ಗೋಧ್ರಾ ದುರಂತ; 2 ದಶಕಗಳ ಬಳಿಕ ಅಪರಾಧಿಗೆ ಜೀವಾವಧಿ ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

2002ರ ಗೋಧ್ರಾ ರೈಲು ದಹನ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಇರ್ಫಾನ್ ಸಿರಾಜ್ ಪಾಡಾ ಅವರ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ವೈದ್ಯಕೀಯ ಆಧಾರದ ಮೇಲೆ ರದ್ದುಗೊಳಿಸಿ, ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪಿ.ಬಿ. ವರಾಳೆ ಅವರಿದ್ದ ವಿಭಾಗೀಯ ಪೀಠವು ಅರ್ಜಿದಾರರ ಗಂಭೀರ ಅನಾರೋಗ್ಯ ಮತ್ತು ಅವರು ಈಗಾಗಲೇ ಅನುಭವಿಸಿರುವ ದೀರ್ಘಕಾಲದ ಸೆರೆವಾಸವನ್ನು ಪರಿಗಣಿಸಿ ಈ ಆದೇಶ ಹೊರಡಿಸಿದೆ.

ಗೋಧ್ರಾ ದುರಂತ; 2 ದಶಕಗಳ ಬಳಿಕ ಅಪರಾಧಿಗೆ ಜೀವಾವಧಿ ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
ಗೋಧ್ರಾ ದುರಂತ
Image Credit source: PTI

Updated on: Nov 23, 2026 | 3:33 PM

ಮುಖ್ಯಾಂಶಗಳು

  • ಗೋಧ್ರಾ ರೈಲು ದುರಂತದ ಅಪರಾಧಿಗೆ ಬಿಗ್ ರಿಲೀಫ್
  • 18 ವರ್ಷ ಜೈಲು ಶಿಕ್ಷೆ ಬಳಿಕ ಜೀವಾವಧಿ ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
  • ಅಪರಾಧಿಯ ಮಧ್ಯಂತರ ಜಾಮೀನಿಗೆ ಅನುಮತಿ

ನವದೆಹಲಿ, ನವೆಂಬರ್ 23: ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಒಂದು ಬೋಗಿಗೆ ಬೆಂಕಿ ಹಚ್ಚಿದ ಘಟನೆಯ 20ಕ್ಕೂ ಹೆಚ್ಚು ವರ್ಷಗಳ ನಂತರ ಅಪರಾಧಿ ಇರ್ಫಾನ್ ಸಿರಾಜ್ ಪಾಡಾಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಇಂದು ರದ್ದುಗೊಳಿಸಿದೆ. ವೈದ್ಯಕೀಯ ಆಧಾರದ ಮೇಲೆ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿದೆ. ಪಾಡಾ ಅವರ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರಿದ್ದ ದ್ವಿಸದಸ್ಯ ಪೀಠವು ಈ ಆದೇಶವನ್ನು ಪ್ರಕಟಿಸಿದೆ. ಗಂಭೀರ ಕಾಯಿಲೆಗಳ ಕಾರಣದಿಂದ ಮಧ್ಯಂತರ ಬಿಡುಗಡೆ ಕೋರಿ ಅವರು ಸಲ್ಲಿಸಿದ್ದ ಔಪಚಾರಿಕ ಮನವಿಯನ್ನು ನ್ಯಾಯಪೀಠ ಪರಿಗಣಿಸಿತು.

2002ರ ಫೆಬ್ರವರಿಯಲ್ಲಿ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ ಘಟನೆಯು ಗುಜರಾತ್‌ನಾದ್ಯಂತ ವ್ಯಾಪಕ ಕೋಮು ಗಲಭೆಗಳಿಗೆ ಕಾರಣವಾಗಿತ್ತು. ಸುದೀರ್ಘ ವಿಚಾರಣೆಯ ನಂತರ ಪಾಡಾ ಹಾಗೂ ಇತರ ಹಲವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಬಂಧನವಾದಾಗಿನಿಂದ ಪಾಡಾ 18 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದಾರೆ.

Loading...

ಹೃದಯ ಸಂಬಂಧಿ ಕಾಯಿಲೆ:

ಅಪರಾಧಿ ಇರ್ಫಾನ್ ಸಿರಾಜ್ ಪಾಡಾ ಅವರು ತೀವ್ರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ನಿರಂತರ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ. ಇದಲ್ಲದೆ, ಅವರು ಈಗಾಗಲೇ 18 ವರ್ಷ 3 ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಅವರ ಮುಖ್ಯ ಮೇಲ್ಮನವಿ ಅರ್ಜಿಯ ಅಂತಿಮ ವಿಚಾರಣೆ ಇನ್ನೂ ಬಾಕಿ ಇರುವುದರಿಂದ, ವೈದ್ಯಕೀಯ ಆಧಾರದ ಮೇಲೆ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು.

