ಯುವಜನರಿಗಾಗಿ ದೇಶಾದ್ಯಂತ ‘ಕಾಕ್ರೋಚ್ ಕ್ಲಬ್’ ಸ್ಥಾಪಿಸಲು ಸಿಜೆಪಿ ನಿರ್ಧಾರ

‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ದೇಶಾದ್ಯಂತ ಪ್ರಮುಖ ನಗರಗಳಲ್ಲಿ ‘ಕಾಕ್ರೋಚ್ ಕ್ಲಬ್’ ಎಂಬ ಶಾಶ್ವತ ಕೇಂದ್ರಗಳನ್ನು ಆರಂಭಿಸಲು ಯೋಜನೆ ರೂಪಿಸಿದೆ. ಪುಣೆಯಲ್ಲಿ ಮೊದಲ ಕ್ಲಬ್ ಉದ್ಘಾಟನೆಯೊಂದಿಗೆ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಮುಂದಿನ ಹಂತದಲ್ಲಿ ಬೆಂಗಳೂರು, ದೆಹಲಿ, ಪಾಟ್ನಾ, ರಾಂಚಿ, ವಾರಣಾಸಿ ಸೇರಿದಂತೆ ದೇಶದ ಇತರ ನಗರಗಳಿಗೂ ಇದನ್ನು ವಿಸ್ತರಿಸಲು ಸಿಜೆಪಿ ಸಿದ್ಧತೆ ನಡೆಸಿದೆ. ಕೇವಲ ಬೀದಿ ಪ್ರತಿಭಟನೆಗಳಿಗೆ ಸೀಮಿತವಾಗದೆ, ವರ್ಷವಿಡೀ ಯುವಜನರ ಶಕ್ತಿಯನ್ನು ರಚನಾತ್ಮಕವಾಗಿ ಸಂಘಟಿಸುವುದು, ಗುಣಮಟ್ಟದ ಶಿಕ್ಷಣದ ಹಕ್ಕಿಗಾಗಿ ಧ್ವನಿ ಎತ್ತುವುದು ಮತ್ತು ಯುವ ಪೀಳಿಗೆಯ ಮೂಲಕ ನಮ್ಮದೇ ಆದ ಭಾರತದ ಕಲ್ಪನೆಯನ್ನು ರೂಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಯುವಜನರಿಗಾಗಿ ದೇಶಾದ್ಯಂತ ‘ಕಾಕ್ರೋಚ್ ಕ್ಲಬ್’ ಸ್ಥಾಪಿಸಲು ಸಿಜೆಪಿ ನಿರ್ಧಾರ
ಅಭಿಜೀತ್ ದಿಪ್ಕೆ
Image Credit source: PTI

Updated on: Nov 23, 2026 | 4:49 PM

ನವದೆಹಲಿ, ನವೆಂಬರ್ 23: ಯುವ ಭಾರತೀಯರು ಉಪನ್ಯಾಸಗಳಿಗೆ ಹಾಜರಾಗಲು, ಸಿನಿಮಾಗಳನ್ನು ವೀಕ್ಷಿಸಲು, ಪರೀಕ್ಷೆಗಳಿಗೆ ಅಧ್ಯಯನ ನಡೆಸಲು ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿಯನ್ನು ಆನಂದಿಸಲು ಪೂರಕವಾದ “ಭೌತಿಕ ವೇದಿಕೆ” ಆಗಿರುವ ‘ಕಾಕ್ರೋಚ್ ಕ್ಲಬ್’ ಆರಂಭಿಸುವುದಾಗಿ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಭಾನುವಾರ ಘೋಷಿಸಿದೆ. “ಎಲ್ಲಕ್ಕಿಂತ ಮುಖ್ಯವಾಗಿ, ಕಾಕ್ರೋಚ್ ಕ್ಲಬ್ ಯುವಜನರು ಸ್ವತಂತ್ರವಾಗಿ ಆಲೋಚಿಸಲು ಪ್ರೋತ್ಸಾಹಿಸುವ ತಾಣವಾಗಲಿದೆ. ಇದು ಅಭಿಪ್ರಾಯಗಳನ್ನು ಹಸ್ತಾಂತರಿಸುವ ಅಥವಾ ಸಿದ್ಧಾಂತಗಳನ್ನು ಹೇರುವ ಸ್ಥಳವಲ್ಲ. ಬದಲಾಗಿ, ವಿಚಾರಗಳನ್ನು ಚರ್ಚಿಸುವ, ದೃಷ್ಟಿಕೋನಗಳನ್ನು ಪ್ರಶ್ನಿಸುವ ಮತ್ತು ಸ್ವತಂತ್ರ ಚಿಂತನೆಯನ್ನು ಸಂಭ್ರಮಿಸುವ ವೇದಿಕೆಯಾಗಿದೆ” ಎಂದು ಸೌರವ್ ದಾಸ್ ಹೇಳಿದ್ದಾರೆ.

