
ನವದೆಹಲಿ, ಸೆಪ್ಟೆಂಬರ್ 7: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಭೆಯ ನಂತರ ನಡೆದಿದೆ ಎನ್ನಲಾದ ಶುದ್ಧೀಕರಣ ನಡೆಸಿದ ಘಟನೆಯನ್ನು ವಿರೋಧಿಸಿ, ಕಾಂಗ್ರೆಸ್‌ನ 32 ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್ಟಿ) ಸಂಸದರು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಇಂದಿರಾ ಭವನದಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸಭೆ ಸೇರಿದ ಸಂಸದರು, ಈ ಘಟನೆಯು ಎಸ್ಸಿ-ಎಸ್ಟಿ ಸಮುದಾಯದ ಆತ್ಮಗೌರವ ಹಾಗೂ ಘನತೆಗೆ ಎದುರಾಗಿರುವ ಗಂಭೀರ ಸವಾಲು ಎಂದು ಟೀಕಿಸಿದ್ದಾರೆ.
ಈ ಸಭೆಯ ನಂತರ ಮಾತನಾಡಿದ ಕಾಂಗ್ರೆಸ್ ಸಂಸದ ಮಲ್ಲು ರವಿ, “ಇಂದು ಹಲ್ದ್ವಾನಿ ವಿಷಯದ ಕುರಿತು 32 ಕಾಂಗ್ರೆಸ್ ಸಂಸದರು ಸಭೆ ಸೇರಿದರು. ನಾವು ಈ ವಿಷಯವನ್ನು ಪ್ರತಿಯೊಂದು ಹಂತಕ್ಕೂ ಕೊಂಡೊಯ್ಯುತ್ತೇವೆ. ನಾಳೆ, ನಾವು ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸುತ್ತೇವೆ” ಎಂದು ಹೇಳಿದರು.
ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಭಾಷಣದ ಸ್ಥಳದ ಶುದ್ಧೀಕರಣ ಕುರಿತ ಹೇಳಿಕೆ, ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್
ಇಂತಹ ಪ್ರಕರಣಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳಲು ಎಸ್‌ಸಿ-ಎಸ್‌ಟಿ ವೇದಿಕೆ ಇರಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಾಜು ಹೇಳಿದರು. ಈ ವಿಷಯ ಮತ್ತು ಮುಂದಿನ ಕಾರ್ಯತಂತ್ರವನ್ನು ಚರ್ಚಿಸಲು ಶೀಘ್ರದಲ್ಲೇ ಸಭೆ ನಡೆಸಲಾಗುವುದು ಎಂದರು.
ಕಾಂಗ್ರೆಸ್ ಪಕ್ಷದ ಪರಿಶಿಷ್ಟ ವಿಭಾಗದ ಅಧ್ಯಕ್ಷ ಮತ್ತು ಉತ್ತರ ಪ್ರದೇಶದ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ಮಾತನಾಡಿ, ಇಂದು ಎಸ್‌ಸಿ-ಎಸ್‌ಟಿ ಸಂಸದೀಯ ವೇದಿಕೆಯನ್ನು ರಚಿಸಲಾಗಿದ್ದು, ಇದರಲ್ಲಿ ಹಲ್ದ್ವಾನಿಯಲ್ಲಿ ನಡೆದ ಶುದ್ಧೀಕರಣದ ವಿಷಯವನ್ನು ಚರ್ಚಿಸಲಾಗಿದೆ ಎಂದರು.
ಇದನ್ನೂ ಓದಿ: ಭಾಷಣ ಮಾಡಿದ ವೇದಿಕೆ ಸ್ಥಳದ ಶುದ್ಧೀಕರಣ: ಇದು ನನ್ನ ವಿರುದ್ಧ ತೋರಿದ ಅಸ್ಪೃಶ್ಯತೆ, ದಲಿತರಿಗೆ ಜಾಗ ಇಲ್ಲ ಎಂದು ಖರ್ಗೆ ಕಿಡಿ
ಹಲ್ದ್ವಾನಿಯಲ್ಲಿ ಖರ್ಗೆ ಅವರ ರ‍್ಯಾಲಿಯ ನಂತರ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಪತ್ರಿಕಾಗೋಷ್ಠಿ ನಡೆಸಿ ಶುದ್ಧೀಕರಣದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದ್ದರು.
ವಿವಾದದ ಹಿನ್ನೆಲೆಯೇನು?:
ಆಗಸ್ಟ್ 8ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಇದಾದ 3 ದಿನಗಳ ನಂತರ ಕೆಲವು ವ್ಯಕ್ತಿಗಳು ಅದೇ ಸ್ಥಳದಲ್ಲಿ ‘ಶುದ್ಧೀಕರಣ ಯಜ್ಞ’ ನಡೆಸಿದ್ದರು. ದಲಿತ ನಾಯಕರೊಬ್ಬರು ಭಾಗವಹಿಸಿದ ಸಭೆಯ ನಂತರ ಶುದ್ಧೀಕರಣ ನಡೆಸಿರುವುದು ಅಸ್ಪೃಶ್ಯತೆ ಆಚರಣೆಯಾಗಿದ್ದು, ಸಂವಿಧಾನದ ಸಮಾನತೆಯ ಆಶಯಕ್ಕೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