ಇದನ್ನೂ ಓದಿ: ನೋವಿನ ದೃಶ್ಯಗಳು, ಮೃತದೇಹಗಳನ್ನು ಕಂಡು ಕುಗ್ಗಿಹೋಗಿದ್ದೆ; ಪಾಡ್‌ಕ್ಯಾಸ್ಟ್‌ನಲ್ಲಿ ಗೋಧ್ರಾ ಗಲಭೆ ಬಗ್ಗೆ ಪ್ರಧಾನಿ ಮೋದಿ ಮಾತು

ಗುಜರಾತ್ ಸರ್ಕಾರದ ಪ್ರತಿಕ್ರಿಯೆ:

ವಿಚಾರಣೆ ವೇಳೆ ಗುಜರಾತ್ ಸರ್ಕಾರದ ಪರ ವಕೀಲರು, “ಇದೊಂದು ಅತ್ಯಂತ ಗಂಭೀರ ಸ್ವರೂಪದ ಅಪರಾಧ ಪ್ರಕರಣವಾಗಿದೆ. ಅಪರಾಧಿಯು ರೈಲು ಬೋಗಿಯ ಮೇಲೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದ್ದನು. ಆದರೂ ಅಪರಾಧಿಯು ಹೃದಯ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವುದು ವೈದ್ಯಕೀಯ ವರದಿಗಳಿಂದ ದೃಢಪಟ್ಟಿರುವ ಕಾರಣ, ಮಾನವೀಯ ಹಾಗೂ ವೈದ್ಯಕೀಯ ಆಧಾರದ ಮೇಲೆ ಶಿಕ್ಷೆ ಅಮಾನತುಗೊಳಿಸಲು ಸರ್ಕಾರವು ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದ್ದಾರೆ.

ಷರತ್ತುಬದ್ಧ ಬಿಡುಗಡೆಗೆ ಆದೇಶ:

ಅಪರಾಧಿಯ ಆರೋಗ್ಯ ಸ್ಥಿತಿಯನ್ನು ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣಾ ನ್ಯಾಯಾಲಯ ವಿಧಿಸುವ ಕಠಿಣ ಷರತ್ತುಗಳಿಗೆ ಒಳಪಟ್ಟು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸೂಚಿಸಿದೆ. ಈ ಆದೇಶವು ಪ್ರಕರಣದಿಂದ ಖುಲಾಸೆಯಲ್ಲ, ಬದಲಾಗಿ ಮಧ್ಯಂತರ ಪರಿಹಾರವನ್ನು ಮಾತ್ರ ನೀಡುತ್ತದೆ. ಶಿಕ್ಷೆಯ ವಿರುದ್ಧದ ಅವರ ಮುಖ್ಯ ಮೇಲ್ಮನವಿಯ ಅಂತಿಮ ವಿಚಾರಣೆ ಬಾಕಿ ಇರುವವರೆಗೆ, ವಿಚಾರಣಾ ನ್ಯಾಯಾಲಯವು ವಿಧಿಸುವ ಕಠಿಣ ಷರತ್ತುಗಳಿಗೆ ಒಳಪಟ್ಟು ಪಾಡಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: ಸೋನಿಯಾ ಗಾಂಧಿ ಪುಸ್ತಕದಲ್ಲಿ ಗೋಧ್ರಾ ಪ್ರಕರಣ ವಿವಾದಿತವೆಂದು ಉಲ್ಲೇಖ: ಸತ್ಯ ಸಾಭೀತಾಗಿದೆ ಎಂದ ಮಾಜಿ ಸಿಬಿಐ ಅಧಿಕಾರಿ!

ಏನಿದು ಗೋಧ್ರಾ ದುರಂತ?:

2002ರ ಫೆಬ್ರವರಿ 27ರಂದು ಗುಜರಾತ್‌ನ ಗೋಧ್ರಾ ನಿಲ್ದಾಣದ ಬಳಿ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ ದುರ್ಘಟನೆಯಲ್ಲಿ 59 ಮಂದಿ ಸಜೀವ ದಹನವಾಗಿದ್ದರು. ಈ ಪ್ರಕರಣದಲ್ಲಿ 2017ರಲ್ಲಿ ಗುಜರಾತ್ ಹೈಕೋರ್ಟ್ 11 ಮಂದಿಯ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು ಮತ್ತು 20 ಮಂದಿಯ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಅಪರಾಧಿಗಳು ಸಲ್ಲಿಸಿರುವ ಮೇಲ್ಮನವಿಗಳು 2018ರಿಂದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

 

 

 

Published On - 3:27 pm, Mon, 23 November 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us