ಅಭಿಜೀತ್ ದಿಪ್ಕೆ ಅವರಿಂದ ಸ್ಥಾಪಿಸಲ್ಪಟ್ಟ ಸಿಜೆಪಿ, ಉತ್ತಮ ಶಿಕ್ಷಣಕ್ಕಾಗಿ ನಡೆಸಿದ ಹೋರಾಟದ ಮೂಲಕ ಸಾರ್ವಜನಿಕರ ಗಮನ ಸೆಳೆದಿತ್ತು. ಶಿಕ್ಷಣ ವ್ಯವಸ್ಥೆಯ ಸ್ಥಿತಿಗತಿಯ ವಿರುದ್ಧ ಜೂನ್ 6ರಂದು ಪಕ್ಷವು ನಡೆಸಿದ ಪ್ರತಿಭಟನೆಗೂ ಮುನ್ನ ಸ್ವತಂತ್ರ ತನಿಖಾ ಪತ್ರಕರ್ತ ಸೌರವ್ ದಾಸ್ ಅವರನ್ನು ಮುಖ್ಯ ವಕ್ತಾರರನ್ನಾಗಿ ನೇಮಿಸಲಾಗಿತ್ತು. ವರ್ಷವಿಡೀ ಯುವಜನರು ಭೇಟಿಯಾಗಲು ಮತ್ತು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸ್ಥಳಾವಕಾಶ ನೀಡುವ ಮೂಲಕ ಆ ಅಭಿಯಾನವನ್ನು ವಿಸ್ತರಿಸುವ ಗುರಿಯನ್ನು ಈ ಕ್ಲಬ್ ಹೊಂದಿದೆ.

Loading...

ಇದನ್ನೂ ಓದಿ: ಸಿಜೆಪಿ ನಾಯಕರಿಗೆ ವಿದೇಶಿ ಹಣಕಾಸು? ಅಭಿಜೀತ್ ದಿಪ್ಕೆ, ಅಶುತೋಷ್ ರಾಂಕಾ ವಿರುದ್ಧ ಕೇಂದ್ರ ಸಚಿವರ ಗಂಭೀರ ಆರೋಪ

ಯುವಜನರ ಶಕ್ತಿ ಮತ್ತು ಆಲೋಚನೆಗಳಿಗೆ ಒಂದು ರಚನಾತ್ಮಕ ದಾರಿ ಕಲ್ಪಿಸುವ ಉದ್ದೇಶದಿಂದ ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಸೌರವ್ ದಾಸ್ ತಿಳಿಸಿದ್ದಾರೆ. ಭಾರತದಲ್ಲಿ ಬದಲಾವಣೆ ತರಲು ಯುವಜನರ ಶಕ್ತಿಯನ್ನು ರಚನಾತ್ಮಕ ರೀತಿಯಲ್ಲಿ ಬಳಸಿಕೊಳ್ಳುವ ಗುರಿಯನ್ನು ಈ ಕ್ಲಬ್ ಹೊಂದಿದೆ ಎಂದು ಅವರು ಹೇಳಿದ್ದಾರೆ. ಜೂನ್ 4ರಂದು ನವದೆಹಲಿಯಲ್ಲಿ ನಡೆದ ಪಕ್ಷದ ಮೊದಲ ಪತ್ರಿಕಾಗೋಷ್ಠಿಯ 171 ದಿನಗಳ ನಂತರ ಈ ಘೋಷಣೆ ಹೊರಬಿದ್ದಿದೆ.


