AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಲಸಿಕೆ 3ನೇ ಡೋಸ್ ನೀಡುವ ಖಾಸಗಿ ಕೇಂದ್ರಗಳು ಸೇವಾಶುಲ್ಕವನ್ನು 150 ರೂ.ಗಿಂತ ಹೆಚ್ಚು ಪಡೆಯುವಂತಿಲ್ಲ: ಕೇಂದ್ರ ಸರ್ಕಾರ

ಆರೋಗ್ಯ ಕಾರ್ಯಕರ್ತರು, ಕೊರೊನಾ ವಿರುದ್ಧ ಮುಂಚೂಣಿಯಲ್ಲಿ ಇರುವವರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈಗಾಗಲೇ ಉಚಿತವಾಗಿ ಮುನ್ನೆಚ್ಚರಿಕಾ ಡೋಸ್ ನೀಡಲಾಗಿದೆ ಮತ್ತು ನೀಡಲಾಗುತ್ತಿದೆ. ಆದರೆ ಉಳಿದ ವರ್ಗದವರು ಈ ಸಲ ಲಸಿಕೆ ಪಡೆಯಲು ಕಡ್ಡಾಯವಾಗಿ ಹಣ ಕೊಡಬೇಕು.

ಕೊರೊನಾ ಲಸಿಕೆ 3ನೇ ಡೋಸ್ ನೀಡುವ ಖಾಸಗಿ ಕೇಂದ್ರಗಳು ಸೇವಾಶುಲ್ಕವನ್ನು 150 ರೂ.ಗಿಂತ ಹೆಚ್ಚು ಪಡೆಯುವಂತಿಲ್ಲ: ಕೇಂದ್ರ ಸರ್ಕಾರ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Apr 09, 2022 | 3:25 PM

 ಕೊವಿಡ್​ 19 ಮೂರನೇ ಡೋಸ್​​ ನೀಡುವ ಖಾಸಗಿ ಲಸಿಕಾ ಕೇಂದ್ರಗಳು ಗರಿಷ್ಠ 150 ರೂಪಾಯಿಯವರೆಗೆ ಸೇವಾ ಶುಲ್ಕ ವಿಧಿಸಬಹುದು ಎಂದು ಕೇಂದ್ರ ಸರ್ಕಾರ ಇಂದು ತಿಳಿಸಿದೆ. ಅಂದರೆ ಸೇವಾ ಶುಲ್ಕಮಿತಿಯನ್ನು 150 ರೂ.ಗೆ ಮಿತಿಗೊಳಿಸಿದೆ. ಅಂದರೆ ನೀವು ಪಡೆಯವ ಲಸಿಕೆಯ ವೆಚ್ಚಕ್ಕಿಂತ ಖಾಸಗಿ ಕೇಂದ್ರಗಳು ಗರಿಷ್ಠ 150 ರೂ.ವರೆಗೆ ಸೇವಾ ಶುಲ್ಕ ಪಡೆಯಬಹುದು.  ಏಪ್ರಿಲ್​ 10ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಕೊವಿಡ್​ 19 ಮೂರನೇ ಡೋಸ್​ ಅಥವಾ ಮುನ್ನೆಚ್ಚರಿಕೆಯ ಡೋಸ್​ ಪಡೆಯಬೇಕು. ಲಸಿಕೆಯ ಎರಡನೇ ಡೋಸ್ ಪಡೆದು 9 ತಿಂಗಳು ಕಳೆದ ಯಾರಾದರೂ ಸರಿ ಅವರು ಮೂರನೇ ಡೋಸ್​ ಪಡೆಯಲು ಅರ್ಹರಾಗಿರುತ್ತಾರೆ. ಈ ಡೋಸ್​ ಕೇವಲ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಮಾತ್ರ ಲಭ್ಯವಿದ್ದು, ಅಲ್ಲಿಗೇ ಹೋಗಿ ತೆಗೆದುಕೊಳ್ಳಬೇಕಾಗುತ್ತದೆ. ಮೂರನೇ ಡೋಸ್​ ಉಚಿತವಾಗಿರುವುದಿಲ್ಲ, ಖಾಸಗಿ ಕೇಂದ್ರಗಳು ಅದಕ್ಕೆ ಬೆಲೆ ನಿಗದಿಪಡಿಸಬಹುದು ಎಂದು ಶುಕ್ರವಾರ ಪ್ರಕಟಣೆ ಹೊರಡಿಸಿತ್ತು. ಅದರಂತೆ 18 ವರ್ಷ ಮೇಲ್ಪಟ್ಟು, ಕೊವಿಡ್ 19 ಲಸಿಕೆ ಎರಡನೇ ಡೋಸ್ ಪಡೆದು 9 ತಿಂಗಳು ಪೂರ್ಣಗೊಂಡ ಯಾರಾದರೂ ಸರಿ, ನೀವು ನಿಮ್ಮ ಹತ್ತಿರದ ಖಾಸಗಿ ಲಸಿಕಾ ಕೇಂದ್ರಕ್ಕೆ ಹೋಗಿ ಮೂರನೇ ಡೋಸ್ ಪಡೆಯಬೇಕಾಗಿದೆ.  ನೀವು ಈ ಹಿಂದೆ ಯಾವ ಲಸಿಕೆಯನ್ನು ಎರಡು ಡೋಸ್ ಪಡೆದಿದ್ದೀರೋ, ಅದೇ ಲಸಿಕೆಯನ್ನೇ ಮೂರನೇ ಬಾರಿಯೂ ನೀಡಲಾಗುತ್ತದೆ.

