AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾರಿತಪ್ಪಿಸುವ ಜಾಹೀರಾತುಗಳಿಗೆ FSSAI ಬಿಸಿ: ನೆಸ್ಲೆ ಇಂಡಿಯಾ ಹಾಗೂ ಹಿಂದೂಸ್ತಾನ್ ಯೂನಿಲಿವರ್‌ಗೆ ಶೋಕಾಸ್ ನೋಟಿಸ್

FSSAI ದಾರಿತಪ್ಪಿಸುವ ಜಾಹೀರಾತುಗಳು ಮತ್ತು ಲೇಬಲ್‌ಗಳಿಗಾಗಿ ನೆಸ್ಲೆ ಇಂಡಿಯಾ ಮತ್ತು ಹಿಂದೂಸ್ತಾನ್ ಯೂನಿಲಿವರ್‌ಗೆ ಶೋಕಾಸ್ ನೋಟಿಸ್ ನೀಡಿದೆ. ಹಾರ್ಲಿಕ್ಸ್‌ನ 'ಸಕ್ಕರೆ ಸೇರಿಸಿಲ್ಲ' ಹೇಳಿಕೆ ಹಾಗೂ ನೆಸ್ಕೆಫೆಯ ಲೇಬಲ್ ವಿವರಣೆಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಗ್ರಾಹಕರಿಗೆ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ತಪ್ಪು ಮಾಹಿತಿಯನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಕಂಪನಿಗಳ ಪ್ರತಿಕ್ರಿಯೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

ದಾರಿತಪ್ಪಿಸುವ ಜಾಹೀರಾತುಗಳಿಗೆ FSSAI ಬಿಸಿ: ನೆಸ್ಲೆ ಇಂಡಿಯಾ ಹಾಗೂ ಹಿಂದೂಸ್ತಾನ್ ಯೂನಿಲಿವರ್‌ಗೆ  ಶೋಕಾಸ್ ನೋಟಿಸ್
ಹಾರ್ಲಿಕ್ಸ್​ Image Credit source: Horlicks.in
ನಯನಾ ರಾಜೀವ್
|

Updated on: Oct 18, 2026 | 9:26 AM

Share

ನವದೆಹಲಿ, ಅಕ್ಟೋಬರ್ 18: ಆಹಾರ ಉತ್ಪನ್ನಗಳ ಪ್ಯಾಕೆಟ್ ಮೇಲೆ ಏನು ಬರೆಯಲಾಗಿದೆ ಎಂಬುದನ್ನು ನಂಬಿ ಗ್ರಾಹಕರು ಖರೀದಿ ಮಾಡುತ್ತಾರೆ. ಆದರೆ ಉತ್ಪನ್ನಗಳ ಬಗ್ಗೆ ನೀಡುವ ಕೆಲವು ಜಾಹೀರಾತುಗಳು ಮತ್ತು ಆರೋಗ್ಯದ ಭರವಸೆಗಳು ನಿಜವೇ? ಈ ಪ್ರಶ್ನೆ ಈಗ ಎದ್ದಿದೆ. ಹಾರ್ಲಿಕ್ಸ್, ನೆಸ್ಕೆಫೆ ಸೇರಿದಂತೆ ಜನಪ್ರಿಯ ಉತ್ಪನ್ನಗಳ ಲೇಬಲ್ ಹಾಗೂ ಜಾಹೀರಾತುಗಳಲ್ಲಿ ಗ್ರಾಹಕರನ್ನು ದಾರಿತಪ್ಪಿಸುವ ವಿಚಾರಗಳಿವೆ ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ ಎಫ್​ಎಸ್​ಎಸ್​ಎಐ, ನೆಸ್ಲೆ ಇಂಡಿಯಾ ಮತ್ತು ಹಿಂದೂಸ್ತಾನ್ ಯೂನಿಲಿವರ್‌ಗೆ ಶೋಕಾಸ್ ನೋಟಿಸ್ ನೀಡಿದೆ.

