
ನವದೆಹಲಿ, ಸೆಪ್ಟೆಂಬರ್ 15: ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಹಾಗೂ ಜಾಗತಿಕ ಭಯೋತ್ಪಾದಕ ಮಸೂದ್ ಅಜರ್ ಬಂಧನಕ್ಕೆ ನೆರವಾಗುವ ಸುಳಿವು ನೀಡಿದವರಿಗೆ ನೀಡುವ ಬಹುಮಾನವನ್ನು 70 ಲಕ್ಷಕ್ಕೆ ಹೆಚ್ಚಿಸಿರುವ ಪಾಕಿಸ್ತಾನದ ನಿರ್ಧಾರವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಟೀಕಿಸಿದೆ. ಇದು “ಜಗತ್ತಿನ ಕಣ್ಣಿಗೆ ಮಣ್ಣೆರಚುವ ಡೋಂಗಿ ತಂತ್ರ” ಎಂದು ಭಾರತ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕಿಸ್ತಾನದಲ್ಲೇ ಆಶ್ರಯ ಪಡೆದಿರುವ ಉಗ್ರನ ವಿರುದ್ಧ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಭಾರತ ಎಚ್ಚರಿಕೆ ನೀಡಿದೆ.
ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಬಿಡುಗಡೆ ಮಾಡಿರುವ 2026ರ ಅತ್ಯಂತ ಪ್ರಭಾವಿ ಉಗ್ರರ ಪಟ್ಟಿಯಲ್ಲಿ ಅಜರ್ ಹೆಸರನ್ನು ಸೇರಿಸಲಾಗಿದ್ದು, ಆತನನ್ನು ಹಿಡಿದುಕೊಟ್ಟವರಿಗೆ ನೀಡುವ ಬಹುಮಾನವನ್ನು 20 ಲಕ್ಷ ಪಿಕೆಆರ್‌ನಿಂದ 70 ಲಕ್ಷ ಪಿಕೆಆರ್ ಗೆ ಏರಿಸಲಾಗಿದೆ.
ಇಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಜನರನ್ನು ವಂಚಿಸುವ ಮತ್ತು ಕಣ್ಣಿಗೆ ಮಣ್ಣೆರಚುವ ಪಾಕಿಸ್ತಾನದ ಇಂತಹ ನಾಟಕಗಳು ಹೊಸದೇನಲ್ಲ. ಭಯೋತ್ಪಾದನೆಯನ್ನು ಪೋಷಿಸುವ ರಾಷ್ಟ್ರವೊಂದು ಮಾಡುವ ಇಂತಹ ಪ್ರಕಟಣೆಗಳು ಎಷ್ಟು ಸುಳ್ಳು ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಪಾಕಿಸ್ತಾನವು ಯಾವುದೇ ಪ್ರಯೋಜನವಿಲ್ಲದ ಇಂತಹ ಗಿಮಿಕ್‌ಗಳನ್ನು ಮಾಡುವ ಬದಲು ನಿಜವಾದ ಕ್ರಮ ಕೈಗೊಳ್ಳಲಿ” ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ದೆಹಲಿ ಸಂಸತ್ ದಾಳಿ, ಮುಂಬೈ ದಾಳಿ ಹಿಂದೆ ಮಸೂದ್ ಅಜರ್ ಕೈವಾಡ ಬಯಲು; ಪಾಕಿಸ್ತಾನಕ್ಕೆ ಮುಖಭಂಗ
ಅಕ್ಟೋಬರ್‌ನಲ್ಲಿ ಆರ್ಥಿಕ ಅಪರಾಧ ತಡೆ ಸಂಸ್ಥೆಯಾದ ‘ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್’ (FATF) ಪ್ಲೀನರಿ ಸಭೆ ನಡೆಯಲಿದೆ. ಮತ್ತೆ ‘ಗ್ರೇ ಲಿಸ್ಟ್’ಗೆ ಸೇರ್ಪಡೆಯಾಗುವುದರಿಂದ ತಪ್ಪಿಸಿಕೊಳ್ಳಲು ಹಾಗೂ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದಾಗಿ ಬಿಂಬಿಸಿಕೊಳ್ಳಲು ಪಾಕಿಸ್ತಾನ ಈ ತಂತ್ರ ಹೂಡಿದೆ ಎಂದು ಭಾರತ ಆರೋಪಿಸಿದೆ.
