ಕೆಲವೊಮ್ಮೆ ಮಕ್ಕಳು ತಪ್ಪು ಮಾಡುತ್ತಾರೆ; ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿದಾರ ಪೇಪರ್ ಎಸೆದ ಘಟನೆಗೆ ಸಿಜೆಐ ಪ್ರತಿಕ್ರಿಯೆ
ಕೆಲವು ದಿನಗಳ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿದಾರರೊಬ್ಬರು ನ್ಯಾಯಪೀಠದತ್ತ ಕಾಗದ ಪತ್ರಗಳನ್ನು ಎಸೆದು, ಮುಖ್ಯ ನ್ಯಾಯಮೂರ್ತಿಗಳ ಬಗ್ಗೆಯೂ ಹಗುರವಾಗಿ ಮಾತನಾಡಿದ್ದರು. ಅಲ್ಲದೆ, ನ್ಯಾಯಪೀಠದಲ್ಲಿದ್ದ ಇಬ್ಬರು ನ್ಯಾಯಮೂರ್ತಿಗಳನ್ನು ನ್ಯಾಯಾಂಗದ ಸೇವಕರೇ ಎಂದು ಕರೆದಿದ್ದರು. ಈ ಘಟನೆಯ ಕುರಿತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ. ಈ ತಪ್ಪು ಮಾಡಿದ ವ್ಯಕ್ತಿಯನ್ನು ನ್ಯಾಯಾಂಗ ನಿಂದನೆಯ ಆರೋಪದಡಿ ಶಿಕ್ಷಿಸುವ ಬದಲು ಕ್ಷಮಿಸಿರುವ ಸಿಜೆಐ ಮಕ್ಕಳು ಆಗಾಗ ಈ ರೀತಿ ಮಾಡುತ್ತಿರುತ್ತಾರೆ ಎಂದು ಹೇಳಿದ್ದಾರೆ.

ನವದೆಹಲಿ, ಜುಲೈ 13: ಸುಪ್ರೀಂ ಕೋರ್ಟ್ (Supreme Court) ಒಳಗಡೆಯೇ ಅರ್ಜಿದಾರರೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರ ವಿರುದ್ಧ ಅತ್ಯಂತ ಆಕ್ಷೇಪಾರ್ಹ ಪದಗಳನ್ನು ಬಳಸಿ ನಿಂದಿಸಿದ ಹಾಗೂ ಗಾಳಿಯಲ್ಲಿ ದಾಖಲೆ ಪತ್ರಗಳನ್ನು ತೂರಿದ ಆಘಾತಕಾರಿ ಘಟನೆ ನಡೆದಿತ್ತು. ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಶಿಕ್ಷಿಸುವ ಬದಲು, ದೊಡ್ಡ ಗುಣ ಪ್ರದರ್ಶಿಸಿರುವ ಸಿಜೆಐ ಸೂರ್ಯ ಕಾಂತ್, ಸಾಂವಿಧಾನಿಕ ಸಂಸ್ಥೆಗಳ ಘನತೆಯನ್ನು ಎತ್ತಿಹಿಡಿಯುವ ಅಗತ್ಯವನ್ನು ಒತ್ತಿಹೇಳಿದ್ದಾರೆ.
ತಮ್ಮ ವಿರುದ್ಧ ನಡೆದ ನಿಂದನೆಯ ಘಟನೆಯನ್ನು ಹಗುರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ಯುವಕರು ಕೆಲವೊಮ್ಮೆ ಇಂತಹ ವರ್ತನೆಗಳಲ್ಲಿ ತೊಡಗುತ್ತಾರೆ. ಆದರೆ ದೇಶದ ಸಾಂವಿಧಾನಿಕ ಸಂಸ್ಥೆಗಳ ಗೌರವ ಮತ್ತು ಘನತೆಯನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದ್ದಾರೆ.
Reacting to the recent courtroom misbehaviour Chief Justice of India Surya Kant said ‘children’ sometimes act unexpectedly, but institutions are always bigger than individuals. He urged everyone to uphold the dignity of institutions. #SupremeCourt #CJISuryaKant #prabalpratap pic.twitter.com/IIuO2R62fc
— Neharika Maheshwari🇮🇳 (@niharikam_21) July 13, 2026
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಜೆಐ ಸೂರ್ಯಕಾಂತ್, “ಈ ವಿಷಯವನ್ನು ದೊಡ್ಡದು ಮಾಡದೆ ಬಿಟ್ಟುಬಿಡಿ. ಮಕ್ಕಳು ಕೆಲವೊಮ್ಮೆ ಈ ರೀತಿ ಮಾಡಿಬಿಡುತ್ತಾರೆ. ದೊಡ್ಡವರಾದ ನಾವು ಅದನ್ನೇ ಮನಸಿನಲ್ಲಿಟ್ಟುಕೊಳ್ಳಬಾರದು. ಸಾಂವಿಧಾನಿಕ ಸಂಸ್ಥೆಗಳ ಮರ್ಯಾದೆ, ಘನತೆಯನ್ನು ನಾವು ಕಾಪಾಡಿಕೊಳ್ಳಬೇಕು. ಇದು ನಮ್ಮೆಲ್ಲರ ಜವಾಬ್ದಾರಿ ಮತ್ತು ಪ್ರತಿಯೊಬ್ಬರೂ ಇದನ್ನು ನಿಭಾಯಿಸಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಲ್ಲಿ ಹೈಡ್ರಾಮಾ; ನ್ಯಾಯಮೂರ್ತಿಗಳನ್ನು ನಿಂದಿಸಿ, ಪೇಪರ್ ಎಸೆದ ಅರ್ಜಿದಾರ
ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದ್ದೇನು?:
ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಸ್ವತಃ ತಾನೇ ವಾದ ಮಂಡಿಸುತ್ತಿದ್ದ ಅರ್ಜಿದಾರರೊಬ್ಬರು ಇದ್ದಕ್ಕಿದ್ದಂತೆ ದಾಖಲೆ ಪತ್ರಗಳ ಕಂತೆಗಳನ್ನು ಗಾಳಿಯಲ್ಲಿ ತೂರಿ ಎಸೆದಿದ್ದಲ್ಲದೆ, ಸಿಜೆಐ ಸೂರ್ಯ ಕಾಂತ್ ಅವರ ವಿರುದ್ಧ ಅತ್ಯಂತ ಅಸಂಸದೀಯ ಹಾಗೂ ನಿಂದನಾತ್ಮಕ ಭಾಷೆಯನ್ನು ಬಳಸಿದ್ದರು. ಲಕ್ನೋ ಮೂಲದ ಪ್ರಬಲ್ ಪ್ರತಾಪ್ ಎಂದು ಗುರುತಿಸಲಾದ ಆ ವ್ಯಕ್ತಿಯನ್ನು ತಕ್ಷಣವೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಕೋರ್ಟ್ ರೂಮ್‌ನಿಂದ ಹೊರಗೆ ಎಳೆದುಕೊಂಡು ಹೋಗಿ ಪೊಲೀಸರ ವಶಕ್ಕೆ ಒಪ್ಪಿಸಿದರು. ಆದರೆ, ಆತನ ವರ್ತನೆಯು ಅಸಂಬದ್ಧ ಮತ್ತು ಮಾನಸಿಕ ಅಸ್ಥಿರತೆಯಿಂದ ಕೂಡಿದಂತೆ ಕಂಡುಬಂದಿದ್ದರಿಂದ, ಕೋರ್ಟ್ ಆತನ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ನಂತರ ಬಿಡುಗಡೆ ಮಾಡಲು ಅನುಮತಿಸಿತು.
ಇದನ್ನೂ ಓದಿ: ಮದ್ರಾಸ್ ಹೈಕೋರ್ಟ್ನ ಗೋಹತ್ಯೆ ನಿಷೇಧ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ
ಕಪ್ಪು ಕೋಟು ಮತ್ತು ಬಿಳಿ ಶರ್ಟ್ ಧರಿಸಿದ್ದ ಪ್ರಬಲ್ ಪ್ರತಾಪ್, ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠದ ಮುಂದೆ ತನ್ನ ಪ್ರಕರಣದ ವಾದ ಮಂಡಿಸಲು ನಿಂತಿದ್ದರು. ವಾದದ ಆರಂಭದಲ್ಲೇ ಆತ ನ್ಯಾಯಾಧೀಶರನ್ನು ಸಂಬೋಧಿಸಲು ಬಳಸಿದ ಪದಗಳು ಎಲ್ಲರನ್ನೂ ಬೆಚ್ಚಿಬೀಳಿಸಿದವು. ನ್ಯಾಯಾಧೀಶರನ್ನು “ನ್ಯಾಯಾಂಗದ ನೌಕರರೇ ಎಂದು ಕರೆದ ಆತ, “ಲಕ್ನೋದ ವಿಕಾಸ್ ನಗರದ ಎಸಿಪಿ ಮತ್ತು ಡುಪ್ಲೆಕ್ಸ್ ಟೆಕ್ನಾಲಜೀಸ್ ಸರ್ವಿಸಸ್ ಲಿಮಿಟೆಡ್ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚಿಸುವಂತೆ ನಾನು ನಿಮಗೆ ಆದೇಶಿಸುತ್ತೇನೆ!” ಎಂದರು.
ಆತನ ಮಾತುಗಳನ್ನು ಕೇಳಿ ತಕ್ಷಣವೇ ತಡೆದ ನ್ಯಾಯಾಧೀಶರು, “ನೀವು ನಮಗೆ ಆದೇಶ ನೀಡುತ್ತಿದ್ದೀರಾ?” ಎಂದು ಪ್ರಶ್ನಿಸಿದರು. ಆದರೆ ಪ್ರತಾಪ್ ಅದಕ್ಕೆ ನೇರ ಉತ್ತರ ನೀಡದೆ ತನ್ನ ವಾದವನ್ನು ಮುಂದುವರಿಸಿದರು. ನನ್ನ ಕಡೆಯಿಂದ ಇಷ್ಟೇ ಹೇಳಬೇಕಾಗಿರುವುದು. ಉಳಿದ ಎಲ್ಲಾ ದಾಖಲೆಗಳು ರೆಕಾರ್ಡ್‌ನಲ್ಲಿವೆ” ಎಂದು ಹೇಳಿ ತನ್ನ ಬಳಿ ಇದ್ದ ಕಾಗದಪತ್ರಗಳನ್ನು ನ್ಯಾಯಪೀಠದತ್ತ ಎಸೆದರು. ಇದರಿಂದ ಕೋರ್ಟ್‌ನಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಅವರು ಸಿಜೆಐ ವಿರುದ್ಧವೂ ಜೋರಾಗಿ ನಿಂದನಾತ್ಮಕ ಮಾತುಗಳನ್ನು ಆಡಲು ಶುರುಮಾಡಿದರು. ತಕ್ಷಣ ಕೋರ್ಟ್‌ರೂಮ್ ಒಳಗಿದ್ದ ದೆಹಲಿ ಪೊಲೀಸ್ ಸಿಬ್ಬಂದಿ ಪ್ರತಾಪ್‌ನನ್ನು ವಶಕ್ಕೆ ಪಡೆದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:37 pm, Mon, 13 July 26