ಆರೋಗ್ಯ ಕಾರ್ಯಕರ್ತರು, ಕೊರೊನಾ ವಿರುದ್ಧ ಮುಂಚೂಣಿಯಲ್ಲಿ ಇರುವವರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈಗಾಗಲೇ ಉಚಿತವಾಗಿ ಮುನ್ನೆಚ್ಚರಿಕಾ ಡೋಸ್ ನೀಡಲಾಗಿದೆ ಮತ್ತು ನೀಡಲಾಗುತ್ತಿದೆ. ಆದರೆ ಉಳಿದ ವರ್ಗದವರು ಈ ಸಲ ಲಸಿಕೆ ಪಡೆಯಲು ಕಡ್ಡಾಯವಾಗಿ ಹಣ ಕೊಡಬೇಕು. ಇನ್ನು ಕೊವಿನ್ ಆ್ಯಪ್​​ನಲ್ಲಿ ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಅಗತ್ಯವೂ ಇರುವುದಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಮನ್​ಸುಖ್ ಮಾಂಡವಿಯಾ,  ಕೊರೊನಾದಿಂದ ನಾಗರಿಕರನ್ನು ಇನ್ನಷ್ಟು ಸುರಕ್ಷಿತಗೊಳಿಸಲು ಕೊರೊನಾ ಲಸಿಕೆ ಮುನ್ನೆಚ್ಚರಿಕಾ ಡೋಸ್​ ನೀಡಲು ನಿರ್ಧರಿಸಲಾಗಿದೆ. ಎರಡನೇ ಡೋಸ್ ಪಡೆದು 9 ತಿಂಗಳಾದವರು ಹೋಗಿ ಪಡೆಯಬೇಕು ಎಂದು ಹೇಳಿದ್ದರು.

