮೊದಲ ಮಹಿಳಾ ಎಸ್ಪಿಜಿ ಕಮಾಂಡೋ
2017ರ ಮಾರ್ಚ್ ತಿಂಗಳಲ್ಲಿ ಮಣಿಪುರ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾದಾಗ ಅವರು ಜನಪ್ರಿಯತೆ ಗಳಿಸಿದರು. ಅವರು ಪೂರ್ಣ 5 ವರ್ಷಗಳ ಅವಧಿಗೆ ಆ ಹುದ್ದೆಯನ್ನು ಅಲಂಕರಿಸಿದರು. 2022ರ ವಿಧಾನಸಭಾ ಚುನಾವಣೆಯ ನಂತರ, ಖೇಮ್ಚಂದ್ ಸಿಂಗ್ ಅವರನ್ನು ಎರಡನೇ ಬಾರಿಗೆ ಬಿರೇನ್ ಸಿಂಗ್ ಸಂಪುಟಕ್ಕೆ ಸಚಿವರನ್ನಾಗಿ ಸೇರಿಸಲಾಯಿತು. ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್, ಪುರಸಭೆ ಆಡಳಿತ, ವಸತಿ ಅಭಿವೃದ್ಧಿ ಮತ್ತು ಶಿಕ್ಷಣ ಸೇರಿದಂತೆ ಹಲವಾರು ಖಾತೆಗಳನ್ನು ವಹಿಸಲಾಯಿತು. ರಾಷ್ಟ್ರಪತಿ ಆಳ್ವಿಕೆ ಹೇರುವವರೆಗೂ ಖೇಮ್ಚಂದ್ ಸಿಂಗ್ ಸಚಿವರಾಗಿ ಸೇವೆ ಸಲ್ಲಿಸುತ್ತಲೇ ಇದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