ಕೊವಿಡ್​ 19 ಲಸಿಕೆ 2ನೇ ಡೋಸ್​ ಪಡೆದು 9 ತಿಂಗಳು ಕಳೆದವರೆಲ್ಲ 3ನೇ ಡೋಸ್​ಗೆ ಸಿದ್ಧರಾಗಿ; ಈ ವಿಚಾರಗಳು ನಿಮ್ಮ ಗಮನದಲ್ಲಿರಲಿ

Covid-19 Precaution Dose: ಮೂರನೇ ಡೋಸ್​ ಪಡೆಯುವವರು ಕೊವಿನ್​ ಪೋರ್ಟಲ್​ನಲ್ಲಿ ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಈಗಾಗಲೇ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಹಿಂದೆ ಎರಡು ಡೋಸ್​ ಪಡೆದವರೇ ಮೂರನೇ ಡೋಸ್ ಪಡೆಯುವುದರಿಂದ ಈಗಾಗಲೇ ರಿಜಿಸ್ಟರ್ ಆಗಿರುತ್ತದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಹೇಳಿದ್ದರು.

ಕೊವಿಡ್​ 19 ಲಸಿಕೆ 2ನೇ ಡೋಸ್​ ಪಡೆದು 9 ತಿಂಗಳು ಕಳೆದವರೆಲ್ಲ 3ನೇ ಡೋಸ್​ಗೆ ಸಿದ್ಧರಾಗಿ; ಈ ವಿಚಾರಗಳು ನಿಮ್ಮ ಗಮನದಲ್ಲಿರಲಿ
ಸಾಂಕೇತಿಕ ಚಿತ್ರ
Edited By:

Updated on: Apr 10, 2022 | 11:34 AM

ದೇಶದಲ್ಲಿ ಇಂದಿನಿಂದ (ಏಪ್ರಿಲ್​ 10) ಕೊರೊನಾ ಲಸಿಕೆ ಅಭಿಯಾನದ ಇನ್ನೊಂದು ಹಂತ ಶುರುವಾಗಿದೆ. 18 ವರ್ಷ ಮೇಲ್ಪಟ್ಟವರು, ಕೊರೊನಾ ಲಸಿಕೆ ಎರಡನೇ ಡೋಸ್ ತೆಗೆದುಕೊಂಡು 9 ತಿಂಗಳು ಪೂರ್ಣಗೊಂಡವರೆಲ್ಲ ಕಡ್ಡಾಯವಾಗಿ ಮುನ್ನೆಚ್ಚರಿಕಾ ಡೋಸ್​ (ಕೊವಿಡ್​ 19 ಲಸಿಕೆ ಮೂರನೇ ಡೋಸ್​) ತೆಗೆದುಕೊಳ್ಳಬೇಕು. ದೇಶದಲ್ಲಿ ಒಮಿಕ್ರಾನ್​ ಪ್ರಸರಣ ತಗ್ಗಿದ್ದರೂ, ಕೊರೊನಾದ ಇನ್ನೊಂದು ರೂಪಾಂತರಿ ಎಕ್ಸ್​ಇ ಹರಡುವಿಕೆ ನಿಧಾನವಾಗಿ ಶುರುವಾಗುತ್ತಿದೆ. ಈ ವೈರಸ್​ನ್ನು ನಿರ್ಲಕ್ಷಿಸುವಂತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಅದರ ಬೆನ್ನಲ್ಲೇ ಮೂರನೇ ಡೋಸ್​​ನ್ನು ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ತಿಳಿಸಿದೆ. ಹೀಗಾಗಿ ದೇಶದ ನಾಗರಿಕರು ಮತ್ತೊಮ್ಮೆ ಕೊರೊನಾ ಲಸಿಕೆ ತೆಗೆದುಕೊಳ್ಳಲು ಸಿದ್ಧರಾಗಬೇಕು. ಅದಕ್ಕೂ ಮೊದಲು ಈ ವಿಚಾರಗಳನ್ನೊಮ್ಮೆ ಓದಿಕೊಳ್ಳಿ..

