ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 20 ಲಕ್ಷ ರೂ.ದಂಡ ವಿಧಿಸಿದ ಡಿಜಿಸಿಎ
ಪ್ರಮುಖವಾಗಿ ರನ್ ವೇಗಳಲ್ಲಿ ಸುರಕ್ಷತೆ ಸಂಬಂಧಪಟ್ಟಂತೆ ನಿಯಮಗಳನ್ನು ಪಾಲನೆ ಮಾಡದೆ ಇದ್ದರೆ, ಸೂಕ್ತವಾಗಿ ನಿರ್ವಹಣೆ ಮಾಡದೆ ಇದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ ಎಂದು DGCA ಹೇಳಿದೆ.
ಕೋಲ್ಕತ್ತದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (NSCBIA)ಕ್ಕೆ ಭಾರತದ ವಾಯುಯಾನ ನಿಯಂತ್ರಣ ಸಂಸ್ಥೆಯಾಗಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) 20 ಲಕ್ಷ ರೂಪಾಯಿಗಳಷ್ಟು ದಂಡ ವಿಧಿಸಿದೆ. ವಿಮಾನ ನಿಲ್ದಾಣದಲ್ಲಿ ರನ್ವೇ ನಿರ್ವಹಣೆಯನ್ನು ಸೂಕ್ತವಾಗಿ ಮಾಡದೆ, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಕಾರಣಕ್ಕೆ ಈ ದಂಡ ವಿಧಿಸಿದ್ದಾಗಿ ಹೇಳಲಾಗಿದೆ. ಕೆಲವೇ ತಿಂಗಳುಗಳ ಹಿಂದೆ ಡಿಜಿಸಿಎ, ವಿಮಾನ ನಿಲ್ದಾಣಗಳಲ್ಲಿನ ಸುರಕ್ಷತೆ ನಿಯಮ ಪಾಲನೆ ಕುರಿತು ಅಡಿಟಿಂಗ್ ನಡೆಸಿತ್ತು. ಆಗ ಈ ನೇತಾಜಿ ಸುಭಾಷ್ ಚಂದ್ರ ಬೋಸ್ ಏರ್ಪೋರ್ಟ್ನಲ್ಲಿ ರನ್ವೇ ನಿರ್ವಹಣೆ ಸರಿಯಾಗಿ ಮಾಡದೆ, ಗಂಭೀರ ಪ್ರಮಾಣದಲ್ಲಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದು ಕಂಡುಬಂತು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾಗಿ ಎಎನ್ಐ ವರದಿ ಮಾಡಿದೆ.
ಪ್ರಮುಖವಾಗಿ ರನ್ ವೇಗಳಲ್ಲಿ ಸುರಕ್ಷತೆ ಸಂಬಂಧಪಟ್ಟಂತೆ ನಿಯಮಗಳನ್ನು ಪಾಲನೆ ಮಾಡದೆ ಇದ್ದರೆ, ಸೂಕ್ತವಾಗಿ ನಿರ್ವಹಣೆ ಮಾಡದೆ ಇದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ ಎಂದು DGCA ಹೇಳಿದೆ. ಕೋಲ್ಕತ್ತ ಏರ್ಪೋರ್ಟ್ಗೆ ಇದಕ್ಕೆ ಸಂಬಂಧಪಟ್ಟಂತೆ ಶೋಕಾಸ್ ನೋಟಿಸ್ ಕೂಡ ನೀಡಲಾಗಿತ್ತು. ಕೋಲ್ಕತ್ತ ಏರ್ಪೋರ್ಟ್ನ ರನ್ ವೇ ನಿರ್ವಹಣೆ ಮಾರ್ಗಸೂಚಿಯಂತೆ ಆಗಿಲ್ಲ. ಇಲ್ಲಿ ಲೈಟ್ಗನ್ನು ಸರಿಯಾಗಿ ಅಳವಡಿಸಿಲ್ಲ ಎಂದು ಡಿಸಿಜಿಎ ಹೇಳಿದೆ. ಈ ಬಗ್ಗೆ ಭಾರತೀಯ ಏರ್ಪೋರ್ಟ್ ಪ್ರಾಧಿಕಾರಿ ಇದುವರೆಗೂ ಏನೂ ಪ್ರತಿಕ್ರಿಯೆ ನೀಡಿಲ್ಲ.ಆದರೆ ಪ್ರಸ್ತುತ ವಿಷಯವನ್ನು ಗಮನಿಸಲು ಆಂತರಿಕ ಸಮಿತಿಯೊಂದನ್ನು ರಚಿಸಿದೆ ಎಂದು ಎಎನ್ಐ ವರದಿ ಮಾಡಿದೆ.
ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡಾದಲ್ಲಿ ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪೂರ್ಣ ಮಾಹಿತಿ ಇಲ್ಲಿದೆ