ಈ ಕಾರ್ಯಕ್ರಮವು ಪ್ರಮುಖ ಚಿಂತಕರ ವಿಚಾರಗಳ ಕುರಿತು ಉಪನ್ಯಾಸಗಳು ಮತ್ತು ಚರ್ಚೆಗಳನ್ನು ಒಳಗೊಂಡಿರುತ್ತದೆ. ಯುವಜನರು “ಗಾಂಧಿ, ನೆಹರು, ಅಂಬೇಡ್ಕರ್ ಮತ್ತು ಇತರ ಮಹಾನ್ ಚಿಂತಕರ ವಿಚಾರಗಳೊಂದಿಗೆ ತೊಡಗಿಸಿಕೊಳ್ಳಲು” ಸಾಧ್ಯವಾಗುತ್ತದೆ ಎಂದು ಸೌರವ್ ದಾಸ್ ಹೇಳಿದ್ದಾರೆ. ಈ ಮಹನೀಯರ ಸೇರ್ಪಡೆಯು ಕ್ಲಬ್‌ನ ಚರ್ಚೆಗಳನ್ನು ಭಾರತದ ಸ್ವಾತಂತ್ರ್ಯ ಚಳವಳಿ ಮತ್ತು ಸಾಂವಿಧಾನಿಕ ಆದರ್ಶಗಳ ಚೌಕಟ್ಟಿನಲ್ಲಿ ಇರಿಸುತ್ತದೆ.

ಇದನ್ನೂ ಓದಿ: ತಿರಂಗ ಯಾತ್ರೆಗೆ ತಡೆ; ನೇಹಾ ಬೋರಾ, ದಿಪ್ಕೆ ಸೇರಿ 150 ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ

“ದೇಶಾದ್ಯಂತ ಇರುವ ಮಕ್ಕಳು, ಶಿಕ್ಷಕರು ಉತ್ತಮ ಸೌಲಭ್ಯಗಳು ಮತ್ತು ಉತ್ತಮ ಶಿಕ್ಷಣಕ್ಕಾಗಿ ತಮ್ಮ-ತಮ್ಮ ಶಾಲೆಗಳು, ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಧ್ವನಿ ಎತ್ತಬೇಕು” ಎಂದು ಅವರು ಹೇಳಿದ್ದಾರೆ. ಅಂತಹ ಪ್ರಯತ್ನಗಳಿಗೆ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ಭರವಸೆ ನೀಡಿರುವ ಸಿಜೆಪಿ ನಾಯಕ ಅಶುತೋಶ್ ರಾಂಕಾ, “ಉತ್ತಮ ಶಿಕ್ಷಣವು ಐಷಾರಾಮಿಯಲ್ಲ, ಅದು ನಮ್ಮ ಹಕ್ಕು” ಎಂದು ಪ್ರತಿಪಾದಿಸಿದ್ದಾರೆ.

ದೇಶದ ಭವಿಷ್ಯದಲ್ಲಿ ಹೆಚ್ಚಿನ ಪಾಲನ್ನು ಬಯಸುತ್ತಿರುವ ಪೀಳಿಗೆಗೆ ಈ ಕ್ಲಬ್ ಒಂದು ಸಮಾಗಮ ತಾಣವಾಗಿ ರೂಪುಗೊಂಡಿದೆ. ಇದು ಗಂಭೀರ ಚರ್ಚೆ ಮತ್ತು ಹಾಸ್ಯವನ್ನು ಒಂದೇ ಸೂರಿನಡಿ ತರುವುದರ ಜೊತೆಗೆ, ಭಾರತದ ಕುರಿತು ಚರ್ಚಿಸಲು, ವಿಚಾರಗಳನ್ನು ಪ್ರಶ್ನಿಸಲು ಮತ್ತು ಸ್ವತಂತ್ರವಾಗಿ ಆಲೋಚಿಸಲು ಯುವಜನರಿಗೆ ವೇದಿಕೆ ಕಲ್ಪಿಸಲಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us