ಆಹಾರ ಉತ್ಪನ್ನಗಳ ಪ್ಯಾಕೆಟ್‌ಗಳು ಮತ್ತು ಆನ್‌ಲೈನ್ ಜಾಹೀರಾತುಗಳಲ್ಲಿ ನೀಡುವ ಆರೋಗ್ಯದ ಭರವಸೆಗಳ ಬಗ್ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಪರಿಶೀಲನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ನೆಸ್ಲೆ ಇಂಡಿಯಾ ಮತ್ತು ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL) ಕಂಪನಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಹಾರ್ಲಿಕ್ಸ್‌ನ ಕೆಲವು ಪೌಷ್ಟಿಕ ಪಾನೀಯಗಳು, ನೆಸ್ಕೆಫೆಯ ರೆಡಿ-ಟು-ಡ್ರಿಂಕ್ ಕಾಫಿ ಉತ್ಪನ್ನಗಳು ಹಾಗೂ ನೆಸ್ಲೆಯ ವೈದ್ಯಕೀಯ ಆಹಾರ ಉತ್ಪನ್ನಗಳ ಲೇಬಲ್ ಮತ್ತು ಜಾಹೀರಾತುಗಳ ಬಗ್ಗೆ ಪ್ರಾಧಿಕಾರ ಆಕ್ಷೇಪ ವ್ಯಕ್ತಪಡಿಸಿದೆ. ಶೋಕಾಸ್ ನೋಟಿಸ್ ಎಂದರೆ ಏನು? ನಿಯಮ ಉಲ್ಲಂಘನೆ ನಡೆದಿದೆ ಎಂಬ ಅನುಮಾನವಿದ್ದಾಗ, ಸಂಬಂಧಪಟ್ಟ ಸಂಸ್ಥೆಯಿಂದ ಅದರ ಬಗ್ಗೆ ಅಧಿಕೃತ ವಿವರಣೆ ಮತ್ತು ದಾಖಲೆಗಳನ್ನು ಕೇಳುವುದು. ಇದು ಅಂತಿಮ ಶಿಕ್ಷೆಯಲ್ಲ, ಕಂಪನಿಗಳ ಉತ್ತರ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

ಇದನ್ನೂ ಓದಿ: ದೊಡ್ಲ ಡೇರಿಯ ಫುಲ್ ಕ್ರೀಮ್ ಹಾಲಿನಲ್ಲಿ ಡಿಟರ್ಜೆಂಟ್, ಕಾಸ್ಟಿಕ್ ಸೋಡಾ ಪತ್ತೆ: ಕಾನೂನು ಕ್ರಮಕ್ಕೆ ಸೂಚನೆ

ಹಾರ್ಲಿಕ್ಸ್: ‘ಸಕ್ಕರೆ ಸೇರಿಸಿಲ್ಲ’ ಎಂಬ ವಿಚಾರದ ಬಗ್ಗೆ ಆಕ್ಷೇಪ

ಎಚ್​ಯುಎಲ್​ಗೆ ಸೇರಿದ ಹಾರ್ಲಿಕ್ಸ್ ವುಮೆನ್ಸ್ ಪ್ಲಸ್ ಚಾಕೊಲೇಟ್ ಉತ್ಪನ್ನದಲ್ಲಿ ಮಾಲ್ಟೋಡೆಕ್ಸ್ಟ್ರಿನ್ ಎಂಬ ಕಾರ್ಬೋಹೈಡ್ರೇಟ್ ಅಂಶವಿದೆ. ಆದರೂ ಪ್ಯಾಕೆಟ್ ಮೇಲೆ ‘ಸಕ್ಕರೆ ಸೇರಿಸಿಲ್ಲ’ ಎಂದು ಹೇಳಿರುವುದಕ್ಕೆ FSSAI ಆಕ್ಷೇಪಿಸಿದೆ. ಇದರ ಜೊತೆಗೆ, ಹಾರ್ಲಿಕ್ಸ್ ಉತ್ಪನ್ನಗಳು ಆರು ತಿಂಗಳಲ್ಲಿ ಮೂಳೆಗಳ ಬಲ ಹೆಚ್ಚಿಸುತ್ತವೆ, ಸ್ನಾಯುಗಳನ್ನು ಆರೋಗ್ಯಕರವಾಗಿಡುತ್ತವೆ ಎಂಬಂತಹ ಹೇಳಿಕೆಗಳಿಗೆ ಸೂಕ್ತ ಆಧಾರವಿದೆಯೇ ಎಂಬುದನ್ನೂ ಪ್ರಾಧಿಕಾರ ಪ್ರಶ್ನಿಸಿದೆ. ಹಾರ್ಲಿಕ್ಸ್ ಮದರ್ಸ್ ಪ್ಲಸ್ ಉತ್ಪನ್ನದ ಮೇಲೆ ‘ಮಗುವಿನ ಆರೋಗ್ಯಕರ ತೂಕಕ್ಕಾಗಿ’ ಎಂಬ ಹೇಳಿಕೆಯ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ಇಂತಹ ಹೇಳಿಕೆಗಳು ಆಹಾರ ಜಾಹೀರಾತುಗಳಿಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಬೇಕು ಎಂದು FSSAI ತಿಳಿಸಿದೆ.

