ಲೋಕಸಭೆಯ ಫೈಲ್ ಚಿತ್ರ
Image Credit source: PTI
ನವದೆಹಲಿ, ಜುಲೈ 26: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ ನಡೆದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಸರ್ಕಾರ ಕಠಿಣ ಕಾನೂನು ರೂಪಿಸಲು ಮುಂದಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಕೇಂದ್ರ ಸರ್ಕಾರ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ಮಾರ್ಗಗಳ ತಡೆ) ತಿದ್ದುಪಡಿ ವಿಧೇಯಕ-2026’ (Public Examinations Amendment Bill, 2026) ಅನ್ನು ಲೋಕಸಭೆಯಲ್ಲಿ ಸೋಮವಾರ ಮಂಡಿಸಲು ನಿರ್ಧರಿಸಿದೆ.
ಕೇಂದ್ರ ಸಿಬ್ಬಂದಿ, ಕುಂದುಕೊರತೆ ಮತ್ತು ಪಿಂಚಣಿ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಸೋಮವಾರ ಈ ಮಸೂದೆಯನ್ನು ಮಂಡಿಸಲಿದ್ದಾರೆ.
ವಿಧೇಯಕದ ಪ್ರಮುಖ ತಿದ್ದುಪಡಿಗಳು ಹಾಗೂ ಮುಖ್ಯಾಂಶಗಳು
- ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳ ಸ್ಥಾಪನೆ: ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣಗಳ ಶೀಘ್ರ ವಿಚಾರಣೆಗಾಗಿ ಸೆಷನ್ಸ್ ಕೋರ್ಟ್‌ಗಳನ್ನು ‘ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ’ಗಳನ್ನಾಗಿ ಕಾಯ್ದಿರಿಸಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅಧಿಕಾರ ನೀಡಲಾಗುತ್ತದೆ.
- ವಿಚಾರಣೆಗೆ 3 ತಿಂಗಳು ಗಡುವು: ಸ್ಪೆಷಲ್ ಫಾಸ್ಟ್ ಟ್ರ್ಯಾಕ್ ಕೋರ್ಟ್ನಲ್ಲಿ ಟ್ರಯಲ್ಗಳು 3 ತಿಂಗಳೊಳಗೆ ಮುಗಿಯಬೇಕು. ಚಾರ್ಜ್‌ಶೀಟ್ ಸಲ್ಲಿಕೆಯಾದ ದಿನದಿಂದ 3 ತಿಂಗಳ ಒಳಗಾಗಿ ದಿನನಿತ್ಯದ ಆಧಾರದ ಮೇಲೆ (Day-to-day basis) ವಿಚಾರಣೆ ನಡೆಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಲಾಗುತ್ತದೆ.
- ತನಿಖೆಗೆ 2 ತಿಂಗಳ ಗಡುವು: ಪ್ರಕರಣದ ತನಿಖೆಯನ್ನು ಕೇವಲ 2 ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕಾಗುತ್ತದೆ.
- ವಿಶೇಷ ಟಾಸ್ಕ್ ಫೋರ್ಸ್ (STF) ರಚನೆ: ಹಲವು ರಾಜ್ಯಗಳಿಗೆ ಹರಡಿರುವ ಅಥವಾ ದೊಡ್ಡ ಮಟ್ಟದ ಪರೀಕ್ಷಾ ವಂಚನೆಗಳ ತನಿಖೆಗೆ ವಿಶೇಷ ಕಾರ್ಯಪಡೆ (Special Task Force) ರಚಿಸುವ ಅಧಿಕಾರ ಕೇಂದ್ರಕ್ಕೆ ಇರುತ್ತದೆ.
- ಕಠಿಣ ಶಿಕ್ಷೆ ಮತ್ತು ದಂಡ: ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗುವ ವ್ಯಕ್ತಿಗಳು, ಕೋಚಿಂಗ್ ಸೆಂಟರ್‌ಗಳು ಹಾಗೂ ಏಜೆನ್ಸಿಗಳಿಗೆ ಸುದೀರ್ಘ ಜೈಲು ಶಿಕ್ಷೆ ಹಾಗೂ ಭಾರೀ ಮೊತ್ತದ ಆರ್ಥಿಕ ದಂಡ ವಿಧಿಸಲು ಕಠಿಣ ಕಾನೂನು ರೂಪಿಸಲಾಗಿದೆ.
- ವಿಶೇಷ ಅಭಿಯೋಜಕರ (Legal Counsel) ನೇಮಕ: ಈ ಪ್ರಕರಣಗಳನ್ನು ದಕ್ಷತೆಯಿಂದ ನಿರ್ವಹಿಸಲು ವಿಶೇಷ ವಕೀಲರನ್ನು ನೇಮಿಸುವ ಹಕ್ಕನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗುತ್ತದೆ.
ಇದನ್ನೂ ಓದಿ: ಪರೀಕ್ಷಾ ವ್ಯವಸ್ಥೆ ಸುಧಾರಿಸಲು ನಂದನ್ ನಿಲೇಕಣಿ ಅಧ್ಯಕ್ಷತೆಯಲ್ಲಿ ಟ್ಯಾಸ್ಕ್ ಫೋರ್ಸ್ ರಚನೆ
ಪರೀಕ್ಷಾ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ಹಾಗೂ ಅಭ್ಯರ್ಥಿಗಳ ನಂಬಿಕೆಯನ್ನು ಮರುಸ್ಥಾಪಿಸಲು ಮತ್ತು ಭವಿಷ್ಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಸಂಪೂರ್ಣವಾಗಿ ತಡೆಯಲು ಕೇಂದ್ರ ಸರ್ಕಾರ ಈ ಕಠಿಣ ತಿದ್ದುಪಡಿಯನ್ನು ಜಾರಿಗೆ ತರುತ್ತಿದೆ. ಇದೇ ವೇಳೆ, ಧರ್ಮೇಂದ್ರ ಪ್ರದಾನ್ ರಾಜೀನಾಮೆ ಬೆನ್ನಲ್ಲೇ ಪ್ರಲ್ಹಾದ್ ಜೋಶಿ ಅವರು ಶಿಕ್ಷಣ ಖಾತೆಯ ಹೆಚ್ಚುವರಿ ಜವಾಬ್ದಾರಿ ಪಡೆದಿದ್ದಾರೆ. ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ, ಇಡೀ ವ್ಯವಸ್ಥೆಯನ್ನು ಕೂಲಂಕಷವಾಗಿ ತಿಳಿದು ಮುಂದುವರಿಯುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