ತ್ರಿವರ್ಣ ಧ್ವಜವಾಗಿ ಕಂಗೊಳಿಸುತ್ತಿದೆ ಶ್ರೀನಗರದ ಲಾಲ್ಚೌಕ್ನಲ್ಲಿರುವ ಕ್ಲಾಕ್ ಟವರ್..
ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ತೆಗೆದು 2 ವರ್ಷಗಳಾದ ಹಿನ್ನೆಲೆಯಲ್ಲಿ ಬಿಜೆಪಿ ನಿನ್ನೆ ತ್ರಿವರ್ಣ ಧ್ವಜ ಹಾರಿಸಿತ್ತು. ಅದರ ಬೆನ್ನಲ್ಲೇ ಇಂದು ಇಡೀ ಕ್ಲಾಕ್ ಟವರ್ ತ್ರಿವರ್ಣ ಧ್ವಜದಂತೆ ಪ್ರಕಾಶಿಸುತ್ತಿದೆ.
ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ಲಾಲ್ಚೌಕ್ನಲ್ಲಿರುವ ಕ್ಲಾಕ್ ಟವರ್ (ಘಂಟಾ ಘರ್-ಗಡಿಯಾರ ಗೋಪುರ) ಇಂದು ಸಂಫೂರ್ಣವಾಗಿ ತ್ರಿವರ್ಣ ಧ್ವಜದಂತೆ ಪ್ರಕಾಶಿಸುತ್ತಿದೆ. ಗಡಿಯಾರ ಗೋಪುರಕ್ಕೆ ಪೂರ್ತಿಯಾಗಿ ರಾಷ್ಟ್ರಧ್ವಜದಂತೆ ಲೈಟಿಂಗ್ ಮಾಡಲಾಗಿದೆ. ಕೇಸರಿ-ಬಿಳಿ-ಹಸಿರು ಬಣ್ಣಗಳಿಂದ ಕಂಗೊಳಿಸುತ್ತಿರುವ ಕ್ಲಾಕ್ ಟವರ್ ನೋಡಿ ಸ್ಥಳೀಯರು ಫುಲ್ ಖುಷಿಯಾಗಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ (ಆಗಸ್ಟ್ 15) ಇದೆ. ಅದರ ನಿಮಿತ್ತ ಈ ಗಡಿಯಾರ ಗೋಪುರಕ್ಕೆ ರಾಷ್ಟ್ರಧ್ವಜದ ಮಾದರಿಯಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀನಗರ ಮೇಯರ್ ಜುನೈಡ್ ಮಟ್ಟು ಟ್ವೀಟ್ ಮಾಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಸ್ವಾತಂತ್ರ್ಯೋತ್ಸವ ಸಿದ್ಧತೆ ಭರದಿಂದ ಸಾಗುತ್ತಿದೆ. ಸ್ವಾತಂತ್ರ್ಯ ದಿನದ ನಿಮಿತ್ತ, ಪ್ರಸಕ್ತ ವಾರವನ್ನು ಕ್ರೀಡಾವಾರವೆಂದು ಇಲ್ಲಿನ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಘೋಷಿಸಿದ್ದು, ಆಗಸ್ಟ್ 5ರಂದು ಉದ್ಘಾಟನಾ ಕಾರ್ಯಕ್ರಮ ಮಾಡಿದ್ದಾರೆ.
ಈ ಮಧ್ಯೆ ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ತೆಗೆದು 2 ವರ್ಷಗಳಾದ ಹಿನ್ನೆಲೆಯಲ್ಲಿ ಬಿಜೆಪಿ ನಿನ್ನೆ ತ್ರಿವರ್ಣ ಧ್ವಜ ಹಾರಿಸಿತ್ತು. 2019ರ ಆಗಸ್ಟ್ 5ರಂದು ಇಲ್ಲಿನ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಜಮ್ಮು-ಕಾಶ್ಮೀರಕ್ಕೆಂದೇ ಇದ್ದ ಪ್ರತ್ಯೇಕ ಧ್ವಜ ನಿಷ್ಕ್ರಿಯವಾಗಿದೆ. ಈ ಕ್ಲಾಕ್ ಟವರ್ ಇರುವ ಲಾಲ್ ಚೌಕ್ ತುಸು ಸೂಕ್ಷ್ಮ ಪ್ರದೇಶವಾಗಿದ್ದು, ಸ್ವಾತಂತ್ರ್ಯ ದಿನ ಹಿನ್ನೆಲೆಯಲ್ಲಿ ಇಲ್ಲಿ ಭದ್ರತೆಯನ್ನೂ ಹೆಚ್ಚಿಸಬೇಕಾಗುತ್ತದೆ.
ಇದನ್ನೂ ಓದಿ: ಯಶ್ ಜೊತೆ ಪುತ್ರ ಯಥರ್ವ್ ಫೈಟ್; ಮೂಗು ಕಚ್ಚಿದ ಮುದ್ದು ಕಂದನ ವಿಡಿಯೋ ವೈರಲ್
Clock Tower at Lal Chowk of Srinagar has been illuminated in Tricolour ahead of ahead of India’s Independence Day
Published On - 9:56 am, Sat, 7 August 21