AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ನಡುವೆ ಅಮಾನುಷ ಕೆಲಸ: ದೇಶದ ವಿವಿಧೆಡೆ ನಕಲಿ ರೆಮಿಡಿಸಿವಿರ್ ಮಾರಾಟ; ಪೊಲೀಸರಿಂದ ಖದೀಮರ ಬಂಧನ

ಜೀವ ಉಳಿಸುವ ಔಷಧಿಗಳನ್ನು ನಕಲಿಯಾಗಿ ತಯಾರಿಸಿ ದುಬಾರಿ ಬೆಲೆಗೆ ಮಾರಿ ಕೊರೊನಾ ರೋಗಿಗಳ ಜೀವ ತೆಗೆಯುತ್ತಿದ್ದಾರೆ. ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ಕಾರ್ಖಾನೆಯೇ ಗುಜರಾತ್​ನಲ್ಲಿ ಶುರುವಾಗಿತ್ತು. ಹೀಗೆ ಅಮಾನವೀಯವಾಗಿ ಕೆಲಸಮಾಡುವವರನ್ನು ಪೊಲೀಸರು ಈಗ ಬಂಧಿಸಿದ್ದಾರೆ.

ಕೊರೊನಾ ನಡುವೆ ಅಮಾನುಷ ಕೆಲಸ: ದೇಶದ ವಿವಿಧೆಡೆ ನಕಲಿ ರೆಮಿಡಿಸಿವಿರ್ ಮಾರಾಟ; ಪೊಲೀಸರಿಂದ ಖದೀಮರ ಬಂಧನ
ರೆಮ್‌ಡಿಸಿವಿರ್ ಇಂಜೆಕ್ಷನ್
Follow us
TV9 Web
| Updated By: ganapathi bhat

Updated on:Aug 23, 2021 | 12:45 PM

ದೆಹಲಿ: ಕೊರೊನಾ ವೈರಸ್ ವಿರುದ್ಧ ಈಗ ಇಡೀ ಭಾರತವೇ ಹೋರಾಡುತ್ತಿದೆ. ಆದರೆ ಇದೇ ಕೊರೊನಾ ಸಾಂಕ್ರಾಮಿಕವನ್ನು ಬಳಸಿಕೊಂಡು ಕೆಲ ಖದೀಮರು ಹಣ ಮಾಡಿಕೊಳ್ಳುತ್ತಿದ್ದಾರೆ. ಜೀವ ಉಳಿಸುವ ಔಷಧಿಗಳನ್ನು ನಕಲಿಯಾಗಿ ತಯಾರಿಸಿ ದುಬಾರಿ ಬೆಲೆಗೆ ಮಾರಿ ಕೊರೊನಾ ರೋಗಿಗಳ ಜೀವ ತೆಗೆಯುತ್ತಿದ್ದಾರೆ. ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ಕಾರ್ಖಾನೆಯೇ ಗುಜರಾತ್​ನಲ್ಲಿ ಶುರುವಾಗಿತ್ತು. ಹೀಗೆ ಅಮಾನವೀಯವಾಗಿ ಕೆಲಸಮಾಡುವವರನ್ನು ಪೊಲೀಸರು ಈಗ ಬಂಧಿಸಿದ್ದಾರೆ.

