ಕಾಂಗ್ರೆಸ್​ನಿಂದ ಭಾರತದ ಖ್ಯಾತಿಗೆ ಧಕ್ಕೆ ತರುವ ಪ್ರಯತ್ನ; ಕೇಂದ್ರ ಸಚಿವ ಕಿಶನ್ ರೆಡ್ಡಿ ಆರೋಪ

ಪ್ರಜಾಪ್ರಭುತ್ವದ ಹೆಸರಿನಲ್ಲಿ ಅವರ ನಡವಳಿಕೆ ಸಂಪೂರ್ಣವಾಗಿ ನಾಚಿಕೆಗೇಡಿನ ಸಂಗತಿ. ರಾಹುಲ್ ಗಾಂಧಿ ತಮ್ಮ ಸ್ಥಾನದ ಘನತೆಯನ್ನು ಮರೆತು ಅತ್ಯಂತ ಕೆಳಮಟ್ಟಕ್ಕೆ ಇಳಿದಿದ್ದಾರೆ. ದೇಶದ ಜನರು ಇದನ್ನು ನೋಡುತ್ತಿದ್ದಾರೆ. ಇದಕ್ಕೂ ಮೊದಲು, ಲೋಕಸಭಾ ಸ್ಪೀಕರ್ ರಾಜೀನಾಮೆಗೆ ಒತ್ತಾಯಿಸಿ ಸಂಸತ್ತಿನಲ್ಲಿ ಭಾರಿ ಗದ್ದಲ ಸೃಷ್ಟಿಸಿದರು. ನಂತರ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿದರು. ಈಗ ಅವರು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಅಜಿತ್ ದೋವಲ್ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥರು ತಮ್ಮ ಗುರಿಯಾಗಿದ್ದಾರೆ ಎಂದು ಹೇಳಿಕೊಂಡು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಕಾಂಗ್ರೆಸ್​ನಿಂದ ಭಾರತದ ಖ್ಯಾತಿಗೆ ಧಕ್ಕೆ ತರುವ ಪ್ರಯತ್ನ; ಕೇಂದ್ರ ಸಚಿವ ಕಿಶನ್ ರೆಡ್ಡಿ ಆರೋಪ
ಕಿಶನ್ ರೆಡ್ಡಿ
Image Credit source: PTI

Updated on: Oct 13, 2026 | 7:42 PM

ನವದೆಹಲಿ, ಅಕ್ಟೋಬರ್ 13: ಚುನಾವಣಾ ಆಯೋಗ ಹಾಗೂ ನ್ಯಾಯಾಂಗದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ನಡವಳಿಕೆಯನ್ನು ಖಂಡಿಸಿರುವ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ, “ಚುನಾವಣಾ ಸೋಲುಗಳಿಗೆ ಸಂವಿಧಾನಾತ್ಮಕ ಸಂಸ್ಥೆಗಳನ್ನು ಹೊಣೆ ಮಾಡುವುದನ್ನು ಬಿಟ್ಟು ರಾಹುಲ್ ಗಾಂಧಿ ಮೊದಲು ಜನಾಭಿಪ್ರಾಯವನ್ನು ಗೌರವಿಸುವುದನ್ನು ಕಲಿಯಲಿ” ಎಂದು ಕಿಡಿಕಾರಿದ್ದಾರೆ. ದೆಹಲಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಕಾಂಗ್ರೆಸ್ ನೇತೃತ್ವದ ಪ್ರತಿಭಟನೆಗಳು ದೆಹಲಿಯ ಸಾರ್ವಜನಿಕ ಜೀವನ ಹಾಗೂ ದೀಪಾವಳಿ-ದಸರಾ ಹಬ್ಬದ ವಹಿವಾಟಿಗೆ ತೀವ್ರ ಅಡಚಣೆ ಉಂಟುಮಾಡುತ್ತಿದ್ದು, ಪ್ರಜಾಪ್ರಭುತ್ವ ಹಕ್ಕುಗಳ ವಿಷಯದಲ್ಲಿ ಕಾಂಗ್ರೆಸ್‌ನ ಇಬ್ಬಂದಿ ನೀತಿ ಸಂಪೂರ್ಣವಾಗಿ ಅನಾವರಣಗೊಂಡಿದೆ” ಎಂದು ವಾಗ್ದಾಳಿ ನಡೆಸಿದರು.

“ಚುನಾವಣೆಯಲ್ಲಿ ಸತತವಾಗಿ ಸೋಲುತ್ತಿರುವ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ, ಈಗ ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ತಮಗೆ ಅನುಕೂಲಕರ ತೀರ್ಪು ಅಥವಾ ಫಲಿತಾಂಶ ಬರಲಿಲ್ಲ ಎಂದ ತಕ್ಷಣ ದೇಶದ ಅತ್ಯುನ್ನತ ಸಂಸ್ಥೆಗಳನ್ನು ದುರ್ಬಲಗೊಳಿಸಲು ಯತ್ನಿಸುವುದು ಸಾಂವಿಧಾನಿಕ ಅಪರಾಧ” ಎಂದು ಕಿಶನ್ ರೆಡ್ಡಿ ಆರೋಪಿಸಿದ್ದಾರೆ.

