
ನವದೆಹಲಿ, ಸೆಪ್ಟೆಂಬರ್ 6: ಇಲ್ಲಿಯ ಸತ್ಯನಿಕೇತನ ಪ್ರದೇಶದಲ್ಲಿ ಸಂಭವಿಸಿದ ಕಟ್ಟಡ ಕುಸಿತ ಘಟನೆಯಲ್ಲಿ ಸಾವಿನ ಸಂಖ್ಯೆ ಏರುತ್ತಿದೆ. ಈಗ ಬಂದಿರುವ ವರದಿಗಳ ಪ್ರಕಾರ, ಸಾವಿನ ಸಂಖ್ಯೆ 3ಕ್ಕೆ ಏರಿದೆ. ಕಟ್ಟಡ ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರುವ ಭೀತಿ ಇದೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯಲು ಜೆಸಿಬಿ ಮತ್ತು ನೂತನ ಶೋಧನಾ ಉಪಕರಣಗಳನ್ನು ಬಳಸಲಾಗುತ್ತಿದೆ. ಗಾಯಗೊಂಡ ಕೆಲವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುತ್ತಮುತ್ತಲಿನ ಕಟ್ಟಡಗಳಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ದುರಂತದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್ ಶಾ ಹಾಗು ಇತರರು ಈ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ, ದೆಹಲಿ ಪೊಲೀಸ್ ಆಯುಕ್ತ, ಎನ್ಡಿಆರ್ಎಫ್ ಡಿಜಿ ಅವರೊಂದಿಗೆ ಮಾತನಾಡಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದೇನೆ. ಗಾಯಗೊಂಡವರಿಗೆ ಎಲ್ಲಾ ರೀತಿಯ ವೈದ್ಯಕೀಯ ನೆರವು ಒದಗಿಸಲಾಗುವುದು ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಅಮಿತ್ ಶಾ ಅವರ ಟ್ವೀಟ್
Deeply distressed by the collapse of a building at Satya Niketan in Delhi. Spoke with the Chief Minister, Commissioner of Police, Delhi, and the Director General, NDRF, and assessed the situation on the ground. The local administration and the NDRF are conducting intensive rescue…
— Amit Shah (@AmitShah) September 6, 2026
ಇದನ್ನೂ ಓದಿ: ದೆಹಲಿಯ ಸತ್ಯ ನಿಕೇತನದಲ್ಲಿ ಹಠಾತ್ ಕುಸಿದ ಕಟ್ಟಡ: ಅವಶೇಷಗಳಡಿ ಐವರು ಸಿಲುಕಿರುವ ಶಂಕೆ
ಕುಸಿದಿರುವ ಕಟ್ಟಡವು ಸುಮಾರು 40 ವರ್ಷಗಳಷ್ಟು ಹಳೆಯದಾಗಿದೆ. ಪಿಜಿ ಬಾಯ್ಸ್ ಹಾಸ್ಟೆಲ್ ಆಗಿದ್ದ ಐದು ಮಹಡಿಯ ಈ ಕಟ್ಟಡದಲ್ಲಿ ನೆಲಮಹಡಿ ದುರಸ್ತಿ ಕಾಮಗಾರಿ ನಡೆಯುತ್ತಿತ್ತು ಎನ್ನಲಾಗಿದೆ. ಹಳೆಯ ಫೌಂಡೇಶನ್ ಪಿಲ್ಲರ್ಗಳನ್ನೇ ಬದಲಿಸುವ ಪ್ರಯತ್ನವಾಗಿದೆ. ಇದರಿಂದ ಇಡೀ ಕಟ್ಟಡವೇ ಕುಸಿದಿರಬಹುದು ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ದೆಹಲಿ ಸಿಎಂ ರೇಖಾ ಗುಪ್ತಾ ಅವರು ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಯಾವುದೇ ಕಟ್ಟಡ ನಿರ್ಮಾಣ ನಿಯಮಗಳ (Building Bye-laws) ಪ್ರಕಾರ, ಮೇಲ್ಭಾಗದ ರಚನೆ ಪೂರ್ಣಗೊಂಡ ನಂತರ ಕೆಳಭಾಗದಲ್ಲಿ ಬೇಸ್‌ಮೆಂಟ್ ಅಗೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬೇಸ್‌ಮೆಂಟ್ ನಿರ್ಮಾಣವನ್ನು ಕಟ್ಟಡದ ತಳಪಾಯ (Foundation) ಹಾಕುವ ಆರಂಭಿಕ ಹಂತದಲ್ಲೇ ಮಾಡಬೇಕು ಮತ್ತು ಅದಕ್ಕೆ ಸ್ಥಳೀಯ ಮಹಾನಗರ ಪಾಲಿಕೆಯಿಂದ ಮುಂಚಿತವಾಗಿಯೇ ಅನುಮೋದಿತ ನಕ್ಷೆ (Approved Plan) ಪಡೆಯುವುದು ಕಡ್ಡಾಯ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕ ಹಾಗೂ ಗುತ್ತಿಗೆದಾರರ ವಿರುದ್ಧ ದೆಹಲಿ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 8:50 pm, Sun, 6 September 26