ನಕಲಿ ಇಂಜೆಕ್ಷನ್ ದಂಧೆಗೆ ಬ್ರೇಕ್‌; ಕಾರ್ಯಾಚರಣೆಯ ಸಂಪೂರ್ಣ ವಿವರ ಇಲ್ಲಿದೆ ದೇಶದಲ್ಲಿ ಈಗ ಕೊರೊನಾ ವೈರಸ್ ಎಲ್ಲರ ಮನೆಗಳಲ್ಲೂ ಭಯ, ಆತಂಕ ಸೃಷ್ಟಿಸಿದೆ. ಕೊರೊನಾ ವೈರಸ್​ನಿಂದ ಬಚಾವ್ ಆಗಲು ಕೊರೊನಾ ರೋಗಿಗಳು ರೆಮಿಡಿಸಿವಿರ್ ಇಂಜೆಕ್ಷನ್ ಮೊರೆ ಹೋಗುತ್ತಿದ್ದಾರೆ. ಆದರೆ, ದೇಶದಲ್ಲಿ ಸುಲಭವಾಗಿ ರೆಮಿಡಿಸಿವಿರ್ ಇಂಜೆಕ್ಷನ್ ಸಿಗುತ್ತಿಲ್ಲ. ಕೆಲ ಕೊರೊನಾ ರೋಗಿಗಳ ಸಂಬಂಧಿಗಳು ಎಷ್ಟು ಬೆಲೆ ತೆತ್ತಾದರೂ, ಸರಿ ರೆಮಿಡಿಸಿವಿರ್ ಇಂಜೆಕ್ಷನ್ ಖರೀದಿಸಲು ತಯಾರಾಗಿದ್ದಾರೆ. ತಮ್ಮವರನ್ನು ಉಳಿಸಿಕೊಳ್ಳಲು ದುಬಾರಿ ಬೆಲೆ ತೆತ್ತು ರೆಮಿಡಿಸಿವಿರ್ ಇಂಜೆಕ್ಷನ್ ತಂದರೆ, ಬಂಧು ಭಾಂಧವರನ್ನು ಉಳಿಸಿಕೊಳ್ಳಬಹುದು ಎನ್ನುವ ಆಸೆ ಜನರಲ್ಲಿದೆ. ಈ ಪರಿಸ್ಥಿತಿಯನ್ನೇ ದುರ್ಬಳಕೆ ಮಾಡಿಕೊಂಡು ಕೆಲ ಖದೀಮರು ನಕಲಿ ರೆಮಿಡಿಸಿವಿರ್ ಇಂಜೆಕ್ಷನ್​ಗಳನ್ನು ತಯಾರಿಸಿ ಅಸಲಿ ರೆಮಿಡಿಸಿವಿರ್ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಧ್ಯಪ್ರದೇಶ, ಗುಜರಾತ್ ಪೊಲೀಸರು ಇಂಥ ಒಂದು ಪ್ರಕರಣವನ್ನು ಈಗ ಬಯಲಿಗೆ ಎಳೆದಿದ್ದಾರೆ.

ಗುಜರಾತ್​ನ ಸೂರತ್ ಬಳಿಯ ಫಾರ್ಮಾ ಹೌಸ್​ನಲ್ಲಿ ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ಕಾರ್ಖಾನೆಯೇ ಆರಂಭವಾಗಿತ್ತು. ಕೌಶಲ್ ವೋಹ್ರಾ ಇದರ ಕಿಂಗ್ ಪಿನ್. ಈತನೇ ಫಾರ್ಮಾ ಹೌಸ್​ನಲ್ಲಿ ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ತಯಾರಿಸುತ್ತಿದ್ದ. ತಾನು ತಯಾರಿಸಿದ ನಕಲಿ ರೆಮಿಡಿಸಿವಿರ್ ಇಂಜೆಕ್ಷನ್​ಗಳನ್ನು ಒಂದಕ್ಕೆ 1,700 ರೂಪಾಯಿಗೆ ಸುನೀಲ್ ಮಿಶ್ರಾ ಎಂಬಾತನಿಗೆ ಮಾರಾಟ ಮಾಡುತ್ತಿದ್ದ. ಬಳಿಕ, ಸುನೀಲ್ ಮಿಶ್ರಾ ನಕಲಿ ರೆಮಿಡಿಸಿವಿರ್ ಇಂಜೆಕ್ಷನ್​ಗಳನ್ನು ದೇಶದ ಬೇರೆ ಬೇರೆ ಕಡೆಗೆ ಸಾಗಿಸಿ ದುಬಾರಿ ಬೆಲೆಗೆ ಕೊರೊನಾ ರೋಗಿಗಳಿಗೆ ಮಾರಾಟ ಮಾಡುತ್ತಿದ್ದ. ತಾನು 1,700 ರೂಪಾಯಿಗೆ ಖರೀದಿಸಿದ್ದ ನಕಲಿ ರೆಮಿಡಿಸಿವಿರ್ ಇಂಜೆಕ್ಷನ್​ಗಳನ್ನು 35 ರಿಂದ 40 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದ. ಈ ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ಮಾಫಿಯಾ ಪತ್ತೆಯ ಹಿಂದೆ ಒಂದು ರೋಚಕ ಕಥೆಯೇ ಇದೆ.