#WATCH | Delhi | On Pakistan announcing a reward of PKR 70 lakh on Jaish-e-Mohammed (JeM) chief Masood Azhar, MEA Official Spokesperson Randhir Jaiswal says, “Such gimmicks and attempts at hoodwinking people by Pakistan are nothing new. We have seen similar gimmicks in the past… pic.twitter.com/DgmYcYaPk1
— ANI (@ANI) September 15, 2026
ಆಪರೇಷನ್ ಸಿಂಧೂರ್ ದಾಳಿಯಲ್ಲಿ ಏನಾಯ್ತು?:
ಭಾರತೀಯ ಸಶಸ್ತ್ರ ಪಡೆಗಳು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಡಿ ಪಾಕಿಸ್ತಾನದ ಬಹಾವುಲ್‌ಪುರದಲ್ಲಿದ್ದ ಜೈಷ್-ಎ-ಮೊಹಮ್ಮದ್ ಸಂಸ್ಥೆಯ ಪ್ರಮುಖ ಕೇಂದ್ರ ‘ಮರ್ಕಜ್ ಸುಭಾನಲ್ಲಾ’ವನ್ನು ಧ್ವಂಸಗೊಳಿಸಿದ್ದವು. 2015ರಿಂದ ಸಕ್ರಿಯವಾಗಿದ್ದ ಈ ಶಿಬಿರವು ಪುಲ್ವಾಮಾ ದಾಳಿಯ ಸಂಚು ರೂಪಿಸಿದ ಕೇಂದ್ರವಾಗಿತ್ತು. ಮಸೂದ್ ಅಜರ್ ಕುಟುಂಬದ ಸದಸ್ಯರು ಕೂಡ ಇಲ್ಲೇ ಉಳಿದುಕೊಂಡಿದ್ದರು.
ಇದನ್ನೂ ಓದಿ: ಜಾಗತಿಕ ಸಮುದಾಯವನ್ನು ಮತ್ತೊಮ್ಮೆ ದಾರಿತಪ್ಪಿಸಲು ಪಾಕಿಸ್ತಾನ ಯತ್ನ: ಉಗ್ರ ಮಸೂದ್ ಅಜರ್ ತಲೆಗೆ 70 ಲಕ್ಷ ಬಹುಮಾನ ಘೋಷಣೆ
ಮಸೂದ್ ಅಜರ್ ಯಾರು?:
ಮಸೂದ್ ಅಜರ್ ಭಾರತಕ್ಕೆ ಅತ್ಯಂತ ಅಗತ್ಯವಿರುವ ಪ್ರಮುಖ ಅಪರಾಧಿಯಾಗಿದ್ದು, 2001ರ ಭಾರತೀಯ ಸಂಸತ್ ದಾಳಿ, 2008ರ ಮುಂಬೈ ದಾಳಿ, 2016ರ ಪಠಾಣ್ಕೋಟ್ ವಾಯುನೆಲೆ ದಾಳಿ ಮತ್ತು 40 ಸಿಆರ್‌ಪಿಎಫ್ ಯೋಧರನ್ನು ಬಲಿಪಡೆದ 2019ರ ಪುಲ್ವಾಮಾ ದಾಳಿಯ ಮಾಸ್ಟರ್ಮೈಂಡ್ ಆಗಿದ್ದಾನೆ. 1999ರಲ್ಲಿ ಇಂಡಿಯನ್ ಏರ್‌ಲೈನ್ಸ್‌ನ ‘IC-814’ ವಿಮಾನವನ್ನು ಉಗ್ರರು ಅಪಹರಿಸಿದ್ದಾಗ, ಪ್ರಯಾಣಿಕರ ಪ್ರಾಣ ರಕ್ಷಣೆಗಾಗಿ ಭಾರತ ಸರ್ಕಾರವು ಮಸೂದ್ ಅಜರ್ನನ್ನು ಜೈಲಿನಿಂದ ಬಿಡುಗಡೆ ಮಾಡಬೇಕಾಯಿತು. ನಂತರ ಈತ ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿದ್ದಾನೆ. 2021ರಿಂದ ಈತ ಆಫ್ಘಾನಿಸ್ತಾನಕ್ಕೆ ಪರಾರಿಯಾಗಿದ್ದಾನೆ ಎಂದು ಪಾಕಿಸ್ತಾನ ವಾದಿಸುತ್ತಿದ್ದರೂ, ಈತ ಪಾಕಿಸ್ತಾನದಲ್ಲೇ ಅಡಗಿದ್ದಾನೆ ಎಂಬುದು ಭಾರತದ ಸ್ಪಷ್ಟ ನಿಲುವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