AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೂತನ ಸಿಡಿಎಸ್ ಆಗಿ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅಧಿಕಾರ; ಸಶಸ್ತ್ರ ಪಡೆಗಳ ಬಲವರ್ಧನೆಗೆ ಆಲೋಚನೆ

General N.S. Raja Subramani is the new Chief of Defence Staff: ಭಾರತೀಯ ಸಶಸ್ತ್ರ ಪಡೆಗಳ ಅತ್ಯುನ್ನತ ಹಾಗೂ ಅತ್ಯಂತ ಪ್ರಮುಖ ಹುದ್ದೆಯಾದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (Chief of Defence Staff - CDS) ಆಗಿ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ (Gen N.S. Raja Subramani) ಅವರು ಇಂದು ಮೇ 31ರಂದು ಅಧಿಕಾರ ಸ್ವೀಕರಿಸಿದ್ದಾರೆ. ದೇಶದ ರಕ್ಷಣಾ ರಂಗದಲ್ಲಿ ಹೊಸ ಆಧ್ಯಾಯ ಬರೆದಿರುವ ಅವರ ನೇಮಕಾತಿ ಮತ್ತು ಸಶಸ್ತ್ರ ಪಡೆಗಳ ಕುರಿತಾದ ಅವರ ದೃಷ್ಟಿಕೋನ ಮತ್ತು ವಿಚಾರಗಳ ಕುರಿತು ಮಾಹಿತಿ ಇಲ್ಲಿದೆ.

ನೂತನ ಸಿಡಿಎಸ್ ಆಗಿ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅಧಿಕಾರ; ಸಶಸ್ತ್ರ ಪಡೆಗಳ ಬಲವರ್ಧನೆಗೆ ಆಲೋಚನೆ
ಜನರಲ್ ರಾಜಾ ಸುಬ್ರಮಣಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 31, 2026 | 6:19 PM

Share

ನವದೆಹಲಿ, ಮೇ 31: ಜನರಲ್ ಅನಿಲ್ ಚೌಹಾಣ್ ಅವರ ನಿವೃತ್ತಿಯ ನಂತರ ತೆರವಾಗಿದ್ದ ಸಿಡಿಎಸ್ ಸ್ಥಾನಕ್ಕೆ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರನ್ನು ತರಲಾಗಿದೆ. ದೇಶದ ನೂತನ ಮತ್ತು ಮೂರನೆ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಆಗಿ ರಾಜಾ ಸುಬ್ರಮಣಿ (General NS Raja Subramani) ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಇಂದು ಭಾನುವಾರ ರಾಷ್ಟ್ರರಾಜಧಾನಿ ನಗರಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಅವರು ಅಧಿಕಾರ ಸೂತ್ರಗಳನ್ನು ಕೈಗೆತ್ತಿಕೊಂಡರು. ಇದಕ್ಕೂ ಮುನ್ನ ಅವರು ಭಾರತೀಯ ಭೂಸೇನೆಯ ಉಪ ಮುಖ್ಯಸ್ಥರಾಗಿ (Vice Chief of Army Staff) ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಸಿಡಿಎಸ್ ಹುದ್ದೆ ಭಾರತದ ಸೇನಾ ವ್ಯವಸ್ಥೆಯಲ್ಲಿ ಅತ್ಯುಚ್ಚ ಮತ್ತು ಅತ್ಯಂತ ಮಹತ್ತರವಾದುದು. ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳ ನಡುವೆ ಸಮನ್ವಯ ತರುವ ಜವಾಬ್ದಾರಿ ಸಿಡಿಎಸ್​ಗೆ ಇರುತ್ತದೆ. ಆರೇಳು ವರ್ಷದ ಹಿಂದಷ್ಟೇ ಭಾರತೀಯ ಸೇನೆಯಲ್ಲಿ ಸಿಡಿಎಸ್ ಹುದ್ದೆ ಸೃಷ್ಟಿಯಾಗಿದ್ದು. ಹಿಂದಿನ ಸಿಡಿಎಸ್ ಅನಿಲ್ ಚೌಹಾಣ್​ಗಿಂತ ಮೊದಲು ಜನರಲ್ ಬಿಪಿನ್ ರಾವತ್ ಆ ಸ್ಥಾನ ಅಲಂಕರಿಸಿದ್ದರು.

ಇದೀಗ ಈ ಮಹತ್ತರ ಸ್ಥಾನದ ಅಧಿಕಾರ ವಹಿಸಿಕೊಂಡ ತಕ್ಷಣ ಸಶಸ್ತ್ರ ಪಡೆಗಳ ಆಧುನೀಕರಣ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸುವ ಕುರಿತು ಜನರಲ್ ರಾಜಾ ಸುಬ್ರಮಣಿ ಅವರು ತಮ್ಮ ಪ್ರಮುಖ ಆದ್ಯತೆಗಳನ್ನು ಹಂಚಿಕೊಂಡಿದ್ದಾರೆ. ಥಿಯೇಟರ್ ಕಮಾಂಡ್​ಗಳ ಸ್ಥಾಪನೆ, ಆತ್ಮನಿರ್ಭರತೆ ಮತ್ತು ಆಧುನೀಕರಣ, ಹಾಗೂ ತಂತ್ರಜ್ಞಾನ ಆಧಾರಿತ ರಕ್ಷಣೆ, ಈ ಮೂರು ಪ್ರಮುಖ ಆದ್ಯತೆಗಳ ಬಗ್ಗೆ ಅವರು ವಿಚಾರ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅಭಿಷೇಕ್ ಬ್ಯಾನರ್ಜಿ ಹಲ್ಲೆ ಪ್ರಕರಣದಲ್ಲಿ ಟ್ವಿಸ್ಟ್; ಬಂಧಿತ ಆರೋಪಿಗಳಿಗೆ ಮಾಜಿ ಶಾಸಕಿ ಲವ್ಲಿ ಮೈತ್ರಾರೊಂದಿಗೆ ನಿಕಟ ಸಂಪರ್ಕ