ಇದನ್ನೂ ಓದಿ: ‘ಕ್ಯಾಪ್ಟನ್ ಸ್ಮಿತ್ ಮಚ್ಚರ್ ಸಾಹಸದ ಬಗ್ಗೆ ಮೌನವೇಕೆ?’; ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಕಿಶನ್ ರೆಡ್ಡಿ ವಾಗ್ದಾಳಿ

“ಎಸ್​ಐಆರ್​ ಪ್ರಕ್ರಿಯೆಯಡಿ ದೇಶಾದ್ಯಂತ 2.8 ಕೋಟಿ ಮೃತ ಮತದಾರರು, 6.3 ಕೋಟಿ ಸ್ಥಳಾಂತರಗೊಂಡವರು ಹಾಗೂ 1 ಕೋಟಿ ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಪ್ರಕ್ರಿಯೆಯಲ್ಲಿ ತಪ್ಪುಗಳಿದ್ದರೆ ಸರಿಪಡಿಸಲು ಪ್ರತಿ ರಾಜಕೀಯ ಪಕ್ಷದ ಬೂತ್ ಮಟ್ಟದ ಏಜೆಂಟರಿಗೆ ಕಾನೂನುಬದ್ಧ ಅವಕಾಶವಿದೆ. ಅದನ್ನು ಬಳಸಿಕೊಳ್ಳದೆ ಬೀದಿಗಿಳಿದು ಅರಾಜಕತೆ ಸೃಷ್ಟಿಸುವುದು ಸರಿಯಲ್ಲ” ಎಂದು ಅವರು ಟೀಕಿಸಿದ್ದಾರೆ.

“ತಮಿಳುನಾಡು, ಕೇರಳ ಮತ್ತು ಕರ್ನಾಟಕಗಳಲ್ಲಿ ಗೆದ್ದಾಗ ಎಸ್‌ಐಆರ್ ಮತ್ತು ಇವಿಎಂ ಸರಿಯಾಗಿರುತ್ತವೆ. ಆದರೆ ಬಿಜೆಪಿ ಗೆದ್ದ ತಕ್ಷಣ ಆಯೋಗ ಮತ್ತು ಇವಿಎಂ ಮೇಲೆ ಗೂಬೆ ಕೂರಿಸಲಾಗುತ್ತದೆ. ಇತ್ತೀಚೆಗೆ ಗುಜರಾತ್, ಮಹಾರಾಷ್ಟ್ರ ಹಾಗೂ ರಾಜಸ್ಥಾನಗಳಲ್ಲಿ ಬ್ಯಾಲಟ್ ಪೇಪರ್ ಮೂಲಕ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಕಾಂಗ್ರೆಸ್ ಸೋತಿದ್ದಕ್ಕೆ ಯಾರನ್ನು ಹೊಣೆ ಮಾಡುತ್ತೀರಿ?” ಎಂದು ಕಿಶನ್ ರೆಡ್ಡಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ತೆಲುಗು ರಾಜ್ಯಗಳ ನಡುವಿನ ಕೃಷ್ಣಾ ಜಲ ವಿವಾದ ಬಗೆಹರಿಸಲು ಕೇಂದ್ರ ಸಮಿತಿ ರಚನೆ; ಸಚಿವ ಕಿಶನ್ ರೆಡ್ಡಿ ಮಾಹಿತಿ

ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ:

“ದೆಹಲಿಯ ಜಂತರ್ ಮಂತರ್ ಮತ್ತು ಪ್ರಮುಖ ರಸ್ತೆಗಳಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಸುದೀರ್ಘ ಪ್ರತಿಭಟನೆಯಿಂದಾಗಿ ನವರಾತ್ರಿ ಮತ್ತು ದೀಪಾವಳಿ ಹಬ್ಬದ ಕೊಳ್ಳುವಿಕೆಯ ಸಮಯದಲ್ಲಿ ಸಣ್ಣ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ” ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯ ವೇಳೆ ಗರ್ಭಿಣಿ ಮಹಿಳಾ ಪತ್ರಕರ್ತೆಯೊಂದಿಗೆ ಹಾಗೂ ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ಕಾಂಗ್ರೆಸ್ ನಾಯಕರು ನಡೆದುಕೊಂಡ ಶೈಲಿಯನ್ನು ಖಂಡಿಸಿದ ಅವರು, ವಿಪಕ್ಷ ನಾಯಕ ಸ್ಥಾನದಲ್ಲಿದ್ದುಕೊಂಡು ಪ್ರಜಾಸತ್ತಾತ್ಮಕ ಸಂಸ್ಥೆಗಳ ಹಾಗೂ ಮಹಿಳೆಯರ ಘನತೆಗೆ ಧಕ್ಕೆ ತರುತ್ತಿರುವುದು ಖಂಡನೀಯ ಎಂದರು.

ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಮೂಲದ ಶಕ್ತಿಗಳ ಬೆಂಬಲ ಪಡೆದು ದೇಶದ ಆರ್ಥಿಕತೆ ಹಾಗೂ ಪ್ರತಿಷ್ಠೆಗೆ ಧಕ್ಕೆ ತರಲು ರಾಹುಲ್ ಗಾಂಧಿ ಯತ್ನಿಸುತ್ತಿದ್ದಾರೆ ಎಂದು ಕಿಶನ್ ರೆಡ್ಡಿ ಆರೋಪಿಸಿದ್ದು, 140 ಕೋಟಿ ಭಾರತೀಯರು ಯಾವುದೇ ಕುಟುಂಬ ರಾಜಕಾರಣಕ್ಕೆ ಮಣಿಯದೆ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us