ಈ ಸಲ ಉಚಿತವಲ್ಲ

ಹಿಂದೆ ದೇಶಾದ್ಯಂತ ಎಲ್ಲ ವರ್ಗದ ಜನರಿಗೆ ಕೊರೊನಾ ಲಸಿಕೆಯನ್ನು ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿಯೇ ನೀಡಲಾಗಿದೆ. ಎರಡು ಡೋಸ್​ಗಳನ್ನು ಉಚಿತವಾಗಿ ನೀಡಿದ ಸರ್ಕಾರ, ಮೂರನೇ ಡೋಸ್​ ಉಚಿತವಲ್ಲ ಎಂಬುದನ್ನು ತಿಳಿಸಿದೆ. ಕೊವಿಡ್​ 19 ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವವರು, ಆರೋಗ್ಯ ಕಾರ್ಯಕರ್ತರು, 60ವರ್ಷ ಮೇಲ್ಪಟ್ಟವರಿಗೆ 3ನೇ ಡೋಸ್​ನ್ನೂ ಕೂಡ ಉಚಿತವಾಗಿಯೇ ನೀಡಲಾಗುತ್ತಿದ್ದು, ಉಳಿದ ವರ್ಗದವರು ಖಾಸಗಿ ಕೇಂದ್ರಗಳಿಗೆ ಹೋಗಿ, ಹಣ ಕೊಟ್ಟು ಪಡೆಯಬೇಕಾಗಿದೆ. ಇಂದಿನಿಂದ ಕೊರೊನಾ ಲಸಿಕೆ ಮೂರನೇ ಡೋಸ್ ಅಭಿಯಾನ ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ (ಏಪ್ರಿಲ್​ 9) ಸೀರಂ ಇನ್​ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್​ ಕಂಪನಿಗಳು ತಮ್ಮ ಕೊವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆಗಳ ದರವನ್ನೂ ಭರ್ಜರಿ ಕಡಿತಗೊಳಿಸಿವೆ.

ಶುಲ್ಕವೆಷ್ಟು?

ನೀವು ಹಿಂದೆ ಎರಡು ಡೋಸ್​ಗಳನ್ನು ಯಾವ ಲಸಿಕೆ ತೆಗೆದುಕೊಂಡಿದ್ದೀರೋ, ಅದೇ ಲಸಿಕೆಯನ್ನೇ ಮೂರನೇ ಡೋಸ್ ಆಗಿ ತೆಗೆದುಕೊಳ್ಳಬೇಕು. ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಶುರುವಾದಾಗಿನಿಂದ 18 ವರ್ಷ ಮೇಲ್ಪಟ್ಟವರಿಗೆ ಸಾಮಾನ್ಯವಾಗಿ ಕೊಟ್ಟಿದ್ದು ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್​ ಲಸಿಕೆಗಳನ್ನು. ಈಗ ಇವೆರಡೂ ಲಸಿಕೆಗಳ ಬೆಲೆ ಇಳಿಕೆಯಾಗಿದೆ. ಕೊವಿಶೀಲ್ಡ್​ ಲಸಿಕೆ ಒಂದು ಡೋಸ್​ಗೆ 225 ರೂ. (ಮೊದಲು 600 ರೂ.ಇತ್ತು) ಮತ್ತು ಕೊವ್ಯಾಕ್ಸಿನ್​ ಲಸಿಕೆ ಒಂದು ಡೋಸ್ ಬೆಲೆಯೂ 225 ರೂಪಾಯಿ. (ಇದು ಮೊದಲು 1200 ರೂ.ಇತ್ತು). ಅದರೊಂದಿಗೆ ಆಯಾ ಖಾಸಗಿ ಲಸಿಕಾ ಕೇಂದ್ರಗಳು ವಿಧಿಸುವ ಸೇವಾಶುಲ್ಕವನ್ನು ಪಾವತಿಸಬೇಕು. ಈ ಸೇವಾಶುಲ್ಕಕ್ಕೆ ಕೂಡ ಕೇಂದ್ರ ಸರ್ಕಾರ ಮಿತಿ ಹೇರಿದ್ದು, ಯಾವುದೇ ಕೇಂದ್ರ ಗರಿಷ್ಠ 150 ರೂ.ವರೆಗೆ ಮಾತ್ರ ಸೇವಾ ಶುಲ್ಕ ವಿಧಿಸಬಹುದು.

ಏನಿದು ಬೂಸ್ಟರ್ ಡೋಸ್​ ಅಥವಾ ಮುನ್ನೆಚ್ಚರಿಕಾ ಡೋಸ್​?

