AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shashi Tharoor: ಶಶಿ ತರೂರ್​​ಗೆ ಹೊಸ ಸಂಕಷ್ಟ; ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್​ನಿಂದ ನೋಟಿಸ್ ಜಾರಿ

Sunanda Pushkar Death Case: 2021ರ ಆಗಸ್ಟ್ ತಿಂಗಳಲ್ಲಿ ಪಟಿಯಾಲಾ ಹೌಸ್ ನ್ಯಾಯಾಲಯವು ಶಶಿ ತರೂರ್ ಅವರನ್ನು ಅವರ ಪತ್ನಿ ಸುನಂದಾ ಪುಷ್ಕರ್ ಆತ್ಮಹತ್ಯೆಗೆ ಪ್ರಚೋದನೆಯ ಆರೋಪದಿಂದ ಬಿಡುಗಡೆ ಮಾಡಿತ್ತು.

Shashi Tharoor: ಶಶಿ ತರೂರ್​​ಗೆ ಹೊಸ ಸಂಕಷ್ಟ; ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್​ನಿಂದ ನೋಟಿಸ್ ಜಾರಿ
ಶಶಿ ತರೂರ್ ಮತ್ತು ಸುನಂದಾ ಪುಷ್ಕರ್
TV9 Web
| Updated By: ಸುಷ್ಮಾ ಚಕ್ರೆ|

Updated on: Dec 01, 2022 | 3:05 PM

Share

ನವದೆಹಲಿ: ಸುನಂದಾ ಪುಷ್ಕರ್ (Sunanda Pushkar) ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್​ಗೆ (Shashi Tharoor) ಮತ್ತೊಂದು ಸಂಕಷ್ಟ ಎದುರಾಗಿದೆ. ಈ ನಿಗೂಢ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್​ ಅವರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ (Delhi High Court) ಶಶಿ ತರೂರ್​ಗೆ ನೋಟಿಸ್ ಜಾರಿ ಮಾಡಿದೆ.

2021ರ ಆಗಸ್ಟ್ ತಿಂಗಳಲ್ಲಿ ಪಟಿಯಾಲಾ ಹೌಸ್ ನ್ಯಾಯಾಲಯವು ಶಶಿ ತರೂರ್ ಅವರನ್ನು ಅವರ ಪತ್ನಿ ಸುನಂದಾ ಪುಷ್ಕರ್ ಆತ್ಮಹತ್ಯೆಗೆ ಪ್ರಚೋದನೆಯ ಆರೋಪದಿಂದ ಬಿಡುಗಡೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಆ ಆದೇಶ ಹೊರಬಿದ್ದು 15 ತಿಂಗಳ ಬಳಿಕ ಇದೀಗ ದೆಹಲಿ ಪೊಲೀಸರು ಇಂದು ದೆಹಲಿ ಕೋರ್ಟ್​ ಮೊರೆ ಹೋಗಿದ್ದು, 2021ರ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದರು.

ಪಾಕಿಸ್ತಾನಿ ಪತ್ರಕರ್ತೆ ಮೆಹರ್ ತರಾರ್ ಅವರೊಂದಿಗೆ ಶಶಿ ತರೂರ್ ಅವರ ಅನೈತಿಕ ಸಂಬಂಧದಿಂದಾಗಿ ಸುನಂದಾ ಪುಷ್ಕರ್ ಅವರು ಪ್ರಾಣ ಕಳೆದುಕೊಳ್ಳುವ ನಿರ್ಧಾರ ಮಾಡಿದರು ಎಂದು ಸಾಕ್ಷಿಗಳ ಹೇಳಿಕೆ ಸೂಚಿಸಿದ್ದರೂ ತನಿಖೆಯಿಂದ ಏನನ್ನೂ ಸಾಬೀತುಪಡಿಸಲಾಗಿರಲಿಲ್ಲ.

