ಗುರುಗ್ರಾಮ ಹಿಟ್ ಆ್ಯಂಡ್ ರನ್ ಪ್ರಕರಣ; ಮೂತ್ರ ಮಾಡಬೇಕೆಂದು ಹೇಳಿ ಪರಾರಿಯಾಗಲು ಯತ್ನಿಸಿದ ಆರೋಪಿ!
ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಮಹಿಳಾ ಬೈಕರ್‌ಗೆ ಉದ್ದೇಶಪೂರ್ವಕವಾಗಿ ಕಾರು ಡಿಕ್ಕಿ ಹೊಡೆಸಿದ ಭೀಕರ ಹಿಟ್ ಆ್ಯಂಡ್ ರನ್ ಪ್ರಕರಣದ ಪ್ರಮುಖ ಆರೋಪಿ ಕಲ್ಯಾಣ್ ಬೈನ್ಸ್ಲಾ ರಾಜಸ್ಥಾನದಲ್ಲಿ ಪೋಲಿಸ್ ಕಸ್ಟಡಿಯಲ್ಲಿದ್ದಾಗ ಮೂತ್ರ ವಿಸರ್ಜನೆಯ ನೆಪ ಹೇಳಿ ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ. ಆರೋಪಿಯು ಪೊಲೀಸರ ಕಣ್ಣು ತಪ್ಪಿಸಿ ಓಡಿಹೋಗುವ ಯತ್ನದಲ್ಲಿ ಜಾರಿ ಬಿದ್ದು ಸಣ್ಣಪುಟ್ಟ ಗಾಯ ಮಾಡಿಕೊಂಡಿದ್ದು, ಪೊಲೀಸರು ಆತನನ್ನು ತಕ್ಷಣವೇ ಮತ್ತೆ ವಶಕ್ಕೆ ಪಡೆದು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಹರಿಯಾಣದ ಪಲ್ವಾಲ್ ನಿವಾಸಿಯಾದ ಆರೋಪಿ ಕಲ್ಯಾಣ್ ಬೈನ್ಸ್ಲಾನನ್ನು ಗುರುಗ್ರಾಮ್ ಕ್ರೈಮ್ ಬ್ರಾಂಚ್ ತಂಡವು ರಾಜಸ್ಥಾನದ ದೌಸಾ ಮತ್ತು ರಾಜ್‌ಗಢ ನಡುವೆ ಬಂಧಿಸಿ ಕರೆತರುತ್ತಿತ್ತು. ಈ ವೇಳೆ ಆತ ಮೂತ್ರ ವಿಸರ್ಜನೆಗೆ ಅನುಮತಿ ಕೋರಿ, ವಾಹನದಿಂದ ಇಳಿಯುತ್ತಿದ್ದಂತೆ ಓಡಲು ಯತ್ನಿಸಿದ್ದಾನೆ. ಆದರೆ, ಪೋಲಿಸ್ ತಂಡ ತಕ್ಷಣವೇ ಆತನನ್ನು ಹಿಡಿದಿದೆ.

ಗುರುಗ್ರಾಮ, ಸೆಪ್ಟೆಂಬರ್ 15: ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಮಹಿಳಾ ಬೈಕರ್‌ಗೆ ಕಾರು ಡಿಕ್ಕಿ ಹೊಡೆಸಿದ ಪ್ರಕರಣದ ಮುಖ್ಯ ಆರೋಪಿ ಕಲ್ಯಾಣ್ ಬೈನ್ಸ್ಲಾ ಇಂದು ರಾಜಸ್ಥಾನದಲ್ಲಿ ಪೋಲಿಸ್ ವಶದಲ್ಲಿದ್ದಾಗ ಮೂತ್ರ ವಿಸರ್ಜನೆಗೆ ಹೋಗಬೇಕೆಂಬ ನೆಪ ಹೇಳಿ ಪರಾರಿಯಾಗಲು ಯತ್ನಿಸಿದ ನಾಟಕೀಯ ಘಟನೆ ನಡೆದಿದೆ. ಓಡಿಹೋಗುವ ಯತ್ನದಲ್ಲಿ ಬಿದ್ದು ಗಾಯಗೊಂಡ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ. ಆರೋಪಿಯು ಹರಿಯಾಣದ ಪಲ್ವಾಲ್ ನಿವಾಸಿಯಾಗಿದ್ದು, ಘಟನೆಗೆ ಬಳಸಲಾಗಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕಾರು ಆತನ ಸ್ನೇಹಿತನ ಹೆಸರಿನಲ್ಲಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸಂಬಂಧಿ ಹಾಗೂ ಸಹಚರ ಲವ್ನೀಶ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.
