
ನವದೆಹಲಿ, ನವೆಂಬರ್ 20: ನವದೆಹಲಿಯಲ್ಲಿ ಶುಕ್ರವಾರ ನಡೆದ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಮೊದಲ ನಾಗರಿಕ ಸಂವಾದ ವೇದಿಕೆಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಲಿಕ್, ಗಡಿಯಾಚೆಗಿನ ಭಯೋತ್ಪಾದನೆ ಕುರಿತ ಪ್ರಶ್ನೆಗೆ ನೇರವಾಗಿ ಉತ್ತರಿಸುವುದನ್ನು ತಪ್ಪಿಸಿಕೊಂಡರು. ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಭಾರತದ ಕಳವಳಗಳ ಕುರಿತು ಕೇಳಿದಾಗ ಮಲಿಕ್, “ನಾಳೆ ನಾನು ನನ್ನ ಹೇಳಿಕೆಯನ್ನು ನೀಡಿದ ನಂತರ, ನಾವು ಬಗ್ಗೆ ಮಾತುಕತೆ ನಡೆಸೋಣ ಎಂದು ಹೇಳಿ ನುಣುಚಿಕೊಂಡರು.
ಭಾರತದ ಪತ್ರಕರ್ತರ ಪ್ರಶ್ನೆಗೆ ನೇರವಾಗಿ ಪ್ರತಿಕ್ರಿಯಿಸುವ ಬದಲು, ಪಾಕಿಸ್ತಾನದ ಸಚಿವರು ಈ ಪ್ರದೇಶದ ದೇಶಗಳ ನಡುವಿನ ಸಂವಾದದ ಮಹತ್ವವನ್ನು ಒತ್ತಿಹೇಳಿದರು. ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಸನ್ನಿವೇಶದ ನಡುವೆ ಎಸ್‌ಸಿಒ ವೇದಿಕೆಯು ಒಂದು ಸ್ವಾಗತಾರ್ಹ ಉಪಕ್ರಮವಾಗಿದೆ ಎಂದು ಬಣ್ಣಿಸಿದರು.
“ಇಡೀ ಪ್ರದೇಶದಲ್ಲಿ ನಾಗರಿಕತೆಗಳ ನಡುವೆ ಸಂವಾದ ನಡೆಯುತ್ತಿರುವುದು ಅದ್ಭುತವಾಗಿದೆ. ಭೌಗೋಳಿಕ ರಾಜಕೀಯವು ಬದಲಾವಣೆಯ ಹಂತದಲ್ಲಿದೆ. ಇಂತಹ ವಿಷಯಗಳ ಬಗ್ಗೆ ಮಾತನಾಡುವುದು ಸುಲಭ. ಇದೊಂದು ಅತ್ಯಂತ ಸ್ವಾಗತಾರ್ಹ ಸಂಕೇತ” ಎಂದು ಮಲಿಕ್ ಹೇಳಿದರು.
ಇದನ್ನೂ ಓದಿ: ತಾಜ್ ಮಹಲ್, ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡಲು ಪಾಕ್ ಸಚಿವರಿಗೆ ಅನುಮತಿ ನಿರಾಕರಣೆ
ಭಾರತ-ಪಾಕಿಸ್ತಾನ ಸಂಬಂಧಗಳ ಭವಿಷ್ಯದ ಬಗ್ಗೆಯೂ ಆಶಾವಾದ ವ್ಯಕ್ತಪಡಿಸಿದ ಪಾಕ್ ಸಚಿವ, ಈ ಪ್ರದೇಶದ ದೇಶಗಳು ತಮ್ಮ ಸಾಮಾನ್ಯ ರಾಜಕೀಯ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಲು ವಿಶಾಲ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುತ್ತವೆ ಎಂದು ಭಾವಿಸುವುದಾಗಿ ಹೇಳಿದರು.
ಭಾರತದೊಂದಿಗಿನ ಸಂಬಂಧ ಸುಧಾರಿಸುವ ನಿರೀಕ್ಷೆ:
ಎಸ್‌ಸಿಒ ನಾಗರಿಕ ಸಂವಾದ ವೇದಿಕೆಯ ನಂತರ ಭಾರತ-ಪಾಕಿಸ್ತಾನ ಸಂಬಂಧಗಳು ಸುಧಾರಿಸಬಹುದೇ? ಎಂದು ಕೇಳಿದಾಗ, ಭಾರತ-ಪಾಕ್ ನಡುವಿನ ಬಾಂಧವ್ಯಗಳು ಸಕಾರಾತ್ಮಕ ದಿಕ್ಕಿನಲ್ಲಿ ಸಾಗಲಿವೆ ಎಂಬ ಭರವಸೆಯನ್ನು ಮಲಿಕ್ ವ್ಯಕ್ತಪಡಿಸಿದರು. ವೇಗವಾಗಿ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಸನ್ನಿವೇಶವು, ದೇಶಗಳು ಪ್ರತ್ಯೇಕ ದ್ವಿಪಕ್ಷೀಯ ವಿವಾದಗಳನ್ನು ಮೀರಿ ಪ್ರಾದೇಶಿಕ ಕಾಳಜಿಗಳ ಬಗ್ಗೆ ವಿಶಾಲ ದೃಷ್ಟಿಕೋನವನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಆಪರೇಷನ್ ಸಿಂಧೂರ್ ಬಳಿಕ ಮೊದಲ ಪಾಕ್ ಸಚಿವರ ಭೇಟಿ, ದೆಹಲಿಗೆ ಬಂದಿಳಿದ ಮುಸಾದಿಕ್ ಮಲಿಕ್
‘ಆಪರೇಷನ್ ಸಿಂಧೂರ್’ ನಂತರ ಮೊದಲ ಭೇಟಿ:
ನವೆಂಬರ್ 22ರವರೆಗೆ ನವದೆಹಲಿಯ ಐತಿಹಾಸಿಕ ಪುರಾಣ ಕಿಲ್ಲಾದಲ್ಲಿ ಭಾರತವು ಎಸ್‌ಸಿಒ ನಾಗರಿಕ ಸಂವಾದ ವೇದಿಕೆಯನ್ನು ಆಯೋಜಿಸಿರುವ ಸಂದರ್ಭದಲ್ಲಿ ಈ ಭೇಟಿ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ವೇದಿಕೆಯನ್ನು ಉದ್ಘಾಟಿಸಲಿದ್ದು, ಚೀನಾ, ಪಾಕಿಸ್ತಾನ, ಕಜಕಿಸ್ತಾನ್, ಇರಾನ್, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಸೇರಿದಂತೆ ಹಲವಾರು ಎಸ್‌ಸಿಒ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದಾರೆ. ಮುಸಾದಿಕ್ ಮಲಿಕ್ ಅವರ ಈ ಭಾಗವಹಿಸುವಿಕೆಯು ‘ಆಪರೇಷನ್ ಸಿಂಧೂರ್’ ನಂತರ ಪಾಕಿಸ್ತಾನದ ಸಚಿವರೊಬ್ಬರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿಯಾಗಿದೆ. ಅಲ್ಲದೆ, ಮೂರು ವರ್ಷಗಳ ನಂತರ ಪಾಕಿಸ್ತಾನದ ಸಚಿವರೊಬ್ಬರು ಭಾರತ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