ಇದನ್ನೂ ಓದಿ: ಪತ್ನಿ ಸುನಂದಾ ಪುಷ್ಕರ್​ ಸಾವಿನ ಪ್ರಕರಣದಿಂದ ಬಚಾವ್​ ಆದ ಶಶಿ ತರೂರ್​; ಆರೋಪ ಮುಕ್ತ ಎಂದು ತೀರ್ಪು ನೀಡಿದ ದೆಹಲಿ ಕೋರ್ಟ್​

ದೆಹಲಿಯ ಪಂಚತಾರಾ ಹೋಟೆಲ್​​ನ ಕೋಣೆಯೊಂದರಲ್ಲಿ 2014ರ ಜನವರಿ 17ರಂದು ಮಹಿಳಾ ಉದ್ಯಮಿ, ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್​​ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ವಿವಿಧ ತಜ್ಞರು ಸುನಂದಾ ಸಾವಿಗೆ ಕಾರಣವೇನೆಂದು ನಿಖರ ಅಭಿಪ್ರಾಯ ನೀಡಿಲ್ಲ. ಹೀಗಾಗಿ ತಮ್ಮ ವಿರುದ್ಧದ ಆರೋಪ ಕೈಬಿಡುವಂತೆ ಶಶಿ ತರೂರ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಿ, 2021ರ ಆಗಸ್ಟ್​ನಲ್ಲಿ ಅವರನ್ನು ಖುಲಾಸೆಗೊಳಿಸಲಾಗಿತ್ತು.

ಕಳೆದ ವರ್ಷದ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಪರಿಷ್ಕರಣೆ ಅರ್ಜಿಯನ್ನು ಸಲ್ಲಿಸುವಲ್ಲಿ ವಿಳಂಬವನ್ನು ಕ್ಷಮಿಸುವಂತೆ ಕೋರಿ ಪೊಲೀಸರು ಸಲ್ಲಿಸಿದ ಅರ್ಜಿಯ ಮೇಲೆ ಹೈಕೋರ್ಟ್ ನೋಟೀಸ್ ನೀಡಿದೆ. ಹಾಗೇ, ಶಶಿ ತರೂರ್ ಅವರಿಂದ ಪ್ರತಿಕ್ರಿಯೆ ಕೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಗಳು ಮತ್ತು ದಾಖಲೆಗಳನ್ನು ಕಕ್ಷಿದಾರರನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಗೆ ಸರಬರಾಜು ಮಾಡಬಾರದು ಎಂದು ಕೋರ್ಟ್​ ನಿರ್ದೇಶಿಸಿದೆ. ಫೆಬ್ರವರಿ 7, 2023ರಂದು ದೆಹಲಿ ಹೈಕೋರ್ಟ್ ಈ ವಿಷಯವನ್ನು ವಿಚಾರಣೆಗೆ ಪಟ್ಟಿ ಮಾಡಿದೆ.

ಇದನ್ನೂ ಓದಿ: ಸೆನ್ಸೇಷನಲ್ ಕ್ರೈಮ್ ಕತೆಗಳು: ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಸತ್ತು 8 ವರ್ಷಗಳಾದರೂ ಸಾವಿನ ಕಾರಣ ಮಾತ್ರ ಈಗಲೂ ನಿಗೂಢ!

ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರು 2014ರಲ್ಲಿ ಐಷಾರಾಮಿ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ನಂತರ ಕೊಠಡಿಯನ್ನು ಸೀಲ್ ಮಾಡಿ ಎಫ್ಐಆರ್ ದಾಖಲಿಸಲಾಗಿತ್ತು. ಆ ಸಮಯದಲ್ಲಿ ಶಶಿ ತರೂರ್ ಅವರ ಅಧಿಕೃತ ಬಂಗಲೆಯನ್ನು ನವೀಕರಿಸಲಾಗುತ್ತಿದ್ದ ಕಾರಣ ದಂಪತಿಗಳು ಹೋಟೆಲ್‌ನಲ್ಲಿ ತಂಗಿದ್ದರು. ಅವರ ಸಾವನ್ನು ಮೊದಲು ಆತ್ಮಹತ್ಯೆ ಎಂದು ಕರೆಯಲಾಗಿತ್ತು. ಆದರೆ, ನಂತರ ಆ ಸಾವಿನ ಸುತ್ತ ಅನುಮಾನಗಳು ಎದ್ದಿದ್ದವು. ಹೀಗಾಗಿ, ಶಶಿ ತರೂರ್ ಅವರ ವಿರುದ್ಧ ಕೇಸ್ ದಾಖಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