ಸುನೀಲ್ ಮಿಶ್ರಾ ತಾನು ಕೌಶಲ್ ವೋಹ್ರಾನಿಂದ ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ಖರೀದಿಸುತ್ತಿದ್ದ. ಬಳಿಕ ಅವುಗಳನ್ನ ಮಧ್ಯಪ್ರದೇಶದ ಇಂದೋರ್ ಸೇರಿದಂತೆ ವಿವಿಧೆಡೆ ತನ್ನ ಸಹಚರರಿಗೆ ನೀಡಿ ಮಾರಾಟ ಮಾಡಿಸುತ್ತಿದ್ದ. ಇಂದೋರ್​ನ ವಿಜಯನಗರದಲ್ಲಿ ವ್ಯಕ್ತಿಯೊಬ್ಬ ಮಹಿಳೆಯರಿಗೆ ಮಾತ್ರ ರೆಮಿಡಿಸಿವಿರ್ ಇಂಜೆಕ್ಷನ್ ಮಾರುತ್ತಿದ್ದ. ಪುರುಷರಿಗೆ ಇಂಜೆಕ್ಷನ್ ಮಾರುತ್ತಿರಲಿಲ್ಲ. ಈ ಬಗ್ಗೆ ರೆಮಿಡಿಸಿವಿರ್ ಬೇಕಾಗಿದ್ದ ಮಹಿಳೆಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಳು. ಈ ಮಾಹಿತಿ ಆಧಾರದ ಮೇಲೆ ಇಂದೋರ್ ಪೊಲೀಸರು ಪ್ಲ್ಯಾನ್ ರೂಪಿಸಿ, ಮಹಿಳಾ ಪಿಎಸ್‌ಐ ಪ್ರಿಯಾಂಕಾರನ್ನು ರೆಮಿಡಿಸಿವಿರ್ ಇಂಜೆಕ್ಷನ್ ಖರೀದಿಗೆ ಕಳಿಸಿದ್ದಾರೆ. ಪ್ರಿಯಾಂಕಾ ನೇತೃತ್ವದ ಟೀಮ್ ಗುರುವಾರ ರಾತ್ರಿ ರೋಗಿಯ ಸಂಬಂಧಿಯ ವೇಷದಲ್ಲಿ ಇಂದೋರ್​ನ ವಿಜಯನಗರಕ್ಕೆ ರೆಮಿಡಿಸಿವಿರ್ ಖರೀದಿಗೆ ಹೋಗಿದ್ದಾರೆ. ಆಗ ಇವು, ಅಸಲಿ ರೆಮಿಡಿಸಿವಿರ್ ಇಂಜೆಕ್ಷನ್ ಅಲ್ಲ, ನಕಲಿ ಇಂಜೆಕ್ಷನ್ ಎನ್ನುವುದು ಗೊತ್ತಾಗಿದೆ.

ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ದಂಧೆಗೆ ಬ್ರೇಕ್‌ ಪಿಎಸ್‌ಐ ಪ್ರಿಯಾಂಕಾ ನೇತೃತ್ವದ ಪೊಲೀಸರ ತಂಡ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿದೆ. ಆಗ ಇಂದೋರ್​ನಲ್ಲಿ ನಕಲಿ ರೆಮಿಡಿಸಿವಿರ್ ಇಂಜೆಕ್ಷನ್​ನ್ನು 35 ರಿಂದ 40 ಸಾವಿರ ರೂಪಾಯಿಗೆ ಮಾರುತ್ತಿದ್ದ ದಿನೇಶ್, ಧೀರಜ್ ಎಂಬಿಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಧ್ಯಪ್ರದೇಶದಲ್ಲಿ ದೀನೇಶ್, ಧೀರಜ್ ಮೂಲಕ ನಕಲಿ ರೆಮಿಡಿಸಿವಿರ್ ಇಂಜೆಕ್ಷನ್​ಗಳನ್ನು ಸುನೀಲ್ ಮಿಶ್ರಾ ಮಾರುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಬಳಿಕ ಸುನೀಲ್ ಮಿಶ್ರಾನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸುನೀಲ್ ಮಿಶ್ರಾನಿಂದ ಮಾಹಿತಿ ಪಡೆದ ಪೊಲೀಸರು ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ದಂಧೆಯ ಕಿಂಗ್ ಪಿನ್ ಕೌಶಲ್ ವೋಹ್ರಾನನ್ನು ಬಂಧಿಸಿದ್ದಾರೆ. ಮುಂಬೈನಲ್ಲಿ ಇಂಜೆಕ್ಷನ್ ಮೇಲಿನ ಸ್ಟಿಕರ್​ಗಳನ್ನು ಪ್ರಿಂಟ್ ಮಾಡಲಾಗುತ್ತಿತ್ತು. ಅವುಗಳನ್ನ ತಂದು ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ಬಾಟಲಿ ಮೇಲೆ ಹಾಕಿ ಮಾರುತ್ತಿದ್ದರು.

ಈ ಆರೋಪಿಗಳು ಮಹಾರಾಷ್ಟ್ರ ಮತ್ತು ಬಿಹಾರ ಮೂಲದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ 1,200 ನಕಲಿ ರೆಮಿಡಿಸಿವಿರ್ ಇಂಜೆಕ್ಷನ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ, ಇದುವರೆಗೂ ಈ ಗ್ಯಾಂಗ್ 5 ಸಾವಿರಕ್ಕೂ ಹೆಚ್ಚಿನ ನಕಲಿ ರೆಮಿಡಿಸಿವಿರ್ ಇಂಜೆಕ್ಷನ್​ಗಳನ್ನು ದೇಶದ ಬೇರೆ ಬೇರೆ ಕಡೆ ಸಾಗಿಸಿ ಮಾರಾಟ ಮಾಡಿದೆ. ಮಧ್ಯಪ್ರದೇಶದ ಇಂದೋರ್​ನಲ್ಲಿ ಒಂದು ಸಾವಿರ ಇಂಜೆಕ್ಷನ್, ಜಬಲ್ ಪುರದಲ್ಲಿ 200 ನಕಲಿ ರೆಮಿಡಿಸಿವಿರ್ ಇಂಜೆಕ್ಷನ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೌಶಲ್ ವೋಹ್ರಾ ಮತ್ತು ಸುನೀಲ್ ಮಿಶ್ರಾ ಗ್ಯಾಂಗ್ ದೇಶದ ಯಾವ್ಯಾವ ರಾಜ್ಯಗಳಿಗೆ ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ಕಳಿಸಿದೆ, ಎಷ್ಟೆಷ್ಟು ರೂಪಾಯಿಗೆ ಮಾರಾಟ ಮಾಡಿದೆ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೌಶಲ್ ವೋಹ್ರಾ, ಸುನೀಲ್ ಮಿಶ್ರಾ ಇವರಿಬ್ಬರೂ ಮನುಷ್ಯತ್ವ, ಮಾನವೀಯತೆ ಇಲ್ಲದ ಮೃಗಗಳು. ಹಣಕ್ಕಾಗಿ ಜೀವ ಉಳಿಸುವ ಔಷಧಿ ಬದಲು ನಕಲಿ ಔಷಧಿ ನೀಡಿ ಜನರ ಪ್ರಾಣ ತೆಗೆಯುವ ಖದೀಮರು. ಇಂಥವರು ಕ್ಷಮೆಗೆ ಖಂಡಿತ ಅರ್ಹರಲ್ಲ. ಇಂಥವರನ್ನು ಗಲ್ಲಿಗೇರಿಸಲೇಬೇಕು ಅಂತ ಜನರು ಆಗ್ರಹಿಸುತ್ತಿದ್ದಾರೆ.

