ಬೆಳ್ಳಿ ಬಾರ್ ಆಮದಿಗೆ ನಿರ್ಬಂಧ ಹೇರಿದ ಕೇಂದ್ರ: 99.9% ಶುದ್ಧತೆಯ ಸಿಲ್ವರ್ ಬಾರ್ಸ್ಗೆ ಪರವಾನಗಿ ಕಡ್ಡಾಯ
ಕೇಂದ್ರ ಸರ್ಕಾರವು ಬೆಳ್ಳಿ ಬಾರ್ ಆಮದಿನ ಮೇಲೆ ನಿರ್ಬಂಧ ಹೇರಿದೆ. ಇನ್ಮುಂದೆ 99.9% ಶುದ್ಧತೆಯ ಬೆಳ್ಳಿ ಬಾರ್ ಆಮದಿಗೆ ವಿಶೇಷ ಪರವಾನಗಿ ಕಡ್ಡಾಯವಾಗಿದೆ. ಪಶ್ಚಿಮ ಏಷ್ಯಾದ ಸಂಘರ್ಷ, ದೇಶದಲ್ಲಿ ಬೆಳ್ಳಿ ಗಟ್ಟಿಗಳ ಕೊರತೆ ಮತ್ತು ಗಗನಕ್ಕೇರಿರುವ ಬೆಲೆಗಳಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ನವದೆಹಲಿ, ಮೇ 16: ದೇಶದಲ್ಲಿ ಬೆಳ್ಳಿ ಬೆಲೆ ಗಗನಕ್ಕೇರಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ (Central Government) ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಬೆಳ್ಳಿ ಬಾರ್ (Silver Bar) ಆಮದು ಮಾಡಿಕೊಳ್ಳಲು ವಿಶೇಷ ಪರವಾನಗಿಯನ್ನು ಕಡ್ಡಾಯಗೊಳಿಸಿ ನಿರ್ಬಂಧ ಹೇರಿದೆ. ಈವರೆಗೂ ಸಿಲ್ವರ್ ಬಾರ್ಸ್ ಆಮದಿನ ಮೇಲೆ ಯಾವುದೇ ನಿರ್ಬಂಧ ಇರಲಿಲ್ಲ. ಆದರೆ, ಹೊಸ ನಿಯಮದ ಪ್ರಕಾರ 99.9% ಶುದ್ಧತೆಯ ಬೆಳ್ಳಿ ಬಾರ್ ಆಮದು ಮಾಡಲು ವಾಣಿಜ್ಯ ಸಚಿವಾಲಯದ ವಿಶೇಷ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ.
ಮುಖ್ಯಾಂಶಗಳು
- ಬೆಳ್ಳಿ ಬಾರ್ ಆಮದಿಗೆ ಕೇಂದ್ರ ಬ್ರೇಕ್!
- 99.9% ಶುದ್ಧತೆಯ ಬೆಳ್ಳಿ ಬಾರ್ ಆಮದಿಗೆ ಪರವಾನಗಿ ಕಡ್ಡಾಯ
- ಸಿಲ್ವರ್ ಬಾರ್ಸ್ ಬೆಲೆ ಮತ್ತಷ್ಟು ಏರಿಕೆ ಭೀತಿ
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಎಫೆಕ್ಟ್
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸಂಘರ್ಷ ಹಾಗೂ ಭೌಗೋಳಿಕ ರಾಜಕೀಯ ಅಸ್ಥಿರತೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಆಮದು ಅವಲಂಬನೆಯನ್ನು ತಗ್ಗಿಸಿ ದೇಶೀಯ ಮಾರುಕಟ್ಟೆ ಸ್ಥಿರಗೊಳಿಸುವುದು ಇದರ ಉದ್ದೇಶವಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಚಿನ್ನದ ಮೇಲಿನ ವಿವಿಧ ಹೂಡಿಕೆಗಳಿಗೆ ವಿವಿಧ ತೆರಿಗೆಗಳು ಹೇಗೆ? ಇಲ್ಲಿದೆ ಡೀಟೇಲ್ಸ್
ಇನ್ನು ಈಗಾಗಲೇ ದೇಶದ ಮಾರುಕಟ್ಟೆಗಳಲ್ಲಿ ಬೆಳ್ಳಿ ಗಟ್ಟಿಗಳ ತೀವ್ರ ಕೊರತೆ ಉಂಟಾಗಿದೆ. ಬೇಡಿಕೆ ಹೆಚ್ಚಳ ಮತ್ತು ಪೂರೈಕೆಯಲ್ಲಿ ವ್ಯತ್ಯಯದಿಂದಾಗಿ ಬೆಳ್ಳಿ ಬೆಲೆ ದಾಖಲೆಯ ಮಟ್ಟಕ್ಕೆ ಏರಿದೆ. ಈಗ ಆಮದಿಗೆ ನಿರ್ಬಂಧ ವಿಧಿಸಿರುವುದರಿಂದ ಮುಂದಿನ ದಿನಗಳಲ್ಲಿ ಬೆಳ್ಳಿ ಬೆಲೆ ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.