ನೂತನ ಸಿಡಿಎಸ್​ಗೆ ಮೂರು ಆದ್ಯತೆಗಳು

ಭಾರತೀಯ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಗಳನ್ನು ಒಟ್ಟುಗೂಡಿಸಿ ಜಂಟಿ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವ ‘ಥಿಯೇಟರ್ ಕಮಾಂಡ್’ (Theaterisation) ಪ್ರಕ್ರಿಯೆಯನ್ನು ವೇಗಗೊಳಿಸುವುದು ಇವರ ಮೊದಲ ಆದ್ಯತೆಯಾಗಿದೆ. ಮೂರೂ ಪಡೆಗಳ ನಡುವೆ ಹೆಚ್ಚಿನ ಸಮನ್ವಯ ತರುವುದು ಇದರ ಮುಖ್ಯ ಉದ್ದೇಶವಾಗಿದೆ.

ರಕ್ಷಣಾ ವಲಯದಲ್ಲಿ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಿ, ಭಾರತದಲ್ಲೇ ತಯಾರಾಗುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನಗಳನ್ನು (Make in India) ಸಶಸ್ತ್ರ ಪಡೆಗಳಿಗೆ ಅಳವಡಿಸಲು ಅವರು ಒತ್ತು ನೀಡಲಿದ್ದಾರೆ.

ಕೃತಕ ಬುದ್ಧಿಮತ್ತೆ (AI), ಸೈಬರ್ ಯುದ್ಧ ತಂತ್ರಗಳು ಮತ್ತು ಬಾಹ್ಯಾಕಾಶ ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸುವ ಮೂಲಕ ಭಾರತೀಯ ಸೇನೆಯನ್ನು ಭವಿಷ್ಯದ ಯುದ್ಧಗಳಿಗೆ ಸಜ್ಜುಗೊಳಿಸುವುದು ಇವರ ಪ್ರಮುಖ ಗುರಿಯಾಗಿದೆ.

ಇದನ್ನೂ ಓದಿ: ಪೆಟ್ರೋಲ್, ಡೀಸಲ್ ಮೇಲಿನ ರಫ್ತು ಸುಂಕ ತಗ್ಗಿಸಿದ ಸರ್ಕಾರ; ಇಂಧನ ಬೆಲೆ ಕಡಿಮೆಗೊಳ್ಳುತ್ತಾ?

ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರ ಹಿನ್ನೆಲೆ

ಜನರಲ್ ರಾಜಾ ಸುಬ್ರಮಣಿ ಅವರು ಭಾರತೀಯ ಸೇನೆಯಲ್ಲಿ 37 ವರ್ಷಗಳಿಗೂ ಹೆಚ್ಚು ಕಾಲ ಸುದೀರ್ಘ ಹಾಗೂ ಅತ್ಯಂತ ಗೌರವಾನ್ವಿತ ವೃತ್ತಿಜೀವನವನ್ನು ಹೊಂದಿದ್ದಾರೆ. ಅವರು ಚೀನಾ ಗಡಿಯ ಸವಾಲುಗಳನ್ನು ಒಳಗೊಂಡಿರುವ ‘ಸೆಂಟ್ರಲ್ ಕಮಾಂಡ್’ ಸೇರಿದಂತೆ ಸೇನೆಯ ಹಲವು ಆಯಕಟ್ಟಿನ ವಿಭಾಗಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಅಪಾರ ಅನುಭವ ಹೊಂದಿದ್ದಾರೆ. ಅವರ ಅತ್ಯುತ್ತಮ ಸೇವೆಗಾಗಿ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ (PVSM) ಮತ್ತು ಅತಿ ವಿಶಿಷ್ಟ ಸೇವಾ ಪದಕ (AVSM) ಸೇರಿದಂತೆ ಹಲವು ದೇಶದ ಉನ್ನತ ಮಿಲಿಟರಿ ಗೌರವಗಳನ್ನು ನೀಡಿ ಗೌರವಿಸಲಾಗಿದೆ.

ಜಾಗತಿಕ ಮಟ್ಟದಲ್ಲಿ ಮತ್ತು ಭಾರತದ ಗಡಿಗಳಲ್ಲಿ ರಕ್ಷಣಾ ಸವಾಲುಗಳು ಹೆಚ್ಚುತ್ತಿರುವ ಈ ನಿರ್ಣಾಯಕ ಸಮಯದಲ್ಲಿ, ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರ ನಾಯಕತ್ವವು ಭಾರತದ ಮೂರೂ ರಕ್ಷಣಾ ಪಡೆಗಳಿಗೆ ಹೆಚ್ಚಿನ ಶಕ್ತಿ ತುಂಬಲಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More