ನೇಪಾಳ ಗಡಿಯಲ್ಲಿ 90 ರೂ.ಗೆ ರೆಮಿಡಿಸಿವಿರ್ ಮಾರಾಟ! ಮಧ್ಯಪ್ರದೇಶ, ಗುಜರಾತ್ ಮಾತ್ರವಲ್ಲದೇ, ಭಾರತ-ನೇಪಾಳ ಗಡಿಯಲ್ಲೂ ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ಮಾರಾಟ ದಂಧೆ ನಡೆಯುತ್ತಿದೆ. ನೇಪಾಳದ ಮೌರಂಗ ಜಿಲ್ಲೆಯಲ್ಲಿ ಆಂಟಿಬಯೋಟಿಕ್ ಸ್ಟೋಸೆಫ್ ಮೇಲೆ ರೆಮಿಡಿಸಿವಿರ್ ಅಂತ ನಕಲಿ ಲೇಬಲ್ ಅಂಟಿಸಿ, ಅವುಗಳನ್ನ ಭಾರತದ ಗಡಿಗೆ ತಂದು ಭಾರತದ ಜನರಿಗೆ ಮಾರಾಟ ಮಾಡಲಾಗುತ್ತಿತ್ತು. ಆಂಟಿಬಯೋಟಿಕ್ ಸ್ಟೋಸೆಫ್ ಬೆಲೆ 90 ರೂಪಾಯಿ. ಆದರೆ, ಇದರ ಮೇಲೆ ನಕಲಿ ರೆಮಿಡಿಸಿವಿರ್ ಲೇಬಲ್ ಅಂಟಿಸಿ 7 ರಿಂದ 25 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ನೇಪಾಳದ ಮೌರಂಗ್ ಜಿಲ್ಲೆಯ ವಿರಾಟನಗರ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಅಂಗಡಿಯೊಂದರಲ್ಲಿ ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ಮಾರಲಾಗುತ್ತಿದೆ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿ ಆಧಾರದ ಮೇಲೆ ಪೊಲೀಸರು ನೋಬೆಲ್ ಮೆಡಿಕಲ್ ಕಾಲೇಜ್ ಟೀಚಿಂಗ್ ಆಸ್ಪತ್ರೆಯ ಹೊರಗಿನ ಔಷಧಿ ಅಂಗಡಿಯ ಮೇಲೆ ದಾಳಿ ನಡೆಸಿದ್ದರು. ಅಲ್ಲಿ ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ಮಾರುತ್ತಿದ್ದುದು ಗೊತ್ತಾಗಿದೆ. ತಕ್ಷಣವೇ ಪೊಲೀಸರು, ಸೋನು ಆಲಂ ಮತ್ತು ಶ್ರವಣ್ ಯಾದವ್​ನನ್ನು ಬಂಧಿಸಿದ್ದಾರೆ. ಇವರಿಬ್ಬರ ಬಳಿ ಇದ್ದ ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ವಶಪಡಿಸಿಕೊಂಡಿದ್ದಾರೆ.

ಆಂಟಿ ಬಯೋಟಿಕ್ ಸ್ಟೋಸೆಫ್ ಮತ್ತು ರೆಮಿಡಿಸಿವಿರ್ ಇಂಜೆಕ್ಷನ್ ಬಾಟಲಿಗಳು ಒಂದೇ ಆಳತೆಯವು. ಇದರ ಲಾಭ ಪಡೆದು, ಸ್ಟೋಸೆಫ್ ಮೇಲೆ ರೆಮಿಡಿಸಿವಿರ್ ಲೇಬರ್ ಅಂಟಿಸಿ ರೆಮಿಡಿಸಿವಿರ್ ಹೆಸರಿನಲ್ಲಿ ಭಾರತದ ಬಿಹಾರ, ಉತ್ತರ ಪ್ರದೇಶಕ್ಕೆ ತಂದು ಇವುಗಳನ್ನು ಮಾರಾಟ ಮಾಡುತ್ತಿದ್ದರು. ಈಗ ನೇಪಾಳ ಪೊಲೀಸರಿಂದ ಬಂಧಿತನಾಗಿರುವ ಶ್ರವಣ್ ಯಾದವ್​ನನ್ನು ಈ ಹಿಂದೆಯೂ ಪೊಲೀಸರು ಬಂಧಿಸಿದ್ದರು. ಆದರೆ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ನೇಪಾಳದ ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ಗಳನ್ನು ಭಾರತದ ಬಿಹಾರದ ಅರಾರಿಯಾ ಜಿಲ್ಲೆ, ಜೋಗಬಾನಿಗೆ ತಂದು ಕೊರೊನಾ ರೋಗಿಗಳಿಗೆ ಮಾರಾಟ ಮಾಡುತ್ತಿದ್ದರು. ಭಾರತ-ನೇಪಾಳ ಗಡಿಯಲ್ಲಿ ಓಡಾಡಲು ಯಾವುದೇ ಪಾಸ್ ಪೋರ್ಟ್, ವೀಸಾ ಬೇಕಿಲ್ಲ.