ಎಎನ್ಐ ಟ್ವೀಟ್
The Government of India has tightened the policy regarding the import of silver bars, changing their status from ‘Free’ to ‘Restricted’ with immediate effect. pic.twitter.com/k4Zyq4W2rO
— ANI (@ANI) May 16, 2026
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಶನಿವಾರ ಹೊರಡಿಸಿರುವ ಆದೇಶದ ಪ್ರಕಾರ, ಶೇಕಡಾ 99.9 ಅಥವಾ ಅದಕ್ಕಿಂತ ಹೆಚ್ಚಿನ ತೂಕದ ಶುದ್ಧ ಬೆಳ್ಳಿಯ ಬಾರ್ಗಳ ಆಮದು ನೀತಿಯನ್ನು ಈವರೆಗೆ ಇದ್ದ ಮುಕ್ತ ವರ್ಗದಿಂದ ನಿರ್ಬಂಧಿತ ವರ್ಗಕ್ಕೆ ಪರಿಷ್ಕರಿಸಲಾಗಿದೆ. ಇದರೊಂದಿಗೆ ಇತರೆ ಬೆಳ್ಳಿ ಬಾರ್ಗಳ ವರ್ಗಕ್ಕೂ ಇದೇ ನಿಯಮ ಅನ್ವಯವಾಗಲಿದೆ.
ಅಮೂಲ್ಯ ಲೋಹಗಳ ಆಮದಿನ ಮೇಲೆ ಕೇಂದ್ರ ಸರ್ಕಾರ ಮೇ 13ರಿಂದ ಭಾರೀ ಸುಂಕ ಏರಿಕೆ ಮಾಡಿದೆ. ಈವರೆಗೆ ಶೇ.6ರಷ್ಟಿದ್ದ ಆಮದು ಸುಂಕವನ್ನು ಏಕಾಏಕಿ ಶೇ.15ಕ್ಕೆ ಹೆಚ್ಚಿಸಲಾಗಿದೆ. ಇದರೊಂದಿಗೆ 2024ರಲ್ಲಿ ಮಾಡಿದ್ದ ಸುಂಕ ಕಡಿತವನ್ನು ಸರ್ಕಾರ ಹಿಂಪಡೆದಂತಾಗಿದೆ.
ಇದನ್ನೂ ಓದಿ: Gold Rate: ಸತತ ಇಳಿಕೆ ಕಂಡ ಚಿನ್ನ, ಬೆಳ್ಳಿ ಬೆಲೆಗಳು; ಇಲ್ಲಿದೆ ದರಪಟ್ಟಿ
ಆದೇಶದ ಪ್ರಕಾರ, ಸರ್ಕಾರವು ಚಿನ್ನ ಮತ್ತು ಬೆಳ್ಳಿ ಆಮದಿನ ಹಲವು ವರ್ಗಗಳ ಮೇಲೆ ಮೂಲ ಕಸ್ಟಮ್ಸ್ ಸುಂಕವನ್ನು ಶೇ.5ರಿಂದ ಶೇ.10ಕ್ಕೆ ಹೆಚ್ಚಿಸಿದೆ. ಜೊತೆಗೆ ಶೇ.5ರ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಯಥಾಸ್ಥಿತಿಯಲ್ಲಿದ್ದು, ಇದರಿಂದ ಆಮದು ತೆರಿಗೆ ಶೇ.15ಕ್ಕೆ ಏರಿಕೆಯಾಗಿದೆ.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:15 pm, Sat, 16 May 26





