ತೀವ್ರ ಕಳವಳಕಾರಿ; ಟ್ರಂಪ್ ಅವರ 21 ಮಿಲಿಯನ್ ಅಮೆರಿಕನ್ ಡಾಲರ್ ನಿಧಿಯ ಹೇಳಿಕೆಗೆ ಭಾರತ ಪ್ರತಿಕ್ರಿಯೆ
ಭಾರತದಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಯುಎಸ್ಎಐಡಿಯಿಂದ ಈ ಮೊದಲು ನೀಡಲಾಗುತ್ತಿದ್ದ 21 ಮಿಲಿಯನ್ ಅಮೆರಿಕನ್ ಡಾಲರ್ ರದ್ಧತಿಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗಳಿಗೆ ಇಂದು (ಫೆಬ್ರವರಿ 21) ಭಾರತದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ. ಅಮೆರಿಕದ ಅಧ್ಯಕ್ಷರ ಹೇಳಿಕೆ ತೀವ್ರ ಆತಂಕಕಾರಿಯಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ನವದೆಹಲಿ: ಭಾರತದಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಯುಎಸ್ಎಐಡಿಯಿಂದ ನೀಡುತ್ತಿದ್ದ 21 ಮಿಲಿಯನ್ ಅಮೆರಿಕನ್ ಡಾಲರ್ ರದ್ಧತಿಯ ಬಗ್ಗೆ ತಿಳಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಭಾರತ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವೈಯಕ್ತಿಕವಾಗಿ ಗೌರವವಿದೆ. ಆದರೆ, ಇಷ್ಟು ಭಾರೀ ಮೊತ್ತವನ್ನು ಭಾರತಕ್ಕೆ ಸಂದಾಯ ಮಾಡುವುದು ಸಾಧ್ಯವಿಲ್ಲ. ಭಾರತದ ಬಳಿ ಸಾಕಷ್ಟು ಹಣವಿದೆ. ಅವರು ತಮ್ಮ ಆಂತರಿಕ ವ್ಯವಸ್ಥೆಯನ್ನು ಸದೃಢಗೊಳಿಸಲು ಸಬಲರಾಗಿದ್ದಾರೆ. ಅಮೆರಿಕನ್ ನಾಗರಿಕರ ತೆರಿಗೆ ಹಣದಲ್ಲಿ ಭಾರತದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಅನುದಾನ ನೀಡುವುದು ಸಾಧ್ಯವಿಲ್ಲ” ಎಂದು ಹೇಳಿದ್ದರು. ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು “ತೀವ್ರ ಕಳವಳಕಾರಿ” ಎಂದು ಹೇಳಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಈ ವಿಷಯ ಪರಿಶೀಲನೆಯಲ್ಲಿದೆ. ಕೆಲವು ಅಮೆರಿಕದ ಚಟುವಟಿಕೆಗಳು ಮತ್ತು ನಿಧಿಯ ಕುರಿತು ಅಮೆರಿಕ ಆಡಳಿತವು ನೀಡಿರುವ ಮಾಹಿತಿಯನ್ನು ನಾವು ನೋಡಿದ್ದೇವೆ. ಇದು ಭಾರತದ ಆಂತರಿಕ ವ್ಯವಹಾರಗಳಲ್ಲಿ ವಿದೇಶಿ ಹಸ್ತಕ್ಷೇಪದ ಬಗ್ಗೆ ಕಳವಳಗಳಿಗೆ ಕಾರಣವಾಗಿದೆ. ಸಂಬಂಧಿತ ಇಲಾಖೆಗಳು ಮತ್ತು ಏಜೆನ್ಸಿಗಳು ಈ ವಿಷಯವನ್ನು ಪರಿಶೀಲಿಸುತ್ತಿವೆ. ಈ ಹಂತದಲ್ಲಿ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ” ಎಂದು ಜೈಸ್ವಾಲ್ ಹೇಳಿದ್ದಾರೆ.
VIDEO | On US President Donald Trump’s claim about USD 21 million funding to India for ‘voter turnout’, MEA Spokesperson Randhir Jaiswal (@MEAIndia) says: “We have seen the information put out by the US administration regarding certain USAID activities and funding. These are… pic.twitter.com/PrSTbbYhgu
— Press Trust of India (@PTI_News) February 21, 2025
ಇದನ್ನೂ ಓದಿ: USAID: ಅಮೆರಿಕದ ಯುಎಸ್ ಏಡ್ ಇತಿಹಾಸ ಏನು, ಉದ್ದೇಶ ಯಾವುದು? ಟ್ರಂಪ್ ಬಳಗಕ್ಕೆ ಯಾಕೆ ಕೋಪ?
ಮಿಯಾಮಿಯಲ್ಲಿ ನಡೆದ FII ಶೃಂಗಸಭೆಯಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, “ಭಾರತಕ್ಕೆ ನಾವು 21 ಮಿಲಿಯನ್ ಡಾಲರ್ ಏಕೆ ಕೊಡಬೇಕು? ಅವರ ಬಳಿ ಸಾಕಷ್ಟು ಹಣವಿದೆ. ನಮ್ಮ ದೃಷ್ಟಿಯಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಭಾರತ ಕೂಡ ಒಂದು. ಅಲ್ಲದೆ, ಭಾರತವು ದುಬಾರಿ ಸುಂಕ ನೀತಿಯಿಂದಲೂ ಸಾಕಷ್ಟು ಲಾಭವನ್ನು ಗಳಿಸುತ್ತಿದೆ. ಭಾರತದಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಅಮೆರಿಕನ್ ನಾಗರಿಕರ ತೆರಿಗೆ ಹಣ ಬಯಸುವುದು ತಪ್ಪಲ್ಲವೇ?” ಎಂದು ಪ್ರಶ್ನಿಸಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