ಮೂರನೇ ಡೋಸ್​ ಪಡೆಯುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಈ ಮುನ್ನೆಚ್ಚರಿಕಾ ಡೋಸ್​ನ ಬೆಲೆ ಎಷ್ಟು ಎಂಬುದನ್ನೂ ಶೀಘ್ರದಲ್ಲೇ ಘೋಷಣೆ ಮಾಡಲಾಗುತ್ತದೆ. ನೀವು ಎರಡನೇ ಡೋಸ್ ಪಡೆದು ಎಷ್ಟು ಅವಧಿಯಾಯಿತು, ನಿಮ್ಮ ಸಮೀಪದ ಖಾಸಗಿ ಲಸಿಕಾ ಕೇಂದ್ರದಲ್ಲಿ ಲಸಿಕೆ ಎಷ್ಟು ಲಭ್ಯವಿದೆ, ಬೆಲೆಯೆಷ್ಟು ಎಂಬಿತ್ಯಾದಿ ವಿವರಗಳನ್ನು ಕೊವಿನ್​ ಆ್ಯಪ್​​ನಲ್ಲಿಯೇ ನೋಡಬಹುದಾಗಿದೆ.  ಹೀಗೆ ಮುನ್ನೆಚ್ಚರಿಕಾ ಡೋಸ್ ಪಡೆಯಲು ಅಪಾಯಂಟ್​ಮೆಂಟ್​ ತೆಗೆದುಕೊಳ್ಳುವುದೂ ಕಡ್ಡಾಯವಲ್ಲ. ಫಲಾನುಭವಿಗಳು ಸಮೀಪದ ಕೇಂದ್ರಗಳಿಗೆ ಹೋಗಿ ತೆಗೆದುಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ.  ಹಾಗೊಮ್ಮೆ ಅಪಾಯಂಟ್​ಮೆಂಟ್ ತೆಗೆದುಕೊಳ್ಳುತ್ತೀರಿ ಎಂದರೆ ಆನ್​ಲೈನ್​ ಮತ್ತು ಆಫ್​ಲೈನ್​ ಎರಡೂ ಮಾರ್ಗಗಳ ಮೂಲಕ ಪಡೆಯಬಹುದು.

ದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟಿದ್ದು ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್​ ಲಸಿಕೆಯನ್ನು. ಇದರಲ್ಲಿ ಕೊವಿಶೀಲ್ಡ್​  ಒಂದು ಡೋಸ್​ಗೆ ಬೆಲೆ 780 ರೂಪಾಯಿ ಇದ್ದರೆ, ಕೊವ್ಯಾಕ್ಸಿನ್​ ಒಂದು ಡೋಸ್​ಗೆ 1200 ರೂಪಾಯಿ ಇದೆ. ಈ ಮಧ್ಯೆ ಕೊವಿಶೀಲ್ಡ್ ಮುನ್ನೆಚ್ಚರಿಕಾ ಡೋಸ್ ಬೆಲೆಯನ್ನು 600 ರೂ.ಗೆ ನಿಗದಿಪಡಿಸುವುದಾಗಿ ಇತ್ತೀಚೆಗಷ್ಟೇ ಸೀರಂ ಇನ್​ಸ್ಟಿಟ್ಯೂಟ್ ಸಿಸಿಒ ಆದರ್ ಪೂನಾವಾಲಾ ತಿಳಿಸಿದ್ದರು. ಈ ಎರಡೂ ಲಸಿಕೆಗಳ ಒಂದು ಡೋಸ್​ ಬೆಲೆಯನ್ನು 250 ರೂಪಾಯಿಗೆ ಇಳಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿರುವುದಾಗಿಯೂ ಸ್ವಲ್ಪ ದಿನಗಳ ಹಿಂದೆ ಹೇಳಲಾಗಿತ್ತು. ಅಂತಿಮವಾಗಿ ಎಷ್ಟು ಹಣ ನಿಗದಿಯಾಗುತ್ತದೆ ಎಂಬುದು ಕೇಂದ್ರ ಸರ್ಕಾರದ ಪ್ರಕಟಣೆಯ ಬಳಿಕವೇ ಸ್ಪಷ್ಟವಾಗಲಿದೆ.

ಇದನ್ನೂ ಓದಿ: ನಂದಿನ ಹಾಲಿನ ಪ್ಯಾಕೆಟ್ ಮೇಲೆ ಕನ್ನಡವೇ ಮಾಯ! ಕೆಎಂಎಫ್ ವಿರುದ್ಧ ಕನ್ನಡಾಭಿಮಾನಿಗಳು ಆಕ್ರೋಶ

Published On - 3:25 pm, Sat, 9 April 22