ಈಗಾಗಲೇ ಎರಡೂ ಡೋಸ್​ ಲಸಿಕೆ ಪಡೆದು ತುಂಬ ಸಮಯ ಆಗುತ್ತಿರುವವರಿಗೆ  ನೀಡಲಾಗುವ ಇನ್ನೊಂದು ಡೋಸ್ ಇದು. ಕೊರೊನಾ ಲಸಿಕೆ ಎರಡೂ ಡೋಸ್ ಪಡೆದು ಸುಮಾರು ಒಂದು ವರ್ಷವಾದವರ ದೇಹದಲ್ಲಿ ಲಸಿಕೆಯಿಂದ ಸೃಷ್ಟಿಯಾಗಿದ್ದ ಕೊರೊನಾ ವಿರುದ್ಧದ ಹೋರಾಟದ ಇಮ್ಯೂನಿಟಿ ಮತ್ತು ರಕ್ಷಣಾ ಮಟ್ಟ ಕುಂದುತ್ತ ಬರುತ್ತಿದೆ. ಅದು ಎಷ್ಟು ಪ್ರಮಾಣದಲ್ಲಿ ಇರಬೇಕೋ ಅದಕ್ಕಿಂತಲೂ ಕಡಿಮೆಯಾಗುತ್ತಿದೆ.  ಆದರೆ ಕೊರೊನಾದ ತಳಿಗಳು ಒಂದರ ಬೆನ್ನಿಗೆ ಒಂದರಂತೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಇನ್ನೊಂದು ಡೋಸ್ ಲಸಿಕೆಯನ್ನು ನೀಡಲು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ. ಅದನ್ನು ಮುನ್ನೆಚ್ಚರಿಕಾ ಡೋಸ್ ಎಂದು ಕರೆಯಲಾಗುತ್ತದೆ.

ನೋಂದಣಿ ಅಗತ್ಯವಿದೆಯೇ?

ಮೂರನೇ ಡೋಸ್​ ಪಡೆಯುವವರು ಕೊವಿನ್​ ಪೋರ್ಟಲ್​ನಲ್ಲಿ ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಈಗಾಗಲೇ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಹಿಂದೆ ಎರಡು ಡೋಸ್​ ಪಡೆದವರೇ ಮೂರನೇ ಡೋಸ್ ಪಡೆಯುವುದರಿಂದ ಈಗಾಗಲೇ ರಿಜಿಸ್ಟರ್ ಆಗಿರುತ್ತದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಹೇಳಿದ್ದರು. ಹಾಗೊಮ್ಮೆ ನೀವು ಕೊವಿಡ್​ 19 ಮುನ್ನೆಚ್ಚರಿಕಾ ಡೋಸ್​ನ ಸ್ಲಾಟ್​ನ್ನು ಬುಕ್​ ಮಾಡುತ್ತೀರಿ ಎಂದಾದರೆ, ಕೊವಿನ್ ಪೋರ್ಟಲ್​ಗೆ ಹೋಗಿ ಲಾಗಿನ್ ಆಗಿ. ಅಂದರೆ ಈ ಹಿಂದೆ ನೀವು ನೀಡಿದ್ದ ಮೊಬೈಲ್​ ಸಂಖ್ಯೆಯನ್ನೇ ಕೊಡಬೇಕು. ಅದರಲ್ಲಿ ನೀವು ಸಮೀಪದ ಖಾಸಗಿ ಕೊವಿಡ್ 19 ಲಸಿಕಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮಗೆ ಅನುಕೂಲವಾಗುವ ದಿನಾಂಕ ಮತ್ತು ಸಮಯವನ್ನೂ ನಿಗದಿಪಡಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಕೇಂದ್ರಕ್ಕೆ ಭೇಟಿ ನೀಡಿ ಕೂಡ ನೋಂದಣಿ ಮಾಡಿಕೊಳ್ಳಬಹುದು.

ಇದನ್ನೂ ಓದಿ: ರಾಜಕೀಯ ಪಕ್ಷಗಳು ಭರವಸೆ ನೀಡುವುದನ್ನು ತಪ್ಪಿಸಲು ನಮ್ಮಿಂದಾಗದು, ಜನರೇ ಅರ್ಥ ಮಾಡಿಕೊಳ್ಳಬೇಕು: ಚುನಾವಣಾ ಆಯೋಗ

Published On - 11:31 am, Sun, 10 April 22