ನೆಸ್ಕೆಫೆ: ಪ್ಯಾಕೆಟ್ ಮತ್ತು ಆನ್‌ಲೈನ್ ವಿವರಣೆಯಲ್ಲಿ ವ್ಯತ್ಯಾಸ

ನೆಸ್ಲೆ ಇಂಡಿಯಾದ ನೆಸ್ಕೆಫೆ ಇಂಟೆನ್ಸ್ ಕೆಫೆ, ಚೊಕೊ ಮೋಚಾ ಮತ್ತು ಚಿಲ್ಡ್ ಲ್ಯಾಟೆ ಉತ್ಪನ್ನಗಳ ಲೇಬಲ್‌ಗಳಲ್ಲಿನ ಮಾಹಿತಿ ಬಗ್ಗೆ ಪ್ರಾಧಿಕಾರ ಪ್ರಶ್ನೆ ಎತ್ತಿದೆ. ಉತ್ಪನ್ನಗಳ ಪ್ಯಾಕೆಟ್ ಮುಂಭಾಗದಲ್ಲಿ ‘ಫ್ಲೇವರ್ಡ್ ಮಿಲ್ಕ್’ ಎಂದು ನಮೂದಿಸಿದ್ದರೆ, ಹಿಂಭಾಗದಲ್ಲಿ ‘ಡೈರಿ ಆಧಾರಿತ ಪಾನೀಯ’ ಎಂದು ವಿವರಿಸಲಾಗಿದೆ. ಇ-ಕಾಮರ್ಸ್ ತಾಣಗಳಲ್ಲಿಯೂ ಇವುಗಳನ್ನು ಕಾಫಿ ಫ್ಲೇವರ್ಡ್ ಹಾಲು ಎಂದು ಪ್ರಚಾರ ಮಾಡಲಾಗುತ್ತಿದೆ ಎಂಬುದು ಆಕ್ಷೇಪ. ಈ ಉತ್ಪನ್ನಗಳನ್ನು ತಯಾರಿಸುವ ಶ್ರೈಬರ್ ಡೈನಾಮಿಕ್ಸ್ ಡೈರೀಸ್ ಮತ್ತು ಲೋಟಸ್ ಡೈರಿ ಪ್ರಾಡಕ್ಟ್ಸ್ ಸಂಸ್ಥೆಗಳಿಗೂ ವಿವರಣೆ ಕೇಳಲಾಗಿದೆ.

ಮೂತ್ರಪಿಂಡ ಕಾಯಿಲೆಯ ರೋಗಿಗಳಿಗೆ ಬಳಸುವ ಪೌಡರ್‌ಗೂ ನೋಟಿಸ್

ನೆಸ್ಲೆಯ ‘ರಿಸೋರ್ಸ್ ರೆನಲ್ ವೆನಿಲ್ಲಾ’ ಪೌಡರ್ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಇರುವವರಿಗೆ ವಿಶೇಷ ಆಹಾರವಾಗಿ ಬಳಸಲಾಗುತ್ತದೆ. ಇದು ವಿಶೇಷ ವೈದ್ಯಕೀಯ ಉದ್ದೇಶಗಳ ಆಹಾರ ನಿಯಮಗಳ ವ್ಯಾಪ್ತಿಗೆ ಬರುತ್ತದೆ. ಇಂತಹ ಉತ್ಪನ್ನಕ್ಕೆ ಅಗತ್ಯವಾದ ಪೂರ್ವಾನುಮತಿ ಪಡೆದಿರುವ ಬಗ್ಗೆ ಹಾಗೂ ಪ್ಯಾಕೆಟ್ ಮೇಲಿನ ಸಸ್ಯಾಹಾರಿ ಅಥವಾ ಮಾಂಸಾಹಾರಿ ಗುರುತಿನ ಚಿಹ್ನೆಗಳ ಬಗ್ಗೆ FSSAI ಸ್ಪಷ್ಟನೆ ಕೇಳಿದೆ.

