ಹೆರಿಗೆ ಬಳಿಕ ಬಾಣಂತಿಯ ಹೊಟ್ಟೆಯಲ್ಲೇ ಗ್ಲೌಸ್,ಒರೆಸುವ ಬಟ್ಟೆ ಬಿಟ್ಟು ಹೊಲಿಗೆ ಹಾಕಿದ ವೈದ್ಯರು, ಮಹಿಳೆ ಸ್ಥಿತಿ ಗಂಭೀರ
ಮಹಾರಾಷ್ಟ್ರದ ಬೀಡ್ ಜಿಲ್ಲಾ ಆಸ್ಪತ್ರೆಯಲ್ಲಿ ಸಿ-ಸೆಕ್ಷನ್ ಹೆರಿಗೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದ 19 ವರ್ಷದ ಬಾಣಂತಿಯ ಹೊಟ್ಟೆಯಲ್ಲೇ ಸರ್ಜಿಕಲ್ ಗ್ಲೌಸ್ ಮತ್ತು ಒರೆಸುವ ಬಟ್ಟೆಗಳನ್ನು ಬಿಟ್ಟು ಹೊಲಿಗೆ ಹಾಕಲಾಗಿದೆ. ತೀವ್ರ ಹೊಟ್ಟೆನೋವಿನಿಂದ ಬಳಲಿದ ಯುವತಿಗೆ ಪುಣೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ವಸ್ತುಗಳನ್ನು ಹೊರತೆಗೆಯಲಾಗಿದೆ. ಈ ವೈದ್ಯಕೀಯ ಲೋಪ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಮುಂಬೈ, ಆಗಸ್ಟ್ 20: ವೈದ್ಯರು ಹೆರಿಗೆ(Delivery) ಬಳಿಕ ಬಾಣಂತಿಯ ಹೊಟ್ಟೆಯಲ್ಲೇ ಗ್ಲೌಸ್ ಹಾಗೂ ಒರೆಸುವ ಬಟ್ಟೆ ಬಿಟ್ಟು ಹೊಲಿಗೆ ಹಾಕಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಸಿ-ಸೆಕ್ಷನ್ ಹೆರಿಗೆ ಶಸ್ತ್ರಚಿಕಿತ್ಸೆಯ ವೇಳೆ ವೈದ್ಯರು 19 ವರ್ಷದ ಬಾಣಂತಿಯ ಹೊಟ್ಟೆಯಲ್ಲೇ ಸರ್ಜಿಕಲ್ ಗ್ಲೌಸ್ ಹಾಗೂ ಒರೆಸುವ ಬಟ್ಟೆಗಳನ್ನು ಬಿಟ್ಟು ಹೊಲಿಗೆ ಹಾಕಿದ್ದು, ಯುವತಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಸಂಧ್ಯಾ ಸೂರಜ್ ಗಾಯಕ್ವಾಡ್ ಎಂಬ ಯುವತಿಗೆ ಆಗಸ್ಟ್ 1 ರಂದು ಬೀಡ್ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ನಾಲ್ಕು ದಿನಗಳ ನಂತರ ಮನೆಗೆ ಕಳುಹಿಸಲಾಗಿತ್ತು. ಮನೆಗೆ ಹೋದ ನಂತರ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಾಗ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸ್ಕ್ಯಾನಿಂಗ್ ವೇಳೆ ಹೊಟ್ಟೆಯಲ್ಲಿ ಅನೇಕ ವಸ್ತುಗಳಿರುವುದು ಪತ್ತೆಯಾಗಿದೆ.
ಪುಣೆಯ ಸಾಸೂನ್ ಆಸ್ಪತ್ರೆಗೆ ದಾಖಲಿಸಿ ತುರ್ತು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಆಕೆಯ ಹೊಟ್ಟೆಯೊಳಗಿದ್ದ ಸರ್ಜಿಕಲ್ ಗ್ಲೌಸ್ ಮತ್ತು ಟಿಶ್ಯೂ ಬಟ್ಟೆಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ತಪ್ಪಿತಸ್ಥ ವೈದ್ಯರ ವಿರುದ್ಧ ಕಠಿಣ ಕ್ರಮಕ್ಕೆ ಪತಿ ಆಗ್ರಹಿಸಿದ್ದು, “ತನ್ನ ಹಸುಗೂಸನ್ನು ಎತ್ತಿಕೊಳ್ಳಲೂ ನನ್ನ ಮಗಳಿಗೆ ಶಕ್ತಿಯಿಲ್ಲದಂತಾಗಿದೆ” ಎಂದು ತಾಯಿ ಕಣ್ಣೀರಿಟ್ಟಿದ್ದಾರೆ.
ಮತ್ತಷ್ಟು ಒದಿ: ಮಗುವಿನ ಜನನದ ಬಳಿಕ ಥೈರಾಯ್ಡ್ ಸಮಸ್ಯೆ ಹೆಚ್ಚಾಗಲು ಕಾರಣವೇನು? ಈ ಪರೀಕ್ಷೆ ಮಾಡಿಸಿಕೊಳ್ಳಿ
ವೈದ್ಯರಿಗೆ ನೋಟಿಸ್: ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬೀಡ್ ಜಿಲ್ಲಾ ಮುಖ್ಯ ಶಸ್ತ್ರಚಿಕಿತ್ಸಕ ಸತೀಶ್‌ಕುಮಾರ್ ಸೋಲಂಕೆ, ಶಸ್ತ್ರಚಿಕಿತ್ಸಾ ತಂಡಕ್ಕೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದು, ವರದಿ ಬಂದ ನಂತರ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸಾ ವಸ್ತುಗಳು ದೇಹದೊಳಗೆ ಉಳಿದುಕೊಂಡಾಗ ತೀವ್ರ ಸೋಂಕು (Sepsis) ಹರಡಿ ಆಂತರಿಕ ಅಂಗಾಂಗಗಳು ವಿಫಲವಾಗುವ ಅಪಾಯವಿರುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ವೇಳೆ ಪ್ರಮಾಣಿತ ಎಣಿಕೆ ಪ್ರೋಟೋಕಾಲ್ ಕಡ್ಡಾಯವಾಗಿದ್ದರೂ, ಇಂತಹ ನಿರ್ಲಕ್ಷ್ಯಗಳು ಮರುಕಳಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