ದೆಹಲಿಯಲ್ಲೂ ನಕಲಿ ದಂಧೆಕೋರರ ಬಂಧನ ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ದಂಧೆ ಈಗ ದೇಶಾದ್ಯಂತ ವ್ಯಾಪಿಸಿದೆ. ಬೇಗ ಹಣ ಮಾಡಲು ಖದೀಮರು ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ತಯಾರಿಸಿ ಮಾರುತ್ತಿದ್ದಾರೆ. ಮಾರುಕಟ್ಟೆಯಲ್ಲಿ ರೆಮಿಡಿಸಿವಿರ್ ಇಂಜೆಕ್ಷನ್​ಗೆ ಇರುವ ಭಾರಿ ಕೊರತೆ, ಕೊರೊನಾ ರೋಗಿಗಳಿಂದ ರೆಮಿಡಿಸಿವಿರ್ ಇಂಜೆಕ್ಷನ್​ಗೆ ಇರುವ ಬೇಡಿಕೆಯನ್ನೇ ಬಂಡವಾಳ ಮಾಡಿಕೊಂಡು, ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ತಯಾರಿಸಿ ಮಾರುತ್ತಿದ್ದಾರೆ. ದೆಹಲಿ ಪೊಲೀಸರು ನಕಲಿ ರೆಮಿಡಿಸಿವಿರ್ ಮಾರುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ರವೀಂದ್ರ ತ್ಯಾಗಿ, ಶ್ರವಣ್ ಕುಮಾರ್ ಮತ್ತು ರೀನಾ ಕುಮಾರಿ ಎಂಬ ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಈ ಆರೋಪಿಗಳು ಬರೋಬ್ಬರಿ 5 ಸಾವಿರ ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ಮಾರಾಟ ಮಾಡಿದ್ದಾರೆ. ಟೈಫಾಯ್ಡ್​ಗೆ ಬಳಸುವ ಆಂಟಿ ಬಯೋಟಿಕ್ ಇಂಜೆಕ್ಷನ್ಅನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ, ಅವುಗಳ ಬಾಟಲಿಗೆ ರೆಮಿಡಿಸಿವಿರ್ ಲೇಬಲ್ ಅಂಟಿಸಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಉತ್ತರಾಖಂಡ್​ನ ಕೋತದ್ವಾರ ಜಿಲ್ಲೆಯಲ್ಲಿ ಮೆಡಿಸಿನ್ ತಯಾರಿಕಾ ಘಟಕವನ್ನು ಬಾಡಿಗೆಗೆ ಪಡೆದಿದ್ದರು. ಶ್ರವಣ್ ಕುಮಾರ್ ಗ್ರಾಫಿಕ್ಸ್ ಡಿಸೈನರ್ ಆಗಿದ್ದು, ರೆಮಿಡಿಸಿವಿರ್ ಸ್ಟಿಕರ್​ಗಳನ್ನು ಹೋಲುವ ಸ್ಟಿಕರ್ ತಯಾರಿಸಿ ಕೊಡುತ್ತಿದ್ದ.