ವೈರಲ್ ವಿಡಿಯೋದಿಂದ ಸಿಕ್ಕಿಬಿದ್ದ ಆರೋಪಿ:
ಸೆಪ್ಟೆಂಬರ್ 13ರಂದು ಬೆಳಿಗ್ಗೆ ಮಹಿಳಾ ಬೈಕರ್ ಶಿವಾಣಿ ಚೌಹಾಣ್ (ಸಿಯಾ) ಅವರ ಬೈಕಿಗೆ ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಈ ಭೀಕರ ದೃಶ್ಯ ಬೈಕರ್ ಹೆಲ್ಮೆಟ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದ. ಗುರುಗ್ರಾಮದ ಕ್ರೈಮ್ ಬ್ರಾಂಚ್ ತಂಡವು ರಾಜಸ್ಥಾನದ ದೌಸಾ ಮತ್ತು ರಾಜ್‌ಗಢ ನಡುವೆ ಈತನನ್ನು ಬಂಧಿಸಿದೆ.
ಕೊಲೆ ಯತ್ನ, ಲೈಂಗಿಕ ಕಿರುಕುಳ ಪ್ರಕರಣ ದಾಖಲು:
ಆರಂಭದಲ್ಲಿ ಸಾಧಾರಣ ಪ್ರಕರಣ ದಾಖಲಿಸಿದ್ದ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಕೊಲೆ ಯತ್ನ ಸೇರಿದಂತೆ ಇತರ ಗಂಭೀರ ಸೆಕ್ಷನ್‌ಗಳನ್ನು ಸೇರಿಸಿದ್ದಾರೆ. ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಮಹಿಳಾ ಬೈಕರ್ ಸಿಯಾ, “ಕಾರಿನಲ್ಲಿದ್ದ ನಾಲ್ವರು ಆಲ್ಕೋಹಾಲ್ ಕುಡಿದಿದ್ದರು. ನನ್ನ ಪ್ರಯಾಣಕ್ಕೆ ಅಡ್ಡಿಪಡಿಸಲು ಯತ್ನಿಸಿದರು. ನಾನು ಅವರಿಂದ ದೂರ ಹೋಗಲು ಬೈಕ್ ವೇಗ ಹೆಚ್ಚಿಸಿದಾಗ, ಅದನ್ನು ಸಹಿಸದೇ ನನಗೆ ಡಿಕ್ಕಿ ಹೊಡೆದರು. ಇದು ಕೇವಲ ಅಪಘಾತವಲ್ಲ, ಉದ್ದೇಶಪೂರ್ವಕ ದಾಳಿ” ಎಂದು ಆರೋಪಿಸಿದ್ದು, ಆರೋಪಿಗಳ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣವನ್ನೂ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.
ಗುರುಗ್ರಾಮದ ರಸ್ತೆಗಳಲ್ಲಿ ಮಹಿಳೆಯರ ಮತ್ತು ಬೈಕರ್‌ಗಳ ಸುರಕ್ಷತೆಯ ಕುರಿತು ಈ ಘಟನೆ ದೊಡ್ಡ ಮಟ್ಟದ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