ಇ-ಕಾಮರ್ಸ್ ತಾಣಗಳಿಗೂ ಸೂಚನೆ

ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಬ್ಲಿಂಕಿಟ್‌ನಂತಹ ಆನ್‌ಲೈನ್ ಮಾರಾಟ ತಾಣಗಳಲ್ಲಿ ಉತ್ಪನ್ನಗಳ ವಿವರಣೆ ಮತ್ತು ಜಾಹೀರಾತುಗಳು ಸರಿಯಾಗಿವೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ತಪ್ಪು ಅಥವಾ ನಿಯಮಗಳಿಗೆ ವಿರುದ್ಧವಾದ ಹೇಳಿಕೆಗಳಿದ್ದರೆ ಅವುಗಳನ್ನು ಸರಿಪಡಿಸುವಂತೆ ಸೂಚಿಸಲಾಗಿದೆ. ಕಂಪನಿಗಳು ನಿಗದಿತ ಅವಧಿಯಲ್ಲಿ ದಾಖಲೆಗಳೊಂದಿಗೆ ಉತ್ತರ ನೀಡಬೇಕಿದೆ. ಉತ್ತರ ಸಮರ್ಪಕವಾಗಿಲ್ಲದಿದ್ದರೆ ನಿಯಮಾನುಸಾರ ದಂಡ ಅಥವಾ ಇತರ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

‘ಹೆಲ್ತ್ ಡ್ರಿಂಕ್’ ಹೆಸರಿನ ಬಳಕೆಯೂ ಚರ್ಚೆಯಲ್ಲಿದೆ

ಕಳೆದ ವರ್ಷ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ತಾಣಗಳಲ್ಲಿ ಬೋರ್ನ್‌ವಿಟಾ ಮತ್ತು ಹಾರ್ಲಿಕ್ಸ್‌ನಂತಹ ಮಾಲ್ಟ್ ಆಧಾರಿತ ಪಾನೀಯಗಳನ್ನು ‘ಹೆಲ್ತ್ ಡ್ರಿಂಕ್’ ವಿಭಾಗದಲ್ಲಿ ಪಟ್ಟಿ ಮಾಡದಂತೆ ಸೂಚಿಸಿತ್ತು. ಆಹಾರ ಉತ್ಪನ್ನಗಳ ವರ್ಗೀಕರಣ ಮತ್ತು ಅವುಗಳ ಆರೋಗ್ಯದ ಕುರಿತ ಹೇಳಿಕೆಗಳು ಗ್ರಾಹಕರಿಗೆ ಸ್ಪಷ್ಟವಾಗಿರಬೇಕು ಎಂಬುದು ಇದರ ಉದ್ದೇಶ.

ಗ್ರಾಹಕರು ಏನು ಗಮನಿಸಬೇಕು?

– ಪ್ಯಾಕೆಟ್ ಮೇಲೆ ‘ಸಕ್ಕರೆ ಸೇರಿಸಿಲ್ಲ’ ಎಂದು ಬರೆದಿದ್ದರೂ, ಪೌಷ್ಟಿಕಾಂಶಗಳ ಪಟ್ಟಿಯನ್ನು ಪರಿಶೀಲಿಸಿ. – ಉತ್ಪನ್ನವು ಮೂಳೆ ಬಲ, ಸ್ನಾಯುಗಳ ಆರೋಗ್ಯ ಅಥವಾ ಇತರ ವೈದ್ಯಕೀಯ ಪ್ರಯೋಜನಗಳನ್ನು ನೀಡುತ್ತದೆ ಎಂಬ ಹೇಳಿಕೆಗಳನ್ನು ಮಾತ್ರ ನಂಬಿ ನಿರ್ಧಾರ ಮಾಡಬೇಡಿ. – ಮಧುಮೇಹ ಅಥವಾ ಮೂತ್ರಪಿಂಡದ ಕಾಯಿಲೆಯಂತಹ ಸಮಸ್ಯೆಗಳಿದ್ದರೆ, ಆಹಾರ ಉತ್ಪನ್ನ ಆಯ್ಕೆ ಮಾಡುವ ಮೊದಲು ವೈದ್ಯರು ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆಯಿರಿ.

ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ಸೂಚನೆ: ಅಮೆಜಾನ್, ಫ್ಲಿಪ್‌ಕಾರ್ಟ್, ಬ್ಲಿಂಕಿಟ್ ಸೇರಿದಂತೆ ಪ್ರಮುಖ ಇ-ಕಾಮರ್ಸ್ ಸಂಸ್ಥೆಗಳು ತಮ್ಮ ಸೈಟ್‌ಗಳಲ್ಲಿ ಇಂತಹ ಅಸಮರ್ಪಕ ಹಕ್ಕುಗಳುಳ್ಳ ವಿವರಣೆಗಳನ್ನು ತಕ್ಷಣವೇ ಸರಿಪಡಿಸುವಂತೆ ಆಹಾರ ಸುರಕ್ಷತಾ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.

‘ಆರೋಗ್ಯ ಪಾನೀಯ’ ಹಣೆಪಟ್ಟಿ ತೆಗೆದುಹಾಕಿದ್ದ ಕೇಂದ್ರ: ಕಳೆದ ವರ್ಷವಷ್ಟೇ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ನಿಯಮಗಳನ್ನು ಕಟ್ಟುನಿಟ್ಟಾಗಿಸಿ, ಬೋರ್ನ್‌ವಿಟಾ, ಹಾರ್ಲಿಕ್ಸ್ ಸೇರಿದಂತೆ ಯಾವುದೇ ಮಾಲ್ಟ್ ಆಧಾರಿತ ಪಾನೀಯಗಳನ್ನು ಇ-ಕಾಮರ್ಸ್ ಸೈಟ್‌ಗಳಲ್ಲಿ ‘ಹೆಲ್ತ್ ಡ್ರಿಂಕ್ಸ್’ಎಂಬ ವರ್ಗದಡಿ ಪಟ್ಟಿ ಮಾಡಬಾರದು ಎಂದು ನಿರ್ದೇಶನ ನೀಡಿತ್ತು.

ಅನೇಕ ಆಹಾರ ಕಂಪನಿಗಳು ‘ಸಕ್ಕರೆ ಮುಕ್ತ’ಎಂದು ಲೇಬಲ್ ಹಾಕಿ ಮಾಲ್ಟೋಡೆಕ್ಸ್ಟ್ರಿನ್ ಅನ್ನು ಸೇರಿಸುತ್ತವೆ. ಇದರ ಗ್ಲೈಸೆಮಿಕ್ ಇಂಡೆಕ್ಸ್  ಸಾಮಾನ್ಯ ಸಕ್ಕರೆಗಿಂತಲೂ ಹೆಚ್ಚಿದ್ದು, ಮಧುಮೇಹಿಗಳು ಮತ್ತು ರಕ್ತದೊತ್ತಡ ಇರುವವರ ದೇಹದಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ವೇಗವಾಗಿ ಹೆಚ್ಚಿಸುತ್ತದೆ ಎಂದು ಪೌಷ್ಟಿಕತಜ್ಞರು ಎಚ್ಚರಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
ನಮಗೆ ತಮಿಳುನಾಡು ಅನುಮತಿ ಬೇಡ, ಸಹಕಾರ ಬೇಕಷ್ಟೇ: ವಿಜಯ್​ಗೆ ಡಿಕೆಶಿ ಕೌಂಟರ್
ನಮಗೆ ತಮಿಳುನಾಡು ಅನುಮತಿ ಬೇಡ, ಸಹಕಾರ ಬೇಕಷ್ಟೇ: ವಿಜಯ್​ಗೆ ಡಿಕೆಶಿ ಕೌಂಟರ್
ಹೆಚ್​​ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ
ಹೆಚ್​​ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಹಾಸನಾಂಬೆ ದರ್ಶನ ಪಡೆದ ಹೆಚ್​ಡಿಕೆ ದಂಪತಿ
ಹಾಸನಾಂಬೆ ದರ್ಶನ ಪಡೆದ ಹೆಚ್​ಡಿಕೆ ದಂಪತಿ
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