ದೇಶದ ಉದ್ದಗಲಕ್ಕೂ ನಕಲಿ ರೆಮಿಡಿಸಿವಿರ್ ಜಾಲ ಈ ಮೊದಲು ಇದೇ ರೀತಿ ನಕಲಿ ರೆಮಿಡಿಸಿವಿರ್ ತಯಾರಿಸಿ, ಮಾರುತ್ತಿದ್ದ ಉತ್ತರಾಖಂಡ್ ರಾಜ್ಯದ ಐವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಗುಜರಾತ್, ದೆಹಲಿ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಈಗ ನಕಲಿ ರೆಮಿಡಿಸಿವಿರ್ ಮಾರಾಟ ಗ್ಯಾಂಗ್ ಕಾರ್ಯಾಚರಣೆ ಮಾಡ್ತಿವೆ. ಕೆಲ ಗ್ಯಾಂಗ್ ಈಗಾಗಲೇ ಪೊಲೀಸರ ಬಲೆಗೆ ಬಿದ್ದಿವೆ. ಕೊರೊನಾ ರೋಗಿಗಳು ಹಾಗೂ ಅವರ ಸಂಬಂಧಿಕರು ಕಾಳಸಂತೆಯಲ್ಲಿ ರೆಮಿಡಿಸಿವಿರ್ ಖರೀದಿಸುವಾಗ ಎಚ್ಚರಿಕೆಯಿಂದ ಇರಬೇಕು. ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ನಿಮಗೆ ದುಬಾರಿ ಬೆಲೆಗೆ ಮಾರಾಟ ಮಾಡುವ ಖದೀಮರಿದ್ದಾರೆ. ಅಂಥವರ ಬಗ್ಗೆ ಎಚ್ಚರವಿರಲಿ. ಕೊರೊನಾ ರೋಗಿಗಳ ಸಂಬಂಧಿಕರು, ರೆಮಿಡಿಸಿವಿರ್ ಇಂಜೆಕ್ಷನ್ಅನ್ನು ಸರ್ಕಾರದಿಂದ ಮಾತ್ರ ಖರೀದಿಸಿ. ಸರ್ಕಾರವೇ ರೆಮಿಡಿಸಿವಿರ್ ಪೂರೈಕೆಗೆ ನೋಡಲ್ ಆಫೀಸರ್ ಗಳನ್ನು ನೇಮಿಸಿದೆ. ಇಂಥ ನೋಡಲ್ ಆಫೀಸರ್​ಗಳ ಮೂಲಕ ಮಾತ್ರ ರೆಮಿಡಿಸಿವಿರ್ ಪಡೆದು ಕೊರೊನಾ ರೋಗಿಗಳಿಗೆ ನೀಡಿ. ರೆಮಿಡಿಸಿವಿರ್ ಅನ್ನು ರೋಗಿಗಳಿಗೆ ನೀಡಬೇಕೆಂಬ ಆತುರದಲ್ಲಿ ನಕಲಿ ರೆಮಿಡಿಸಿವಿರ್ ಜಾಲದ ಬಲೆಗೆ ಬೀಳಬೇಡಿ.

ಇದನ್ನೂ ಓದಿ: ಚಿಕ್ಕಮಗಳೂರು: ಒಂದೇ ಗ್ರಾಮದ 31 ಜನರಿಗೆ ಕೊರೊನಾ ಪಾಸಿಟಿವ್, 48 ಪೊಲೀಸ್​ ಸಿಬ್ಬಂದಿಗೂ ಸೋಂಕು ದೃಢ

ಸುಪ್ರೀಂಕೋರ್ಟ್‌ನಿಂದ 1200 ಮೆ. ಟನ್‌ ಆಕ್ಸಿಜನ್‌ ಹಂಚಿಕೆ: ಕೋವಿಡ್‌ ಪರೀಕ್ಷೆ ರಿಸಲ್ಟ್‌ ತಡವಾದರೆ ಲ್ಯಾಬ್‌ಗಳಿಗೆ ದಂಡ

Published On - 6:18 pm, Sat, 8 May 21