ಸಿಜೆಪಿ ಪ್ರತಿಭಟನೆಗೆ ಅನುಮತಿ ನೀಡದ್ದು ಯಾಕೆ? ಕಳೆದೊಂದು ತಿಂಗಳ ಕಹಿ ಅನುಭವ ಬಿಚ್ಚಿಟ್ಟ ದೆಹಲಿ ಪೊಲೀಸ್

ಜಂತರ್ ಮಂತರ್‌ನಲ್ಲಿ ಜುಲೈನಲ್ಲಿ ನಡೆದ ಪ್ರತಿಭಟನೆಯ ವೇಳೆ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು, ಹಿಂಸಾಚಾರದಿಂದ ವಿದ್ಯಾರ್ಥಿಗಳಿಗೂ ಗಾಯಗಳಾಗಿದ್ದವು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿಯ ಮೇಲಿನ ಕಿರುಕುಳ ಮತ್ತು ಹಲ್ಲೆಯ ಆರೋಪಗಳನ್ನೂ ಉಲ್ಲೇಖಿಸಿರುವ ಪೊಲೀಸರು, ಸಾರ್ವಜನಿಕ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಸೂಕ್ತ ವ್ಯವಸ್ಥೆಗಳ ಅಗತ್ಯವನ್ನು ಒತ್ತಿಹೇಳಿದ್ದಾರೆ.

ಸಿಜೆಪಿ ಪ್ರತಿಭಟನೆಗೆ ಅನುಮತಿ ನೀಡದ್ದು ಯಾಕೆ? ಕಳೆದೊಂದು ತಿಂಗಳ ಕಹಿ ಅನುಭವ ಬಿಚ್ಚಿಟ್ಟ ದೆಹಲಿ ಪೊಲೀಸ್
ದೆಹಲಿಯಲ್ಲಿ ಬಿಗಿ ಭದ್ರತೆ
Image Credit source: PTI

Updated on: Oct 10, 2026 | 10:13 AM

ಮುಖ್ಯಾಂಶಗಳು

  • ಜುಲೈ ಪ್ರತಿಭಟನೆಯ ಕಹಿ ಅನುಭವ ಮುಂದಿಟ್ಟ ದೆಹಲಿ ಪೊಲೀಸರು
  • 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಗಾಯ
  • ಮಹಿಳಾ ಪೊಲೀಸರ ಮೇಲಿನ ಹಲ್ಲೆಯ ಆರೋಪದ ಬಗ್ಗೆ ಕಳವಳ

ನವದೆಹಲಿ, ಅಕ್ಟೋಬರ್ 10: ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿರುವ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಸಿಜೆಪಿಯ ಈ ಹಿಂದಿನ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರಕಟಣೆ ಬಿಡುಗಡೆ ಮಾಡಿ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ. ಜಂತರ್ ಮಂತರ್‌ನಲ್ಲಿ ಜುಲೈನಲ್ಲಿ ನಡೆದ ಪ್ರತಿಭಟನೆಯ ವೇಳೆ ಎದುರಾದ ಅನುಭವಗಳೇ ಈಗಿನ ನಿರ್ಧಾರಕ್ಕೆ ಪ್ರಮುಖ ಕಾರಣ ಎಂಬುದನ್ನು ಪೊಲೀಸರು ಉಲ್ಲೇಖಿಸಿದ್ದಾರೆ. ಪ್ರತಿಭಟನೆಗೆ ಒಂದು ದಿನದ ಅನುಮತಿ ನೀಡಲಾಗಿದ್ದರೂ, ಸುಮಾರು ಒಂದು ತಿಂಗಳ ಕಾಲ ಪ್ರತಿಭಟನೆ ಮುಂದುವರಿದಿತ್ತು. ಈ ಅವಧಿಯಲ್ಲಿ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2,000ಕ್ಕೂ ಹೆಚ್ಚು ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳು ಭಾಗಿ

ಜುಲೈನಲ್ಲಿ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ 2,000ಕ್ಕೂ ಹೆಚ್ಚು ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳು ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬೆಳವಣಿಗೆಗಳಿಂದ ಹಿಂಸಾಚಾರದ ಘಟನೆಗಳು ನಡೆದಿದ್ದು, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತ್ತು. ಘರ್ಷಣೆಗಳ ಪರಿಣಾಮವಾಗಿ ಅಮಾಯಕ ವಿದ್ಯಾರ್ಥಿಗಳೂ ಗಾಯಗೊಂಡಿದ್ದರು ಎಂದು ದೆಹಲಿ ಪೊಲೀಸರ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಮಹಿಳಾ ಪೊಲೀಸರ ಮೇಲಿನ ದೌರ್ಜನ್ಯದ ಆರೋಪ

ಕಳೆದ ವಾರ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆಲವರು ದೆಹಲಿ ಪೊಲೀಸ್ ಮಹಿಳಾ ಸಿಬ್ಬಂದಿಯ ಮೇಲೆ ಕಿರುಕುಳ ಮತ್ತು ಹಲ್ಲೆ ನಡೆಸಿದ್ದಾರೆ ಎಂಬ ವರದಿಗಳ ಬಗ್ಗೆಯೂ ಪೊಲೀಸರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.

ಸಾರ್ವಜನಿಕ ಸುರಕ್ಷತೆ, ಕಾನೂನು ಸುವ್ಯವಸ್ಥೆಗೆ ಆದ್ಯತೆ

ಈ ಹಿಂದೆ ಪ್ರತಿಭಟನೆ ನಡೆದ ಅದೇ ಸ್ಥಳದಲ್ಲಿ ಅದೇ ಗುಂಪು ಮತ್ತೆ ಸೇರಲು ಮುಂದಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಹಿಂದಿನ ಅನುಭವವನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಪ್ರತಿಭಟನೆಗೆ ಅನುಮತಿ ನೀಡುವ ಮೊದಲು ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ ಎಂದು ಸ್ಪಷ್ಟಪಡಿಸಿದ್ದಾರೆ.


ಒಟ್ಟಿನಲ್ಲಿ, ಜಂತರ್ ಮಂತರ್‌ನಲ್ಲಿ ಹಿಂದಿನ ಪ್ರತಿಭಟನೆಯ ವೇಳೆ ಉಂಟಾದ ಹಿಂಸಾಚಾರ, ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿರುವುದು ಮತ್ತು ಮಹಿಳಾ ಪೊಲೀಸರ ಮೇಲಿನ ಹಲ್ಲೆಯ ಆರೋಪಗಳನ್ನು ಮುಂದಿಟ್ಟು ದೆಹಲಿ ಪೊಲೀಸರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us